Thursday, June 12, 2025
Thursday, June 12, 2025

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..

ವಾರಾಂತ್ಯದಲ್ಲಿ ಮಕ್ಕಳನ್ನು ಚಟುವಟಿಕೆಯಿಂದಿರುವುದು ಹೆತ್ತವರಿಗೆ ಬಹಳ ಕಷ್ಟದ ಕೆಲಸ. ಎಲ್ಲಾದರೂ ಹೋಗೋಣ, ಶಾಪಿಂಗ್‌ ಮಾಡೋಣ, ಪಾರ್ಕ್‌ ಸುತ್ತೋಣ ಹೀಗೆ ಅವರ ದಣಿವಿರದ ಬೇಡಿಕೆಗಳಿಗೆ ಕಡಿವಾಣ ಹಾಕಲು ಈ ಸ್ಥಳಗಳಿಗೆ ಒಮ್ಮೆ ಅವರ ಜೊತೆ ಹೋಗಿ ಬನ್ನಿ..

ಮಕ್ಕಳು ಅಂದರೇನೇ ಹಾಗೆ, ನಿಮಿಷ ಮಾತ್ರವೂ ಕುಂತಲ್ಲಿ ಕೂರೋದಿಲ್ಲ, ನಿಂತಲ್ಲಿ ನಿಲ್ಲವವರಂತೂ ಮೊದಲೇ ಅಲ್ಲ..ಮಕ್ಕಳ ಮನಸ್ಸು ಮರ್ಕಟನಂತೆ ಅನ್ನುವುದೇ ಇದೇ ಕಾರಣಕ್ಕೆ. ಅಂತಹ ಮಕ್ಕಳಿಗೆ ವಾರಾಂತ್ಯದಲ್ಲೋ ಇಲ್ಲವೇ ಇನ್ನೇನೋ ಕಾರಣಕ್ಕೆ ರಜೆ ಸಿಕ್ಕಿದರಂತೂ ಮನೆ ಮಂದಿಗೆ ಹಬ್ಬವೇ ಸರಿ. ಎಲ್ಲಾದರೂ ಹೋಗೋಣ, ಶಾಪಿಂಗ್‌ ಮಾಡೋಣ, ಪಾರ್ಕ್‌ ಸುತ್ತೋಣ ಹೀಗೆ ಅವರ ದಣಿವಿರದ ಬೇಡಿಕೆಗಳಿಗೆ ಕಡಿವಾಣ ಹಾಕುವುದೇ ಕಷ್ಟ.

ನಿತ್ಯವೂ ತರಗತಿಯಲ್ಲಿ ಪಾಠ ಕೇಳೋದು, ಬರೆಯುವುದು ಮಾತ್ರವಲ್ಲದೇ ಮನೆಗೆ ಬಂದರೂ ಹೋಂ ವರ್ಕ್‌, ಟ್ಯೂಶನ್‌ ಹೀಗೆ ವಿರಾಮವಿಲ್ಲದ ಕೆಲಸ ಕಾರ್ಯಗಳ ನಡುವೆ ಅವರ ಖುಷಿಗಾಗಿಯೂ ಸ್ವಲ್ಪ ಸಮಯ ಬೇಕೆನ್ನಿಸುವುದು ಸಹಜ. ಹೀಗೆ ಮಕ್ಕಳಿಗೆ ಮೈಂಡ್‌ ಫ್ರೆಶ್‌ ಅನ್ನಿಸಬೇಕಾದರೆ ಅವರು ಮೆಚ್ಚಿಕೊಳ್ಳುವಂತಹ ತಾಣಗಳಿಗೆ ಕರೆದೊಯ್ಯಬೇಕಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಮಕ್ಕಳಿಗೆ ಖುಷಿ ಕೊಡಬಲ್ಲ ಸ್ಥಳಗಳು ಯಾವೆಲ್ಲಾ ಇವೆ ಅನ್ನೋದು ನಿಮಗೆ ಗೊತ್ತಾ? ಇಲ್ಲಿವೆ ನೋಡಿ ಸಂಪೂರ್ಣ ಮಾಹಿತಿ.

ಕಬ್ಬನ್‌ ಪಾರ್ಕ್‌ - ಬಾಲಭವನ್‌ :

ಬೆಂಗಳೂರಿನಲ್ಲಿರುವ ಮಕ್ಕಳ ಸ್ನೇಹಿ ಪಾರ್ಕ್‌ ಗಳ ಪೈಕಿ ಪ್ರಮುಖವಾದುದು ಕಬ್ಬನ್‌ ಪಾರ್ಕ್‌ ಹಾಗೂ ಅಲ್ಲೇ ಇರುವ ಬಾಲಭವನ್.‌ ಕಬ್ಬನ್‌ ಪಾರ್ಕ್‌ ಹಸಿರಿನ ಸೀರೆಯುಟ್ಟು ಮಕ್ಕಳ ಕಣ್ಣಿಗೂ ಮನಸ್ಸಿಗೂ ಮುದ ನೀಡಿದರೆ, ಇಲ್ಲಿರುವ ಅಮ್ಯೂಸ್ಮೆಂಟ್‌ ಪಾರ್ಕ್‌ ಅಂತೂ ಮಕ್ಕಳನ್ನು ಇನ್ನಷ್ಟು ಚುರುಕುಗೊಳಿಸುತ್ತದೆ. ಕಬ್ಬನ್‌ ಪಾರ್ಕಿನಲ್ಲೇ ಇರುವಂಥ ಬಾಲಭವನವಂತೂ ಮಕ್ಕಳ ನೆಚ್ಚಿನ ವೀಕೆಂಡ್‌ ಸ್ಪಾಟ್.‌ ಬಾಲಭವನ ಪ್ರವೇಶ ಮಕ್ಕಳಿಗೆ ಉಚಿತವಾದರೂ ಮಕ್ಕಳಿಗಾಗಿಯೇ ಮೀಸಲಾದ ಟಾಯ್‌ ಟ್ರೈನ್‌, ಗೊಂಬೆ ಮ್ಯೂಸಿಯಂ, ಬೋಟಿಂಗ್‌ ಬಳಕೆಗೆ ಪ್ರತಿಹಂತದಲ್ಲೂ 30 ರೂಪಾಯಿ ತೆರಲೇಬೇಕು.

ನಮ್ಮ ಬೆಂಗಳೂರು ಅಕ್ವೇರಿಯಂ:

ಈ ಹಿಂದೆ ಸರ್ಕಾರಿ ಅಕ್ವೇರಿಯಂ ಎಂದು ಕರೆಯಲಾಗುತ್ತಿದ್ದ ಈ ಅಕ್ವೇರಿಯಂ, ನವೀಕರಿಸಲ್ಪಟ್ಟು `ನಮ್ಮ ಬೆಂಗಳೂರು ಅಕ್ವೇರಿಯಂ' ಎಂದು ಮರು ನಾಮಕರಣಗೊಂಡಿದೆ. ಈ ಅಕ್ವೇರಿಯಂನಲ್ಲಿ ಕೃತಕ ವಾಟರ್‌ ಫಾಲ್ಸ್‌, ಟನಲ್‌ ಅಕ್ವೇರಿಯಂಗಳಲ್ಲಿ ಬ್ಲೂ ಫಾಂಗ್, ಮೂರಿಶ್ ಐಡಲ್, ಡಿಸ್ಕಸ್ ಫಿಶ್, ಗೌರಾಮಿ, ಲಯನ್ ಫಿಶ್ ಮತ್ತು ಜೆಲ್ಲಿ ಫಿಶ್‌ಗಳಂತಹ ವಿಶಿಷ್ಟ ಸಮುದ್ರ ಮತ್ತು ಸಿಹಿನೀರಿನ ಪ್ರಭೇದಗಳು ಕಂಡುಬರುತ್ತವೆ. ಅಕ್ವೇರಿಯಂ ಪ್ರವೇಶ ಟಿಕೆಟ್‌ಗಳ ಬೆಲೆ ವಯಸ್ಕರಿಗೆ 95 ರೂಪಾಯಿ ಮತ್ತು ವಾರದ ದಿನಗಳಲ್ಲಿ ಮಕ್ಕಳಿಗೆ 30 ರೂಪಾಯಿ. ಆದರೆ ವಾರಾಂತ್ಯದಲ್ಲಿ ವಯಸ್ಕರಿಗೆ 10 ರೂಪಾಯಿ ಹಾಗೂ ಮಕ್ಕಳಿಗೆ 40 ರೂಪಾಯಿಯಾಗಿರುತ್ತದೆ.

ವಿಶ್ವೇಶ್ವರಯ್ಯ ಇಂಡಸ್ರ್ಟಿಯಲ್‌ ಹಾಗೂ ಟೆಕ್ನಾಲಾಜಿಕಲ್‌ ಮ್ಯೂಸಿಯಂ:

ಕಲಿಕೆಯ ಜೊತೆಗೆ ವಿನೋದ ಎಂಬ ಉದ್ದೇಶದೊಂದಿಗೆ ಕಸ್ತೂರ್ಬಾ ರಸ್ತೆಯ ಕಬ್ಬನ್‌ ಪಾರ್ಕ್‌ ನಲ್ಲಿ ನಿರ್ಮಿಸಲಾದ ಈ ವಸ್ತು ಸಂಗ್ರಹಾಲಯ ಭಾರತದ ಅತ್ಯುನ್ನತ ವಸ್ತುಸಂಗ್ರಹಾಲಯಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಮಕ್ಕಳ ಕಲಿಕೆಗೆ ಪೂರಕವಾಗಿರುವ ಅನೇಕ ವಸ್ತುಗಳ ಪ್ರಾತ್ಯಕ್ಷಿಕೆಯನ್ನು ಇಲ್ಲಿ ಕಾಣಬಹುದಾಗಿದ್ದು, ಇಲ್ಲಿನ ಪ್ರವೇಶಕ್ಕೆ 85 ರೂಪಾಯಿ ತೆರಬೇಕು.

ಬನ್ನೇರುಘಟ್ಟ ಜೈವಿಕ ಉದ್ಯಾನವನ:

ದಿನ ಪೂರ್ತಿ ಬಿಡುವು ಮಾಡಿಕೊಳ್ಳುವುದಾದರೆ ಮಕ್ಕಳ ಜೊತೆಗೆ ಜೈವಿಕ ಉದ್ಯಾನವನದ ಭೇಟಿ ನೀಡುವುದು ಬಹಳ ಒಳ್ಳೆಯ ಆಯ್ಕೆ. ಬೆಂಗಳೂರಿನಿಂದ 22 ಕಿಮೀ ದೂರದಲ್ಲಿ 104.27 ಚದರ ಕಿಮೀ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ವಿವಿಧ ಸಸ್ಯಗಳು ಹಾಗೂ ಪ್ರಾಣಿ, ಪಕ್ಷಿಗಳ ಆಶ್ರಯತಾಣವಾಗಿದೆ. ಇಲ್ಲಿ ಮಕ್ಕಳ ಉದ್ಯಾನವನ, ಮೃಗಾಲಯ, ಸಿಂಹದ ಸಫಾರಿ, ಹುಲಿಯ ಸಫಾರಿ, ಮೊಸಳೆ ಫಾರ್ಮ್‌, ಹಾವು ಉದ್ಯಾನವನ, ವಸ್ತುಸಂಗ್ರಹಾಲಯಗಳೂ ಇದ್ದು ಚಿಣ್ಣರ ನೆಚ್ಚಿನ ತಾಣವೆನ್ನಿಸಿಕೊಂಡಿದೆ. ಇಲ್ಲಿಗೆ ಪ್ರವೇಶ ಪಡೆಯಲು

ವಯಸ್ಕರು 100 ರೂಪಾಯಿ ಹಾಗೂ 5-10 ವರ್ಷದೊಳಗಿನ ಮಕ್ಕಳು 40 ರೂಪಾಯಿ ಟಿಕೆಟ್‌ ಮಾಡಿಸಿಕೊಳ್ಳಬೇಕು.

ಚಿಟ್ಟೆ ಉದ್ಯಾನವನ:

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿಕೊಟ್ಟರೆ ಮಕ್ಕಳನ್ನು ತಪ್ಪದೆ ಕರೆದೊಯ್ಯಬೇಕಿರುವ ಜಾಗವೆಂದರೆ ಅದು ಬಟರ್‌ ಫ್ಲೈ ಪಾರ್ಕ್.‌ ಸರಿ ಸುಮಾರು 7.5 ಎಕ್ರೆ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಈ ಚಿಟ್ಟೆ ಉದ್ಯಾನವದಲ್ಲಿ ಅನೇಕ ವಿಶಿಷ್ಟ ಜಾತಿಯ ಚಿಟ್ಟೆಗಳನ್ನು ಕಾಣಬಹುದು. ಅಲ್ಲದೆ ಚಿಟ್ಟೆ ಸಂರಕ್ಷಣಾಲಯ, ವಸ್ತುಸಂಗ್ರಹಾಲಯ, ಸಂಶೋಧನಾ ಪ್ರಯೋಗಾಲಯವೂ ಇಲ್ಲಿದ್ದು ಹೊಸ ಲೋಕವನ್ನೇ ಸೃಷ್ಟಿಸಿಕೊಟ್ಟಿದೆ. ಚಿಟ್ಟೆ ಉದ್ಯಾನಕ್ಕೆ ಹೋಗುವುದಾದರೆ ವಯಸ್ಕರಿಗೆ 50 ರೂಪಾಯಿ ಹಾಗೂ ಮಕ್ಕಳಿಗೆ 30 ರೂಪಾಯಿ ಪ್ರವೇಶ ಶುಲ್ಕವಿರುತ್ತದೆ.

ಜವಾಹರ್‌ ಲಾಲ್‌ ನೆಹರು ತಾರಾಲಯ:

ವಿಜ್ಞಾನವನ್ನು ಜನಪ್ರಿಯಗೊಳಿಸುವುದು ಹಾಗೂ ಅನೌಪಚಾರಿಕ ವಿಜ್ಞಾನ ಶಿಕ್ಷಣವನ್ನು ಪರಿಚಯಿಸುವ ಉದ್ದೇಶದೊಂದಿಗೆ ಪ್ರಾರಂಭವಾದ ಜವಾಹರ್‌ ಲಾಲ್‌ ನೆಹರು ತಾರಾಲಯದಲ್ಲಿ ಮಕ್ಕಳಿಗಾಗಿ ಕೌತುಕ ಮಳಿಗೆ, ವಿಜ್ಞಾನ ವನ, ಪ್ರದರ್ಶನ ಕೊಠಡಿಗಳ ಸೌಲಭ್ಯಗಳನ್ನು ಕಲ್ಪಿಸಿದೆ.. ನಕ್ಷತ್ರ ವೀಕ್ಷಣೆ, ವಿಜ್ಞಾನ ಕಮ್ಮಟಗಳು, ಆಕಾಶ ಮಂದಿರ, ದೂರದರ್ಶಕ ವೀಕ್ಷಣಾಲಯ ಹೀಗೆ ಹತ್ತು ಹಲವು ಅವಕಾಶಗಳು ಮಕ್ಕಳಿಗೆ ಇಲ್ಲಿ ಲಭ್ಯವಿದೆ. ಆದರೆ ತಾರಾಲಯ ಪ್ರವೇಶಾತಿ ಪಡೆಯಲು ವಯಸ್ಕರು 75 ರೂಪಾಯಿ ಹಾಗೂ ಮಕ್ಕಳು 50 ರೂಪಾಯಿ ತೆರಬೇಕು.

ಇಂದಿರಾಗಾಂದಿ ಮ್ಯೂಸಿಕಲ್‌ ಫೌಂಟೇನ್ ಪಾರ್ಕ್:‌

1995ರಲ್ಲಿ ಬೆಂಗಳೂರಿನ ಹೃದಯಭಾಗದಲ್ಲಿ 17 ಎಕ್ರೆ ಪ್ರದೇಶದಲ್ಲಿ ಸಿದ್ದಗೊಂಡಿರುವ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನವನ, ನೆಹರೂ ತಾರಾಲಯದ ಕೂಗಳತೆಯ ದೂರದಲ್ಲಿಯೇ ನೆಲೆಸಿದೆ. ಸೋಮವಾರ ಮತ್ತು ಎರಡನೇ ಮಂಗಳವಾರ ಹೊರತುಪಡಿಸಿ ವಾರದ ಉಳಿದೆಲ್ಲ ದಿನ ಸಂಜೆ 7 ರಿಂದ 8 ಗಂಟೆಯವರೆಗೆ ಸಂಗೀತ ಕಾರಂಜಿ ನೋಡುವ ಅವಕಾಶವಿದ್ದು, ಇದಕ್ಕಾಗಿ ವಯಸ್ಕರು 30 ರೂಪಾಯಿ ಹಾಗೂ ಮಕ್ಕಳು 10 ರೂಪಾಯಿಯ ಟಿಕೆಟ್‌ ಕೊಂಡುಕೊಳ್ಳಬೇಕು.

ಕ್ಯೂರಿಯಸ್‌ ಸಿಟಿ ಡಿಸ್ಕವರಿ ಸೆಂಟರ್‌:

ಮಕ್ಕಳಲ್ಲಿ ಅಡಗಿರುವ ವಿಜ್ಞಾನದ ಆಸಕ್ತಿಯ ಪೋಷಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಯೂರಿಯಸ್‌ ಸಿಟಿ ಡಿಸ್ಕವರಿ ಸೆಂಟರ್‌ ವಾರಾಂತ್ಯಗಳಲ್ಲಿ ಮಾತ್ರ ಮಕ್ಕಳಿಗೆ ಮುಕ್ತವಾಗಿರುತ್ತದೆ. ಅಲ್ಲದೆ ಪ್ರತಿ ಸೆಷನ್‌ ಗೆ 450 ರೂಪಾಯಿ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಹೆಚ್‌ಎಎಲ್‌ ಹೆರಿಟೇಜ್‌ ಸೆಂಟರ್‌ ಹಾಗೂ ಏರೋ ಸ್ಪೇಸ್‌ ಮ್ಯೂಸಿಯಂ :

ಬೆಂಗಳೂರಿನ ಈ ಪ್ರತಿಷ್ಠಿತ ಸಂಸ್ಥೆಯಲ್ಲಿ ವೈಮಾನಿಕ ತಂತ್ರಜ್ಞಾನಗಳಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿದುಕೊಳ್ಳಬಹುದು. ಅಲ್ಲದೆ 1940ರಿಂದ ವಾಯಯಾನದ ಬೆಳವಣಿಗೆಯ ಬಗೆಗಿರುವ ಛಾಯಾಚಿತ್ರಗಳ ಸಂಗ್ರವೇ ಇಲ್ಲಿದ್ದು ಮಕ್ಕಳ ಚಿಂತನಾಶಕ್ತಿಯನ್ನು ಇನ್ನಷ್ಟು ಚುರುಗೊಳಿಸಲಿದೆ. 18 ವರ್ಷದವರೆಗಿನವರು 30 ರೂಪಾಯಿ ಹಾಗೂ ವಯಸ್ಕರು 50 ರೂಪಾಯಿ ಶುಲ್ಕವನ್ನು ಟಿಕೆಟ್‌ ಖರೀದಿಗೆ ನೀಡಲೇಬೇಕು.

ಇಂಡಿಯನ್‌ ಮ್ಯೂಸಿಕ್‌ ಎಕ್ಸ್ಪೀರಿಯನ್ಸ್‌ ಮ್ಯೂಸಿಯಂ:

ಭಾರತದ ಶ್ರೀಮಂತವಾದ ಸಂಗೀತ ಪರಂಪರೆಯನ್ನು ಸಂರಕ್ಷಿಸುವುದಕ್ಕಾಗಿ ರೂಪಪಡೆದ ಈ ವಸ್ತು ಸಂಗ್ರಹಾಲಯ, ದೇಶದ ಮೊದಲ ಸಂವಾದನಾತ್ಮಕ ವಸ್ತು ಸಂಗ್ರಹಾಲಯ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. 9 ಪ್ರದರ್ಶನ ಗ್ಯಾಲರಿಗಳು ಇಲ್ಲಿದ್ದು, ಜಾನಪದ, ಪಾಪ್‌, ಬಾಲಿವುಡ್‌ ಮತ್ತು ಸಮಕಾಲೀನದವರೆಗಿನ ವಿವಿಧ ಸಂಗೀತ ಶೈಲಿಗಳನ್ನು ಇಲ್ಲಿ ದೃಶ್ಯ, ಶ್ರವ್ಯ ಹಾಗೂ ಸ್ಪರ್ಶದ ಮೂಲಕ ತಿಳಿದುಕೊಳ್ಳಬಹುದಾಗಿದೆ. ಮ್ಯೂಸಿಯಂ ಪ್ರವೇಶ ದರ 150 ರೂಪಾಯಿ.

ರಂಗೋಲಿ ಗಾರ್ಡನ್‌ :

ಜಕ್ಕೂರು ಸಮೀಪದಲ್ಲಿರುವ ರಂಗೋಲಿ ಗಾರ್ಡನ್‌ ಒಂದು ಮಾದರಿ ಕಲಾ ಗ್ರಾಮವಾಗಿದ್ದು, ಇಲ್ಲಿ ಹಳ್ಳಿಯ ಜನಜೀವನ ಹಾಗೂ ರೈತರ ಬದುಕಿನ ಚಿತ್ರಣವನ್ನು ತೆರೆದಿಟ್ಟಿರುವುದು ವಿಶೇಷ ಆಕರ್ಷಣೆ. ಇಂದಿನ ಜೊತೆಗೆ ಹಿಂದಿನ ದಿನವನ್ನು ಬೆಸೆಯುವ ಈ ಪ್ರಯತ್ನವನ್ನು ಮಕ್ಕಳ ಜೊತೆಗೆ ಹೆತ್ತವರೂ ನೋಡಿ ತಿಳಿದುಕೊಳ್ಳಲೇಬೇಕು. 150 ರೂಪಾಯಿ ಪ್ರವೇಶ ದರವನ್ನು ನೀಡುವ ಮೂಲಕ ಈ ಸುಂದರ ಅನುಭವವನ್ನು ಮಕ್ಕಳೊಂದಿಗೂ ಹಂಚಿಕೊಳ್ಳಬಹುದು.

ಪ್ರಾಣಿ ದಿ ಪೆಟ್‌ ಸ್ಯಾಂಚುರಿ:

ಸೋಮನಹಳ್ಳಿ ಸಮೀಪವಿರುವ ಈ ಪ್ರಾಣಿ ಉದ್ಯಾನವನದಲ್ಲಿ ಪ್ರಾಣಿ ಪಕ್ಷಿಗಳೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯಬಹುದು. ಸ್ಪರ್ಶದ ಮೂಲಕ ಮಕ್ಕಳು ಪ್ರಾಣಿ ಪಕ್ಷಿಗಳ ಜೊತೆಗೆ ಹೊಸ ಅನುಭವವನ್ನು ಪಡೆಯುವ ಅವಕಾಶ ಇಲ್ಲಿ ಲಭ್ಯವಿದೆ. ಇಲ್ಲಿಗೆ ನೇರ ತೆರಳುವ ಮೊದಲು 400 ರೂಪಾಯಿ ಕೊಟ್ಟು ವೆಬ್‌ ಸೈಟ್ನಲ್ಲಿ ಬುಕ್ಕಿಂಗ್‌ ಮಾಡಿಕೊಳ್ಳುವುದನ್ನು ಮರೆಯದಿರಿ.

ಇವಿಷ್ಟೇ ಅಲ್ಲದೆ ಸ್ನೋ ಸಿಟಿ, ಲುಂಬಿನಿ ಗಾರ್ಡನ್‌, ಜಾಲಿವುಡ್‌, ವಂಡರ್‌ ಲಾ ಹೀಗೆ ಅನೇಕ ಬಗೆಯ ಮಕ್ಕಳ ನೆಚ್ಚಿನ ತಾಣಗಳು ಬೆಂಗಳೂರು ಆಸುಪಾಸಿನಲ್ಲಿದ್ದು, ವಾರಾಂತ್ಯ ಕಳೆಯಲು ಇವಿಷ್ಟು ಆಯ್ಕೆ ಸಾಕಲ್ವೇ?

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಹಿಮವದ್‌ ಗೋಪಾಲ ಸ್ವಾಮಿ ಬೆಟ್ಟ!

Read Next

ಹಿಮವದ್‌ ಗೋಪಾಲ ಸ್ವಾಮಿ ಬೆಟ್ಟ!