ಸರಕಾರದ ಗ್ಯಾರಂಟಿ ಕಾರ್ಡಲ್ಲಿ ಪ್ರವಾಸ ಮಾಡಿದ್ದೆ!
ಕನ್ನಡತನ ಎನ್ನುವುದು ಕಣ್ಣಿಗೆ ರಾಚುವಂಥ ಜಾಗ ಮೈಸೂರು. ಅಲ್ಲಿನ ಎಲ್ಲ ಜನಪ್ರಿಯ ತಾಣಗಳ ಜತೆಗೆ, ನನಗೆ ಅಲ್ಲಿನ ಆಹಾರಗಳು ಕೂಡ ಇಷ್ಟ. ನನ್ನ ಫೇವರಿಟ್ ಬೇಕರಿ ಅಲ್ಲೇ ಇದೆ. ಇತ್ತೀಚೆಗೆ ಡಿಸೈನರ್ ವೇರ್ ಶಾಪ್ಸ್ ಮೂಲಕವೂ ಗಮನ ಸೆಳೆಯುತ್ತಿದೆ. ಕೆಲವು ಸಿನಿಮಾಗೆ ಅಲ್ಲಿಂದ ತರಿಸಿದ್ದೇನೆ. ದೇವಸ್ಥಾನ, ಗ್ರೀನರಿ, ತಂಪಾದ ವಾತಾವರಣ ಎಲ್ಲವೂ ಅಲ್ಲಿದೆ. ಆದರೆ ಇತ್ತೀಚೆಗೆ ಮೈಸೂರು ತನ್ನ ಮೂಲ ಸೌಂದರ್ಯ ಕಳೆದುಕೊಳ್ಳುತ್ತಾ ಇದೆ.
-ಶಶಿಕರ ಪಾತೂರು
ನಟಿ ಆರೋಹಿ ನಾರಾಯಣ್ ದೃಶ್ಯದಲ್ಲಿ ರವಿಚಂದ್ರನ್ ಪುತ್ರಿಯಾಗಿ ನಟಿಸಿ ಹೆಸರು ಮಾಡಿದವರು. ಭೀಮಸೇನ ನಳಮಹಾರಾಜ, ಬಕಾಸುರ, ಶಿವಾಜಿ ಸುರತ್ಕಲ್, ಮೂರನೇ ಕೃಷ್ಣಪ್ಪ ಮುಂತಾದ ಚಿತ್ರಗಳ ಮೂಲಕ ಚಾಲ್ತಿಯಲ್ಲಿದ್ದವರು. ಇತ್ತೀಚೆಗಷ್ಟೇ 'ಲವ್ ಒಟಿಪಿ' ಚಿತ್ರದ ಮೂಲಕ ತಮ್ಮ ಹೆಸರನ್ನು ಸ್ವರೂಪಿಣಿ ಎಂದು ಬದಲಾಯಿಸಿಕೊಂಡಿದ್ದಾರೆ. ಹಾಗೆಯೇ ತಮ್ಮ ಪ್ರವಾಸದ ಸ್ವರೂಪವನ್ನೂ ಹಂಚಿಕೊಂಡಿದ್ದಾರೆ. ವಿದೇಶ ಪ್ರವಾಸ ಅಂದ್ರೆ ಪಾಸ್ ಪೋರ್ಟ್ ಇರಬೇಕು. ಆದರೆ ರಾಜ್ಯದೊಳಗಿನ ಪ್ರವಾಸಕ್ಕೆ ಆಧಾರ್ ಕಾರ್ಡ್ ಇದ್ರೂ ಸಾಕು, ಉಚಿತವಾಗಿ ಸುತ್ತಾಡಬಹುದು. ಅದು ಸರಕಾರದ ಶಕ್ತಿ ಯೋಜನೆಯ ಗಮ್ಮತ್ತು. ಸುಮ್ಮನೆ ಒಂದು ಥ್ರಿಲ್‌ಗಾಗಿ ಶಕ್ತಿಯೋಜನೆಯಲ್ಲಿ ಮೈಸೂರು ಪ್ರವಾಸಕ್ಕಾಗಿ ಕೆಂಬಸ್ಸು ಹತ್ತಿರುವ ಘಟನೆಯನ್ನೂ ಆರೋಹಿ ಇಲ್ಲಿ ಹಂಚಿಕೊಂಡಿದ್ದಾರೆ.
ನಿಮ್ಮ ಮೊದಲ ಪ್ರವಾಸದ ನೆನಪು ಯಾವುದು?
ನನಗೆ ನೆನಪಿರುವ ಮೊದಲ ಪ್ರವಾಸ ಮೈಸೂರಿಗೆ ಹೋಗಿರುವಂಥದ್ದು. ಯಾಕೆಂದರೆ ಅದು ಮನೇಲಿ ಹೇಳದೇ ಫ್ರೆಂಡ್ಸ್ ಜತೆ ಹೋದಂಥ ಪ್ರವಾಸ. ಆಗ ನಾನು ಸೆಕೆಂಡ್ ಪಿಯು ವಿದ್ಯಾರ್ಥಿನಿಯಾಗಿದ್ದೆ. ಆನಂತರವೂ ಮನೇಲಿ ಈ ಟೂರ್ ಬಗ್ಗೆ ಹೇಳಿರಲಿಲ್ಲ. ಇದೇ ಮೊದಲ ಬಾರಿಗೆ ನಿಮ್ಮ ಮೂಲಕ ಆ ಸತ್ಯ ಬಯಲು ಮಾಡುತ್ತಿದ್ದೇನೆ.
ನಿಮ್ಮ ಮರೆಯಲಾಗದ ಪ್ರವಾಸ ಯಾವುದು?
ನನ್ನ ಮರೆಯಲಾಗದ ಪ್ರವಾಸ ಕೂಡ ಮೈಸೂರಿಗೇನೇ. ಆದರೆ ಗ್ಯಾರಂಟಿ ಯೋಜನೆಯಲ್ಲಿ ಮಾಡಿದ ಈ ಪ್ರಯಾಣ ಮರೆಯಲಾಗದು. ಚಾಮುಂಡಿ ಬೆಟ್ಟಕ್ಕೆಂದು ಹೊರಟ ನನಗೆ ಆ ಕ್ಷಣ ಬಸ್ಸು ಹತ್ತುವುದೇ ಬೆಟರ್ ಅನಿಸಿತ್ತು. ಜತೆಗೆ ಆಧಾರ್ ಕಾರ್ಡ್ ತೋರಿಸಿ ಪ್ರಯಾಣಿಸುವುದು ಒಂದು ಥ್ರಿಲ್ ಕೂಡ ನೀಡಿತ್ತು. ಬಹಳ ಸಮಯದ ಬಳಿಕ ಕೆಂಪು ಬಸ್ಸೇರಿ ಮೈಸೂರಿಗೆ ಹೋದ ಆ ಪ್ರವಾಸ ನಾನು ಯಾವತ್ತಿಗೂ ಮರೆಯಲಾರೆ.

ಮೈಸೂರಿನಲ್ಲಿ ನಿಮ್ಮನ್ನು ಆಕರ್ಷಿಸಿದ್ದೇನು?
ಕನ್ನಡತನ ಎನ್ನುವುದು ಕಣ್ಣಿಗೆ ರಾಚುವಂಥ ಜಾಗ ಮೈಸೂರು. ಅಲ್ಲಿನ ಎಲ್ಲ ಜನಪ್ರಿಯ ತಾಣಗಳ ಜತೆಗೆ, ನನಗೆ ಅಲ್ಲಿನ ಆಹಾರಗಳು ಕೂಡ ಇಷ್ಟ. ನನ್ನ ಫೇವರಿಟ್ ಬೇಕರಿ ಅಲ್ಲೇ ಇದೆ. ಇತ್ತೀಚೆಗೆ ಡಿಸೈನರ್ ವೇರ್ ಶಾಪ್ಸ್ ಮೂಲಕವೂ ಗಮನ ಸೆಳೆಯುತ್ತಿದೆ. ಕೆಲವು ಸಿನಿಮಾಗೆ ಅಲ್ಲಿಂದ ತರಿಸಿದ್ದೇನೆ. ದೇವಸ್ಥಾನ, ಗ್ರೀನರಿ, ತಂಪಾದ ವಾತಾವರಣ ಎಲ್ಲವೂ ಅಲ್ಲಿದೆ. ಆದರೆ ಇತ್ತೀಚೆಗೆ ಮೈಸೂರು ತನ್ನ ಮೂಲ ಸೌಂದರ್ಯ ಕಳೆದುಕೊಳ್ಳುತ್ತಾ ಇದೆ. ಅದು ಮತ್ತೊಂದು ಬೆಂಗಳೂರು ಆಗುತ್ತಿರುವ ಹಾಗಿದೆ.
ನೀವು ಹೆಚ್ಚು ಬಾರಿ ಪ್ರವಾಸ ಹೋಗಿರುವ ಪ್ರದೇಶ ಯಾವುದು?
ದೇಶದಲ್ಲಿ ನಾನು ಹೆಚ್ಚು ಸುತ್ತಿರುವುದು ಅಂದರೆ ದಕ್ಷಿಣ ಭಾರತದಲ್ಲೇ. ಆಂಧ್ರಪ್ರದೇಶ, ತಮಿಳುನಾಡು ಹೀಗೆ ತುಂಬಾ ಜಾಗ ಕವರ್ ಮಾಡಿದ್ದೇನೆ. ದೇವರ ಮೇಲಿನ ಭಕ್ತಿ ಎನ್ನುವುದಕ್ಕಿಂತಲೂ ತಮಿಳುನಾಡಿನ ದೇವಸ್ಥಾನಗಳು, ಶಿಲ್ಪಕಲೆ ಮತ್ತು ಸಂಸ್ಕೃತಿಗಳ ತಿಳಿಯುತ್ತಾ ಹೋದಂತೆ ಆಸಕ್ತಿ ಹೆಚ್ಚಾಗುತ್ತಾ ಹೋಗಿವೆ. ಉದಾಹರಣೆಗೆ ತಿರುವಣ್ಣಾಮಲೈ, ತಿರುಚ್ಚಿ, ಮಧುರೈ, ಶ್ರೀರಂಗಂ, ಕನ್ಯಾಕುಮಾರಿ ಮೊದಲಾದ ಜಾಗಗಳು ಎಂದೇ ಹೇಳಬಹುದು.
ಉತ್ತರ ಭಾರತದಲ್ಲಿ ನಿಮಗೆ ಇಷ್ಟವಾದ ಪ್ರದೇಶ ಯಾವುದು?
ಡೆಹ್ರಾಡೂನ್‌ನಲ್ಲಿ ಲ್ಯಾಂಡೋರ್ ಅಂತ ಜಾಗ ಇದೆ. ಅದು ಪದ್ಮಭೂಷಣ ವಿಜೇತ ಕಥೆಗಾರ ರಸ್ಕಿನ್ ಬಾಂಡ್ ವಾಸವಾಗಿದ್ದ ಸ್ಥಳ. ಆತನ ಕಥೆಗಳೆಂದರೆ ಇಷ್ಟಪಡುವ ಮಕ್ಕಳು ತುಂಬಾನೇ ಇದ್ದಾರೆ. ಅವರು ತಮ್ಮ ಕಥೆಗಳಲ್ಲಿ ಆ ಊರನ್ನು ತಂದಿದ್ದಾರೆ. 'ಅನದರ್ ಡೇ ಇನ್ ಲ್ಯಾಂಡೋರ್' ಅವರ ಪ್ರಸಿದ್ಧ ಕೃತಿ. ಅಂಥ ಊರನ್ನು ನೇರವಾಗಿ ನೋಡಲು ಅವರ ಅಭಿಮಾನಿಗಳು ಅಲ್ಲಿಗೆ ಹೋಗುತ್ತಿರುತ್ತಾರೆ. ನನಗೆ ಕೂಡ ಉತ್ತರದಲ್ಲಿ ತುಂಬ ಇಷ್ಟವಾದ ಜಾಗ ಲ್ಯಾಂಡೋರ್.
ವಿದೇಶ ಪ್ರವಾಸದಲ್ಲಿ ನಿಮಗೆ ಇಷ್ಟವಾದ ದೇಶ ಯಾವುದು?
ದುಬೈ, ಶಾರ್ಜಾ, ಅಬು ಧಾಬಿ ಸುತ್ತಾಡಿದ್ದೇನೆ. ಅದರಲ್ಲಿ ಅಬು ಧಾಬಿ ಮತ್ತು ದುಬೈ ತುಂಬ ಇಷ್ಟ. ಅಲ್ಲಿ ನಾನು ಒಂದು ಜಾಹೀರಾತು ಚಿತ್ರೀಕರಣಕ್ಕಾಗಿ 17 ದಿನಗಳ ಕಾಲ ಇದ್ದೆ. ಆ ಸಂದರ್ಭದಲ್ಲಿ ಶಾಪಿಂಗ್ ಕೂಡ ಮಾಡಿದ್ದೆ. ಅಲ್ಲಿನ ಬೃಹತ್ ಕಟ್ಟಡಗಳು, ತಂತ್ರಜ್ಞಾನ ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ನನ್ನ ಅನುಭವಕ್ಕೆ ಬಂದ ವಿಚಾರ ಏನೆಂದರೆ ದುಬೈ ಮಹಿಳೆಯರಿಗೆ ತುಂಬಾ ಸೇಫ್ ಆದಂಥ ಜಾಗ. ಮಧ್ಯರಾತ್ರಿ ಶೂಟಿಂಗ್ ಮುಗಿಸಿ ಕ್ಯಾಬ್‌ನಲ್ಲಿ ಒಂಟಿಯಾಗಿ ಮರಳುವಾಗಲೂ ಆತಂಕ ಎದುರಾಗಿಲ್ಲ. ಯಾಕೆಂದರೆ ಬೇರೆ ಮಹಿಳೆಯರು ಕೂಡ ಒಂಟಿಯಾಗಿ ಓಡಾಡುತ್ತಾ ಕಣ್ಣಿಗೆ ಕಾಣಿಸುತ್ತಿರುತ್ತಾರೆ. ರಾತ್ರಿ ಎರಡು ಗಂಟೆ ತನಕವೂ ಮಾಲ್‌ಗಳು ತೆರೆದಿರುತ್ತವೆ. ಮಹಿಳೆಯರು ಕೂಡ ವ್ಯಾಪಾರ ನಡೆಸುತ್ತಿರುತ್ತಾರೆ. ಅದೆಲ್ಲ ನನಗೆ ಖುಷಿ ತಂದುಕೊಟ್ಟಿದೆ.

ಪ್ರವಾಸದ ಸಂದರ್ಭದಲ್ಲಿ ಪೇಚಿಗೊಳಗಾದ ಘಟನೆ ಏನಾದರೂ ಸಂಭವಿಸಿದೆಯೇ?
ಪ್ರಯಾಣದ ವೇಳೆ ರೈಲು ಗಾಡಿ ಬದಲಾಗುವುದು ಎಲ್ಲ ಆಗುತ್ತಿರುತ್ತೆ. ಒಮ್ಮೆ ತಮಿಳುನಾಡಿಗೆ ಅಂತ ಬೇರೆ ರೂಟ್ ಟ್ರೇನ್ ಹತ್ತಿ ಮೂರು ಗಂಟೆ ಪ್ರಯಾಣ ಮಾಡಿ ಮತ್ತೆ ವಾಪಸು ಬೆಂಗಳೂರಿಗೆ ಬಂದಿದ್ದೆ. ಇನ್ನು ವಿಮಾನದಲ್ಲಿ ಹೋಗುವಾಗ ಟರ್ಬುಲೆನ್ಸ್ ಉಂಟಾಗಿ ತುಂಬಾನೇ ಭಯ ಪಟ್ಟ ಸಂದರ್ಭವೂ ಇತ್ತು. ಇವೆಲ್ಲಕ್ಕಿಂತ ವಿಭಿನ್ನವಾದ ಘಟನೆ ಮುಂಬೈ ಟ್ರಿಪ್ ವೇಳೆ ಸಂಭವಿಸಿತ್ತು. ನಾನು ಮುಂಬೈನಲ್ಲಿರುವ ಫ್ರೆಂಡ್ ಭೇಟಿಗೆಂದು ಹೋಗಿದ್ದೆ. ಆಗ ದಾರಿ ತಪ್ಪಿ ಚೆಂಬೂರಿನ ಮೈಸೂರು ಬ್ಯಾಂಕ್ ಕಾಲೋನಿಗೆ ಹೋಗಿದ್ದೆ. ಒಂದು ಕಡೆ ಮುಂಬೈನಲ್ಲಿ ಮೈಸೂರು ಹೆಸರು ಕೇಳಿ ಖುಷಿಯಾಯಿತಾದರೂ ನಾನು ಹೋಗಬೇಕಾದ ಜಾಗ ಅದಲ್ಲವಾದ ಕಾರಣ ಗೊಂದಲದಲ್ಲಿದ್ದೆ. ಆದರೆ ಕಾಲೋನಿಯ ಹೆಸರಿಗೆ ತಕ್ಕಂತೆ ಅಲ್ಲಿ ಸಿಕ್ಕ ಕನ್ನಡಿಗರ ಮೂಲಕ ಸರಿಯಾದ ಜಾಗಕ್ಕೆ ವಿಳಾಸ ಪಡೆದುಕೊಂಡಿದ್ದೆ.