Tuesday, March 10, 2026
Tuesday, March 10, 2026

ಮೆಲ್ಬರ್ನ್‌ ನಗರದಲ್ಲಿ ಮರೆಯಲಾಗದ ದಿನಗಳು

ಮೇ ತಿಂಗಳಲ್ಲಿ ಇಲ್ಲಿನ ಬಡಾವಣೆಗಳಿಗೆ ಚುನಾವಣೆ ಇತ್ತು. ಮತದಾನ ಕೇಂದ್ರಕ್ಕೆ ಭೇಟಿ ನೀಡಿದೆ. ಭಾರತದ ಮತದಾನ ದಿನದ ಅನುಭವಕ್ಕಿಂತ ಇಲ್ಲಿನದ್ದು ಭಿನ್ನ ಅನುಭವ. ನಾನೂ ಮತದಾನ ಮಾಡುವ ಹಾಲ್‌ ಹೊರಗಿನವರೆಗೆ ಹೋದೆ. ಆ ಬಡಾವಣೆಯ ಅಭ್ಯರ್ಥಿಗಳು ಬಹಳ ಮೃದುವಾಗಿ ʼನಮಗೇ ಕೊಡಿ ಓಟುʼ ಎನ್ನುತ್ತಿದ್ದುದನ್ನು ಕಂಡೆ.

  • ಯತಿರಾಜ್‌ ವೀರಾಂಬುಧಿ

ಡಿಸೆಂಬರ್‌ 2022ರಿಂದ ಫೆಬ್ರವರಿ 2023ರವರೆಗೆ ಪತ್ನಿ ಸಮೇತ ಒಮ್ಮೆ ಮೆಲ್ಬರ್ನ್‌ ನಗರಕ್ಕೆ ಹೋಗಿದ್ದೆ. ನಮ್ಮನ್ನು ಅಲ್ಲಿದ್ದ ನಮ್ಮ ಮಗಳು ಮತ್ತು ಅಳಿಯ ಡಿಸೆಂಬರ್‌ನಲ್ಲಿ ಬನ್ನಿ ಎಂದು ಹೇಳಿದ್ದರು. ಇದಕ್ಕೆ ಒಂದು ಕಾರಣವಿತ್ತು. ಅಲ್ಲಿ ಆಗ ಬೇಸಗೆ. ಹೌದು, ಗೋಳದ ದಕ್ಷಿಣಾರ್ಧದಲ್ಲಿ ಉತ್ತರಾರ್ಧದ ವಿರುದ್ಧದ ಹವಾಮಾನವಿರುತ್ತದೆ.

ಇದನ್ನೂ ಓದಿ: ಅರೆ ಥೈ ಥೈ… ಥೈಲ್ಯಾಂಡ್‌

ನಾವು 2025ರ ಏಪ್ರಿಲ್‌.6ಕ್ಕೆ ಅಲ್ಲಿಗೆ ಹೊರಟೆವು. ನಮ್ಮ ಮಗಳಿಗೆ ಅವಳಿ ಮಕ್ಕಳು ಹುಟ್ಟುವರೆಂದು ವಿಷಯ ತಿಳಿದಿದ್ದರಿಂದ ಪ್ರಸವಕ್ಕೆ ಮೂರು ತಿಂಗಳ ಮೊದಲೇ ಅಲ್ಲಿಗೆ ತಲುಪಿದ್ದೆವು. ವಿಮಾನವಿಳಿದಾಗ ತಣ್ಣಗಿನ ಗಾಳಿ, ಮಂಜು ಮುಸುಕಿದ ವಾತಾವರಣವಿತ್ತು. ಸುಮಾರು ನಲವತ್ತು ನಿಮಿಷಗಳ ಪ್ರಯಾಣ ಮಾಡಿ ನಮ್ಮ ಮಗಳ ಮನೆಗೆ ಹೋದೆವು. ಮನೆಯೊಳಗೆ ಹೋದೊಡನೆ ಸುಖಾನುಭವ. ಏಕೆಂದರೆ ಇಡೀ ಮನೆಯನ್ನು ರೂಮ್‌ ಹೀಟರ್ ಬಿಸಿ ಮಾಡಿತ್ತು.‌

ಒಂದು ದಿನ ಮಗಳು ನನಗೆ ಮಾಲ್‌ಗೆ ಹೋಗುವ ರೀತಿ ಮತ್ತು ಅಲ್ಲಿ ಡೆಬಿಟ್‌ ಕಾರ್ಡ್‌ ಬಳಸುವ ವಿಧಾನವನ್ನು ಕಲಿಸಿಕೊಟ್ಟಳು. ಸುಮಾರು ಎರಡು ಕಿಮೀ ದೂರದಲ್ಲಿ ಮ್ಯಾನರ್‌ ಲೇಕ್‌ ಸೆಂಟ್ರಲ್‌ ಎಂಬ ಮಾರುಕಟ್ಟೆ ಸಂಕೀರ್ಣವಿದೆ. ನಡೆದು ಹೋಗಲು ರಸ್ತೆಯ ಇಕ್ಕೆಲಗಳಲ್ಲಿನ ಮನೆಗಳ ಕಾಂಪೌಂಡ್‌ ಅಂಚಿಗೆ ಸಿಮೆಂಟ್‌ ಕಾಲುದಾರಿ ಇವೆ. ಹೆಚ್ಚೂಕಮ್ಮಿ ಎಲ್ಲೆಡೆಯೂ ಇದೇ ಥರದ ಫುಟ್‌ಪಾತ್‌ ವ್ಯವಸ್ಥೆ ಇದೆ. ಸ್ವಚ್ಛ ರಸ್ತೆಗಳು, ಗಲೀಜು ಇಲ್ಲದ ಕಾಲುದಾರಿಗಳು, ಫುಟ್‌ಪಾತ್‌ ಮೇಲೆ ಹುಲ್ಲು ಹಾಸು, ಮನೆಯ ಕಾಂಪೌಂಡಿನಲ್ಲಿ ಹೂಗಿಡಗಳು ಇವೆ. ಅವರವರ ಮನೆಯ ಮುಂದಿನ ಹುಲ್ಲು ಹಾಸನ್ನು ಅವರವರೇ ಕತ್ತರಿಸಬೇಕು. ಸಾರ್ವಜನಿಕ ಜಾಗದಲ್ಲಿನ ಹುಲ್ಲುಹಾಸನ್ನು ಅಲ್ಲಿನ ಕಾರ್ಪೋರೇಷನ್‌ ಕತ್ತರಿಸುತ್ತದೆ.

Untitled design - 2026-03-10T122854.817

ನಾನು ಈ ಮೊದಲು ಹೇಳಿದ ಮಾಲ್‌ ತಲುಪುವ ಮೊದಲು ಒಂದು ದೊಡ್ಡ ಜೋಡಿ ರಸ್ತೆ ಇದೆ. ಅದನ್ನು ಎಚ್ಚರಿಕೆಯಿಂದ ದಾಟಬೇಕು. ಅಲ್ಲಿ ಯಾವ ಸಿಗ್ನಲ್‌ಗಳೂ ಇಲ್ಲ. ಮಾಲ್‌ ಮುಂದೆ ಮುನ್ನೂರು ಕಾರುಗಳನ್ನು ನಿಲ್ಲಿಸುವಷ್ಟು ಜಾಗವಿದೆ. ಅನೇಕ ಕ್ಲಿನಿಕ್‌ಗಳು, ಕೇಕ್‌ ಷಾಪ್‌, ಕೋಳಿ ಮಾಂಸದ ಅಂಗಡಿಗಳೂ ಅಲ್ಲಿವೆ. ಖುಲ್‌ಜಾ ಸಿಂಸಿಂನಂತೆ ತೆರೆದುಕೊಳ್ಳುವ ಬಾಗಿಲನ್ನು ಪ್ರವೇಶಿಸಿದರೆ ಎಡಗಡೆ ಫಾರ್ಮಸಿ, ಬಲಗಡೆ ಅಂಚೆ ಕಚೇರಿ. ಮುಂದೆ ಸೂಶಿ, ಕೇಕ್‌ ಅಂಗಡಿಗಳು. ಎಡಕ್ಕೆ ತಿರುಗಿದರೆ ಒಂದು ಎಟಿಎಂ. ಆಮೇಲೆ ಬಿಗ್‌ ಡ್ಯಾಡೀಸ್ ಇಲ್ಲಿ ನಾನಾ ರೀತಿಯ ಹಣ್ಣುಗಳು, ತರಕಾರಿಗಳನ್ನು ಜೋಡಿಸಿ ಇಟ್ಟಿರುತ್ತಾರೆ. ಅದರ ಪಕ್ಕಕ್ಕೆ ಫುಡ್ಡೀಸ್‌ ಇದೆ.‌ ಇಲ್ಲಿ ನಮ್ಮ ಉದ್ದಿನ ಬೇಳೆ, ಅಕ್ಕಿ, ಮೊಸರು ಮತ್ತು ತಿನಿಸುಗಳನ್ನು ಕೊಳ್ಳಬಹುದು. ಇದನ್ನು ನಮ್ಮೂರಿನ ದಿನಸಿ ಅಂಗಡಿ ಎನ್ನಬಹುದು. ಇನ್ನೂ ಹಲವು ಮಳಿಗೆಗಳು ಅಲ್ಲಿವೆ. ಆನ್‌ಲೈನ್‌ನಲ್ಲಿ ಏನಾದರೂ ಆರ್ಡರ್‌ ಮಾಡಿ, ಇಲ್ಲಿನ ಕ್ಲಿಕ್‌ ಆಂಡ್‌ ಕಲೆಕ್ಟ್‌ನಲ್ಲಿ ಪಡೆಯಬಹುದು.

ಇದರ ಎದುರಿಗೆ ಕೋಲ್ಸ್‌ ಎಂಬ ಬಲು ದೊಡ್ಡ ಮಾಲ್‌ ಇತ್ತು. ಹಾಲಿನ ಉತ್ಪನ್ನಗಳು ಸೇರಿ ಎಲ್ಲವೂ ಇಲ್ಲಿ ದೊರಕುತ್ತವೆ. ಇಪ್ಪತ್ತಾರು ಸಾಲುಗಳಲ್ಲಿ ವಸ್ತುಗಳನ್ನು ಜೋಡಿಸಿ ಇಟ್ಟಿದ್ದಾರೆ. ಎಲ್ಲೆಲ್ಲಿ ಏನೇನು ಸಿಗುತ್ತದೆ ಎಂಬುದನ್ನೂ ನಮೂದಿಸಿದ್ದಾರೆ. ಎಲ್ಲಾ ಥರದ ಜನರೂ ಇಲ್ಲಿಗೆ ಬರುತ್ತಾರೆ. ವಿಶೇಷವೆಂದರೆ ವಯಸ್ಸಾದವರೂ ಒಬ್ಬಂಟಿಯಾಗಿ ಯಂತ್ರಚಾಲಿತ ಗಾಲಿಕುರ್ಚಿಯಲ್ಲಿ ಬಂದು ತಮಗೆ ಬೇಕಾದ ವಸ್ತುಗಳನ್ನು ಪಡೆದುಕೊಂಡು ಹೋಗುತ್ತಾರೆ. ಇಲ್ಲಿನ ಜನರು ಪಕ್ಕದವರನ್ನು ಮಾತಾಡಿಸುವುದಂತೂ ಇಲ್ಲವೇ ಇಲ್ಲ.

ರಸ್ತೆಯಲ್ಲಿ ಜನಸಂದಣಿ ಇರುವುದಿಲ್ಲ. ಎಲ್ಲೋ ಒಬ್ಬರು ತಮ್ಮ ನಾಯಿಯನ್ನು ಕರೆದುಕೊಂಡು, ಎಡಗೈಯಲ್ಲಿ ಒಂದು ಪ್ಲಾಸ್ಟಿಕ್‌ ಕವರ್ ಹಿಡಿದುಕೊಂಡು ಅಡ್ಡಾಡುತ್ತಿರುತ್ತಾರೆ. ನಾಯಿ ರಸ್ತೆಯಲ್ಲಿ ಮಲವಿಸರ್ಜನೆ ಮಾಡಿದರೆ ಅದನ್ನು ಹೆಕ್ಕಿ ತೆಗೆದುಕೊಂಡು ಹೋಗಬೇಕು. ಅದು ಅಲ್ಲಿನ ನಿಯಮವೂ ಹೌದು.

ಮೇ ತಿಂಗಳಲ್ಲಿ ಇಲ್ಲಿನ ಬಡಾವಣೆಗಳಿಗೆ ಚುನಾವಣೆ ಇತ್ತು. ಮತದಾನ ಕೇಂದ್ರಕ್ಕೆ ಭೇಟಿ ನೀಡಿದೆ. ಭಾರತದ ಮತದಾನ ದಿನದ ಅನುಭವಕ್ಕಿಂತ ಇಲ್ಲಿನದ್ದು ಭಿನ್ನ ಅನುಭವ. ನಾನೂ ಮತದಾನ ಮಾಡುವ ಹಾಲ್‌ ಹೊರಗಿನವರೆಗೆ ಹೋದೆ. ಆ ಬಡಾವಣೆಯ ಅಭ್ಯರ್ಥಿಗಳು ಬಹಳ ಮೃದುವಾಗಿ ʼನಮಗೇ ಕೊಡಿ ಓಟುʼ ಎನ್ನುತ್ತಿದ್ದುದನ್ನು ಕಂಡೆ.

ಇಲ್ಲಿನ ಛಳಿಯಂತೂ ಗಡಗಡ ನಡುಗಿಸುತ್ತದೆ. ಬನಿಯನ್‌, ಶರ್ಟ್‌, ಸ್ವೆಟರ್‌, ಲಾಂಗ್‌ ಕೋಟ್‌, ಮಫ್ಲರ್‌ ಮತ್ತು ಉಣ್ಣೆಯ ಟೋಪಿ ಹಾಕಿಕೊಂಡರೂ ಅದರ ಕೊರೆತ ಮೂಳೆಗಳನ್ನು ಮುಟ್ಟುತ್ತದೆ.

Untitled design - 2026-03-10T123519.248

ಸೆಪ್ಟೆಂಬರ್‌ ದಾಟುತ್ತಿದ್ದಂತೆ ಛಳಿ ಕಡಿಮೆಯಾಗಿತ್ತು. ವಸಂತ ಕಾಲ ಬಂದಿತ್ತು. ಆಗ ಸೂಕ್ಷ್ಮ ಮೂಗಿನವರಿಗೆ ಪೋಲನ್‌ ಅಟ್ಯಾಕ್‌ ಆಗುತ್ತದೆ. ತಲೆನೋವು ಬರುತ್ತದೆ. ಅದಕ್ಕೆ ಔಷಧಿಗಳೂ ಇವೆ.

ನನಗೆ ಇಲ್ಲಿನ ವಾತಾವರಣ ಬಲು ಮುದ ನೀಡಿತ್ತು. ಬೆಳಗ್ಗೆ ಸುಡು ಬಿಸಿಲು, ಮಧ್ಯಾಹ್ನ ಮೋಡ ಮುಸುಕಿದ ವಾತಾವರಣ, ಸಂಜೆ ಮಳೆ, ರಾತ್ರಿ ಸ್ವಚ್ಛ ಆಕಾಶ ಎಲ್ಲವೂ ಇರುತ್ತದೆ. ಬಹುಶಃ ಇಡೀ ಆಸ್ಟ್ರೇಲಿಯಾದ ಬೇಸಗೆ, ಮಳೆಗಾಲ, ವಸಂತ ಮತ್ತು ಛಳಿಗಾಲಗಳು ನಿರ್ದಿಷ್ಟ ತಿಂಗಳುಗಳಲ್ಲಿ ಘಟಿಸಿದರೆ ಮೆಲ್ಬರ್ನ್‌ ನಗರದಲ್ಲಿ ಹವಾಮಾನ ದಿನವೂ ನಾಲ್ಕು ಸಲ ಬದಲಾಗುತ್ತದೆ.

ಡಿಸೆಂಬರ್‌ ಕೊನೆಯಲ್ಲಿ ವಿಪರೀತ ಬಿಸಿಲು ಬಂದಿತ್ತು. ನನ್ನ ಅಳಿಯ ಟೋಪಿ ಹಾಕಿಕೊಂಡು ಹೋಗಿ ಎಂದರು. ಎಂದಿನಂತೆ ಸ್ವಚ್ಛ ರಸ್ತೆಗಳು, ಸುಡು ಬಿಸಿಲು, ಆದರೆ ಇದ್ದಕ್ಕಿದ್ದಂತೆ ವಿಪರೀತ ಬಿಸಿಯಾದ ಬಿರುಗಾಳಿ ಬೀಸತೊಡಗಿತು. ಜೋಡಿ ರಸ್ತೆಯ ಮೀಡಿಯನ್‌ ತಲುಪಿದ್ದಾಗ ಗಾಳಿಯ ಬಿರುಸಿನಿಂದ ನನ್ನ ಟೋಪಿ ಹಾರಿಹೋಗಿತ್ತು!

ಒಮ್ಮೆ ಎರಡು ಗಂಟೆಗಳ ಕಾಲ ಕಾರಿನಲ್ಲಿ ಪ್ರಯಾಣ ಮಾಡಿ ಹುಲ್ಲುಗಾವಲುಗಳ ನಡುವಣ ಮನೆಗಳನ್ನು ಕಂಡೆ. ಕಾಂಗರೂಗಳನ್ನು ನೋಡಲೆಂದು ಮೂವತ್ತು ಕಿಮೀ ದೂರದ ಸೆರೆಂಡಿಪ್‌ ವಾಕ್‌ಗೆ ಹೋದೆ. ಈ ಊರಿನ ಸ್ವಚ್ಛ ವಾತಾವರಣ ಕಂಡು ಮುದಗೊಂಡೆ. ಮತ್ತೊಮ್ಮೆ ಬರುವೆ ಮೆಲ್ಬರ್ನ್‌ ಎಂದು ಅದಕ್ಕೆ ವಿದಾಯ ಹೇಳಿ 290 ದಿನಗಳ ನಂತರ ಮರಳಿ ನನ್ನ ಜನ್ಮಭೂಮಿಗೆ ಬಂದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...