ಈ ಲಯನ್ಸ್ ಪಾರ್ಕ್ನಲ್ಲಿ ಆಟಿಕೆಗಳೇ ಆಕರ್ಷಣೆ
1940ರಲ್ಲಿ ಆರಂಭವಾದ ಈ ಉದ್ಯಾನಕ್ಕೆ ಮೊದಲು ಕೋಸ್ಟ ಮೇಸ ಪಾರ್ಕ್ ಎಂಬ ಹೆಸರಿತ್ತು. ಸ್ಥಳೀಯ ಲಯನ್ಸ್ ಸಂಸ್ಥೆಯವರು ಇಲ್ಲಿ ಫಿಶ್ ಫ್ರೈ ಕಮ್ಯುನಿಟಿ ಫಂಡ್ ರೈಸ್ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿದ್ದರು. ಹಾಗಾಗಿ 1970ರ ದಶಕದಲ್ಲಿ ಇದಕ್ಕೆ ಲಯನ್ಸ್ ಪಾರ್ಕ್ ಎಂದು ಮರುನಾಮಕರಣ ಮಾಡಲಾಯಿತು.
- ಮಂಜುನಾಥ ಡಿ. ಎಸ್.
ಉತ್ತರ ಅಮೆರಿಕದಲ್ಲಿನ ಯಾವುದೇ ನಗರದ ಉದ್ಯಾನಕ್ಕೆ ಭೇಟಿ ನೀಡಿದರೂ ಅಚ್ಚುಕಟ್ಟುತನ, ಸ್ವಚ್ಛತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಿರುವುದು ಕಂಡುಬರುತ್ತದೆ. ಅಲ್ಲಿ ಕುಡಿಯುವ ನೀರು, ಶೌಚಾಲಯಗಳು, ಆಸನಗಳು ಮುಂತಾದ ಮೂಲಭೂತ ಸೌಕರ್ಯಗಳೂ ಇರುತ್ತವೆ. ಇವುಗಳ ನಿರ್ವಹಣೆಯೂ ಸಮರ್ಪಕವಾಗಿರುತ್ತದೆ.
ಇದನ್ನೂ ಓದಿ: ವರ್ಜೀನಿಯಾ ಸಫಾರಿ ಪಾರ್ಕ್
ಸೌಲಭ್ಯಗಳು ಹೀಗಿವೆ
ಇಂಥ ಅದ್ಭುತ ಉದ್ಯಾನಗಳಲ್ಲಿ ಕ್ಯಾಲಿಫೋರ್ನಿಯ ರಾಜ್ಯದ ಕೋಸ್ಟ ಮೇಸ ನಗರದ ಲಯನ್ಸ್ ಪಾರ್ಕ್ ಸಹ ಒಂದು. ಹತ್ತು ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಎಲ್ಲ ವಯೋಮಾನದ ಮಕ್ಕಳಿಗೆ ಮನೋರಂಜನೆಯ ತಾಣವಾಗಿದೆ. ಇದು ಮಕ್ಕಳ ಮನೋರಂಜನೆಗೆ ಸಾಕಷ್ಟು ಆಟಿಕೆಗಳಿಂದ ಕೂಡಿದ ಉದ್ಯಾನ. ಇಡೀ ಕುಟುಂಬವನ್ನು ಉಲ್ಲಸಿತಗೊಳಿಸುತ್ತದೆ. ಮರುಬಳಕೆಯ ರಬ್ಬರ್ ನೆಲ ಮಕ್ಕಳಿಗೆ ಸುರಕ್ಷತೆ ಒದಗಿಸುತ್ತದೆ. ಆಟದ ಮೈದಾನಗಳು, ಪಿಕ್ನಿಕ್ ಟೇಬಲ್ಸ್, ತಂಗುದಾಣ, ಬಾರ್ಬೆಕ್ಯೂ ಮೊದಲಾದ ಸೌಲಭ್ಯಗಳೂ ಇವೆ.

ಪ್ಯಾಂಥರ್ ಜೆಟ್ ಮಾದರಿ
ಯುದ್ಧ ವಿಮಾನದ ಅಂದದ ಮಾದರಿ ಇಲ್ಲಿನ ಪ್ರಮುಖ ಆಕರ್ಷಣೆ. ಇದು ಕೊರಿಯನ್ ಯುದ್ಧ ಕಾಲದ ಗ್ರುಮ್ಮನ್ ಎಫ್9ಎಫ್ ಪ್ಯಾಂಥರ್ ಜೆಟ್ ವಿಮಾನದ ಮಾದರಿ. ಲಭ್ಯವಿರುವ ಮಾಹಿತಿಯಂತೆ ಈ ವಿಮಾನದ ಮಾದರಿಯನ್ನು 1960ರಲ್ಲಿ ಅನಾವರಣಗೊಳಿಸಲಾಯಿತು. ನೌಕಾಪಡೆಗೆ ಸೇರಿದ ವಿಮಾನದ ನೀಲವರ್ಣದ ಪ್ರತಿಕೃತಿ ಮಕ್ಕಳನ್ನಷ್ಟೇ ಅಲ್ಲದೆ ಹಿರಿಯರನ್ನೂ ಆಕರ್ಷಿಸುವಂತಿದೆ.
ವೃತ್ತಾಕಾರದ ಜಿಪ್ ಲೈನ್
ಸುಂದರ ವಿನ್ಯಾಸದ ಸಂಕೀರ್ಣ ಹಾಗೂ ಎತ್ತರದ ಜಾರುಬಂಡೆಗಳು ಮಕ್ಕಳ ದೈಹಿಕ ಬೆಳವಣಿಗೆಗೆ ಮಾತ್ರವಲ್ಲದೆ ಅವರಲ್ಲಿ ಸ್ಥೈರ್ಯ ಹಾಗೂ ಆತ್ಮವಿಶ್ವಾಸ ಮೂಡಿಸುವ ಮೂಲಕ ಅವರ ಮಾನಸಿಕ ಬೆಳವಣಿಗೆಗೂ ನೆರವಾಗುವಂತಿವೆ. ಇಲ್ಲಿನ ಜಿಪ್ ಲೈನ್ ಇತರ ಕಡೆಗಳಲ್ಲಿರುವಂತೆ ನೇರವಾಗಿರದೆ ವೃತ್ತಾಕಾರದಲ್ಲಿರುವುದು ವಿಶೇಷ. ಇದು ನೆಲಕ್ಕೆ ಹತ್ತಿರದಲ್ಲಿ ಚಲಿಸುವುದರಿಂದ ಇದರ ಬಳಿ ಸುಳಿಯುವಾಗ ಎಚ್ಚರಿಕೆ ವಹಿಸುವುದು ವಿಹಿತ.

ಇತರ ಆಟಿಕೆಗಳು
ಬಗೆ ಬಗೆಯ ವಿನ್ಯಾಸ ಹಾಗೂ ಗಾತ್ರಗಳ ಉಯ್ಯಾಲೆಗಳಿವೆ. ಇಲ್ಲಿ ಜೀಕಿಕೊಳ್ಳಲು ಎಲ್ಲಾ ವಯೋಮಾನದವರೂ ಹಾತೊರೆಯುತ್ತಾರೆ ಎಂಬುದು ಅತಿಶಯೋಕ್ತಿಯಲ್ಲ. ವರ್ಣರಂಜಿತ ಸೀ-ಸಾ (ಆಡು ಮಣೆ) ಹಾಗೂ ಗ್ಲೋಬ್ ಸ್ಪಿನ್ನರ್ (ಸುತ್ತುವ ಗೋಳ) ಇಲ್ಲಿನ ಇತರ ಆಕರ್ಷಕ ಆಟಿಕೆಗಳು. ಚಿಕ್ಕ ಮರಳಿನ ಕೋಟೆ ಪುಟ್ಟ ಮಕ್ಕಳಿಗೆ ಅತ್ಯಂತ ಪ್ರಿಯವಾಗುತ್ತದೆ. ಅವರು ಮರಳಿನಲ್ಲಿ ಆಟವಾಡಿಕೊಂಡು ಆನಂದಿಸುತ್ತಾರೆ. ಒಂದು ವೇದಿಕೆಯ ಮೇಲೆ ಹಲವಾರು ಲೋಹದ ಸಂಗೀತ ವಾದ್ಯಗಳಿವೆ. ಆಸಕ್ತರು ಇವುಗಳನ್ನು ನುಡಿಸಬಹುದು.
ಇಲ್ಲಿ ಗಿಡಮರಗಳಿಲ್ಲದ ಕಡೆಗಳಲ್ಲಿ ಬಿಸಿಲು ಹೆಚ್ಚಿರುತ್ತದೆ. ಹಾಗಾಗಿ ಬೇಸಗೆಯ ದಿನಗಳ ಮಧ್ಯಾಹ್ನದ ಹೊತ್ತಿನಲ್ಲಿ ಭೇಟಿ ನೀಡದಿರುವುದು ಸೂಕ್ತ.
ಹೆಸರು ಹೇಗೆ ಬಂತು?
1940ರಲ್ಲಿ ಆರಂಭವಾದ ಈ ಉದ್ಯಾನಕ್ಕೆ ಮೊದಲು ಕೋಸ್ಟ ಮೇಸ ಪಾರ್ಕ್ ಎಂಬ ಹೆಸರಿತ್ತು. ಸ್ಥಳೀಯ ಲಯನ್ಸ್ ಸಂಸ್ಥೆಯವರು ಇಲ್ಲಿ ಫಿಶ್ ಫ್ರೈ ಕಮ್ಯುನಿಟಿ ಫಂಡ್ ರೈಸ್ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿದ್ದರು. ಹಾಗಾಗಿ 1970ರ ದಶಕದಲ್ಲಿ ಇದಕ್ಕೆ ಲಯನ್ಸ್ ಪಾರ್ಕ್ ಎಂದು ಮರುನಾಮಕರಣ ಮಾಡಲಾಯಿತು. ವಿಮಾನ ಉದ್ಯಾನ ಎಂದೂ ಇದು ಗುರ್ತಿಸಲ್ಪಡುತ್ತದೆ.
ಈ ಉದ್ಯಾನ ಡೇವಿಸ್ ಫೀಲ್ಡ್, ಕೋಸ್ಟ ಮೇಸ ಹಿಸ್ಟಾರಿಕಲ್ ಸೊಸೈಟಿ, ಡೌನ್ ಟೌನ್ ರಿಕ್ರಿಯೇಷನ್ ಸೆಂಟರ್, ನೋರ್ಮ ಹರ್ಟ್ಸಾಗ್ ಕಮ್ಯುನಿಟಿ ಸೆಂಟರ್, ಡೋನಾಲ್ಡ್ ಡಂಗನ್ ಲೈಬ್ರರಿ, ಫೈರ್ ಸ್ಟೇಷನ್ ಇತ್ಯಾದಿಗಳನ್ನೂ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಒಟ್ಟಾರೆ, ಸಮಗ್ರ ಸಂಕೀರ್ಣದ ಲಯನ್ಸ್ ಪಾರ್ಕ್ ಭೇಟಿ ಹಿತಕರ ಅನುಭವ ನೀಡುತ್ತದೆ.
ದಾರಿ ಹೇಗೆ?
ವಿಳಾಸ : 540 W. 18th Street, Costa Mesa, California.
ಹತ್ತಿರದ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ : ಲಾಸ್ ಏಂಜಲೀಸ್.