ಪ್ರವಾಸವೆಂದರೆ ನನ್ನ ಉಸಿರು. ಶೂಟಿಂಗ್‌ನಿಂದ 10 ದಿನಗಳ ಬಿಡುವು ಸಿಕ್ಕಿದರೂ ಸುತ್ತಾಡಲು ಹೊರಟುಬಿಡುತ್ತೇನೆ. ಚಿಕ್ಕಂದಿನಿಂದಲೂ ಪ್ರವಾಸಿ ಜೀವನಕ್ಕೆ ಮನೆಯಲ್ಲೂ ಒಪ್ಪಿಗೆ ಸಿಕ್ಕಿರುವುದರಿಂದ ಕರ್ನಾಟಕವನ್ನಷ್ಟೇ ಅಲ್ಲ, ದೇಶ ವಿದೇಶಗಳನ್ನೂ ಸುತ್ತಾಡುವ ಆಸೆ ನನಗೆ ಎನ್ನುತ್ತಾರೆ ನಟಿ ಸಪ್ತಮಿ ಗೌಡ. ಇವರ ಪ್ರವಾಸದ ಆಸಕ್ತಿಯೇ ʻಕಾಂತಾರʼ ಚಿತ್ರಕ್ಕೆ ಆಯ್ಕೆಯಾಗುವುದಕ್ಕೂ ಕಾರಣವಾಗಿತ್ತೆಂದರೆ ನಂಬಲೇ ಬೇಕು.

ಇದನ್ನೂ ಓದಿ: ಎವರೆಸ್ಟ್ ಏರಿದ ನಟಿ ಅರ್ಚನಾ ಸಿಂಗ್!

ಕುಟುಂಬದ ಜತೆಗೆ ನೆಚ್ಚಿನ ಪ್ರವಾಸ

2025ರಲ್ಲಿ ಸಾಕಷ್ಟು ಪ್ರವಾಸಗಳನ್ನು ಕೈಗೊಂಡಿದ್ದೇನೆ. ಕರ್ನಾಟಕದ ಹೆಮ್ಮೆಯ ಹಂಪಿಗೆ ಭೇಟಿ ನೀಡುವುದೆಂದರೆ ನನಗೆ ಅದೇನೋ ಸಂಭ್ರಮ. ಅದೆಷ್ಟು ಭಾರಿ ಅಲ್ಲಿಗೆ ಹೋದರೂ ಸಾಕೆನಿಸುವುದೇ ಇಲ್ಲ. ಕುಟುಂಬದ ಜತೆಗೆ ಮೊದಲ ಬಾರಿಗೆ ದುಬೈ, ಸ್ವಿಟ್ಜರ್‌ಲ್ಯಾಂಡ್‌, ಆಸ್ಟ್ರಿಯಾಗೆ ಭೇಟಿ ನೀಡಿದ್ದೆ. ಅದು ಬಹು ಕಾಲದ ಯೋಜನೆಯಾಗಿತ್ತು. ತಿಂಗಳೊಳಗಾಗಿ ಪ್ಲ್ಯಾನ್‌ ಮಾಡಿಕೊಂಡು ಕುಟುಂಬದವರೆಲ್ಲರೂ ಅಲ್ಲಿ ಸೇರಿದ್ದೆವು. ಅಲ್ಲಿಂದ ಒಂದು ದಿನಕ್ಕಾಗಿ ಜರ್ಮನ್‌ ಗೆ ಹೋಗಿದ್ದ ನಾವು ಒಲಿಂಪಿಕ್‌ ವಿಲೇಜ್‌ ಹಾಗೂ ಅಲ್ಲೇ ಸಮೀಪದ ಬಿಎಂಡಬ್ಯು ಮ್ಯೂಸಿಯಂಗೂ ಹೋಗಿದ್ದೆವು. ಆಸ್ಟ್ರಿಯಾದ ವಿಯೆನ್ನಾದಲ್ಲಿ ಮೊಜೈಲ್‌ ಕಾನ್ಸರ್ಟ್ ಗೆ ಹೋಗಿದ್ದ ಅನುಭವವಂತೂ ವರ್ಣಿಸುವುದೇ ಕಷ್ಟ. ನ್ಯಾಚುರಲ್‌ ವಾಟರ್‌ ಪಾರ್ಕ್‌, ಸಿನಿಕ್‌ ರೂಟ್‌ಗಳ ನಡುವೆ 20 ದಿನಗಳ ಪ್ರವಾಸವನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ.

Untitled design (74)

ಈ ವರ್ಷ ಏಷ್ಯಾ ಖಂಡ ಸುತ್ತಾಡುವೆ

ವರ್ಷಾರಂಭಕ್ಕೂ ಮುನ್ನವೇ ವರ್ಷದ ಟ್ರಾವೆಲ್‌ ರೆಸಲ್ಯೂಷನ್‌ ಮಾಡಿಕೊಂಡಿದ್ದೆ. ಅದಕ್ಕಾಗಿ ತಯಾರಿಗಳನ್ನು ಒಂದೊಂದಾಗಿಯೇ ಪ್ರಾರಂಭಿಸಿದ್ದೇನೆ. ಯುರೋಪ್‌ ಖಂಡದ ಬದಲಾಗಿ ಏಷ್ಯಾ ಖಂಡವನ್ನೇ ಸುತ್ತುವ ಯೋಜನೆ ಈ ವರ್ಷದಲ್ಲಿದೆ. ಚೈನಾ, ಜಪಾನ್‌, ಸೌತ್‌ ಕೊರಿಯಾ ಹೋಗುವಾಸೆಯಿದೆ. ಕಳೆದ ಕೆಲವು ವರ್ಷಗಳಿಂದಲೂ ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರವಾಸ ಮಾಡುವುದು ರೂಢಿಯಾಗಿಬಿಟ್ಟಿದೆ. ಕಳೆದ ವರ್ಷ ಕೂರ್ಗ್‌ ಗೆ ಹೋಗಿ ಕಬಿನಿ ಸಫಾರಿ ಮಾಡಿದ್ದೆ. ಈ ಬಾರಿ ಫುಕೆಟ್‌, ಬಾಲಿ, ಬ್ಯಾಂಕಾಕ್‌ ಸುತ್ತಾಡಿ ಬರುವ ಆಸೆಯಿದೆ. ಭೂತಾನ್‌ ಕೂಡಾ ನನ್ನ ಬಕೆಟ್‌ ಲಿಸ್ಟ್‌ನಲ್ಲಿದೆ.

ವರುಷಕ್ಕೊಂದು ಅಮೆರಿಕ ಪ್ರವಾಸ

ಅಮೆರಿಕಗೆ ಸಾಕಷ್ಟು ಸಲ ಭೇಟಿ ನೀಡಿದ್ದೇನೆ. ನನ್ನ ಕುಟುಂಬದ ಅನೇಕರು, ಸ್ನೇಹಿತರು ಅಲ್ಲಿ ವಾಸವಾಗಿದ್ದಾರೆ. ಆದರೆ ಎಷ್ಟೇ ದಿನ ಅಲ್ಲಿದ್ದರೂ ಅಲ್ಲಿರುವ ಎಲ್ಲ ಪ್ರವಾಸಿ ತಾಣಗಳನ್ನು ನೋಡಿ ಬರಲು ಆಗಲೇ ಇಲ್ಲ. ಅದಕ್ಕಾಗಿಯೇ ವರ್ಷಕ್ಕೆ ಒಮ್ಮೆಯಾದರೂ ಅಮೆರಿಕಗೆ ಹೋಗಿ, ಬಾಕಿ ಉಳಿದಿರುವ ಪ್ರವಾಸಿ ತಾಣಗಳನ್ನು ನೋಡಿಬರುವ ಆಸೆಯಿದೆ.

ಯೊಸೆಮೈಟ್ ಎಂಬ ಅದ್ಭುತ ಲೋಕ

ನನಗಿನ್ನೂ ನೆನಪಿದೆ, ಕಳೆದ ವರ್ಷ ಸೆಪ್ಟೆಂಬರ್‌ 24ರಂದು ಕ್ಯಾಲಿಫೋರ್ನಿಯಾದಲ್ಲಿರುವ ನನ್ನ ಅಕ್ಕನ ಮನೆಗೆ ಹೋಗಿದ್ದೆ. ಅಲ್ಲಿಂದ ಅವರ ಜತೆಗೆ ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದೆ. ಮುಂಗಡ ಬುಕಿಂಗ್‌ ಮಾಡಿಕೊಂಡಿದ್ದರಿಂದ ಹಿಂದಿನ ದಿನವೇ ಅಲ್ಲಿಗೆ ಹೋಗಿ ಉಳಿದುಕೊಂಡೆವು. ನನ್ನ ಜೀವನದಲ್ಲಿ ಮರೆಯಲಾರದ ಅನುಭವವದು. ಬರಿಗಣ್ಣಿನಿಂದ ಮಿಲ್ಕೀ ವೇ ನೋಡಿದ ಕ್ಷಣ ನನ್ನ ಕಣ್ಣಿನಲ್ಲಿ ಹಾಗೇ ಉಳಿದುಕೊಂಡಿದೆ.

Untitled design (76)

ಪ್ರೊಫೆಷನಲ್‌ ಫೊಟೋಗ್ರಾಫರ್ ನಾನಲ್ಲ

ಖಂಡಿತವಾಗಿಯೂ ನಾನು ಪ್ರೊಫೆಷನಲ್‌ ಫೊಟೋಗ್ರಾಫರ್ ಅಲ್ಲ. ಫೋನ್‌ನಲ್ಲೇ ಫೊಟೋಗಳನ್ನು ತೆಗೆದುಕೊಳ್ಳುತ್ತೇನೆ. ಪ್ರತಿ ವರ್ಷವೂ ಇನ್ ಸ್ಟಂಟ್‌ ಕ್ಯಾಮೆರಾಗಳನ್ನು ಕೊಂಡುಕೊಳ್ಳುತ್ತೇನಾದ್ದರಿಂದ ಅದರ ಬಳಕೆಯನ್ನೂ ಹೆಚ್ಚಿಗೆ ಮಾಡುವುದಿದೆ. 6 ವರ್ಷಗಳ ಹಿಂದೆ ನನ್ನ ತಂಗಿ ನನಗಾಗಿ ಸ್ಕ್ರ್ಯಾಪ್ ಬುಕ್‌ ಒಂದನ್ನು ಉಡುಗೊರೆ ನೀಡಿದ್ದಳು. ಅದರಲ್ಲಿ ನಾನು ಯಾವುದೇ ದೇಶಕ್ಕೆ ಹೋದರೂ ಅಲ್ಲಿನ ಹೊಟೇಲ್‌ ಬುಕಿಂಗ್ ಚೀಟಿ, ಫ್ಲೈಟ್ ಟಿಕೆಟ್‌ಗಳನ್ನು ಇಟ್ಟುಕೊಳ್ಳುತ್ತೇನೆ. ನಾನು ತೆಗೆದಿರುವ ಫೊಟೋಗಳೆಲ್ಲವೂ ಆ ಸ್ಕ್ರ್ಯಾಪ್‌ ಬುಕ್‌ನಲ್ಲಿ ಅಂಟಿಸಿಕೊಳ್ಳುವುದಕ್ಕಾಗಿಯೇ.

ವಾಟರ್‌ ಸ್ಪೋರ್ಟ್ಸ್‌ ಮಾಡಲೇಬೇಕು

ಚಿಕ್ಕಂದಿನಿಂದಲೂ ಸ್ವಿಮ್ಮಿಂಗ್‌ ಮಾಡುತ್ತಲೇ ಬಂದಿರುವುದರಿಂದ ನನಗೆ ವಾಟರ್‌ ಸ್ಪೋರ್ಟ್ಸ್‌ ಬಹಳ ಇಷ್ಟ. ಎಲ್ಲೇ ಟ್ರಾವೆಲ್‌ ಮಾಡಿದರೂ ಅಲ್ಲಿನ ವಾಟರ್‌ ಸ್ಪೋರ್ಟ್ಸ್‌ ಏನಿದೆಯೆಂದು ಹುಡುಕಿ ಅದನ್ನು ಪ್ರಯತ್ನಿಸುತ್ತೇನೆ. ಮಾಲ್ಡೀವ್ಸ್‌ ಹಾಗೂ ಗ್ರೀಸ್‌ನಲ್ಲಿ ಸ್ಕೂಬಾ ಡೈವಿಂಗ್‌, ಸ್ವಿಟ್ಜರ್‌ ಲ್ಯಾಂಡ್‌ನಲ್ಲಿ ಪ್ಯಾರಾಸೇಯ್ಲಿಂಗ್, ದುಬೈ ನಲ್ಲಿ ವೇಕ್‌ ಬೋರ್ಡಿಂಗ್ ಹಾಗೂ ಸ್ಕೈ ಡೈವಿಂಗ್‌ ಮಾಡಿದ್ದೇನೆ. ಹೀಗೆ ಪ್ರವಾಸದ ನಡುವೆ ಕ್ರಿಯೇಟಿವ್‌ ಆಗಿರುವುದು ನನಗೆ ಖುಷಿಯೆನಿಸುತ್ತದೆ.

ವಿಂಟರ್‌ಗೆ ಬೆಸ್ಟ್‌ ಪ್ಲೇಸ್‌

ನನಗೆ ಚಳಿಯನ್ನು ಸಹಿಸಲಾಗುವುದಿಲ್ಲ. ಆದರೂ ಚಳಿಗಾಲದಲ್ಲೇ ನೋಡಬೇಕಿರುವ ಒಂದಷ್ಟು ತಾಣಗಳನ್ನು ಮಿಸ್‌ ಮಾಡುವ ಹಾಗಿಲ್ಲ. ಲೇಹ್ ಲಡಾಖ್, ಪಹಲ್ಗಾಮ್‌, ಕಾಶ್ಮೀರದಂಥ ಪ್ರದೇಶಗಳಲ್ಲಿ ಹಿಮಬೀಳುವುದನ್ನು ನೋಡುವುದೇ ಚಂದ. ಇನ್ನು ಚಳಿಗಾಲದಲ್ಲಿ ನಾರ್ವೆ, ಐಸ್‌ ಲ್ಯಾಂಡ್‌ಗೆ ಹೋಗಿ ಅಲ್ಲಿನ ನಾರ್ಥರ್ನ್ ಲೈಟ್ಸ್‌ ನೋಡಬೇಕೆಂದಿರುವೆ.

ಎ ಡೇ ವಿತ್ ಡಾಲ್ಫಿನ್‌

10 ವರ್ಷಗಳ ಹಿಂದೆ ಕುಟುಂಬದೊಂದಿಗೆ ದುಬೈ ಪ್ರವಾಸ ಮಾಡಿದ್ದೆ. ಅಲ್ಲಿನ ಪ್ರವಾಸಿತಾಣಗಳ ಭೇಟಿ ಆಗಿತ್ತಾದರೂ ದುಬೈ ಡಾಲ್ಫಿನೇರಿಯಂ ಭೇಟಿ ಸಾಧ್ಯವಾಗಲೇ ಇಲ್ಲ. ಅದಾಗಿ ಮತ್ತೆ ಹಲವು ಬಾರಿ ದುಬೈಗೆ ಹೋಗಿ ಬಂದಿದ್ದೇನೆ. ಆದರೆ ಡಾಲ್ಫಿನ್‌ ಜತೆಗೆ ಈಜುವ ನನ್ನ ಕನಸು ಹಾಗೆಯೇ ಉಳಿದುಕೊಂಡಿತ್ತು. ಇತ್ತೀಚೆಗಷ್ಟೇ ದುಬೈ ಪ್ರವಾಸ ಕೈಗೊಂಡಿದ್ದ ವೇಳೆ ಆ ಆಸೆಯನ್ನು ಈಡೇರಿಸಿಕೊಂಡಿದ್ದೇನೆ. ಡಾಲ್ಫಿನ್‌ಗಳಿಗೆ ಹೇಗೆ ತರಬೇತಿ ನೀಡುತ್ತಾರೆ, ಅವುಗಳ ದಿನ ಹೇಗಿರುತ್ತದೆಯೆಂಬುದರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಪಡೆದುಕೊಂಡಿದ್ದೇನೆ.

Untitled design (72)

ಫ್ರೆಂಡ್ಸ್‌ ಜತೆ ಟ್ರಿಪ್‌

ಒಬ್ಬಳೇ ಸುತ್ತಾಡುವುದಕ್ಕಿಂತ ಸ್ನೇಹಿತರು ಹಾಗೂ ಕುಟುಂಬದ ಜತೆಗೆ ಪ್ರವಾಸ ಮಾಡುವುದು ನನಗಿಷ್ಟ. ಸ್ಕೂಲ್‌ ಫ್ರೆಂಡ್ಸ್‌ 12 ಮಂದಿ ಸೇರಿ ಗೋವಾ ಪ್ರವಾಸ ಮಾಡಿದ್ದೆವು. ಇನ್ನು 4ನೇ ತರಗತಿಯಲ್ಲಿದ್ದಾಗಲೇ ನಾನು, ನನ್ನ ಗೆಳತಿ ಶಾಲೆಯ ಪ್ರಾಂಶುಪಾಲರ ಜತೆಗೆ ಸಿಂಗಾಪುರ, ಮಲೇಷ್ಯಾ ಹೋಗುವ ಅವಕಾಶ ಸಿಕ್ಕಿತ್ತು. ಅದುವೇ ನನ್ನ ಮೊದಲ ಅಂತಾರಾಷ್ಟ್ರೀಯ ಪ್ರವಾಸ

ಅಮೆರಿಕಾ..ಅಮೆರಿಕಾ..

ನನಗೆ ಎಲ್ಲ ಬಗೆಯ ಸಿನಿಮಾಗಳೂ ಇಷ್ಟ. ಆದರೆ ಪ್ರವಾಸ ಆಧಾರಿತವಾದ ಸಿನಿಮಾಗಳನ್ನೇ ಹೆಚ್ಚಿಗೆ ನೋಡುತ್ತಿರುತ್ತೇನೆ. ಹಿಂದಿಯಲ್ಲಿ ʻಜಿಂದಗಿ ನಾ ಮಿಲೇಗಿ ದೊಬಾರಾʼ, ಕನ್ನಡದಲ್ಲಿ ʻಅಮೆರಿಕಾ ಅಮೆರಿಕಾʼ ಚಿತ್ರವನ್ನು ಸಾಕಷ್ಟು ಬಾರಿ ನೋಡಿದ್ದೇನೆ. ಇನ್ನು ಇಂಗ್ಲಿಷ್‌ ಸಿನಿಮಾಗಳೆಲ್ಲವೂ ವಿದೇಶಗಳಲ್ಲೇ ಚಿತ್ರೀಕರಣವಾಗುವುದರಿಂದ ಅಲ್ಲಿನ ತಾಣಗಳನ್ನು ಚಿತ್ರಗಳ ಮೂಲಕ ಕಣ್ತುಂಬಿಕೊಳ್ಳಬಹುದು.

ಕೆಎಸ್‌ಟಿಡಿಸಿ ಜಾಹೀರಾತಿನಿಂದ ಕಾಂತಾರದೆಡೆಗೆ

ಪ್ರವಾಸಿ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಒಪ್ಪಿಕೊಳ್ಳುತ್ತೇನೆ. ಪಾಪ್‌ ಕಾರ್ನ್‌ ಸಿನಿಮಾದ ನಂತರ ಕೆಎಸ್‌ಟಿಡಿಸಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದೆ. ಸರಕಾರದ ಜಾಹೀರಾತಾಗಿದ್ದರಿಂದ ಅದರಲ್ಲಿ ಕಾಣಿಸಿಕೊಳ್ಳುವುದಕ್ಕೆ ಒಪ್ಪಿಕೊಂಡಿದ್ದೆ. ಜತೆಗೆ ಇದರ ಮೂಲಕ ಕರ್ನಾಟಕ ಹಂಪಿ, ಐಹೊಳೆ, ಬಾದಾಮಿ, ಪಟ್ಟದಕಲ್ಲು, ಬೇಲೂರು, ಹಳೆಬೀಡು, ಮೈಸೂರು, ಜೋಗ ಸೇರಿದಂತೆ ಅನೇಕ ತಾಣಗಳನ್ನು ಸುತ್ತಾಡುವ ಅವಕಾಶವೂ ನನಗೆ ಸಿಕ್ಕಿತ್ತು. ಆದರೆ ಆ ಜಾಹೀರಾತನ್ನು ನೋಡಿಯೇ ರಿಷಬ್‌ ಶೆಟ್ಟಿಯವರು ನನ್ನನ್ನು ʻಕಾಂತಾರʼ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡಿದ್ದರು.

ನೆಟ್‌ವರ್ಕ್‌ ಬಗ್ಗೆ ನನಗೆ ಚಿಂತೆಯಿಲ್ಲ

ನೆಟ್‌ವರ್ಕ್‌ ಇಲ್ಲದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವಾಗ ಪೂರ್ವತಯಾರಿಗಳನ್ನು ಮಾಡಿಕೊಳ್ಳುತ್ತೇನೆ. ಕಾಯ್ದಿರಿಸಿ ಟಿಕೆಟ್‌ ಗಳ ಪ್ರತಿಯನ್ನು ಮೊಬೈಲ್‌ ನಲ್ಲಿ ಇಟ್ಟುಕೊಳ್ಳುತ್ತೇನೆ. ಮುಂಚಿತವಾಗಿಯೇ ಹೊಟೇಲ್‌, ರೆಸ್ಟೋರೆಂಟ್ಸ್‌ ಹಾಗೂ ಸ್ಟೇ ಮಾಡಲು ಬೇಕಾದ ಆಯ್ಕೆಗಳನ್ನು ಗುರುತಿಸಿಕೊಂಡಿರುತ್ತೇನೆ. ಅಲ್ಲದೇ ಅಗತ್ಯವಾದ ಆಫ್‌ಲೈನ್‌ ಆ್ಯಪ್‌ಗಳನ್ನೂ ಡೌನ್‌ ಲೋಡ್‌ ಮಾಡಿಕೊಂಡಿರುತ್ತೇನೆ.

ನನಗೂ ಇಷ್ಟ ಟ್ರಾವೆಲ್‌ ಡೇಟ್‌

ಈಗಂತೂ ಟ್ರಾವೆಲ್‌ ಡೇಟ್‌ ಎಂಬ ಕಾನ್ಸೆಪ್ಟ್‌ ಭಾರೀ ಸದ್ದು ಮಾಡುತ್ತಿದೆ. ನಾನೂ ಟ್ರಾವೆಲ್‌ ಡೇಟ್‌ ಮಾಡಬಯಸುತ್ತೇನೆ. ಅದು ನನ್ನ ಅಮ್ಮನ ಜತೆಗೆ. ಯಾಕೆಂದರೆ ಅಮ್ಮನಿಗೆ ಸುತ್ತಾಡುವುದೆಂದರೆ ಬಹಳ ಇಷ್ಟ. ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದೆಂದರೆ ಅವಳಿಗೆ ಸಂಭ್ರಮದ ವಿಚಾರ.

ಶಾಪಿಂಗ್‌ ಇರದೆ ಪ್ರವಾಸವಿಲ್ಲ

ನಾನು ಬಜೆಟ್‌ ಟ್ರಾವೆಲರ್‌ ಅಲ್ಲ. ಅದ್ದೂರಿಯಾಗಿಯೇ ಶಾಪಿಂಗ್‌ ಮಾಡುತ್ತೇನೆ. ನನಗಿಷ್ಟವಾಗಿರುವುದರ ಜತೆಗೆ ಪ್ರವಾಸದಿಂದ ಮರಳುತ್ತೇನೆ. ಯಾವ ಪ್ರದೇಶಕ್ಕೆ ಹೋಗುತ್ತೇನೋ, ಹೋಗುವ ಮುನ್ನವೇ ಶಾಪಿಂಗ್‌ ಲಿಸ್ಟ್‌ ಸಿದ್ಧಗೊಳಿಸಿರುತ್ತೇನೆ. ಅದಕ್ಕೆ ತಕ್ಕಂತೆ ಶಾಪಿಂಗ್‌ ಮಾಡ್ತಿರುವುದಷ್ಟೇ.

Untitled design (75)

ಹಾರ್ಸ್‌ ರೈಡಿಂಗ್‌ ಕ್ರೇಜ್‌

ತೆಲುಗಿನ ʻತಮ್ಮುಡುʼ ಚಿತ್ರಕ್ಕಾಗಿ ಕುದುರೆ ಸವಾರಿಯನ್ನು ಕಲಿತುಕೊಂಡಿದ್ದೆ. ನನಗೆ ಅಡ್ವೆಂಚರ್‌ ಅಂದರೆ ಬಹಳ ಇಷ್ಟವಾದ್ದರಿಂದ ಪ್ರವಾಸದ ವೇಳೆಯೂ ಹಾರ್ಸ್‌ ರೈಡಿಂಗ್‌ ಅವಕಾಶ ಸಿಕ್ಕಿದರೆ ಅದನ್ನು ಮಿಸ್‌ ಮಾಡಿಕೊಳ್ಳುವುದಿಲ್ಲ.

ಮಾಲ್ಡೀವ್ಸ್‌ ಎಂಬ ಪ್ರವಾಸಿಗರ ಸ್ವರ್ಗ

ಹನಿಮೂನ್‌ ಸ್ಪಾಟ್‌ ಆಗಿಯೇ ಹೆಸರು ಮಾಡಿರುವ ಮಾಲ್ಡೀವ್ಸ್‌ನಲ್ಲಿ ಎಲ್ಲಿ ನೋಡಿದರೂ ಬರಿಯ ನವ ದಂಪತಿ, ಜೋಡಿಗಳಷ್ಟೇ ಕಾಣಸಿಗುತ್ತಾರೆ. ಆದರೆ ನಾನು ನನ್ನ ತಂಗಿಯ ಜತೆಗೆ ಮಾಲ್ಡೀವ್ಸ್‌ ಗೆ ಹೋಗಿ ಬಂದಿದ್ದೆ. ಅವಳಿಗೆ ಸರ್ಪೈಸ್‌ ಕೊಡುವ ಸಲುವಾಗಿ ಆ ಪ್ಲ್ಯಾನ್‌ ಮಾಡಿದ್ದೆ. ತರಬೇತಿ ಪಡೆದಿರುವ ಶಾರ್ಕ್‌ ಗಳ ಜತೆಗೆ ಸ್ವಿಮ್ಮಿಂಗ್‌ ಮಾಡುವ ಅವಕಾಶ ನಮಗಲ್ಲಿ ಸಿಕ್ಕಿತ್ತು. ತಂಗಿಗೆ ಸೀಫುಡ್‌ ತುಂಬಾ ಇಷ್ಟವಾಗಿದ್ದರಿಂದ ಅನೇಕ ಬಗೆಯ ಸೀ ಫುಡ್‌ ಗಳನ್ನು ಟೇಸ್ಟ್‌ ಮಾಡಿದ್ದಳು. ಒಟ್ಟಿನಲ್ಲಿ ಮಾಲ್ಡೀವ್ಸ್‌ಗೆ ಮತ್ತೆ ಮತ್ತೆ ಹೋಗಬೇಕೆನಿಸಿದೆ.