• ಪಿ. ಶ್ರೀಧರ್ ನಾಯಕ್

ಅಮೆರಿಕದ ವಿಸ್ಕಾನ್ಸಿನ್ ಮಿನಸೋಟಾದ ಪಕ್ಕದ ರಾಜ್ಯ. ಹಾಲು ಉತ್ಪನ್ನಗಳ ಉದ್ಯಮಕ್ಕೆ ಹೆಸರುವಾಸಿ. ಇಲ್ಲಿ 300 ಥರದ ಚೀಸ್ ಉತ್ಪಾದಿಸಿ ಒಂದೇ ಮಳಿಗೆಯಲ್ಲಿ ಅವುಗಳನ್ನು ಮಾರಾಟಕ್ಕೆ ಇಡುವವರೂ ಇದ್ದಾರೆ. ಇಲ್ಲಿಗೆ ಬಂದ ಪ್ರವಾಸಿಗರು ರುಚಿಕಟ್ಟಾದ ಐಸ್ ಕ್ರೀಮ್ ಸವಿಯದೇ ಮರಳುವುದಿಲ್ಲ. ಈ ರಾಜ್ಯ ಪ್ರವೇಶಿಸಿದಾಗ ರಸ್ತೆಯ ಎರಡೂ ಬದಿಗಳಲ್ಲಿ ಹಸುಗಳು ಮೇಯುವುದನ್ನು ಕಂಡ ನಮ್ಮ ಸೊಸೆ ಕವಿತಾ 'ಅರೆ, ನಮ್ಮ ಟೆಕ್ಸ್ಟ್ ಬುಕ್ಕಿನ ಹಸುಗಳು ಇಲ್ಲಿವೆ ನೋಡಿ' ಎಂದಳು.

ವಿಸ್ಕಾನ್ಸಿನ ರಾಜ್ಯದಲ್ಲಿ ಒಟ್ಟು 50 ಪಾರ್ಕ್‌ಗಳಿವೆ. ಅವುಗಳಲ್ಲಿ ಮಕ್ಕಳ ವಿಹಾರಕ್ಕೂ ಪಾರ್ಕ್‌ಗಳಿವೆ. ಇಲ್ಲಿ ಪಾರ್ಕ್ ಎಂದರೆ ಉದ್ಯಾನವಲ್ಲ. ವಿಹಾರ ಯೋಗ್ಯ ಕಾಡುಗಳು. ಅವುಗಳಲ್ಲಿ ವಿಲ್ಲೊ ರಿವರ್ ಸ್ಟೇಟ್ ಪಾರ್ಕ್ ಸುಮಾರು ಮೂರು ಸಾವಿರ ಎಕರೆ ಪ್ರದೇಶವನ್ನು ವ್ಯಾಪಿಸಿದ್ದು, 245 ಪ್ರಬೇಧದ ಪಕ್ಷಿಗಳಿವೆ. ಅಪರೂಪದ ಹಕ್ಕಿಗಳ ಛಾಯಾಚಿತ್ರ ತೆಗೆಯಲು ಛಾಯಾಗ್ರಾಹಕರು ಬರುತ್ತಾರೆ. ಪ್ರವಾಸಿಗರು ಇಲ್ಲಿ ಕಾಡಿನಲ್ಲಿ ಟೆಂಟು ಹಾಕಿ ಅಡುಗೆ ಮಾಡಿ ರಾತ್ರಿ ಕಳೆಯುತ್ತಾರೆ. ಅಡುಗೆಯನ್ನು ಮಾಡಲು ಸೌದೆಯನ್ನು ಇದರ ಉಸ್ತುವಾರಿ ನೋಡಿಕೊಳ್ಳುವ ಸರಕಾರಿ ಇಲಾಖೆಯೇ ಮಾರಾಟ ಮಾಡುತ್ತದೆ. ಬೆಂಕಿ ಹಾಕಿ ಅಡುಗೆ ಮಾಡಲು ನಿಷೇಧ ಇಲ್ಲ. ರಸ್ತೆ ಬದಿ ಸಾರ್ವಜನಿಕ ಬಳಕೆಗೆ ಸ್ವಚ್ಛ ಶೌಚಾಲಯ ಇದೆ. ಹಾಗಾಗಿ ರಾತ್ರಿ ಕಳೆಯಲು ತೊಂದರೆಯಿಲ್ಲ. ಕೇವಲ ಬಿಸಿ ರಕ್ತದ ತರುಣ, ತರುಣಿಯರು ಮಾತ್ರ ಅಲ್ಲ, ವಯೋವೃದ್ಧ ದಂಪತಿಯೂ ಟೆಂಟ್ ಹಾಕಿ ಸಂತಸದ ಕ್ಷಣಗಳನ್ನು ಕಳೆಯುತ್ತಾರೆ. ತಮ್ಮ ನಾಯಿಗಳನ್ನೂ ಕರೆ ತರುತ್ತಾರೆ.
ಇದನ್ನೂ ಓದಿ: ಅಮೆರಿಕದಲ್ಲೊಂದು ವಿಚಿತ್ರ ದ್ವೀಪ! ಓಡಾಟಕ್ಕಿಲ್ಲಿ ಕಾರಿಲ್ಲ ಕುದುರೆಗಳದ್ದೇ ಕಾರುಬಾರು

ಈ ಪಾರ್ಕ್ ಅನ್ನುವ ಕಾಡಿನ ಮಧ್ಯೆ 2.5 ಕಿಮೀ ಪಾದಯಾತ್ರೆ ಮಾಡಿ ಸಾಗಿದರೆ ಕಣ್ಣಿಗೆ ಹಬ್ಬವನ್ನು ಉಂಟು ಮಾಡುವ ಜಲಪಾತ ಕಣ್ಣಿಗೆ ಬೀಳುತ್ತದೆ. ಕಾಡಿನ ಹಾದಿಯ ಆರಂಭದಲ್ಲೇ ಇಳಿಜಾರು. ಹಾವಿನ ಚಲನೆ ಮಾದರಿಯಲ್ಲಿಯೇ ಇಳಿದರೆ ಜಾರಿ ಬೀಳುವುದಿಲ್ಲ ಎಂದು ಸೊಸೆ ಕವಿತಾ ಹೇಳಿ ಮುಂದಕ್ಕೆ ಸಾಗಿದಳು. ಮಗ ರಾಹುಲ್ ಅದೇ ರೀತಿ ಸಾಗುವಂತೆ ಹೇಳಿದ. ನಮ್ಮನ್ನು ಕುಡುಕರು ಎಂದು ಇಲ್ಲಿನ ಸಹ ಪ್ರವಾಸಿಗರು ಭಾವಿಸುವ ಸಾಧ್ಯತೆಯಿದೆ ಎಂದು ನಕ್ಕು ಹೇಳಿದೆ.

Untitled design (3)

ರಸ್ತೆಯ ಎರಡೂ ಮಗ್ಗುಲಿನಲ್ಲೂ ದಟ್ಟವಾದ ಕಾಡು. ಕಾಡಿನ ಒಳಗೆ ಪ್ರವೇಶಿಸುವುದು ಕಷ್ಟ ಸಾಧ್ಯ. ಹಕ್ಕಿಗಳ ಛಾಯಾಚಿತ್ರಕ್ಕಾಗಿ ಒಳಗೆ ಹೋಗುವವರು ಹುಲಿ, ಸಿಂಹ, ಆನೆಗಳನ್ನು ಎದುರಿಸುವ ಪ್ರಮೇಯ ಬರುವುದಿಲ್ಲ. ಏಕೆಂದರೆ ಅವು ಇರುವುದಿಲ್ಲ. ಚಳಿಗಾಲದಲ್ಲಿ ಬೀಳುವ ಹಿಮದಿಂದಾಗಿ ಅವು ಅಲ್ಲಿ ಬದುಕುವುದು ಅಸಾಧ್ಯ. ಬುದ್ಧಿವಂತ ವಲಸೆ ಹಕ್ಕಿಗಳು ಹಿಮ ಬೀಳುವ ಮುನ್ನವೇ ಜಾಗ ಖಾಲಿ ಮಾಡುತ್ತವೆ.

ನಮ್ಮ ಕಾಲ್ನಡಿಗೆಯ ಅಂತ್ಯದಲ್ಲಿ ಜಲಪಾತ ಕಂಡಾಗ ನಮ್ಮ ಎಲ್ಲ ದಣಿವು ಏಕಾಏಕಿ ನಾಪತ್ತೆಯಾಯಿತು. ಅಲ್ಲಿ ನಮ್ಮಂತೆ ಇದೇ ಮೊದಲ ಬಾರಿಗೆ ಬಂದ ಈ ದೇಶದ ಪ್ರವಾಸಿಗರು ಫೊಟೋ ಕ್ಲಿಕ್ಕಿಸುತ್ತಿದ್ದರು. ನಾನು ನನ್ನ ಕ್ಯಾಮೆರಾಕ್ಕೆ ಕೆಲಸ ಕೊಟ್ಟೆ. ಸುಂದರ ಕ್ಷಣಗಳು ನಮ್ಮ ಕ್ಯಾಮೆರಾದಲ್ಲಿ ಸೆರೆಯಾದವು.

Untitled design (4)

ಅಲ್ಲಿಂದ ಮರಳುವಾಗ ಕಣ್ಣಿಗೆ ಬಿದ್ದ ಜಿಂಕೆಯ ಛಾಯಾಚಿತ್ರವನ್ನು ನಮ್ಮ ಪುತ್ರ ರಾಹುಲ್ ಸೆರೆ ಹಿಡಿದ. ಸಂಜೆ ಏಳರ ಕತ್ತಲೆ ಆವರಿಸುತ್ತಿತ್ತು. ಇಲ್ಲಿ ಮರ ಗಿಡಗಳ ಮಧ್ಯೆ ಕಾಡು ಮೊಲಗಳು ಮತ್ತು ಸಣ್ಣ ಪ್ರಾಣಿಗಳು ಇರುತ್ತವೆ. ಹಕ್ಕಿಗಳ ಗಾನ ಆಗೊಮ್ಮೆ ಈಗೊಮ್ಮೆ ಕಿವಿಗೆ ಬೀಳುತ್ತದೆ. ನಮ್ಮ ಹೆಜ್ಜೆಯನ್ನು ಕೈಗೆ ಕಟ್ಟಿದ ವಾಚ್ ನೆರವಿನಿಂದ ಲೆಕ್ಕ ಹಾಕಿದ ನನ್ನ ಪತ್ನಿ ಶಿಲ್ಪಾ ಒಟ್ಟು 13,400 ಹೆಜ್ಜೆ ಹಾಕಿದ್ದೇವೆ ಎಂದಳು.

ಇಲ್ಲಿ ಒಳ ಪ್ರವೇಶಕ್ಕೆ ಪ್ರತೀ ಕಾರಿಗೆ 16 ಡಾಲರ್ ತೆರಬೇಕು. ಹಿಂದೆ 12 ಡಾಲರ್ ಇತ್ತು ಎಂದು ರಾಹುಲ್ ಹೇಳಿದ. ಈ ರಾಜ್ಯದ ನಿವಾಸಿಗಳು 12 ಡಾಲರ್ ಪಾವತಿ ಮಾಡಿದರೆ ಸಾಕು. ಇಲ್ಲಿಗೆ ಹೋಗುವವರು ಊಟ, ತಿಂಡಿ ತೆಗೆದುಕೊಂಡು ಹೋಗಬೇಕು. ಚಳಿಗೆ ಬಿಸಿ ಬಿಸಿ ಕಾಫಿ, ಚಹಾ, ತಿಂಡಿ, ತಿನಿಸು ಇಲ್ಲಿ ಸಿಗದು. ಅದಕ್ಕೆ ಮುಖ್ಯರಸ್ತೆಗೆ ಹೋಗಬೇಕು.