• ಶಶಿಕರ ಪಾತೂರು

ಕನ್ನಡದಲ್ಲಿ 'ಕಲ್ಯಾಣಿ' ಧಾರಾವಾಹಿಯ ನಾಯಕಿಯಾಗಿ ಜನಪ್ರಿಯರಾದ ಭೂಮಿಕಾ ತಮಿಳಿನಲ್ಲಿಯೂ‌ 'ಕರಗಾಟಕ್ಕಾರಿ' ಸೇರಿದಂತೆ ಹಲವು ಧಾರಾವಾಹಿಗಳಿಂದ ಗುರುತಿಸಿಕೊಂಡವರು. ತಮಿಳು, ಕನ್ನಡ ಸಿನಿಮಾಗಳಲ್ಲಿಯೂ‌ ನಟಿಸಿರುವ ಇವರು ಪ್ರಸ್ತುತ 'ಸಾಲುಮರದ ತಿಮ್ಮಕ್ಕ' ಚಿತ್ರದಲ್ಲಿ ತಿಮ್ಮಕ್ಕನ‌ ಅಕ್ಕನ ಪಾತ್ರ ನಿಭಾಯಿಸುತ್ತಿದ್ದಾರೆ. ಭೂಮಿಕಾ ಭೂಮಿ ತುಂಬ ಸುತ್ತಾಡುವ ತಮ್ಮ ಆಕಾಂಕ್ಷೆಯನ್ನು ಇಲ್ಲಿ‌ ಹಂಚಿಕೊಂಡಿದ್ದಾರೆ.

ನಿಮಗೆ ಪ್ರವಾಸ ಅಂದರೆ ಎಷ್ಟು ಇಷ್ಟ?

ಪ್ರವಾಸ ಅಂದರೆ ನನಗೆ ತುಂಬಾ ಇಷ್ಟ. ಆದರೆ ಇದುವರೆಗೆ ಒಂಟಿಯಾಗಿ ಟೂರ್ ಹೋಗಿದ್ದೇ ಇಲ್ಲ. ಆ ಆಸೆಯನ್ನು ಒಬ್ಬಳೇ ಲಾಂಗ್‌ ಡ್ರೈವ್ ಹೋಗುವ ಮೂಲಕ ತೀರಿಸಿಕೊಳ್ಳುತ್ತೇನೆ. ಸೋಲೋ ಡ್ರೈವ್ ಮೂಲಕ ಬೆಳಗ್ಗೆ ಹೋಗಿ ಸಾಯಂಕಾಲ‌ ಮರಳುವುದು ಕೂಡ ಇದೆ. ನನಗೆ ಇದೇ ಜಾಗ ಆಗಬೇಕು ಅಂತ ಏನಿಲ್ಲ. ಇಡೀ ಭೂಮಿ ಸುತ್ತುವ ಅವಕಾಶ ಸಿಕ್ಕರೂ ಎಂಜಾಯ್ ಮಾಡಬಲ್ಲೆ.

ಇದನ್ನೂ ಓದಿ: ಕಾಂತಾರದ ʼಲೀಲಾʼ ಬಿಚ್ಚಿಟ್ಟ ಸತ್ಯ !

ಪ್ರವಾಸ ನಿಮಗೇನು‌ ನೀಡಿದೆ?

ಸಾಮಾನ್ಯವಾಗಿ ನಾನು ಕುಟುಂಬದ ಜತೆಯಲ್ಲೇ ಪ್ರವಾಸ ಹೋಗುತ್ತೇನೆ. ಆಪ್ತರೊಂದಿಗೆ ಮೆಚ್ಚಿನ ಜಾಗದಲ್ಲಿ ಸುತ್ತಾಡುವುದು ಕೂಡ ಖುಷಿ. ಪ್ರತಿ ಪ್ರವಾಸದಿಂದ ನಾನು ರಿಲ್ಯಾಕ್ಸ್‌ ಆಗ್ತೀನಿ. ಮೆಂಟಲಿ ಫ್ರೆಶ್‌ ಆಗ್ತೀವಿ. ಏನಾದರೂ ಟೆನ್ಷನ್‌ ಇದ್ದರೆ ಅವೆಲ್ಲ ದೂರಾಗಿ ಮೈಂಡ್‌ ರಿಲ್ಯಾಕ್ಸ್‌ ಆಗುತ್ತದೆ.

ನಿಮ್ಮ ಮೊದಲ ಪ್ರವಾಸದ ನೆನಪುಗಳೇನು?

ನಾನು ಮೊದಲು ಪ್ರವಾಸಕ್ಕೆ ಹೋಗಿದ್ದು ಶಾಲಾ ವಿದ್ಯಾರ್ಥಿನಿಯಾಗಿದ್ದಾಗ. ಎಂಟನೆಯ ತರಗತಿಯಲ್ಲಿದ್ದಾಗ ಬೇಲೂರು ಹಳೇಬೀಡು ಪ್ರವಾಸ ಹೋಗಿದ್ದೆವು. ಶ್ರವಣ ಬೆಳಗೊಳ, ಮೈಸೂರು ಎಲ್ಲ ಸುತ್ತಾಡಿ ಮರಳಿದ್ದೆವು.

Untitled design (89)

ಇದುವರೆಗಿನ ಪ್ರವಾಸಗಳಲ್ಲಿ ತುಂಬ ಸ್ಮರಣಾರ್ಹವಾದ ಘಟನೆ ಯಾವುದು?

ಒಮ್ಮೆ ಫ್ಯಾಮಿಲಿ ಫ್ರೆಂಡ್ಸ್ ಎಲ್ಲ ಸೇರಿ ಮನಾಲಿಗೆ ಹೋಗಿದ್ದೆವು. ನಾವು ಒಟ್ಟು 11 ಮಂದಿ ಇದ್ದೆವು. ಅಲ್ಲಿ ಸೋಲಾಂಗ್ ವ್ಯಾಲಿಯಲ್ಲಿ ಆಟವಾಡಿದ್ದನ್ನು ಮರೆಯಲಾಗದು. ಅಲ್ಲಿ ಹಿಮದಲ್ಲಿಯೂ ಆಟವಾಡಿದ್ದೇವೆ. ಪ್ಯಾರಾಗ್ಲೈಡಿಂಗ್‌ ಮಾಡಬಹುದಿತ್ತು. ಆದರೆ ತುಂಬ ಹೊತ್ತು ಕಾಯಲು ಸಾಧ್ಯವಿರದ ಕಾರಣ ಆ ಆಸೆ ನೆರವೇರಲಿಲ್ಲ. ಅಲ್ಲಿನ ಆಹಾರ ವೂ ವಿಭಿನ್ನ. ರೋಟಿ, ಮ್ಯಾಗಿಯಷ್ಟೇ ತಿಂದು ಏಳು ದಿನ ಕಾಲ‌ ಕಳೆದಿದ್ದೇವೆ. ಅಲ್ಲಿನ ಲೈಫ್‌ಸ್ಟೈಲ್‌ ಕೂಡ ಆಕರ್ಷಕವಾಗಿತ್ತು.

ದಕ್ಷಿಣ ಭಾರತದಲ್ಲಿ ನಿಮಗೆ ಪ್ರವಾಸಕ್ಕೆ ಸೂಕ್ತವೆನಿಸಿದ ಪ್ರದೇಶ ಯಾವುದು?

ನನ್ನ ಮೊದಲ ಪ್ರವಾಸ ಪಟ್ಟಿಯಲ್ಲಿದ್ದ ಮೈಸೂರು ಅಂದರೆ ನನಗೆ ಇಂದಿಗೂ ಇಷ್ಟ. ಮೈಸೂರಿಗೆ ಯಾವಾಗಲೂ ಹೋಗುತ್ತಾ ಇರುತ್ತೇನೆ. ಕೇರಳ, ತಮಿಳುನಾಡುಗಳ ಪ್ರವಾಸಿ ತಾಣಗಳು ಕೂಡ‌ ನನಗೆ ಇಷ್ಟ.‌ ಮುಖ್ಯವಾಗಿ ಸಮುದ್ರ ತೀರ ಪ್ರದೇಶಗಳೆಂದರೆ ತುಂಬಾ ಆಸಕ್ತಿ. ಅದರಲ್ಲೂ ಗೋವಾ ಹೋಗ್ತಾ ಇರ್ತೀನಿ. ಗೋವಾ ನನಗೆ ಎರಡನೆಯ ತವರು ಇದ್ದಂತೆ! ಅಲ್ಲಿ ನನ್ನ ದೊಡ್ಡಮ್ಮನ ಕುಟುಂಬ ಕೂಡ ಇದೆ. ಕೌಟುಂಬಿಕ ಕಾರ್ಯಕ್ರಮಗಳು ನಡೆಯುವಾಗ ಅಲ್ಲಿಗೆ ಹೋಗುತ್ತಾ ಇರುತ್ತೇವೆ. ಶಾಲಾದಿನಗಳಲ್ಲೇ ಬೇಸಗೆ ರಜೆಗೆ ಅಲ್ಲೇ ಹೋಗುತ್ತಿದ್ದ ಕಾರಣ ನನ್ನ ಬಾಲ್ಯದ ನೆನಪುಗಳು ಅಲ್ಲಿವೆ. ಅದೇ ರೀತಿ ಕೇರಳ ನನ್ನ ತಂದೆಯ ಊರು. ಅಲ್ಲಿಗೆ ಹೋಗುವುದು ಕೂಡ ಇಷ್ಟವೇ‌.

Untitled design (88)

ಮನಾಲಿ ಬಿಟ್ಟು ಉತ್ತರದಲ್ಲಿ ನಿಮಗೆ ಇಷ್ಟವಾದ ಜಾಗಗಳು ಯಾವುವು?

ನಾನು ಮುಂಬೈ, ಮಹಾರಾಷ್ಟ್ರ ಮೊದಲಾದೆಡೆಗಳಿಗೆ ಹೋಗಿದ್ದೇನೆ. ಜೈಪುರ ಮತ್ತು ಉದಯಪುರಗಳಿಗೂ ಹೋಗಿದ್ದೇನೆ. ಅರಮನೆ, ಕೋಟೆಗಳಲ್ಲಿ ಸುತ್ತಾಡಿದ್ದೇನೆ. ಆದರೆ ಹಿಮಾಚಲ ಪ್ರದೇಶದಲ್ಲಿ ನನಗೆ ಸಿಕ್ಕ ಖುಷಿ ಬೇರೆಲ್ಲೂ ಸಿಕ್ಕಿಲ್ಲ.‌

ಪ್ರವಾಸದ ಸಂದರ್ಭದಲ್ಲಿ ನಡೆದಂಥ ಯಾವುದಾದರೂ ಭಾವುಕ ಘಟನೆಯನ್ನು ಹಂಚಿಕೊಳ್ಳುತ್ತೀರಾ?

ಅದು ವಾಘಾ ಬಾರ್ಡರ್ ನಲ್ಲಿ‌ ನಡೆದ ಘಟನೆ. ಅದು ನನ್ನ ಲೈಫ್‌ ಟೈಮ್‌ ಮೆಮೊರಿ. ಅಲ್ಲಿ ನಮ್ಮ ಸೈನಿಕರ ಕವಾಯತು ನೋಡುವುದೇ ಚಂದ. ಆ ಅನುಭವ ಪಡೆದ ಪ್ರತಿಯೊಬ್ಬ ಭಾರತೀಯರಲ್ಲಿಯೂ ದೇಶಭಕ್ತಿ ಚಿಮ್ಮುವಂತಾಗಬಲ್ಲದು. ನನಗಂತೂ ಅದರ ಪ್ರತ್ಯಕ್ಷ ಅನುಭವವಾಗಿದೆ. ಒಂದು ಕಡೆ ಭಾರತದ ಸೈನಿಕರು ಪಾಕ್ ಸೈನಿಕರ ಮುಂದೆ ತಮ್ಮ ಶಕ್ತಿ ಪ್ರದರ್ಶನ ನಡೆಸುವುದು ಕಂಡಾಗ ಮೈಮರೆಯುವಂತಾಗುತ್ತದೆ.

ಅಲ್ಲಿಂದ ವಾಪಸ್‌ ಬಂದ ಬಳಿಕ ನಾನು ನನ್ನ ಕೈಗೆ 'ಪ್ರೌಡ್‌ ಇಂಡಿಯನ್‌' ಅಂತ ಟ್ಯಾಟೂ ಹಾಕಿಕೊಂಡೆ. ನಾನು ಇದುವರೆಗೆ ಹಾಕಿಕೊಂಡ ಏಕೈಕ ಟ್ಯಾಟೂ ಅದು.

Untitled design (87)

ವಿದೇಶಿ ಪ್ರವಾಸದ ಅನುಭವಗಳ ಬಗ್ಗೆ ಹೇಳಿ.

ನನ್ನ ಮೊದಲ ಫಾರಿನ್‌ ಟ್ರಿಪ್‌ ಅಂದರೆ ದುಬೈಗೆ ಹೋಗಿದ್ದು. ಅದೊಂದು ಒಳ್ಳೆಯ ಪ್ರವಾಸ. ಫ್ಯಾಮಿಲಿ ಜತೆ ಹಾಗೂ ಬ್ಯುಸಿನೆಸ್‌ ಟ್ರಿಪ್‌ಗೂ ಅಲ್ಲಿಗೆ ಹೋಗಿದ್ದೆ. ದುಬೈ ಮೊದಲ ಬಾರಿ ಹೋದಾಗ ವಾಹ್‌ ಅಂತ ಅನಿಸಿತ್ತು. ಆಮೇಲೆ ಹೋಗ್ತಾ ಹೋಗ್ತಾ ಏನೂ ವಿಶೇಷ ಅನಿಸಿಲ್ಲ. ಮರುಭೂಮಿಯಲ್ಲಿ ಆಟ ಆಡುವುದು ಮತ್ತು ಶಾಪಿಂಗ್ ಮಾಡುವುದು ಮಾತ್ರ ಇಷ್ಟ. ಏನೇ ಆದರೂ ದುಬೈಯಿಂದ ವಾಪಸ್ ಬರುವಾಗ ಸ್ವಲ್ಪ ಬೇಸರ ಆಗುತ್ತದೆ. ಯಾಕೆಂದರೆ ಅಲ್ಲಿರುವ ಅಕ್ಕ ಮತ್ತು ಅಕ್ಕನ ಮಕ್ಕಳನ್ನು ಬಿಟ್ಟು ಬರುವಾಗಿನ ಸಂಕಟ ಅದು.

ನಾನು ಸಿನಿಮಾ ಚಿತ್ರೀಕರಣಕ್ಕಾಗಿ ಥೈಲ್ಯಾಂಡ್‌ ಟ್ರಿಪ್‌ ಹೋಗಿದ್ದೀನಿ. ಕೊರೊಲ್ ದ್ವೀಪ ಇಷ್ಟವಾಗಿತ್ತು. ಆದರೆ ಅಲ್ಲಿನ ಆಹಾರ ನನಗೆ ಇಷ್ಟ ಆಗಿರಲಿಲ್ಲ.