Friday, March 13, 2026
Friday, March 13, 2026

ಅಮೃತಸರದಿಂದ ಅಟ್ಟಾರಿ ಬಾರ್ಡರ್‌ವರೆಗೆ ದೇಶಪ್ರೇಮದ ಯಾತ್ರೆ..

1947ರಲ್ಲಿ ಸ್ವಾತಂತ್ರ ಸಿಕ್ಕಿದ ಸಮಯದಲ್ಲಿ ಭಾರತ ಹಾಗೂ ಪಾಕಿಸ್ತಾನದಿಂದ ವಲಸಿಗರು ಈ ವಾಘಾ ಬಾರ್ಡರ್‌ನ ಮೂಲಕ ಅತ್ತಿಂದಿತ್ತ ಓಡಾಡುತ್ತಿದ್ದರು. ಪ್ರತಿದಿನ ಸೂರ್ಯಾಸ್ತಕ್ಕೂ 2 ಗಂಟೆ ಮೊದಲು ವಾಘಾ-ಅಟ್ಟಾರಿ ಬಾರ್ಡರ್‌ನಲ್ಲಿ ಧ್ವಜ ಕೆಳಗಿಳಿಸುವ ಕಾರ್ಯಕ್ರಮಕ್ಕೆ ಬಿಎಸ್‌ಎಫ್ ಮತ್ತು ಪಾಕಿಸ್ತಾನ ರೇಂಜರ್ಸ್ ಚಾಲನೆ ನೀಡುತ್ತಾರೆ. ಎರಡೂ ದೇಶದ ಸೈನಿಕರು ಬಾರ್ಡರ್‌ನ ಎರಡೂ ಬದಿಯಲ್ಲಿ ನಡೆದಾಡುವ ಕ್ರಮವಿದೆ. 1986ರಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಶಾಂತಿ ಕಾಪಾಡಿಕೊಳ್ಳುವುದಾಗಿದೆ. ಈ ಧ್ವಜ ಕೆಳಗಿಳಿಸುವ ಸಮಯದಲ್ಲಿ ಯಾವುದೇ ಅಶಾಂತಿ, ದಂಗೆಗಳಿಗೆ ಆಸ್ಪದವಿಲ್ಲ.

  • ವೀಣಾ ಪುರುಷೋತ್ತಮ

ಪ್ರವಾಸದ ಮೂಲಕ ಹೊಸತನ್ನು ನನ್ನೊಳಗೆ ತಂದುಕೊಳ್ಳುವುದು, ನೆನಪುಗಳನ್ನು ಶಾಶ್ವತವಾಗಿಸುವುದು ನನ್ನ ಹವ್ಯಾಸ. ಈ ಬಾರಿಯ ಪ್ರವಾಸ ಅದಕ್ಕಿಂತಲೂ ದೊಡ್ಡದು. ದೇಶವೇ ನೆನಪಿಡುವಂತೆ ಮಾಡಿದ ಸ್ಥಳಗಳತ್ತ ನನ್ನ ಪ್ರವಾಸ ಶುರುವಾಗಿತ್ತು. ನಾನು, ನನ್ನಮ್ಮ, ನನ್ನ ಮಗಳು ಮೂವರು ಈ ಪ್ರವಾಸಕ್ಕೆ ಹೋಗಿದ್ದೆವು. ಮೊದಲಿಗೆ ಭೇಟಿ ನೀಡಿದ್ದು ಅಮೃತಸರಕ್ಕೆ.

ಅಮೃತಸರದ ಸ್ವರ್ಣಮಂದಿರ

ಪಂಜಾಬಿನ ಅಮೃತಸರದಲ್ಲಿನ ಸಿಖ್‌ ಜನರ ಧಾರ್ಮಿಕ ಶೃದ್ಧಾ ಕೇಂದ್ರ ‘ದರ್ಬಾರ್ ಸಾಹಿಬ್’. ಅಂದರೆ ಗುರುದ್ವಾರದ ʻಸ್ವರ್ಣಮಂದಿರʼದೆಡೆಗೆ ನಮ್ಮ ಪ್ರಯಾಣ ಆರಂಬಿಸಿದೆವು. ಇಲ್ಲಿ ಎಲ್ಲಾ ಜಾತಿ/ ಧರ್ಮದವರಿಗೂ ಪ್ರವೇಶಿಸಲು ಮತ್ತು ಪ್ರಾರ್ಥನೆ ಸಲ್ಲಿಸಲು ಮುಕ್ತ ಅವಕಾಶವಿದೆ. ದೂರದಿಂದಲೇ ಜಗಮಗಿಸುವ ಸ್ವರ್ಣಮಂದಿರವನ್ನು ಪ್ರವೇಶಿಸಲು ನಾಲ್ಕು ದಿಕ್ಕುಗಳಲ್ಲೂ ದ್ವಾರಗಳಿವೆ. ಮಂದಿರದ ಸುತ್ತಲೂ ಅಚ್ಚುಕಟ್ಟಾದ ಸರೋವರವಿದೆ. ಅದರಲ್ಲಿ ಸ್ವರ್ಣವರ್ಣದ ಮೀನುಗಳು ಸ್ವಚ್ಛಂದವಾಗಿ ವಿಹರಿಸುತ್ತಿರುತ್ತವೆ. ಸೂರ್ಯನ ಕಿರಣಗಳು ಮಂದಿರದ ಮೇಲೆ ಬಿದ್ದಾಗ ಫಳಫಳನೆ ಹೊಳೆಯುವ ಸ್ವರ್ಣಮಂದಿರ ನೋಡಲು ಅದ್ಭುತವಾಗಿರುತ್ತದೆ. ಸರೋವರದ ಸುತ್ತಲೂ ನಡೆದಾಡಿದರೆ ಮನ ಪ್ರಫುಲ್ಲವಾಗುವುದು. ಮಾನವ ನಿರ್ಮಿತ ಈ ಸರೋವರವು ನಾಲ್ಕನೇ ಸಿಖ್‌ ಗುರು ಗುರುರಾಮ್‌ದಾಸ್ ಕಾಲದಲ್ಲಿ ಪೂರ್ಣವಾಗಿತ್ತು.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮ

1604ರಲ್ಲಿ ‘ಗುರು ಅರ್ಜುನ್’ ಆದಿ ಗ್ರಂಥದ ಪ್ರತಿಯೊಂದನ್ನು ಮಂದಿರದೊಳಗೆ ಪ್ರತಿಷ್ಠಾಪಿಸಿದ್ದರು. ಈ ಗುರುದ್ವಾರದ ಮೇಲೆ ಮೊಘಲರು ಹಲವಾರು ಬಾರಿ ದಾಳಿ ಮಾಡಿದ್ದಾರೆ. ಸಿಖ್‌ ಸಾಮ್ರಾಜ್ಯದ ಮಹಾರಾಜಾ ‘ರಂಜೀತ್ ಸಿಂಗ್’ ಈ ಮಂದಿರವನ್ನು ಪುನಃ ಸುಂದರವಾಗಿ ಅಮೃತ ಶಿಲೆಯೊಂದಿಗೆ ನಿರ್ಮಿಸಿ, ಅದರ ಮೇಲೆ ಬಂಗಾರದ ಹೊದಿಕೆಯೊಂದಿಗೆ ‘ಸ್ವರ್ಣಮಂದಿರ’ ಪರಿಕಲ್ಪನೆಯಲ್ಲಿ ನಿರ್ಮಿಸಿದ್ದಾರೆ. ಇಂದಿಗೆ ಇದು ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ತಾಣವಾಗಿ ಗುರುತಿಸಿಕೊಂಡಿದೆ.

Untitled design (10)

ಸಿಖ್‌ ಭಕ್ತರು ತಮ್ಮ ಪಾಪಗಳನ್ನು ಕಳೆಯಲು ಇಲ್ಲಿ ಬಂದು ತಮ್ಮ ಕೈಲಾದ ಕೆಲಸಗಳನ್ನು ಸೇವಾರ್ಥವಾಗಿ ಮಾಡಿ ಪುನೀತರಾಗುತ್ತಾರೆ. ಇಲ್ಲಿಯ ‘ಲಂಗರ್’ ವಿಶ್ವಪ್ರಸಿದ್ಧವಾಗಿದೆ. ಇಲ್ಲಿ ದಿನನಿತ್ಯ ಅನ್ನದಾಸೋಹ ನಡೆಯುತ್ತದೆ. ಒಂದೇ ದಿನದಲ್ಲಿ ದೇಶವಿದೇಶದ ಲಕ್ಷಾಂತರ ಜನರು ಬಂದು ‘ಲಂಗರ್’ನಲ್ಲಿ ಊಟಮಾಡಿ ಸಂತೃಪ್ತರಾಗುತ್ತಾರೆ. ರುಚಿಯಂತೂ ಅದ್ಭುತವಾಗಿದೆ. ರೋಟಿ, ಪಲ್ಯ, ದಾಲ್, ಮಜ್ಜಿಗೆ ಮತ್ತು ಖೀರು ನಿತ್ಯದ ಮೆನುವಾಗಿದೆ. ಅಡುಗೆ ಮಾಡುವವರು, ಬಡಿಸುವವರು, ಪಾತ್ರೆ ತೊಳೆಯುವವರು ಹೀಗೆ ಎಲ್ಲರೂ ಸೇವಾರ್ಥಿಗಳೇ. ಇದು ಯುನೆಸ್ಕೋ ಮಾನ್ಯತೆ ಪಡೆದಿರುವ ಮಂದಿರ. ಸಿಖ್‌ ಸಂಪ್ರದಾಯದಂತೆ ಮಂದಿರದೊಳಗೆ ಹೊಗುವ ಮುಂಚೆ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಲೇಬೇಕು. ಸ್ವಲ್ಪ ಸರಿದು ಹೋದರೂ ಅಲ್ಲಿಯೇ ನಿಂತಿರುವ ಸ್ವಯಂ ಸೇವಕರು ಎಚ್ಚರಿಸುತ್ತಲೇ ಇರುತ್ತಾರೆ.

ಇಡೀ ಸ್ವರ್ಣಮಂದಿರವನ್ನು ವಿವಿಧ ಕೋನಗಳಿಂದ ವೀಕ್ಷಿಸಿ, ಲಂಗರ್‌ನಲ್ಲಿ ಹೊಟ್ಟೆ ತುಂಬಾ ಭೋಜನ ಸ್ವೀಕರಿಸಿ ಸರೋವರದಲ್ಲಿ ಪ್ರತಿಫಲಿಸುವ ಸ್ವರ್ಣಮಂದಿರದ ನೋಟವನ್ನು ಮನತುಂಬಿಸಿಕೊಂಡು ಸ್ವರ್ಣಮಂದಿರಕ್ಕೆ ವಿದಾಯ ಹೇಳಿ, ‘ಅಟ್ಟಾರಿ (ವಾಘಾ) ಬಾರ್ಡರ್’ ನತ್ತ ಮುಖಮಾಡಿದೆವು.

ಅಟ್ಟಾರಿ ಬಾರ್ಡರ್ನಲ್ಲಿ ಅದ್ಭುತ ಕವಾಯತು

‘ಅಟ್ಟಾರಿ ಬಾರ್ಡರ್’ ಎಂದು ಭಾರತದಲ್ಲೂ, ವಾಘಾ ಬಾರ್ಡರ್ ಎಂದು ಪಾಕಿಸ್ತಾನದಲ್ಲೂ ಗುರುತಿಸಲ್ಪಡುವ ಭಾರತ-ಪಾಕಿಸ್ತಾನ ಬಾರ್ಡರ್, ಭಾರತದ ಕೊನೆಯ ಹಳ್ಳಿ ಅಟ್ಟಾರಿಯಿಂದ 3 ಕಿಮೀ ದೂರದಲ್ಲಿಯೇ ಧ್ವಜ ಕೆಳಗಿಳಿಸುವ ಸಾಂಪ್ರದಾಯಿಕ ಕಾರ್ಯಕ್ರಮ ನೋಡಲು ದೇಶದ ಉದ್ದಗಲದಿಂದಲೂ ಜನರು ಬಂದು ಆ ಕ್ಷಣಕ್ಕಾಗಿ ಕಾಯುತ್ತಾರೆ.

1947ರಲ್ಲಿ ಸ್ವಾತಂತ್ರ ಸಿಕ್ಕಿದ ಸಮಯದಲ್ಲಿ ಭಾರತ ಹಾಗೂ ಪಾಕಿಸ್ತಾನದಿಂದ ವಲಸಿಗರು ಈ ವಾಘಾ ಬಾರ್ಡರ್‌ನ ಮೂಲಕ ಅತ್ತಿಂದಿತ್ತ ಓಡಾಡುತ್ತಿದ್ದರು. ಪ್ರತಿದಿನ ಸೂರ್ಯಾಸ್ತಕ್ಕೂ 2 ಗಂಟೆ ಮೊದಲು ವಾಘಾ-ಅಟ್ಟಾರಿ ಬಾರ್ಡರ್‌ನಲ್ಲಿ ಧ್ವಜ ಕೆಳಗಿಳಿಸುವ ಕಾರ್ಯಕ್ರಮಕ್ಕೆ ಬಿಎಸ್‌ಎಫ್ ಮತ್ತು ಪಾಕಿಸ್ತಾನ ರೇಂಜರ್ಸ್ ಚಾಲನೆ ನೀಡುತ್ತಾರೆ. ಎರಡೂ ದೇಶದ ಸೈನಿಕರು ಬಾರ್ಡರ್‌ನ ಎರಡೂ ಬದಿಯಲ್ಲಿ ನಡೆದಾಡುವ ಕ್ರಮವಿದೆ. 1986ರಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಶಾಂತಿ ಕಾಪಾಡಿಕೊಳ್ಳುವುದಾಗಿದೆ. ಈ ಧ್ವಜ ಕೆಳಗಿಳಿಸುವ ಸಮಯದಲ್ಲಿ ಯಾವುದೇ ಅಶಾಂತಿ, ದಂಗೆಗಳಿಗೆ ಆಸ್ಪದವಿಲ್ಲ.

ಸುಂದರ ಸಂಜೆಯಲ್ಲಿ ಕವಾಯತು ಮಾಡುತ್ತಾ, ಬಿಎಸ್‌ಎಫ್‌ ಯೋಧರು ಜನರನ್ನು ಹುರಿದುಂಬಿಸುತ್ತಾ, ‘ಭಾರತ್ ಮಾತಾಕೀ ಜೈ’, ‘ವಂದೇ ಮಾತರಂ’ ಎಂದು ಸಾಧ್ಯವಾದಷ್ಟು ಜೋರಾಗಿ ಹೇಳಲು ಪ್ರೇರೇಪಿಸುತ್ತಾರೆ. ಶಾಲಾ, ಕಾಲೇಜು ಮಕ್ಕಳು, ಪ್ರವಾಸಿಗರು ಹೀಗೇ ವಿವಿಧ ಗುಂಪಿನ ಜನರಿಂದ ಸಭಾಂಗಣ ಕಿಕ್ಕಿರಿದು ತುಂಬಿರುತ್ತದೆ.

ಜೀವನದಲ್ಲಿ ಏನು ನೋಡದಿದ್ದರೂ ಇದನ್ನು ಖಂಡಿತವಾಗಿಯೂ ಒಂದು ಬಾರಿ ನೋಡಲೇಬೇಕು. ನಮಗೆ ಸಿಕ್ಕ ಈ ಅವಕಾಶಕ್ಕಾಗಿ ಭಾರತಮಾತೆಗೆ ಹಾಗೂ ಆಕೆಯ ಪ್ರೀತಿಯ ಯೋಧರಿಗೆ ನಮಸ್ಕರಿಸಿ ಹಿಂತಿರುಗಿದೆವು. ಅಲ್ಲಿಂದ ನಾವು ಜಲಿಯನ್‌ ವಾಲಾಬಾಗ್‌ ಕಡೆಎಗೆ ಹೊರಟೆವು.

ಜಲಿಯನ್‌ ವಾಲಾಬಾಗ್‌

ಜಲಿಯನ್ ವಾಲಾಬಾಗ್ ನೋಡದೇ ಪಂಜಾಬಿನ ಪ್ರಯಾಣ ಪೂರ್ಣವಾಗದು.1919ರ ಏಪ್ರಿಲ್ 13ರಂದು ಜಲಿಯನ್ ವಾಲಾಬಾಗ್‌ನಲ್ಲಿ ಸ್ವಾತಂತ್ರ ಹೋರಾಟಗಾರರನ್ನು ಜೈಲಿಗೆ ಹಾಕಿದ್ದನ್ನು ವಿರೋಧಿಸಲು, ದೊಡ್ಡ ಸಂಖ್ಯೆಯಲ್ಲಿ ದೇಶಪ್ರೇಮಿಗಳು ಗುಂಪುಗೂಡಿದ್ದರು. ಇದರೊಳಗೆ ಹೋಗಲು ಹಾಗೂ ಬರಲು ಒಂದೇ ಬಾಗಿಲು ಇತ್ತು. ಉಳಿದ 3 ಭಾಗಗಳು ಗೋಡೆಗಳಿಂದ ಆವೃತವಾಗಿದ್ದವು. ಇಲ್ಲಿಗೆ ಬ್ರಿಗೇಡಿಯರ್ ಜನರಲ್ ಆರ್.ಇ.ಹೆಚ್. ಡಯರ್ ತನ್ನ ಬ್ರಿಟಿಷ್ ಸೈನಿಕರೊಡನೆ ಬಂದು ಬಾಗಿಲು ಮುಚ್ಚುವಂತೆ ಹೇಳಿ ನೆರೆದಿದ್ದ ದೇಶಪ್ರೇಮಿಗಳ ಮೇಲೆ ಗುಂಡು ಹಾರಿಸಲು ಆಜ್ಞಾಪಿಸಿದನು. ಅಂದು ಅಲ್ಲಿ ಭಾರತೀಯರ ಭೀಕರ ನರಮೇಧವೇ ನಡೆದುಹೋಯಿತು. ಸಾವಿರಾರು ಜನ ಪ್ರಾಣ ತೆತ್ತರು. ಇಂಥ ಹತ್ಯಾಕಾಂಡಕ್ಕೆ ಜಲಿಯನ್ ವಾಲಾಬಾಗ್ ಸಾಕ್ಷಿಯಾಯಿತು. ಇದರೊಳಗೆ ಹೊಗುತ್ತಿದ್ದಂತೆಯೇ ಅಂದಿನ ಜನರ ಕಿರುಚಾಟ, ನೋವು ಎಲ್ಲವೂ ಕಣ್ಣುಮುಂದೆ ಕಟ್ಟಿದಂತಾಗುತ್ತದೆ. ನಮ್ಮ ಕಣ್ಣುಗಳೂ ಒದ್ದೆಯಾದವು. ಎಷ್ಟೊಂದು ಕ್ರೂರವಾಗಿ ಹತ್ಯೆಗೊಳಗಾದರು ಎಂಬ ಉರಿ ಮೈಯನ್ನೆಲ್ಲಾ ವ್ಯಾಪಿಸುತ್ತದೆ. ಇಲ್ಲಿ ಸದಾ ಉರಿಯುತ್ತಿರುವ ‘ಅಮರ ಜ್ಯೋತಿ’ಗೆ 3 ಸುತ್ತು ಸುತ್ತಿ ನಮಸ್ಕರಿಸಿದೆವು. ದೇಶರಕ್ಷಣೆಗೆ ದಕ್ಷ ಸೈನಿಕರನ್ನು ಕೊಟ್ಟ ಪಂಜಾಬ್‌ನ ಮಣ್ಣನ್ನು ಕಣ್ಣಿಗೆ ಒತ್ತಿಕೊಂಡು ನಮ್ಮೂರಿನ ಕಡೆಗೆ ಮುಖ ಮಾಡಿದೆವು.

Untitled design (11)

ದಾರಿ ಹೇಗೆ?

ಅಮೃತಸರದಲ್ಲಿ ರೈಲು ನಿಲ್ದಾಣವಿದ್ದು ದೇಶದ ವಿವಿಧ ಭಾಗಗಳಿಂದ ನೀರವಾಗಿ ಅಮೃತಸರಕ್ಕೇ ಬೇಟಿ ನೀಡಬಹುದು. ರೈಲು ನಿಲ್ದಾಣದಿಂದ 2.5 ಕಿಮೀ ದೂರದಲ್ಲೇ ಸ್ವರ್ಣಮಂದಿರವಿದೆ. ಕ್ಯಾಬ್‌ ಅಥವಾ ಸ್ಥಳೀಯ ವಾಹನಗಳ ಮೂಲಕ ಮಂದಿರಕ್ಕೆ ತಲುಪಬಹುದು. ಇಲ್ಲಿಂದ 35 ಕಿಮೀ ದೂರದಲ್ಲಿ ಅಟ್ಟಾರಿ ಬಾರ್ಡರ್‌ ಮತ್ತು ಜಲಿಯನ್‌ ವಾಲಾಬಾಗ್‌ ಕೇವಲ ಅರ್ಧ ಕಿಮೀ ದೂರದಲ್ಲಿದೆ.

ಅಮೃತಸರದ ಸ್ವರ್ಣ ಮಂದಿರ

ಸಿಖ್‌ ಜನರ ಧಾರ್ಮಿಕ ಶೃದ್ಧಾ ಕೇಂದ್ರ

ಸರ್ವ ಧರ್ಮಗಳ ಜನರಿಗೂ ಪ್ರವೇಶ ಮತ್ತು ಪ್ರಾಥನೆಗೆ ಅವಕಾಶವಿದೆ

ಪ್ರತಿದಿನ ಲಕ್ಷಾಂತರ ಜನರಿಗೆ ‘ಲಂಗರ್’ನಲ್ಲಿ ಊಟ

1604ರಲ್ಲಿ ‘ಗುರು ಅರ್ಜುನ್’ ಆದಿ ಗ್ರಂಥದ ಪ್ರತಿಯೊಂದನ್ನು ಈ ಮಂದಿರದೊಳಗೆ ಪ್ರತಿಷ್ಠಾಪಿಸಿದ್ದರು

ಮೋಘಲರ ದಾಳಿಯ ನಂತರ ಮಹಾರಾಜಾ ‘ರಂಜೀತ್ ಸಿಂಗ್’ರಿಂದ ಮಂದಿರ ಪುನಃ ನಿರ್ಮಾಣ

ಇದನ್ನೂ ಓದಿ: ಚಿತ್ರೋತ್ಸವದ ಜತೆ ಕೈ ಜೋಡಿಸಿದ ಗ್ರೀಕ್ ಟೂರಿಸಂ

ಅಟ್ಟಾರಿ ಬಾರ್ಡರ್

ಭಾರತದಲ್ಲಿ ಇದು ‘ಅಟ್ಟಾರಿ ಬಾರ್ಡರ್’ ಪಾಕಿಸ್ಥಾನದಲ್ಲಿ ವಾಘಾ ಬಾರ್ಡರ್

ಪ್ರತಿದಿನ ಸೂರ್ಯಾಸ್ತಕ್ಕೂ ಮೊದಲು ಉಭಯ ದೇಶಗಳಿಂದ ಬಾರ್ಡರ್‌ನಲ್ಲಿ ಧ್ವಜ ಕೆಳಗಿಳಿಸುವ ಕಾರ್ಯಕ್ರಮ

ಭಾರತದ ಬಿಎಸ್‌ಎಫ್ ಮತ್ತು ಪಾಕಿಸ್ತಾನ ರೇಂಜರ್ಸ್ಗಳಿಂದ ಕವಾಯತು

ಜಲಿಯನ್‌ ವಾಲಾಬಾಗ್‌

1919ರ ಹತ್ಯಾಕಂಡ ನಡೆದ ಸ್ಥಳ

ಜನರಲ್ ಡಯರ್ನ ಆದೇಶಕ್ಕೆ ಇಲ್ಲಿ ಸಾವಿರಾರು ಜನ ಪ್ರಾಣ ತೆತ್ತಿದ್ದರು

ಅಮರ ವೀರರನ್ನು ನೆನೆಯಲು ಇಲ್ಲಿ ಸದಾ ಉರಿಯುತ್ತಿದೆ ಅಮರ ಜ್ಯೋತಿ

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ