Monday, March 9, 2026
Monday, March 9, 2026

ಇಲ್ಲಿ ಪರೀಕ್ಷಿತ ತನ್ನ ಸಾವಿನ ನೋವೂ ಮರೆತಿದ್ದ

ಭಾಗವತದ ಪಠಣದ ನಂತರ, ಪರೀಕ್ಷಿತ ಶುಕಮುನಿಗೆ ಧನ್ಯವಾದ ಅರ್ಪಿಸಿದನು. ಶಾಪದ ಕಾರಣಕ್ಕೆ ತಕ್ಷಕನ ಕಡಿತದಿಂದ ಪರೀಕ್ಷಿತನು ಅಲ್ಲೇ ತನ್ನ ಪ್ರಾಣತ್ಯಾಗ ಮಾಡಿದನು. ಆದರೆ, ಮಹಾರಾಜ ಪರೀಕ್ಷಿತನು ಭಾಗವತ ಪಠಣದ ಮೂಲಕ ಆಧ್ಯಾತ್ಮಿಕ ಜಗತ್ತನ್ನು ಪ್ರವೇಶಿಸಿದ್ದ. ಹಾಗಾಗಿ ಸಾವಿನ ಯಾವುದೇ ನೋವು ಅನುಭವಿಸಲಿಲ್ಲ ಎನ್ನಲಾಗಿದೆ. ಅದಕ್ಕಾಗಿಯೇ ಶುಕಸ್ಥಳದ ಇಡೀ ಪ್ರದೇಶವು ಶ್ರೀ ಕೃಷ್ಣನ ಮೇಲಿನ ಭಕ್ತಿಯ ಮಾಧುರ್ಯದಿಂದ ತುಂಬಿದೆ. ಹೀಗಾಗಿ ಈ ಪವಿತ್ರ ಸ್ಥಳವು ಶ್ರೀಮದ್-ಭಾಗವತದ ಪವಿತ್ರ ಗ್ರಂಥಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತದೆ.

- ವಿಜಯಕುಮಾರ್ ಕಟ್ಟೆ

ಉತ್ತರ ಪ್ರದೇಶದ ಮುಜಫರ್ ನಗರ ಜಿಲ್ಲೆಯಲ್ಲಿ ಶುಕಸ್ಥಳ ನೆಲೆಗೊಂಡಿದೆ. ಇದು ದೆಹಲಿ- ಹರಿದ್ವಾರ ಮಾರ್ಗದಲ್ಲಿ ಸುಮಾರು 150 ಕಿಮೀ ದೂರದಲ್ಲಿದೆ. ಪಟ್ಟಣದ ಪೂರ್ವಕ್ಕೆ ಗಂಗಾ ನದಿ ಇದೆ. ಅನೇಕ ಯಾತ್ರಿಕರು ಇಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಇಲ್ಲಿನ ಶುಕತಾಲ ಅಥವಾ ಶುಕತೀರ್ಥದ ಧಾರ್ಮಿಕ ಮಹತ್ವವು ಅಗಾಧವಾಗಿದ್ದು, ಇಲ್ಲಿ ವೇದವ್ಯಾಸರ ಪುತ್ರ ಶುಕಮುನಿಯು 5000 ವರ್ಷಗಳ ಹಿಂದೆ ಅರ್ಜುನನ ಮೊಮ್ಮಗನಾದ ಮಹಾರಾಜ ಪರೀಕ್ಷಿತನಿಗೆ ಶ್ರೀಮದ್ಭಾಗವತವನ್ನು ಬೋಧಿಸಿದ್ದರು ಎನ್ನಲಾಗಿದೆ. ಸಾಯುವಂತೆ ಶಾಪಗ್ರಸ್ತನಾಗಿದ್ದ ಪರೀಕ್ಷಿತನು ಶುಕಮುನಿಗಳಿಂದ ಶ್ರೀಮದ್ಭಾಗವತವನ್ನು ಕೇಳಲು ಇಲ್ಲಿಗೆ ಬಂದು ಆಧ್ಯಾತ್ಮಿಕ ಮುಕ್ತಿ ಪಡೆದನು ಎಂಬುದು ಇಲ್ಲಿನ ನಂಬಿಕೆ.

ಇದನ್ನೂ ಓದಿ: ನೇಪಾಳದ ಗುಹೆಯೊಳಗೆ ಗುಪ್ತೇಶ್ವರ್ ಮಹಾದೇವ

ಐತಿಹಾಸಿಕ ಮಹತ್ವ

ʻಚತುಃಶ್ಲೋಕೀ ಭಾಗವತʼ, ಇದನ್ನು ಇಡೀ ಭಾಗವತ ಪುರಾಣದ ಸಾರಾಂಶ ಎಂದು ಹೇಳಲಾಗಿದೆ. ವಿಷ್ಣುವಿನಿಂದ ಈ ಜ್ಞಾನವನ್ನು ಪಡೆದ ಬ್ರಹ್ಮದೇವರು ಇದನ್ನು ತಮ್ಮ ಪುತ್ರ ನಾರದರಿಗೆ ಉಪದೇಶಿಸಿದರು. ನಾರದರು ತಮ್ಮ ಶಿಷ್ಯ ವ್ಯಾಸರಿಗೆ ಇದನ್ನು ಬೋಧಿಸಿದರು. ನಾರದರ ಆದೇಶದ ಮೇರೆಗೆ ವೇದವ್ಯಾಸರು ಪರಮಾತ್ಮನ ಲೀಲೆಗಳನ್ನು ಒಳಗೊಂಡ ಭಾಗವತದ 18,000 ಶ್ಲೋಕಗಳನ್ನು ರಚಿಸಿದರು. ಸಂಪೂರ್ಣ ಭಾಗವತ ರಚಿಸಿ ನಂತರ ತಮ್ಮ ಪುತ್ರ ಶ್ರೀ ಶುಕಮುನಿಗಳಿಗೆ ಬೋಧಿಸಿದರು. ಭಾಗವತದಲ್ಲಿ ಹನ್ನೆರಡು ಸ್ಕಂಧಗಳು, 342 ಅಧ್ಯಾಯಗಳು ಇವೆ. ಈ ಭಾಗವತದ ಪರಮ ಸತ್ಯವನ್ನು ಶುಕಮುನಿ ಪರೀಕ್ಷಿತ ಮಹಾರಾಜನಿಗೆ ಉಪದೇಶಿಸಿದ ಸಂದರ್ಭ ಹೀಗಿದೆ:

ಪರೀಕ್ಷಿತ್ ರಾಜ ಒಂದು ದಿನ ಬೇಟೆಗೆಂದು ಕಾಡಿಗೆ ತೆರಳಿದ್ದ. ನೀರಡಿಕೆಯಿಂದ ಬಳಲಿ ಶಮೀಕ ಮುನಿಯ ಆಶ್ರಮ ಸೇರಿದ. ಧ್ಯಾನದಲ್ಲಿದ್ದ ಮುನಿಗೆ ಮಹಾರಾಜನ ಆಗಮನದ ಅರಿವಾಗಲಿಲ್ಲ. ಮುನಿಯ ಮೌನವನ್ನು ಉಪೇಕ್ಷೆ ಎಂದು ತಿಳಿದ ಪರೀಕ್ಷಿತ ಕೋಪಗೊಳ್ಳುತ್ತಾನೆ. ಅಲ್ಲೇ ಸಮೀಪದಲ್ಲಿ ಸತ್ತುಬಿದ್ದಿದ್ದ ಹಾವೊಂದನ್ನು ತನ್ನ ಬಿಲ್ಲಿನ ತುದಿಯಿಂದ ಮೇಲೆತ್ತಿ ಮುನಿಯ ಕೊರಳಿಗೆ ಹಾರದಂತೆ ತೊಡಿಸಿ ಅಲ್ಲಿಂದ ತೆರಳುತ್ತಾನೆ. ಶಮೀಕ ಪುತ್ರ ಶೃಂಗಿಗೆ ಈ ಘಟನೆ ತಿಳಿಯುತ್ತದೆ. ಆತ ಕುಪಿತಗೊಂಡು ಇನ್ನೊಂದು ವಾರದ ಅವಧಿಯಲ್ಲಿ ವಿಷಪೂರಿತ ಹಾವು ತಕ್ಷಕನು ತನ್ನ ತಂದೆಯನ್ನು ಅವಮಾನಿಸಿದ ರಾಜನನ್ನು ಕಚ್ಚಿ ಕೊಲ್ಲುತ್ತದೆ ಎಂದು ಶಪಿಸಿದನು. ಈ ಮಧ್ಯೆ ರಾಜನು ತನ್ನ ಅರಮನೆಗೆ ಹಿಂತಿರುಗಿದನು. ಕ್ರಮೇಣ ಅವನಿಗೆ ತನ್ನ ತಪ್ಪಿನ ಅರಿವಾಯಿತು. ಈ ಪಾಪದಿಂದ ಮುಕ್ತನಾಗಲು ಅವನು ಯೋಚಿಸುತ್ತಿದ್ದಂತೆ, ಋಷಿ ಶಮೀಕನ ಶಿಷ್ಯನೊಬ್ಬ ಪರೀಕ್ಷಿತನಿಗೆ ಋಷಿಯ ಶಾಪದ ಬಗ್ಗೆ ಎಚ್ಚರಿಸಲು ಬಂದನು. ರಾಜನು ತನ್ನ ಶಾಪವನ್ನು ಆಶೀರ್ವಾದವೆಂದು ಸ್ವೀಕರಿಸಿ, ತನ್ನ ರಾಜ್ಯವನ್ನು ತನ್ನ ಮಗ ಜನಮೇಜಯನಿಗೆ ಒಪ್ಪಿಸಿ, ತನ್ನ ಜೀವನದಲ್ಲಿ ಉಳಿದ ಒಂದು ವಾರದ ಅವಧಿಯನ್ನು ಸಾರ್ಥಕವಾಗಿ ಕಳೆಯಲು ನಿಶ್ಚಯಿಸುತ್ತಾನೆ. ಗಂಗಾತೀರದಲ್ಲಿ ಶುಕಮುನಿಯು ಸಾವಿನ ಬಾಯಲ್ಲಿ ನಿಂತಿರುವ ಪರೀಕ್ಷಿತನಿಗೆ ಅವನ ಕೋರಿಕೆಯಂತೆ ಜೀವನ ಸಾರ್ಥಕತೆಗಾಗಿ ಭಾಗವತವನ್ನು ಉಪದೇಶಿಸುತ್ತಾರೆ.

ಭಾಗವತದ ಪಠಣದ ನಂತರ, ಪರೀಕ್ಷಿತ ಶುಕಮುನಿಗೆ ಧನ್ಯವಾದ ಅರ್ಪಿಸಿದನು. ಶಾಪದ ಕಾರಣಕ್ಕೆ ತಕ್ಷಕನ ಕಡಿತದಿಂದ ಪರೀಕ್ಷಿತನು ಅಲ್ಲೇ ತನ್ನ ಪ್ರಾಣತ್ಯಾಗ ಮಾಡಿದನು. ಆದರೆ, ಮಹಾರಾಜ ಪರೀಕ್ಷಿತನು ಭಾಗವತ ಪಠಣದ ಮೂಲಕ ಪರಮಾತ್ಮನ ಸಂಪೂರ್ಣ ಸತ್ಯದಲ್ಲಿ ಮುಳುಗಿ, ಆಧ್ಯಾತ್ಮಿಕ ಜಗತ್ತನ್ನು ಪ್ರವೇಶಿಸಿದ್ದ. ಹಾಗಾಗಿ ಸಾವಿನ ಯಾವುದೇ ನೋವು ಅನುಭವಿಸಲಿಲ್ಲ ಎನ್ನಲಾಗಿದೆ. ಅದಕ್ಕಾಗಿಯೇ ಶುಕಸ್ಥಳದ ಇಡೀ ಪ್ರದೇಶವು ಶ್ರೀ ಕೃಷ್ಣನ ಮೇಲಿನ ಭಕ್ತಿಯ ಮಾಧುರ್ಯದಿಂದ ತುಂಬಿದೆ. ಹೀಗಾಗಿ ಈ ಪವಿತ್ರ ಸ್ಥಳವು ಶ್ರೀಮದ್-ಭಾಗವತದ ಪವಿತ್ರ ಗ್ರಂಥಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತದೆ.

ಅಕ್ಷಯ ವಟ

ಇದು ಒಂದು ದೊಡ್ಡ ಆಲದ ಮರ. ಸುಖದೇವ್ ಮಂದಿರವೂ ಇಲ್ಲಿದೆ. ಈ ಮರವು ಪುರಾತನ ಇತಿಹಾಸಕ್ಕೆ ಮೂಕ ಸಾಕ್ಷಿಯಾಗಿದೆ. ಈ ಮರದ ಕೊಂಬೆಗಳ ಕೆಳಗೆ ಶುಕಮುನಿ ಮತ್ತು ಪರೀಕ್ಷಿತ ಮಹಾರಾಜರೂ ಕುಳಿತಿದ್ದರು ಎನ್ನಲಾಗಿದೆ. ಈ ಮರವು 150 ಅಡಿಗಳಷ್ಟು ಎತ್ತರ ಮತ್ತು ಎಲ್ಲಾ ದಿಕ್ಕುಗಳಲ್ಲಿಯೂ ಹರಡಿಕೊಂಡಿದೆ. ವಿಶೇಷವೆಂದರೆ ಈ ಮರದ ಕೊಂಬೆಯೊಂದರಲ್ಲಿ ಗಣೇಶನ ಆಕಾರ ನಿರ್ಮಾಣವಾಗಿರುವುದು. ಆಶ್ರಮದ ಸಂಕೀರ್ಣ ಹಲವಾರು ದೇವಾಲಯಗಳು ಮತ್ತು ದೇವತೆಗಳ ಮೂರ್ತಿಗಳನ್ನು ಒಳಗೊಂಡಿದೆ. ಅದರಲ್ಲಿ ಶುಕಮುನಿ ಮತ್ತು ಪರೀಕ್ಷಿತ ಜತೆಗೆ ಕುಳಿತು ಮಾತನಾಡುತ್ತಿರುವ ಚಿತ್ರಗಳಿವೆ. ಸ್ವತಃ ಆಲದ ಮರವೇ 5,000 ವರ್ಷಗಳಷ್ಟು ಹಳೆಯದಾಗಿದೆ.

ಸುತ್ತಮುತ್ತಲಿನ ಪವಿತ್ರ ಸ್ಥಳಗಳು

ಶುಕಸ್ಥಳದ ಸುತ್ತಲು ಹಲವಾರು ಆಧ್ಯಾತ್ಮಿಕ ಮಹತ್ವದ ತಾಣಗಳಿವೆ. ಸತಿ ಅನುಸೂಯಾ ಆಶ್ರಮ, ರಾಮ್ ಘಾಟ್ ಮತ್ತು ಗಣೇಶ್ ಬಾಗ್‌ ಹೀಗೆ ಹಲವು ತಾಣಗಳು ಹತ್ತಿರದಲ್ಲೇ ಇವೆ.

ದಾರಿ ಹೇಗೆ?

ದೆಹಲಿಯಿಂದ ನೇರ ಬಸ್‌ಗಳ ವ್ಯವಸ್ಥೆ ಇದೆ. ಕಾರು ಆಥವಾ ಖಾಸಗಿ ವಾಹಗಳ ಮೂಲಕ ಸುಲಭವಾಗಿ ತಲುಪಬಹುದು. ಮುಜಫರ್‌ ನಗರ ರೈಲು ನಿಲ್ದಾಣ ಹತ್ತಿರದ ರೈಲು ನಿಲ್ದಾಣವಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ