• ಡಾ. ಸುಮಾ ರಮೇಶ್, ಬೆಂಗಳೂರು

ಅಮೆರಿಕದಿಂದ ಹೊರಟು ಹತ್ತು ದಿನಗಳ ಮಟ್ಟಿಗೆ ಮನೆಗೆ ಬರುತ್ತೇವೆಂದು ಮಗ, ಸೊಸೆ ಹೇಳಿದಾಗ ಫ್ಯಾನ್ ಕೆಳಗೆ ಕುಳಿತಿದ್ದ ನಾವು ಚಿಂತೆಗೀಡಾದೆವು. ಕಾರಣ ಬೆಂಗಳೂರಿನ ಸೆಕೆ! ಪಾಪ ಮಕ್ಕಳು ಹೇಗೆ ಸಹಿಸುವರು ಈ ಸೆಕೆಯನ್ನು ಎಂಬ ಯೋಚನೆಯೇ ನೈನಿತಾಲ್ ಪ್ರವಾಸಕ್ಕೆ ನಾಂದಿ ಹಾಡಿದ್ದು! ದೆಹಲಿಗೆ ವಿಮಾನದಲ್ಲಿ ಪಯಣಿಸಿ ಅಲ್ಲಿಂದ ಕಾರಿನಲ್ಲಿ ನಾವು ತಲುಪಿದ್ದು ಭೀಮ್ ತಾಲ್‌ಗೆ. ದಾರಿಯಲ್ಲಿ ಶಿವ್ ಢಾಬಾದಲ್ಲಿ ಹೊಟ್ಟೆ ಭರ್ತಿ ಆಲೂ ಪರೋಟ ತಿಂದು ಲಸ್ಸಿ ಕುಡಿದ್ದಿದ್ದರಿಂದ ಏಳು ಗಂಟೆಗಳ ರಸ್ತೆ ಪಯಣ ಆಯಾಸವೆನಿಸಲಿಲ್ಲ.

ದೇವಭೂಮಿ ಎನಿಸಿಕೊಂಡಿರುವ ಉತ್ತರಾಖಂಡದ ಕುಮಾವೋನ್ ಪ್ರಾಂತ್ಯದ ನೈನಿತಾಲ್‌ಗೆ 22 ಕಿಲೋ ಮೀಟರ್ ದೂರದಲ್ಲಿ ಇರುವುದು ಭೀಮ್ ತಾಲ್. ಪಾಂಡವರು ವನವಾಸದ ಸಮಯದಲ್ಲಿ ಈ ಸ್ಥಳದಲ್ಲಿ ಅಡ್ಡಾಡುತ್ತಿರುವಾಗ ಬಾಯಾರಿಕೆ ನೀಗಿಸಿಕೊಳ್ಳಲು ನೀರು ಸಿಗದ ಕಾರಣ ಭೀಮನು ತನ್ನ ಗದೆಯಿಂದ ನೆಲಕ್ಕೆ ಜೋರಾಗಿ ಬಡಿದ ಪರಿಣಾಮವಾಗಿ ಸೃಷ್ಟಿಯಾಗಿದ್ದೇ ಈ ‘ಭೀಮತಾಲ್ ಸರೋವರ’ ಎಂಬ ನಂಬಿಕೆಯಿದೆ. ಈ ಸರೋವರ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ನೈನಿ ಸರೋವರಕ್ಕಿಂತಲೂ ದೊಡ್ಡದಾಗಿದೆ.

ಇದನ್ನೂ ಓದಿ: ಸಿಯಾಟಲ್‌ನ ಹೆಗ್ಗುರುತುಗಳು

ನೈನಿತಾಲ್‌ಗೆ ಹೋಲಿಸಿದರೆ ಭೀಮತಾಲ್ ಹೆಚ್ಚು ಪ್ರಶಾಂತವಾಗಿದೆ. ಅದಕ್ಕಾಗಿ ಎರಡು ದಿನ ಗದ್ದಲದಿಂದ ದೂರ, ಪ್ರಕೃತಿಯ ನಡುವೆ ಶಾಂತವಾಗಿ ಸಮಯ ಕಳೆಯಬೇಕೆಂದು ಉಳಿದುಕೊಳ್ಳಲು ಅಲ್ಲಿ ಒಂದು ಸುಂದರ ವಸತಿಗೃಹವೊಂದನ್ನು ಮಕ್ಕಳು ಕಾಯ್ದಿರಿಸಿದ್ದರು. ಅಲ್ಲಿ ಕಳೆದ ಎರಡು ದಿನಗಳ ಮಿಸ್ಟಿಕ್ ಅನುಭವವನ್ನು ಹೇಳಲು ಮತ್ತೊಂದು ಲೇಖನವನ್ನೇ ಬರೆಯಬೇಕು!

Untitled design (9)

ಸರೋವರದ ತಟದಲ್ಲಿ

ಸಮುದ್ರ ಮಟ್ಟಕ್ಕಿಂತ 2,000 ಮೀಟರ್ ಎತ್ತರದಲ್ಲಿರುವ ನೈನಿತಾಲ್ ಸಪ್ತಶೃಂಗಗಳಿಂದ ಸುತ್ತುವರಿಯಲ್ಪಟ್ಟ ಸುಂದರ ಸರೋವರ ನಗರಿ. ನೀಲಾಗಸದ ಕೆಳಗೆ ಹಚ್ಚ ಹಸಿರಿನ ಮಧ್ಯೆ ಭವ್ಯ ಪ್ರಶಾಂತತೆಯಲ್ಲಿ ಹರಡಿಕೊಂಡಿರುವ ಅದ್ಭುತ ‘ನೈನಿ’ ಸರೋವರದ ಸುತ್ತಲೇ ‘ನೈನಿತಾಲ್’ ಬೆಳೆದಿದೆ. ಸತಿಯ ಕಳೇಬರವನ್ನು ಶಿವ ಹೊತ್ತು ತಿರುಗುತ್ತಿದ್ದಾಗ ಅವಳ ಕಣ್ಣುಗಳು ಬಿದ್ದ ಸ್ಥಳದಲ್ಲೇ ‘ನೈನಿ ಸರೋವರ’ ಸೃಷ್ಟಿಯಾಯಿತಂತೆ. ಅದರಿಂದಲೇ ಅದು ಕಣ್ಣಿನ ಆಕಾರದಲ್ಲಿರುವುದು. ಸರೋವರದ ತುದಿಯಲ್ಲಿ ‘ನೈನಾ ದೇವಿ’ಯ ದೇವಾಲಯವಿದೆ. ಇದು ‘ಶಕ್ತಿ ಪೀಠ’ಗಳಲ್ಲೊಂದು. ಚಿಕ್ಕ ದೇವಾಲಯವಾದರೂ ಅದು ತನ್ನ ಪ್ರಾಕೃತಿಕ ಸೌಂದರ್ಯದಿಂದ ವಿಶೇಷವಾಗಿದೆ. ಸರೋವರದ ಸುಂದರ ನೋಟ ಹಾಗೂ ತಂಪಾದ ಗಾಳಿ ಇಲ್ಲಿನ ದೈವಿಕ ಅನುಭೂತಿಯನ್ನು ಮತ್ತಷ್ಟು ಗಾಢಗೊಳಿಸುತ್ತದೆ. ವಿಶೇಷವೆಂದರೆ ಸ್ವಾಮಿ ವಿವೇಕಾನಂದರು ತಮ್ಮ ಶಿಷ್ಯರಾದ ಅಖಂಡಾನಂದರೊಡನೆ 1890ರಲ್ಲಿ ಕಾಲ್ನಡಿಗೆಯಲ್ಲಿಯೇ ಇಲ್ಲಿಗೆ ಬಂದು ಆರು ದಿನಗಳ ಕಾಲ ನೆಲೆಸಿದಾಗ ನೈನಾದೇವಿಯ ದೇವಾಲಯಕ್ಕೆ ಭೇಟಿ ನೀಡಿದ್ದರಂತೆ. ನಂತರ 1898ರಲ್ಲಿ ಸಿಸ್ಟರ್ ನಿವೇದಿತಾ ಹಾಗೂ ಕೆಲವು ವಿದೇಶಿ ಶಿಷ್ಯರೊಡನೆ ಮತ್ತೆ ದೇಗುಲಕ್ಕೆ ಭೇಟಿನೀಡಿದ್ದರೆಂದು ಅಲ್ಲಿನ ಭಿತ್ತಿ ಫಲಕದಲ್ಲಿ ವಿವರಿಸಲಾಗಿತ್ತು.

ಕಾಲುದಾರಿಯ ದೃಶ್ಯ

ದೇವಾಲಯದ ಪಕ್ಕದಿಂದ ಹಾದುಹೋಗಲಾರಂಭಿಸಿದರೆ ಇಡೀ ಸರೋವರವನ್ನು ಒಂದು ಸುತ್ತು ನಡೆದು ಬರಲು ಸುಮಾರು ಒಂದೂವರೆ ಗಂಟೆಗಳ ಕಾಲ ಬೇಕಾಗುವುದು. ಅರ್ಧ ದಾರಿ ಸರೋವರದ ಪಕ್ಕದಲ್ಲಿ ನಿರ್ಮಿಸಿರುವ ಸುಂದರ ಕಾಲು ದಾರಿಯಲ್ಲೇ ಸಾಗಬೇಕು. ನಂತರದ ಅರ್ಧ ದಾರಿಯನ್ನು ಮಾಲ್ ರೋಡ್ ನ ಮೂಲಕ ಕ್ರಮಿಸಬೇಕು. ಬ್ರಿಟಿಷರಿಗೆ ತಮ್ಮ ನಾಡನ್ನು ನೆನಪಿಸುವ ವಾತಾವರಣದಿಂದಾಗಿ ಬೇಸಿಗೆಯ ರಾಜಧಾನಿಯಾಗಿದ್ದ ನೈನಿತಾಲ್‌ನ ಕಚೇರಿ, ಬಂಗಲೆಗಳ ವಾಸ್ತುಶಿಲ್ಪವು ವಸಾಹತುಶಾಹಿ ನೆನಪುಗಳನ್ನು ಹೊತ್ತಿವೆ. ಮಾಲ್ ರೋಡಿನ ಅಂಗಡಿ ಮುಂಗಟ್ಟುಗಳ, ರೆಸ್ಟೋರೆಂಟ್‌ಗಳ ಅನುಭವವೇ ವಿಶಿಷ್ಟ. ರಾತ್ರಿಯ ಸಮಯದಲ್ಲಿ ದೀಪಗಳ ಬೆಳಕಿನಲ್ಲಿ ಸರೋವರ ಹಾಗೂ ಮಾಲ್ ರೋಡ್ ಮತ್ತಷ್ಟು ಸಿಂಗಾರಗೊಂಡಂತೆ ಭಾಸವಾಗುತ್ತದೆ.

ಸಿಹಿಯನ್ನು ಅರಸುತ್ತಾ

ಯಾವುದೋ ಯೂಟ್ಯೂಬ್ ವಿಡಿಯೋದಲ್ಲಿ ನೋಡಿದ್ದ ಲೋಟಾ ಜಿಲೇಬಿ ಮಾಡುವ ʼನೈನಿ ಜಿಲೇಬಿ ಭಂಡಾರ್ʼ ಹುಡುಕಿಕೊಂಡೂ ಹೋಗಿದ್ದಾಯಿತು. ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಹಿಂದೆ 1850ರಲ್ಲಿ ಆರಂಭಗೊಂಡ ಈ ಅಂಗಡಿಯ ಮಾಲೀಕ ರಕ್ಷಿತ್ ಐದನೆಯ ತಲೆಮಾರಿನವನು. ರುಚಿಕರ ಜಿಲೇಬಿಯನ್ನು ಮೊಸರಿನ ಜತೆಗೆ ಕೊಡುವುದು ಇಲ್ಲಿನ ವಿಶೇಷ. ನನ್ನ ಮಗ ಅವನೊಂದಿಗೆ ಮಾತನಾಡುತ್ತಾ ʼನೀವು ಮಾಡುವ ಜಿಲೇಬಿಯನ್ನು ತಿನ್ನುತ್ತೀರಾ?ʼ ಎಂದು ಕೇಳಿದಾಗ ʼಅಧಿಕ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವುದರಿಂದ ತಿನ್ನುವುದಿಲ್ಲʼ ಎಂದ. ಜತೆಗೆ ತನ್ನ ʼಮಗನನ್ನು ಓದಿಸಿ ಕೆಲಸಕ್ಕೆ ಕಳುಹಿಸುತ್ತೇನೆ ಈ ಕೆಲಸ ನನ್ನೊಂದಿಗೆ ಮುಕ್ತಾಯವಾಗಲಿʼ ಎಂದೂ ಹೇಳಿದ. ಬದಲಾವಣೆಯ ಗಾಳಿ ಎಲ್ಲೆಡೆಯೂ ಬೀಸುವುದಲ್ಲವೇ?

Untitled design (59)

ಆತ್ಮಾನಂದದ ಬಾಗಿಲು ತೆರೆದು

ಪರ್ವತಗಳ ನಡುವಿನ, ಪಚ್ಚೆ ಹಸಿರು ನೀರಿನ, ಬಣ್ಣ ಬಣ್ಣದ ಹುಟ್ಟು ಹಾಕುವ ದೋಣಿಗಳ, ತಂಪಾದ ಗಾಳಿ, ಪುಟ್ಟ ಕನಸಿನ ನಗರಿಯಿಂದ ಸುತ್ತುವರಿದ ನೈನಿ ಸರೋವರ ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಹರಿವ ನೀರಿನ ರಭಸ ನಿತ್ಯ ಬದುಕಿನ ಓಟದಂತಾದರೆ, ನಿಶ್ಚಲ ಪ್ರಶಾಂತ ಸರೋವರ ನಮ್ಮ ಅಂತರಂಗವನ್ನು ಶೋಧಿಸಲು ಕಾಲದ ಹಂಗನ್ನು ತೊರೆದು ಕುಳಿತ ಧ್ಯಾನದಂತೆ! ನೈನಿತಾಲ್‌ನ ನಮ್ಮ ಈ ಕ್ಷಿಪ್ರ ಭೇಟಿ ಕೇವಲ ಮುನ್ನುಡಿಯಷ್ಟೇ! ಮತ್ತೆ ಮತ್ತೆ ಹೋಗಬೇಕೆಂದುಕೊಂಡಿರುವ ಸ್ಥಳಗಳಲ್ಲಿ ಇದು ಪ್ರಮುಖ ಸ್ಥಾನ ಪಡೆಯಿತು. ಹಿಮಾಲಯದ ಸೆಳೆತವೆಂದರೆ ಹಾಗೆ, ಮತ್ತಷ್ಟು, ಮಗದಷ್ಟು ತನ್ನೆಡೆಗೆ ಆಕರ್ಷಣೆಯನ್ನು ಬೆಳೆಸುತ್ತದೆ. ಕುಟುಂಬದ ಸಮೇತ ಅಲ್ಲಿ ಕಳೆದ ಕ್ಷಣಗಳು ಅತ್ಯಮೂಲ್ಯವಾದದ್ದು. ಪ್ರವಾಸ ಮುಗಿಸಿ ಬಂದರೂ ಅದರ ಗುಂಗಿನಿಂದ ಹೊರಬರಲು ಸಾಧ್ಯವಾಗದಿರುವುದು ಇವೆಲ್ಲದರಿಂದಲೇ, ಸಂಶಯವಿಲ್ಲ!

ದಾರಿ ಹೇಗೆ?

ಬೆಂಗಳೂರಿನಿಂದ ನೈನಿತಾಲ್ ಸುಮಾರು 1850+ ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ ನೈನಿತಾಲ್ ತಲುಪಲು ಅತ್ಯಂತ ವೇಗವಾದ ಮಾರ್ಗವೆಂದರೆ ವಿಮಾನ, ಬಸ್ ಮೂಲಕ ಬರೇಲಿ. ಇದು ಸರಿಸುಮಾರು 6 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಬೆಂಗಳೂರಿನಿಂದ ನೈನಿತಾಲ್ ತಲುಪಲು ಅಗ್ಗದ ಮಾರ್ಗವೆಂದರೆ ರೈಲು, ಬಸ್ ಮೂಲಕ ದೆಹಲಿ, ಇದು ಸುಮಾರು 44 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಲೇಖಕರು: ಹವ್ಯಾಸಿ ಬರಹಗಾರರು