ಟವರ್ ಆಫ್ ಲಂಡನ್: ಥೇಮ್ಸ್ ನದಿ ದಡದ ಇತಿಹಾಸದ ಹೆಗ್ಗುರುತು
ಇತಿಹಾಸದ ಪುಟಗಳಲ್ಲಿ ಓದಿದ ಕೋಟೆಗಳು, ಸೇತುವೆಗಳು ಮತ್ತು ಸಾಮ್ರಾಜ್ಯಗಳ ಕಥೆಗಳನ್ನು ಕಣ್ಣಾರೆ ಕಾಣುವ ಅನುಭವವೇ ವಿಶಿಷ್ಟ. ಇಂಗ್ಲೆಂಡ್ನ ಲಂಡನ್ ಪ್ರವಾಸದಲ್ಲಿ ಥೇಮ್ಸ್ ನದಿಯ ಸೌಂದರ್ಯ, ಟವರ್ ಆಫ್ ಲಂಡನ್ನ ಗತವೈಭವ ಮತ್ತು ಕೊಹಿನೂರ್ ವಜ್ರದ ಇತಿಹಾಸ ನಮ್ಮನ್ನು ಶತಮಾನಗಳ ಹಿಂದಕ್ಕೆ ಕರೆದೊಯ್ದವು. ಪ್ರತಿಯೊಂದು ಸ್ಮಾರಕವೂ ತನ್ನೊಳಗೆ ಅಡಗಿಸಿಕೊಂಡಿರುವ ಇತಿಹಾಸದ ಕಥೆಯನ್ನು ಅನಾವರಣಗೊಳಿಸಿತು
- ಡಾ. ಪ್ರಕಾಶ ಗ. ಖಾಡೆ
ನಮ್ಮ ಇಂಗ್ಲೆಂಡ್ ಪ್ರವಾಸದಲ್ಲಿ ಕಂಡ ಪ್ರಮುಖ ಐತಿಹಾಸಿಕ ಸ್ಥಳಗಳಲ್ಲಿ ಟವರ್ ಆಫ್ ಲಂಡನ್ (Tower of London) ಕೂಡ ಒಂದು. ಲಂಡನ್ ನಗರಕ್ಕೆ ಬಂದಾಗ ಅದರ ಇತಿಹಾಸವನ್ನು ಅರಿಯಲು ಈ ಕೋಟೆ ಸಮುಚ್ಚಯ ಅತ್ಯಂತ ಮಹತ್ವದ್ದಾಗಿದೆ. ಟವರ್ ಆಫ್ ಲಂಡನ್ನ ನಿರ್ಮಾಣವು 1078ರಲ್ಲಿ ವಿಲಿಯಂ ದಿ ಕಾಂಕರರ್ ಕಾಲದಲ್ಲಿ ಆರಂಭವಾಯಿತು. ಸುಮಾರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ಕೋಟೆಸಮುಚ್ಚಯವು ಇಂಗ್ಲೆಂಡ್ನ ರಾಜಕೀಯ, ರಾಜಮನೆತನ ಮತ್ತು ಇತಿಹಾಸದ ಅನೇಕ ಘಟನೆಗಳಿಗೆ ಸಾಕ್ಷಿಯಾಗಿದೆ. ಅದರ ಕೇಂದ್ರದಲ್ಲಿರುವ ವೈಟ್ ಟವರ್ (White Tower) ಆ ಕಾಲದ ಅತ್ಯಂತ ಗಮನಾರ್ಹ ಕಟ್ಟಡಗಳಲ್ಲಿ ಒಂದಾಗಿತ್ತು.
ಇದನ್ನೂ ಓದಿ: ಬ್ರಿಟನ್ನ ಪ್ರಸಿದ್ಧ ಮೃಗಾಲಯದಲ್ಲಿ ಚಿಟ್ಟೆಗಳಿಗೊಂದು ಕೋತಿಗಳಿಗೆ ಮತ್ತೊಂದು ಉದ್ಯಾನ
ಟವರ್ ಆಫ್ ಲಂಡನ್ ಅತ್ಯಂತ ಪ್ರಸಿದ್ಧವಾಗಿದ್ದು, ಇಲ್ಲಿ ಬ್ರಿಟಿಷ್ ರಾಜಮನೆತನದ ಕ್ರೌನ್ ಜುವೆಲ್ಸ್ (Crown Jewels) ಅನ್ನು ಸುರಕ್ಷಿತವಾಗಿ ಸಂರಕ್ಷಿಸಲಾಗಿದೆ. ರಾಜಮನೆತನದ ಪಟ್ಟಾಭಿಷೇಕ ಸಮಾರಂಭಗಳಲ್ಲಿ ಬಳಸಲಾಗುವ ಕಿರೀಟಗಳು, ರಾಜದಂಡಗಳು ಮತ್ತು ಇತರ ಅಮೂಲ್ಯ ರಾಜಚಿಹ್ನೆಗಳು ಇಲ್ಲಿ ಪ್ರದರ್ಶನದಲ್ಲಿವೆ. ಹೀಗಾಗಿ ಟವರ್ ಆಫ್ ಲಂಡನ್ ವು ಒಂದು ಹಳೆಯ ಕೋಟೆಯಲ್ಲ. ಸುಮಾರು ಸಾವಿರ ವರ್ಷಗಳ ಬ್ರಿಟಿಷ್ ರಾಜಕೀಯ, ರಾಜಮನೆತನ, ಯುದ್ಧ, ಕಾರಾಗೃಹ, ನಗರ ಇತಿಹಾಸ ಮತ್ತು ಪರಂಪರೆಯನ್ನು ತನ್ನೊಳಗೆ ಅಡಗಿಸಿಕೊಂಡಿರುವ ಜೀವಂತ ಇತಿಹಾಸದ ಸ್ಮಾರಕವಾಗಿದೆ.

ಟವರ್ ಬ್ರಿಡ್ಜ್ ಲಂಡನ್ ನಗರದ ಅತ್ಯಂತ ಪ್ರಸಿದ್ಧ ದೃಶ್ಯಗಳಲ್ಲಿ ಒಂದು. ಥೇಮ್ಸ್ ನದಿಯ ಮೇಲೆ ಭವ್ಯವಾಗಿ ನಿಂತಿರುವ ಇದರ ಎರಡು ಗೋಪುರಗಳು ದೂರದಿಂದಲೇ ಪ್ರವಾಸಿಗರ ಗಮನ ಸೆಳೆಯುತ್ತವೆ. ಸೇತುವೆಯ ವಿನ್ಯಾಸವೇ ವಿಶಿಷ್ಟ. ಮಧ್ಯಭಾಗವನ್ನು ಮೇಲಕ್ಕೆ ಎತ್ತಬಹುದಾದ ಬಾಸ್ಕ್ಯೂಲ್ (Bascule) ಸೇತುವೆ ವ್ಯವಸ್ಥೆ ಇದರ ಪ್ರಮುಖ ವೈಶಿಷ್ಟ್ಯ. ನದಿಯಲ್ಲಿ ದೊಡ್ಡ ಹಡಗುಗಳು ಸಾಗಬೇಕಾದಾಗ ಸೇತುವೆಯ ಮಧ್ಯಭಾಗವನ್ನು ಮೇಲಕ್ಕೆತ್ತಲಾಗುತ್ತದೆ. ಹಡಗುಗಳು ಕೆಳಗಿನಿಂದ ಸುಗಮವಾಗಿ ಸಾಗಿದ ನಂತರ ಮತ್ತೆ ಸೇತುವೆಯ ಭಾಗ ಕೆಳಕ್ಕೆ ಇಳಿಯುತ್ತದೆ ಇಂದು ಟವರ್ ಬ್ರಿಡ್ಜ್ ಮೇಲೆ ವಾಹನಗಳು ಸಂಚರಿಸುತ್ತವೆ. ಪಾದಚಾರಿಗಳು ಮತ್ತು ಸೈಕಲ್ ಸವಾರರೂ ಇದನ್ನು ಬಳಸುತ್ತಾರೆ. ಆದರೆ ಇದು ಸಂಚಾರದ ಸೇತುವೆಯಲ್ಲ, ಲಂಡನ್ ನಗರದ ಅತ್ಯಂತ ಪರಿಚಿತ ಪ್ರತೀಕಗಳಲ್ಲಿ ಒಂದಾಗಿದೆ. ಅದರ ಗೋಪುರಗಳ ವಿನ್ಯಾಸ, ನದಿಯ ನೀರಿನಲ್ಲಿ ಮೂಡುವ ಪ್ರತಿಬಿಂಬ ಮತ್ತು ಸುತ್ತಮುತ್ತಲಿನ ಐತಿಹಾಸಿಕ ಕಟ್ಟಡಗಳ ಹಿನ್ನೆಲೆ, ಕಣ್ಣಿಗೆ ಧರೆಯ ಸ್ವರ್ಗವನ್ನು ತಂದಿಟ್ಟಂತೆ ಕಾಣುತ್ತದೆ.
ಲಂಡನ್ ಬ್ರಿಡ್ಜ್
ಟವರ್ ಬ್ರಿಡ್ಜ್ನ ಸಮೀಪದಲ್ಲೇ ಲಂಡನ್ ಬ್ರಿಡ್ಜ್ ಇದೆ. ಇಲ್ಲಿ ಒಂದು ಆಸಕ್ತಿದಾಯಕ ಗೊಂದಲವಿದೆ. ಟವರ್ ಬ್ರಿಡ್ಜ್ನ ಭವ್ಯ ಗೋಪುರಗಳು ಮತ್ತು ವಿಶಿಷ್ಟ ವಿನ್ಯಾಸವನ್ನು ನೋಡಿದ ಅನೇಕ ಪ್ರವಾಸಿಗರು ಅದನ್ನೇ ಲಂಡನ್ ಬ್ರಿಡ್ಜ್ ಎಂದು ಭಾವಿಸುತ್ತಾರೆ. ಆದರೆ, ಎರಡೂ ವಿಭಿನ್ನ ಸೇತುವೆಗಳು. ಲಂಡನ್ ಬ್ರಿಡ್ಜ್ಗೆ ಟವರ್ ಬ್ರಿಡ್ಜ್ನಂತೆ ಭವ್ಯವಾದ ಗೋಪುರಗಳಿಲ್ಲ. ಹೊರನೋಟದಲ್ಲಿ ಅದು ಸರಳವಾಗಿಯೇ ಕಾಣಬಹುದು. ಆದರೆ, ಅದರ ಐತಿಹಾಸಿಕ ಮಹತ್ವ ಮಾತ್ರ ಅಪಾರ. ಥೇಮ್ಸ್ ನದಿಯನ್ನು ದಾಟಲು ಈ ಸ್ಥಳದಲ್ಲಿ ಅನೇಕ ಶತಮಾನಗಳಿಂದ ವಿವಿಧ ಸೇತುವೆಗಳು ನಿರ್ಮಾಣವಾಗುತ್ತ ಬಂದಿವೆ. ಹೀಗಾಗಿ ಲಂಡನ್ ನಗರದ ಬೆಳವಣಿಗೆಯ ಇತಿಹಾಸದಲ್ಲಿ ಲಂಡನ್ ಬ್ರಿಡ್ಜ್ಗೆ ವಿಶೇಷ ಸ್ಥಾನವಿದೆ. ಅಂದರೆ, ಟವರ್ ಬ್ರಿಡ್ಜ್ ತನ್ನ ಸೌಂದರ್ಯ ಮತ್ತು ವಿಶಿಷ್ಟ ವಾಸ್ತುಶಿಲ್ಪದಿಂದ ಪ್ರಸಿದ್ಧವಾದರೆ, ಲಂಡನ್ ಬ್ರಿಡ್ಜ್ ತನ್ನ ದೀರ್ಘ ಇತಿಹಾಸದಿಂದ ಪ್ರಸಿದ್ಧವಾಗಿದೆ.
ಥೇಮ್ಸ್ ನದಿ ಲಂಡನ್ನ ಜೀವನಾಡಿ
ಈ ಎರಡು ಸೇತುವೆಗಳ ನಡುವೆ ಹರಿಯುತ್ತಿರುವ ಥೇಮ್ಸ್ ನದಿ ಲಂಡನ್ ನಗರದ ಮತ್ತೊಂದು ಪ್ರಮುಖ ಗುರುತು. ಇದು ಲಂಡನ್ ನಗರದ ಇತಿಹಾಸದ ಸಾಕ್ಷಿ. ಥೇಮ್ಸ್ ನದಿ ಲಂಡನ್ ನಗರದ ಹೃದಯಭಾಗದ ಮೂಲಕ ಹರಿದು, ನಗರದ ವ್ಯಾಪಾರ, ಸಂಚಾರ, ಕೈಗಾರಿಕೆ ಮತ್ತು ಸಂಸ್ಕೃತಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಒಂದು ಕಾಲದಲ್ಲಿ ಸರಕು ಸಾಗಣೆ ಮತ್ತು ವ್ಯಾಪಾರದ ಪ್ರಮುಖ ಮಾರ್ಗವಾಗಿದ್ದ ಈ ನದಿ, ಇಂದು ಲಂಡನ್ನ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿದೆ. ನದಿಯ ಮೇಲೆ ಸೇತುವೆಗಳು. ನದಿಯ ದಡದಲ್ಲಿ ಐತಿಹಾಸಿಕ ಕಟ್ಟಡಗಳು. ನೀರಿನಲ್ಲಿ ಸಾಗುವ ದೋಣಿಗಳು. ದಡದಲ್ಲಿ ನಡೆಯುವ ಜನರು. ದೂರದಲ್ಲಿ ಕಾಣಿಸುವ ನಗರದ ಆಧುನಿಕ ಕಟ್ಟಡಗಳು. ಇವೆಲ್ಲವನ್ನೂ ಒಂದೇ ದೃಶ್ಯದಲ್ಲಿ ನೋಡಿದಾಗ, ಲಂಡನ್ ನಗರದ ಭೂತಕಾಲ ಮತ್ತು ವರ್ತಮಾನ ಒಂದೇ ಚೌಕಟ್ಟಿನಲ್ಲಿ ಸೇರಿಕೊಂಡಂತೆ ಭಾಸವಾಯಿತು.

ಲಂಡನ್ನ ವೈಟ್ ಟವರ್ ಕಂಡದ್ದು ಕೊಹಿನೂರ್ ವಜ್ರ
ಲಂಡನ್ನ ಥೇಮ್ಸ್ ನದಿಯ ದಡದಲ್ಲಿ ನಿಂತಿರುವ ಟವರ್ ಆಫ್ ಲಂಡನ್ ಕೋಟೆಯಲ್ಲಿ ರಾಜಮನೆತನದ ಅರಮನೆ, ಸೆರೆಮನೆ, ಶಸ್ತ್ರಾಗಾರ ಮತ್ತು ರಾಜಮನೆತನದ ಅಮೂಲ್ಯ ವಸ್ತುಗಳ ಭದ್ರತಾ ಕೇಂದ್ರವಾಗಿ ಶತಮಾನಗಳ ಇತಿಹಾಸವನ್ನು ತನ್ನೊಳಗೆ ಇಟ್ಟುಕೊಂಡಿದೆ. 1988ರಲ್ಲಿ ಇದನ್ನು ಯುನೆಸ್ಕೋ (UNESCO) ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಿದೆ. ಈ ಕೋಟೆಯ ಹೃದಯಭಾಗದಲ್ಲಿರುವ ಕಟ್ಟಡವೇ White Tower. ನಮ್ಮ ಕೊಹಿನೂರ್ ವಜ್ರವನ್ನು ಕಣ್ಣಾರೆ ಕಾಣಲು ನಾವಿಲ್ಲಿ ಭೇಟಿ ನೀಡಿದೆವು. ಇಂದು ಕೊಹಿನೂರ್ 105.6 ಕ್ಯಾರೆಟ್ ತೂಕದ ವಜ್ರವಾಗಿ Queen Elizabeth the Queen Mother's Crownನಲ್ಲಿ ಅಳವಡಿಸಲ್ಪಟ್ಟಿದೆ ಮತ್ತು Tower of Londonನ Crown Jewels ಪ್ರದರ್ಶನದ ಇತಿಹಾಸದ ಪ್ರಮುಖ ಭಾಗವಾಗಿದೆ.
Tower of Londonನಲ್ಲಿ ಭಾರತೀಯ ಪ್ರವಾಸಿಗರ ಗಮನವನ್ನು ವಿಶೇಷವಾಗಿ ಸೆಳೆಯುವ ಹೆಸರು Koh-i-Noor. ʼಕೊಹಿನೂರ್’ಎಂದರೆ ʼಬೆಳಕಿನ ಪರ್ವತʼ (Mountain of Light) ಎಂಬ ಅರ್ಥ. ಈ ವಜ್ರವು ದಕ್ಷಿಣ ಭಾರತದ ಗೋಲ್ಕೊಂಡಾ ಗಣಿಗಳಲ್ಲಿ ದೊರೆತಿರುವ ಬಗ್ಗೆ ಇತಿಹಾಸ ಸಾರುತ್ತದೆ. ಶತಮಾನಗಳ ಕಾಲ ಇದು ಮೊಘಲ್ ಚಕ್ರವರ್ತಿಗಳು, ಪರ್ಷಿಯಾದ ಶಾಹ್ಗಳು, ಅಫ್ಘಾನಿಸ್ತಾನದ ಅಮೀರ್ಗಳು ಮತ್ತು ಸಿಖ್ ಮಹಾರಾಜರಂಥ ಹಲವು ಆಡಳಿತಗಾರರ ಕೈ ಬದಲಾಯಿಸುತ್ತಾ ಬಂದಿದೆ. ಕೊಹಿನೂರ್ನ ಇತಿಹಾಸದಲ್ಲಿ ಅತ್ಯಂತ ಮಹತ್ವದ ಘಟ್ಟ 1849. ಸಿಖ್ ಸಾಮ್ರಾಜ್ಯದ ಬಾಲ ಮಹಾರಾಜ ದಲೀಪ್ ಸಿಂಗ್ ಅವರಿಂದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಲಾಹೋರ್ ಒಪ್ಪಂದದ ಷರತ್ತಿನಂತೆ ಕೊಹಿನೂರ್ ವಜ್ರವನ್ನು ಪಡೆದುಕೊಂಡಿತು. ನಂತರ ಅದನ್ನು ರಾಣಿ ವಿಕ್ಟೋರಿಯಾಗೆ ಒಪ್ಪಿಸಲಾಯಿತು.
ಇಲ್ಲಿ ಒಂದು ಪ್ರಮುಖ ಸಂಗತಿ ನಾವು ಗಮನಿಸಬೇಕು ಇಂದು ಕೊಹಿನೂರ್ ಮೊದಲಿನ ಗಾತ್ರದಲ್ಲಿಲ್ಲ. 1852ರಲ್ಲಿ ಅದನ್ನು ಮರುಕತ್ತರಿಸಲಾಯಿತು. ಅದರ ಹೊಳಪು ಹೆಚ್ಚಿಸುವ ಮತ್ತು ಆ ಕಾಲದ ಯುರೋಪಿಯನ್ ಆಭರಣದ ವಿನ್ಯಾಸಕ್ಕೆ ಹೊಂದಿಸುವ ಉದ್ದೇಶದಿಂದ ಮರುಕತ್ತರಿಸಿದ ನಂತರ ಅದರ ತೂಕ 105.6 ಕ್ಯಾರೆಟ್ ಆಯಿತು. ನಂತರ ಈ ಪ್ರಸಿದ್ಧ ವಜ್ರವನ್ನು 1937ರಲ್ಲಿ Queen Elizabeth the Queen Mother ಅವರ Crownನಲ್ಲಿ ಅಳವಡಿಸಲಾಯಿತು. ಭಾರತೀಯನ ಕಣ್ಣಿನಲ್ಲಿ ಕೊಹಿನೂರ್, ಆದರೆ ಭಾರತೀಯ ಪ್ರವಾಸಿಗನಿಗೆ ಕೊಹಿನೂರ್ ಒಂದು ಅಪರೂಪದ ವಜ್ರವಲ್ಲ. ಅದರ ಹೊಳಪಿನ ಹಿಂದೆ ಭಾರತದ ಇತಿಹಾಸವಿದೆ. ಅದರ ಪಯಣದ ಹಿಂದೆ ರಾಜರು, ಸಾಮ್ರಾಜ್ಯಗಳು, ಯುದ್ಧಗಳು ಮತ್ತು ಅಧಿಕಾರದ ಬದಲಾವಣೆಗಳಿವೆ. ಅದರ ಕಥೆಯಲ್ಲಿ ಬ್ರಿಟಿಷ್ ವಸಾಹತುಶಾಹಿಯ ಅಧ್ಯಾಯವೂ ಇದೆ. ಆದ್ದರಿಂದ Tower of Londonನಲ್ಲಿ Crown Jewels ವಿಭಾಗವನ್ನು ನೋಡುತ್ತಾ ಕೊಹಿನೂರ್ನ ಇತಿಹಾಸವನ್ನು ಕೇಳುವಾಗ, ಮನಸ್ಸಿನಲ್ಲಿ ಹೆಮ್ಮೆಯ ಜತೆಗೆ ಒಂದು ರೀತಿಯ ನೋವಿನ ಭಾವನೆಯೂ ನಮ್ಮಲ್ಲಿ ಸಹಜವಾಗಿ ಮೂಡಿತು.ಅದು ಬೇಗ ನಮ್ಮ ಭಾರತಕ್ಕೆ ಬರಲಿ ಎಂಬ ಆಶಯ ವ್ಯಕ್ತಪಡಿಸಿದೆವು.