Tuesday, February 17, 2026
Tuesday, February 17, 2026

ಡಿಜಿಟಲ್‌ ಮಾಯಾ ಬಜಾರ್!

ಗಾಜಿನ ದೀಪಕ್ಕೆ ಬೆರಳ ತುದಿ ಸೋಕಿಸಿದರೂ ಅದರ ಬೆಳಕು ಇತರ ದೀಪಗಳಿಗೂ ಹರಡಿ, ಪ್ರಕಾಶದ ಮಹಾಪ್ರವಾಹವೇ ಸೃಷ್ಟಿಯಾಗಿ ನನ್ನನ್ನು ಕೊಚ್ಚಿಸಿಕೊಂಡು ಸಾಗಿತು. ಎರಡೇ ನಿಮಿಷದಲ್ಲಿ ಮತ್ತೆ ಕಾಣಿಸಿಕೊಂಡ ಮಂದ ಬೆಳಕು ನನ್ನನ್ನು ದಡ ಮುಟ್ಟಿಸಿತು. ನನ್ನಿಂದ ಏನು ಸಾಧ್ಯ ಎನ್ನುವುದಕ್ಕಿಂತ ಏನೆಲ್ಲಾ ಸಾಧ್ಯ ಎಂದು ಯೋಚಿಸು.ಸಣ್ಣ ಸಂಗತಿಗಳಿಗೆ ದೊಡ್ಡ ಪ್ರಭಾವ ಬೀರುವ ಶಕ್ತಿ ಇದೆ ಎಂದು ಪಿಸುನುಡಿಯಿತು.

- ವೇದಾ ಆಠವಳೆ

ಚಿತ್ರಗಾರನ ಮನದ ಭಾವಗಳು ಚೌಕಟ್ಟಿನೊಳಗೆ ಚಿತ್ರಿತಗೊಂಡಾಗ ಕಲಾಕೃತಿಯೊಂದು ರೂಪುಗೊಳ್ಳುತ್ತದೆ. ಚೌಕಟ್ಟನ್ನು ಮೀರಿ ಕಲಾರಸಿಕರ ಹೃದಯಕ್ಕೆ ಲಗ್ಗೆಯಿಡುತ್ತದೆ. ಆದರೆ ಕಾಗದ- ಕಲಾವಿದ- ಬಣ್ಣ – ಕುಂಚಗಳಿಲ್ಲದೆ ಸೃಷ್ಟಿಯಾದ ಅದ್ಭುತ ಕಲಾಕೃತಿಗಳು ನೋಡುಗರನ್ನು ಬೇರೊಂದು ಲೋಕಕ್ಕೆ ಒಯ್ಯುವ ಕಲಾಪ್ರಕಾರವೊಂದಿದೆ ಗೊತ್ತೇ?

ನಾನು ಕೆಲತಿಂಗಳ ಹಿಂದೆ ಜಪಾನಿನ ಪ್ರವಾಸದಲ್ಲಿ ಇದನ್ನು ಕಣ್ಣಾರೆ ಕಂಡು, ಮನಸಾರೆ ಆನಂದಿಸಿದೆ. ಅದುವೇ ಟೋಕಿಯೋದ ‘ಟೀಮ್ ಲ್ಯಾಬ್ ಬಾರ್ಡರ್ ಲೆಸ್’ ಎನ್ನುವ ಡಿಜಿಟಲ್ ಕಲಾಲೋಕ. ಬರಡು ಹೃದಯಗಳಲ್ಲೂ ಕಲಾಸಕ್ತಿಯ ಕಾರಂಜಿಯನ್ನು ಹುಟ್ಟಿಸಬಲ್ಲ ವಿಶಿಷ್ಟ ತಾಣ.

ಇದನ್ನೂ ಓದಿ: ಡಾರ್ಟ್ ಫೋರ್ಡ್‌ ನಗರದಲ್ಲಿ ಮನೆಯ ಮಾಡಿ ಪ್ರವಾಸ ಮಾಡದಿದ್ದರೆಂತಯ್ಯ

ಈ ವಿಶ್ವಪ್ರಸಿದ್ಧ ಡಿಜಿಟಲ್ ಆರ್ಟ್ ಮ್ಯೂಸಿಯಂ, ಕಲೆ ಮತ್ತು ಕಲಾರಸಿಕರ ಜುಗಲ್ ಬಂದಿ ನಡೆಯುವ ರಂಗಸ್ಥಳ. ಬಾರ್ಡರ್ ಲೆಸ್ ಎನ್ನುವ ಹೆಸರೇ ಸೂಚಿಸುವಂತೆ ಇಲ್ಲಿ ಗಡಿಗಳ ಹಂಗಿಲ್ಲ ,ಚೌಕಟ್ಟಿನ ಬಂಧನವಿಲ್ಲ. ಇಲ್ಲಿನ ಕಲಾಕೃತಿಗಳು ಚಲಿಸಬಲ್ಲವು. ಒಂದರೊಳಗೊಂದು ಬೆರೆತು ಹೊಸತೊಂದು ಚಿತ್ರವೊಂದನ್ನು ಸೃಷ್ಟಿಸಬಲ್ಲವು. ನೋಡುಗರೊಂದಿಗೆ ಸಂವಾದ ಮಾಡಬಲ್ಲವು. ಉಸಿರಾಡದ - ಕೈಕಾಲಿರದ ಈ ಚಿತ್ರಗಳು , ಜೀವಂತ ಮನುಷ್ಯರನ್ನು ತಮ್ಮೊಂದಿಗೆ ಹೆಜ್ಜೆ ಹಾಕಿಸಬಲ್ಲವು. Borderless art ಶಬ್ದಕ್ಕೆ ಚೌಕಟ್ಟಿಲ್ಲದ ಚಿತ್ರಗಳು ಎಂಬ ಸೀಮಿತ ಅರ್ಥದ ಜತೆ, ಮಿತಿಯಿರದ ಸಾಧ್ಯತೆಗಳ ಈ ಪ್ರಪಂಚ, ಅನಂತ ಆಯಾಮಗಳಿರುವ ಮನುಷ್ಯನ ಬದುಕು ಎಂಬ ಆಧ್ಯಾತ್ಮಿಕ ಅರ್ಥವೂ ಇದೆ.

Untitled design - 2026-02-17T192013.892

ಕಲಾ ಸಂಸ್ಥೆಯ ಹುಟ್ಟು ಮತ್ತು ಬೆಳವಣಿಗೆ

2001ರಲ್ಲಿ ತೊಶಿಯುಕಿ ಇನೋಕೋ ಮತ್ತು ಶುನ್ ಸುಕೆ ಓಕಿ ಅವರ ನೇತೃತ್ವದಲ್ಲಿ ಟೀಂ ಲ್ಯಾಬ್ ಅನ್ನುವ ಕಲಾ ಸಂಸ್ಥೆ ಆರಂಭವಾಯಿತು. ವಿಜ್ಞಾನ- ತಂತ್ರಜ್ಞಾನ-ಕಲೆ- ಪ್ರಕೃತಿಯ ಹಿನ್ನಲೆಯೊಂದಿಗೆ ಬದುಕಿನ ಒಳನೋಟಗಳನ್ನು ಸೃಷ್ಟಿಸಿ, ವೀಕ್ಷಕರ ಮನದ ಕದ ತಟ್ಟುವ ಉದ್ದೇಶದಿಂದ ಆರಂಭವಾದ ಕಲಾಗ್ಯಾಲರಿ ಇದು. 2018ರಲ್ಲಿ ಟೋಕಿಯೋ ನಗರದ Odaibaದ Palette town ಎಂಬಲ್ಲಿ Mori Building – Digital Art Museum: Epson team lab borderless ಎಂಬ ಹೆಸರಲ್ಲಿ ವಿಶಾಲವಾದ ಕಟ್ಟಡಕ್ಕೆ ವರ್ಗಾವಣೆಗೊಂಡು ಜನರನ್ನು ಆಕರ್ಷಿಸಲಾರಂಭಿಸಿತು. ಮುಂದೆ 2024ರಲ್ಲಿ Azabudai hills ಎಂಬಲ್ಲಿಗೆ ಸ್ಥಳಾಂತರಗೊಂಡ ಇದು, ಇಂದು ಟೋಕಿಯೋದ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ.

ಇಲ್ಲಿನ ಕಲಾಕೃತಿಗಳು ಸಂಪೂರ್ಣವಾಗಿ ಡಿಜಿಟಲ್ ತಂತ್ರಜ್ಞಾನದಿಂದ ರಚಿತವಾದವುಗಳು. ಹಾಗಂತ ಇವೆಲ್ಲ ಮೊದಲೇ ಚಿತ್ರೀಕರಣಗೊಂಡ ವಿಡಿಯೋಗಳಲ್ಲ ಅಥವಾ ಕಲಾವಿದರ ಅಪೂರ್ವ ರಚನೆಗಳೂ ಅಲ್ಲ. ಅತ್ಯಾಧುನಿಕ ಕಂಪ್ಯೂಟರ್‌ಗಳು ಮತ್ತು ರಿಯಲ್ ಟೈಮ್ ಕಂಪ್ಯೂಟರ್ ಪ್ರೋಗ್ರಾಮಿಂಗ್ ನ ಸಹಾಯದಿಂದ ಹೈ ರೆಸುಲ್ಯೂಷನ್ ಪ್ರೊಜೆಕ್ಟರ್ ಗಳ ಮೂಲಕ ಇಲ್ಲಿನ ಕಲಾಕೃತಿಗಳ ನಿರ್ಮಾಣವಾಗುತ್ತದೆ. ವೀಕ್ಷಕರು ಚಿತ್ರಗಳ ಹತ್ತಿರ ಬಂದಾಗ, ಅಲ್ಲಲ್ಲಿ ಜೋಡಿಸಿಟ್ಟಿರುವ ಸೆನ್ಸರ್‌ಗಳು ಛಕ್ಕನೆ ಕಾರ್ಯನಿರ್ವಹಿಸಿ ಕಲಾಕೃತಿಯನ್ನು ಬದಲಿಸುತ್ತವೆ. ನೋಡುಗರಿಗೆ ತಾವೇ ಕಲಾಕೃತಿಯ ಭಾಗವಾದ ಅನುಭವವಾಗುತ್ತದೆ. ನಿಜವಾಗಿ ನೋಡಿದರೆ ಅಲ್ಲಿರುವುದು ಕಪ್ಪುಹೊದಿಕೆಯ ಗೋಡೆಗಳು ಮಾತ್ರ. ಡಿಜಿಟಲ್ ಲೋಕದ ನೆರವು ಇಲ್ಲದಿದ್ದರೆ ಅಲ್ಲಿ ಏನೂ ಇಲ್ಲ. ಇಲ್ಲಿನ ಆರ್ಟ್ ನಿತ್ಯ ನೂತನ. ಕಣ್ಮುಂದೆ ಕಾಣುವುದು ಕ್ಷಣಮಾತ್ರದಲ್ಲಿ ಬದಲಾಗುತ್ತದೆ. ನೋಡುಗರು ಇದು ನಿಜವೋ ಕನಸು ಎಂದು ಮೈ ಚಿವುಟಿಕೊಂಡು ಪರೀಕ್ಷಿಸುವಂತೆ ಆಗುತ್ತದೆ.

ಡಿಜಿಟಲ್‌ ಮಾಯಾಲೋಕ

Azabudai hills ನ ಟೀಂ ಲ್ಯಾಬ್ ಬಾರ್ಡರ್ ಲೆಸ್ ಸ್ಟುಡಿಯೋ, ಹತ್ತು ಸಾವಿರ ಚದರ ಮೀಟರ್ ನಷ್ಟು ವಿಶಾಲವಾದ ಸ್ಥಳದಲ್ಲಿ ಮೈ ತಾಳಿದೆ. ಕಣ್ಣಿಗೆ ಕಾಣದ ಸಾವಿರಾರು ಪ್ರೊಜೆಕ್ಟರ್ ಗಳು ಮತ್ತು ಅಲ್ಲಲ್ಲಿ ಕಾಣುವ ಗೋಡೆಗಳ ನಡುವೆ ವೀಕ್ಷಕರು ತಾವೇ ದಾರಿ ಹುಡುಕಿಕೊಂಡು ಹೋಗಬೇಕು. ಯಾವುದೇ ಗೈಡ್ ಗಳಿಲ್ಲ ,ದಿಕ್ಸೂಚಿ ಬೋರ್ಡ್ ಗಳಿಲ್ಲ. ಕೆಲವು ಕಲಾಕೃತಿಗಳು ಗೋಡೆಗಳ ಮೇಲೆ ಇದ್ದರೆ ಇನ್ನು ಕೆಲವು ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಚಲಿಸುತ್ತವೆ. ಅವುಗಳ ಹಿಂದೆ ಹೋಗುತ್ತಿದ್ದರೆ ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ. ಮುಂದೆ ಮುಂದೆ ನಡೆಯುತ್ತಿದ್ದಂತೆಯೇ ನಾನೆಲ್ಲಿಂದ ಬಂದೆ ? ಇದರ ಕೊನೆ ಎಲ್ಲಿ? ಎಂದೆಲ್ಲ ಪ್ರಶ್ನೆಗಳು ಆವರಿಸಿಕೊಳ್ಳುತ್ತವೆ. ಈ ಅಗಾಧ ಕಲಾಸಾಗರದ ಹಿಮ್ಮೇಳದಲ್ಲಿ ನೂರಾರು ಕಲಾವಿದರು, ಸಾಫ್ಟ್ ವೇರ್ ಇಂಜಿನಿಯರ್ ಗಳು, ಆರ್ಕಿಟೆಕ್ಟ್‌ಗಳು ಮತ್ತು ಡಿಸೈನರ್ ಗಳ ಪರಿಶ್ರಮವಿದೆ.

ಕಲಾಕೃತಿಗಳ ವರ್ಣನೆ

ಗೋಡೆಯ ಮೇಲೆ ಬಣ್ಣಬಣ್ಣದ ಹೂಗಳು ಅರಳಿ ನಿಂತಿವೆ. ಮನಮೋಹಕ ಚಿಟ್ಟೆಗಳು ಸುತ್ತಲೂ ಹಾರಾಡುತ್ತಿವೆ. ಆಹಾ..ಎನ್ನುತ್ತಾ ನಾನೊಂದು ಹೂವನ್ನು ಮುಟ್ಟಿದರೆ ಅದು ಇನ್ನಷ್ಟು ದೊಡ್ಡದಾಗಿ ಅರಳಿತು . ಅಲ್ಲಿಂದ ಹತ್ತಾರು ಚಿಟ್ಟೆಗಳು ಭುರ್...ನೆ ಚಿಮ್ಮಿ ಹಾರಾಡಲು ಆರಂಭಿಸಿದವು. ಮುಂದಿನ ಒಂದೇ ನಿಮಿಷದಲ್ಲಿ ಅವೆಲ್ಲವೂ ನಾಪತ್ತೆ ... ಓಹೋ.... ಆ ನೀಲಿ ಹೂ ಎಷ್ಟು ಚಂದ! ಎಂದುಕೊಂಡು ಮೃದುವಾಗಿ ಮುಟ್ಟಿದರೆ ಅದು ಹಳದಿಯಾಗಬೇಕೇ ! ಹಾಗೆ ತಟ್ಟನೆ ಅರಳಿ ಇನ್ನೊಂದೆರಡು ಹೂಗಳು ಮಿಂಚಿ ಅಲ್ಲೊಂದು ಕಲಾಕೃತಿ ಸೃಷ್ಟಿಯಾಯಿತು.

ಇದೊಂದು ಕನಸೇ! ಅಥವಾ ʼಪರಿವರ್ತನೆ ಜಗದ ನಿಯಮ…. ಇಲ್ಲಿ ಕಳೆದು ಹೋದದ್ದಕ್ಕೆ ಮರುಗಬೇಡ.... ಹೊಸ ದೃಷ್ಟಿ ಬೆಳೆಸಿಕೋ... ಹೊಸ ದಾರಿ ತಾನಾಗಿಯೇ ತೆಗೆಯುತ್ತದೆ...ʼ ಎನ್ನುವ ಪಾಠವನ್ನು ನನಗೆ ಬೋಧಿಸುವ ಪರಿಯೇ ಎನ್ನುವ ಗೊಂದಲದಲ್ಲೇ ಮುಂದೆ ಹೆಜ್ಜೆಯಿಟ್ಟೆ.

Untitled design - 2026-02-17T192004.592

ಮಾಡಿನಿಂದ ಇಳಿಬಿಟ್ಟ ನೂರಾರು ಗಾಜಿನ ದೀಪಗಳ ಕೋಣೆಯದು. ಗೋಡೆಗಳ ತುಂಬಾ ಕನ್ನಡಿಗಳು. ಎತ್ತ ನೋಡಿದರೂ ಬೆಳಕು....ಅನಾದಿ ಅನಂತ ಬೆಳಕು... ಗಾಜಿನ ದೀಪಕ್ಕೆ ಬೆರಳ ತುದಿ ಸೋಕಿಸಿದರೂ ಅದರ ಬೆಳಕು ಇತರ ದೀಪಗಳಿಗೂ ಹರಡಿ, ಪ್ರಕಾಶದ ಮಹಾಪ್ರವಾಹವೇ ಸೃಷ್ಟಿಯಾಗಿ ನನ್ನನ್ನು ಕೊಚ್ಚಿಸಿಕೊಂಡು ಸಾಗಿತು. ಎರಡೇ ನಿಮಿಷದಲ್ಲಿ ಮತ್ತೆ ಕಾಣಿಸಿಕೊಂಡ ಮಂದ ಬೆಳಕು ನನ್ನನ್ನು ದಡ ಮುಟ್ಟಿಸಿತು. ನನ್ನಿಂದ ಏನು ಸಾಧ್ಯ ಎನ್ನುವುದಕ್ಕಿಂತ ಏನೆಲ್ಲಾ ಸಾಧ್ಯ ಎಂದು ಯೋಚಿಸು.ಸಣ್ಣ ಸಂಗತಿಗಳಿಗೆ ದೊಡ್ಡ ಪ್ರಭಾವ ಬೀರುವ ಶಕ್ತಿ ಇದೆ ಎಂದು ಪಿಸುನುಡಿಯಿತು.ಇಂಥ ಹತ್ತಾರು ಅದ್ಭುತ ಕಲಾಕೃತಿಗಳನ್ನು ನೋಡಿ ಹೊರಬಂದಾಗ ‘ಸ್ಥಾವರಕ್ಕಳಿವುಂಟು.. ಜಂಗಮಕ್ಕಳಿವಿಲ್ಲ’ ಎನ್ನುವ ಮಾತು ನನ್ನ ಹೃದಯದಲ್ಲಿ ಅನುರಣಿಸಿತು.

ಈ ಮ್ಯೂಸಿಯಂ ನೋಡುಗನಿಗೆ ಒಂದು ವಿಶೇಷ ಅನುಭವವನ್ನು ಕೊಡುತ್ತದೆ. ಕಲೆಗೆ ಕಾಲದ ಹಂಗಿಲ್ಲ, ಅದು ನಿರಂತರವಾಗಿ ಚಲಿಸುವ ನದಿಯಂತೆ ಸ್ವಚ್ಛ-ನೂತನ.. ಇಲ್ಲಿನದು ನೋಡಲು ನಿರ್ಮಿಸಿದ ಕಲಾಕೃತಿಯಲ್ಲ, ದೂರದಿಂದಲೇ ನೋಡಿ ಆಸ್ವಾದಿಸುತ್ತಾ , ಮೆಚ್ಚುತ್ತಾ , ಚಪ್ಪಾಳೆ ಹೊಡೆಯಲು ರಚಿಸಿದ ಆರ್ಟ್ ಅಲ್ಲ. ನೋಡುಗರು ಬೆಲೆ ಕಟ್ಟಿಕೊಳ್ಳುವ , ಗೋಡೆಗಳ ಅಂದ ಹೆಚ್ಚಿಸುವ ವರ್ಣಚಿತ್ರಗಳಲ್ಲ.. ಇದು ಕಲೆಯ ಜತೆಜತೆಗೆ ಹೆಜ್ಜೆ ಹಾಕುತ್ತಾ ,ಮಾತಾಡುತ್ತಾ , ನಗುತ್ತಾ ,ಆಸ್ವಾದಿಸುತ್ತಾ , ಕುಣಿದು ಕುಪ್ಪಳಿಸುತ್ತಾ ಆನಂದಿಸಬೇಕಾದ ಅನುಭವ. ಇದೊಂದು ಭಾವಗಳ ಮೆರವಣಿಗೆ. ಅಲೌಕಿಕದ ಧ್ಯಾನ. ಶುದ್ಧ ಸಂತೋಷ!

ಲೇಖಕರು: ಶಿಕ್ಷಕಿ, ಹವ್ಯಾಸಿ ಬರಹಗಾರ್ತಿ

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...