ಸೂರ್ಯಾಸ್ತ ಕಾಣದ ಊರು!
ಕೋಡುರುಪಾಕ ಗ್ರಾಮಕ್ಕೆ ಹೊಸದಾಗಿ ಅಂದರೆ ಪ್ರವಾಸಿಗರಾಗಿ ಬಂದವರಿಗೆ ಅಚ್ಚರಿಯಾಗುವುದಂತೂ ಖಂಡಿತ. ಸಂಜೆ ಕೋಡುರುಪಾಕ ತಲುಪುವವರಲ್ಲಿ ಹಲವರು ಗೊಂದಲಕ್ಕೊಳಗಾಗುತ್ತಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಸಂಜೆ ಬೇರೆ ಗ್ರಾಮದಿಂದ ಹೊರಟವರು ಒಂದು ಗಂಟೆಯೊಳಗೆ ಕೊಟ್ಟೂರುಪಾಕ ತಲುಪಿದರೂ ಇಲ್ಲಿ ಕತ್ತಲಾಗಿರುವುದನ್ನು ಕಂಡು ಆತಂಕಕ್ಕೊಳಗಾಗುತ್ತಾರೆ.
- ಉಷಾಕಿರಣ್
ಬೆಳಿಗ್ಗೆ 6 ಗಂಟೆಗೆ ಸೂರ್ಯೋದಯವಾಗಿ ಸಂಜೆ 6 ಗಂಟೆಯ ಹೊತ್ತಿಗೆ ಸೂರ್ಯಾಸ್ತವಾಗುವುದು ಸಾಮಾನ್ಯ. ಆದರೆ, ಈ ಒಂದು ಹಳ್ಳಿ ತುಂಬಾ ವಿಭಿನ್ನವಾಗಿದ್ದು, ಇಲ್ಲಿ ಸಂಜೆಯ 4ಗಂಟೆಯ ಹೊತ್ತಿಗೆ ಕತ್ತಲಾಗಿಬಿಡುತ್ತದೆ. ಪರಿಣಾಮವಾಗಿ, ಈ ಗ್ರಾಮಸ್ಥರಿಗೆ ಇಲ್ಲಿಯವರೆಗೆ ಸಂಜೆ ಅಂದರೆ ಸೂರ್ಯಾಸ್ತವೆಂದರೆ ಏನೆಂದೇ ತಿಳಿದಿಲ್ಲ. ಸಂಜೆ ನಾಲ್ಕು ಗಂಟೆಗೆ ಕತ್ತಲಾಗುವುದರಿಂದ ಹಳ್ಳಿಯ ಜನರು ಅಷ್ಟೊತ್ತಿಗಾಗಲೇ ತಮ್ಮ ಹೊಲದ ಕೆಲಸವನ್ನು ಮುಗಿಸಿ, ಮನೆ ಸೇರುತ್ತಾರೆ. ಇಲ್ಲಿಗೆ ಭೇಟಿ ನೀಡುವ ಹೊಸಬರಿಗೆ ಅಂದರೆ ಪ್ರವಾಸಿಗರಿಗೆ ಇದು ಆಶ್ಚರ್ಯಕರವಾಗಿದ್ದರೂ, ಇಲ್ಲಿನ ಗ್ರಾಮಸ್ಥರಿಗೆ ಇದು ಅಭ್ಯಾಸವಾಗಿಬಿಟ್ಟಿದೆ. ಅಷ್ಟಕ್ಕೂ ಈ ವಿಚಿತ್ರ ಹಳ್ಳಿ ಎಲ್ಲಿದೆ ಅಂತ ಯೋಚಿಸುತ್ತಿದ್ದೀರಾ? ಇದಕ್ಕೆ ಉತ್ತರ ಇಲ್ಲಿ ತಿಳಿದುಕೊಳ್ಳೋಣ ಬನ್ನಿ.

ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಸುಲ್ತಾನಾಬಾದ್ ಮಂಡಲದ ಕೊಡುರುಪಕ ಗ್ರಾಮವೇ ಸೂರ್ಯಾಸ್ತವನ್ನೇ ಕಾಣದ ಹಳ್ಳಿ. ಎರಡು ಮೂರು ಗಂಟೆ ತಡವಾಗಿ ಈ ಹಳ್ಳಿಯನ್ನು ಎಚ್ಚರಗೊಳಿಸುವ ಸೂರ್ಯ, ಎರಡು ಗಂಟೆ ಮುಂಚಿತವಾಗಿ ಹೊತ್ತಿಗೆ ವಿದಾಯ ಹೇಳಿ ಹೊರಡುತ್ತಾನೆ. ಅಂದರೆ ಇಲ್ಲಿ, ಬೆಳಿಗ್ಗೆ ಸುಮಾರು 8 ಗಂಟೆಗೆ ಸೂರ್ಯ ಉದಯಿಸುತ್ತಾನೆ ಮತ್ತು ಸಂಜೆ 4 ಗಂಟೆಯ ಹೊತ್ತಿಗೆ ಕತ್ತಲಾಗಿ ಬಿಡುತ್ತದೆ. ಇದಕ್ಕೆಲ್ಲ ಕಾರಣ ಇಲ್ಲಿನ ಭೌಗೋಳಿಕ ಪರಿಸ್ಥಿತಿಗಳು ಎಂದು ವಿಜ್ಞಾನಿಗಳು ಹೇಳುತ್ತಾರೆ . ಈ ಗ್ರಾಮವನ್ನು ಸುತ್ತಲೂ ನಾಲ್ಕು ಎತ್ತರದ ಬೆಟ್ಟಗಳು ಸುತ್ತುವರಿದಿದ್ದು, ಇದರಿಂದಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ.
ಹಳ್ಳಿಯನ್ನು ಸುತ್ತುವರಿದ ನಾಲ್ಕು ಬೆಟ್ಟಗಳು
ಕೋಡುರುಪಾಕ ಗ್ರಾಮವು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಶತಮಾನಗಳ ಹಿಂದೆ ಸ್ಥಾಪನೆಯಾದ ಈ ಗ್ರಾಮವು ಅಪರೂಪದ ಹಳ್ಳಿಗಳಲ್ಲಿ ಒಂದಾಗಿದೆ. ಈ ಗ್ರಾಮವು ಸಂಪೂರ್ಣವಾಗಿ ಪಮುಬಂದ ಗುಟ್ಟ, ಗೊಲ್ಲಗುಟ್ಟ, ರಂಗನಾಯಕಕುಲ ಗುಟ್ಟ ಮತ್ತು ದೇವುನಿಪಲ್ಲಿ ಗುಟ್ಟ ಎಂಬ ನಾಲ್ಕು ಬೆಟ್ಟಗಳಿಂದ ಸುತ್ತುವರಿದಿದೆ. ಈ ಬೆಟ್ಟಗಳಿಂದಾಗಿ, ಕೋಡುರುಪಾಕದಲ್ಲಿ ಸೂರ್ಯೋದಯ ತಡವಾಗಿ ಮತ್ತು ಸೂರ್ಯಾಸ್ತವು ಬೇಗನೆ ಆಗುತ್ತದೆ. ಬೆಟ್ಟಗಳ ನೆರಳು ಗ್ರಾಮವನ್ನು ಕತ್ತಲೆಯಾಗಿ ಕಾಣುವಂತೆ ಮಾಡುತ್ತದೆ.
ಪೂರ್ವ ದಿಕ್ಕಿನಲ್ಲಿರುವ ಗೊಲ್ಲಗುಟ್ಟ ಬೆಟ್ಟವು ಉದಯಿಸುತ್ತಿರುವ ಸೂರ್ಯನಿಗೆ ಗೋಡೆಯಾಗುವುದರಿಂದ, ಸೂರ್ಯನ ಬೆಳಕು ತಡವಾಗಿ ಈ ಗ್ರಾಮವನ್ನು ತಲುಪುತ್ತದೆ. ಇತರ ಸ್ಥಳಗಳಿಗೆ ಹೋಲಿಸಿದರೆ ಅರವತ್ತು ನಿಮಿಷಗಳ ವಿಳಂಬದ ನಂತರ ಸೂರ್ಯನ ಕಿರಣಗಳು ಹಳ್ಳಿಯ ಮೇಲೆ ಬೀಳುತ್ತವೆ. ಸಂಜೆಯ ಹೊತ್ತಿಗೆ ರಂಗನಾಯಕಕುಲ ಬೆಟ್ಟದ ಹಿಂದೆ ಸೂರ್ಯ ಅಡಗಿಕೊಳ್ಳುವುದರಿಂದ, ಸಂಜೆ 4 ಗಂಟೆಗೆ ಕತ್ತಲೆ ಗ್ರಾಮವನ್ನು ಆವರಿಸುತ್ತದೆ. ಹಳ್ಳಿಯ ಪ್ರತಿಯೊಂದು ಮನೆ ಮತ್ತು ಬೀದಿಗಳಲ್ಲಿ ಸಂಜೆ 4 ಗಂಟೆಗೆ ದೀಪಗಳನ್ನು ಆನ್ ಮಾಡಬೇಕು. ತಜ್ಞರ ಪ್ರಕಾರ, ಬೆಳಕಿನ ಪ್ರತಿಫಲನ ಮತ್ತು ವಕ್ರೀಭವನವು ಗ್ರಾಮದಲ್ಲಿನ ಅಸಾಮಾನ್ಯ ಹವಾಮಾನ ಪರಿಸ್ಥಿತಿಗಳ ಹಿಂದಿನ ಪ್ರಮುಖ ಕಾರಣಗಳಾಗಿವೆ.
ಹೊಸಬರನ್ನು ಅಚ್ಚರಿಪಡಿಸುವ ಗ್ರಾಮ
ಕೋಡುರುಪಾಕ ಗ್ರಾಮಕ್ಕೆ ಹೊಸದಾಗಿ ಅಂದರೆ ಪ್ರವಾಸಿಗರಾಗಿ ಬಂದವರಿಗೆ ಅಚ್ಚರಿಯಾಗುವುದಂತೂ ಖಂಡಿತ. ಸಂಜೆ ಕೋಡುರುಪಾಕ ತಲುಪುವವರಲ್ಲಿ ಹಲವರು ಗೊಂದಲಕ್ಕೊಳಗಾಗುತ್ತಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಸಂಜೆ ಬೇರೆ ಗ್ರಾಮದಿಂದ ಹೊರಟವರು ಒಂದು ಗಂಟೆಯೊಳಗೆ ಕೊಟ್ಟೂರುಪಾಕ ತಲುಪಿದರೂ ಇಲ್ಲಿ ಕತ್ತಲಾಗಿರುವುದನ್ನು ಕಂಡು ಆತಂಕಕ್ಕೊಳಗಾಗುತ್ತಾರೆ.

ದೇವರೇ ಇಲ್ಲದ ದೇವಾಲಯ
ಕೊಡುರುಪಾಕ ಗ್ರಾಮದ ಮತ್ತೊಂದು ವಿಶೇಷವೆಂದರೆ ರಂಗನಾಯಕಕುಲ ಬೆಟ್ಟದ ಕೆಳಗೆ ನಿರ್ಮಿಸಲಾದ ದೇವಾಲಯ. ಈ ದೇವಾಲಯದಲ್ಲಿ ದೇವರ ವಿಗ್ರಹವಿಲ್ಲ. ಈ ದೇವಾಲಯದಲ್ಲಿ ದೇವರು ವರ್ಷಕ್ಕೊಮ್ಮೆ ಮಾತ್ರ ಕಾಣಿಸಿಕೊಳ್ಳುತ್ತಾನೆ. ದಸರಾ ಹಬ್ಬದ ಸಮಯದಲ್ಲಿ ನಡೆಯುವ ಆಚರಣೆಗಳಿಗಾಗಿ ಮಾತ್ರ, ದೇವರ ನಂಬುಲಾದ್ರಿ ನರಸಿಂಹ ಸ್ವಾಮಿಯನ್ನು ದೇವುನಿಪಲ್ಲಿಯಿಂದ ಇಲ್ಲಿಗೆ ಕರೆತಂದು ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಗ್ರಾಮಸ್ಥರು ಸ್ವಾಮಿಯನ್ನು ರಥಯಾತ್ರೆಯಲ್ಲಿ ಕರೆತರುತ್ತಾರೆ ಮತ್ತು ಈ ದೇವಾಲಯದಲ್ಲಿ ಒಂದು ದಿನ ಆಚರಿಸಿದ ನಂತರ, ದೇವರ ಮೂರ್ತಿಯನ್ನು ಮತ್ತೆ ದೇವುನಿಪಲ್ಲಿಗೆ ಕರೆದೊಯ್ಯುತ್ತಾರೆ. ವಿಜಯದಶಮಿಯಂದು, ಗ್ರಾಮಸ್ಥರು ನಂಬುಲಾದ್ರಿ ಸ್ವಾಮಿಗೆ ಬಹಳ ವೈಭವದಿಂದ ಪೂಜೆ ಸಲ್ಲಿಸುವುದು ಮತ್ತು ತಮ್ಮ ಭಕ್ತಿಯನ್ನು ತೋರಿಸುವುದು ತಲೆಮಾರುಗಳಿಂದ ಬಂದಿರುವ ಸಂಪ್ರದಾಯವಾಗಿದೆ.