• ರೂಪಾ ಗುರುರಾಜ್‌

ಮೇಘಾಲಯದ ಪ್ರವಾಸ ಅಂದರೆ ಸ್ವರ್ಗ ಸಮಾನವಾದ ಪ್ರಕೃತಿಯ ನಡುವೆ ಒಂದಾಗುತ್ತಾ ನಮ್ಮನ್ನು ನಾವು ಕಂಡುಕೊಳ್ಳುವ ಒಂದು ಚಾರಣ. ಶಿಲ್ಲಾಂಗ್ ಪೀಕ್, ಲೈಟ್ಲಂ ಕ್ಯಾನನ್, ಎಲಿಫೆಂಟ್ ಫಾಲ್ಸ್ಗಳನ್ನು ಕಾಣುತ್ತಾ ಹೋದಂತೆ ನಮಗಿದರ ಅರಿವಾಗುತ್ತಾ ಹೋಯಿತು. ಅಲ್ಲಿಯವರೆಗೆ ನಮ್ಮ ಕಾರ್ ಡ್ರೈವರ್ ಜತೆಗೆ ಮೇಘಾಲಯದ ಸಂಸ್ಕೃತಿ, ಕಲೆ, ಜೀವನ ಪದ್ಧತಿ ಇವುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಮ್ಮದು. ನಮ್ಮ ಪ್ರಶ್ನೆಗಳ ಸುರಿಮಳೆಗೆ ಅವರು ಬಹಳ ಆತ್ಮೀಯವಾಗಿ ಅನೇಕ ವಿಷಯಗಳನ್ನು ಹಂಚಿಕೊಂಡರು. ಅವರು ಹಂಚಿಕೊಂಡ ಒಂದೊಂದು ವಿಚಾರವೂ ನಮಗೆ ಆಶ್ಚರ್ಯದ ಜತೆಗೆ ಈ ಮಣ್ಣಿನ ಮೇಲಿನ ಗೌರವವನ್ನು ಹೆಚ್ಚಿಸಿತು.

ಇದನ್ನೂ ಓದಿ: ಆಲಯ....ಮೇಘಾಲಯ

ಮಾತೃ ಪ್ರಧಾನ ಸಂಸ್ಕೃತಿ

ನಾವೆಲ್ಲರೂ ಸಾಮಾನ್ಯವಾಗಿ ಪಿತೃ ಪ್ರಧಾನ ಸಮಾಜವನ್ನು ನೋಡಿ ಬೆಳೆದವರು. ನಮ್ಮ ಕರಾವಳಿ ಭಾಗದ ಹಳೆಯ 'ಅಳಿಯ ಸಂತಾನ' ಪರಂಪರೆ ಅಥವಾ ಕೇರಳದ 'ಮರುಮಕ್ಕತ್ತಾಯಂ' ಪದ್ಧತಿಯನ್ನು ನೆನಪಿಸುವ, ಮಾತೃ ಪ್ರಧಾನ ಸಂಸ್ಕೃತಿ ಇಂದಿಗೂ ಮೇಘಾಲಯದಲ್ಲಿ ಜೀವಂತವಾಗಿದೆ. ಅದೇ ಕಾರಣಕ್ಕೆ ಅಲ್ಲಿರುವ ಎಲ್ಲಾ ಅಂಗಡಿ ಮುಂಗಟ್ಟುಗಳಲ್ಲಿ ಹೆಣ್ಣು ಮಕ್ಕಳೇ ವ್ಯಾಪಾರ ಮಾಡುತ್ತಿರುವುದನ್ನೂ ನಾವು ನೋಡಿದೆವು.

ಇಲ್ಲಿ ತಾಯಿಯೇ ಕುಟುಂಬದ ಸರ್ವೋಚ್ಚ ನಾಯಕಿ. ಕೌಟುಂಬಿಕ ವಿಷಯವಿರಲಿ, ಧಾರ್ಮಿಕ ಆಚರಣೆಯಿರಲಿ ಅಮ್ಮನ ತೀರ್ಮಾನವೇ ಅಂತಿಮ. ನಮಗೆ ಮತ್ತೊಂದು ಅಚ್ಚರಿ ಕಾದಿತ್ತು; ಇಲ್ಲಿ ಮದುವೆಯಾದ ಮೇಲೆ ಹುಡುಗಿ ಗಂಡನ ಮನೆಗೆ ಹೋಗುವುದಿಲ್ಲ, ಬದಲಿಗೆ ಹುಡುಗನೇ ಹೆಂಡತಿಯ ಮನೆಗೆ ’ಮನೆ ಅಳಿಯ’ನಾಗಿ ಬರುತ್ತಾನೆ! ಅಷ್ಟೇ ಅಲ್ಲ, ಮಕ್ಕಳಿಗೆ ತಂದೆಯ ಉಪನಾಮ ಸಿಗುವುದಿಲ್ಲ. ತಾಯಿಯ ಮನೆತನದ ಹೆಸರೇ ಮಕ್ಕಳ ಗುರುತಾಗುತ್ತದೆ.

ಮೇಘಾಲಯದಲ್ಲಿ ಹೆಣ್ಣುಮಕ್ಕಳಿಗೆ ಯಾವುದೇ ರೀತಿಯ ಕಟ್ಟುನಿಟ್ಟಿನ 'ಡ್ರೆಸ್ ಕೋಡ್' ಹೇರಲಾಗುವುದಿಲ್ಲ; ಸಾಂಪ್ರದಾಯಿಕ 'ಜೈನ್ಸೆಮ್' ಅಥವಾ 'ಧಾರಾ' ಉಡುಪುಗಳ ಜತೆಗೆ ತಮಗೆ ಇಷ್ಟಬಂದ ಆಧುನಿಕ ಉಡುಪುಗಳನ್ನು ಧರಿಸುವ ಸಂಪೂರ್ಣ ಸ್ವಾತಂತ್ರ್ಯ ಅವರಿಗಿದೆ. ಅದೇ ರೀತಿ ಇಲ್ಲಿ ಪೋಷಕರು ನಿಗದಿಪಡಿಸುವ ಸಾಂಪ್ರದಾಯಿಕ 'ಅರೇಂಜ್ಡ್ ಮ್ಯಾರೇಜ್' ಪದ್ಧತಿ ಇಲ್ಲವೇ ಇಲ್ಲ ಎನ್ನಬಹುದು. ಯುವಕ-ಯುವತಿಯರು ಪರಸ್ಪರ ಇಷ್ಟಪಟ್ಟು, ತಮ್ಮ ಸಂಗಾತಿಯನ್ನು ತಾವೇ ಸ್ವತಂತ್ರವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಬುಡಕಟ್ಟು ಸಮುದಾಯದ ಹಿನ್ನೆಲೆ ಇರುವುದರಿಂದ ಈ ರೀತಿ ಇರಬಹುದು ಅನಿಸಿತು. ವರದಕ್ಷಿಣೆಯಂಥ ಪಿಡುಗುಗಳಿಲ್ಲದ ಇಲ್ಲಿನ ಮದುವೆ ಪ್ರಕ್ರಿಯೆಗಳು ಅತ್ಯಂತ ಸರಳವಾಗಿದ್ದು, ದಾಂಪತ್ಯದಲ್ಲಿ ಹೊಂದಾಣಿಕೆ ಬಾರದೆ ಹೋದರೆ ವಿಚ್ಛೇದನ ಪಡೆಯುವುದಕ್ಕಾಗಲಿ ಅಥವಾ ಮಹಿಳೆಯರು ಮರುಮದುವೆಯಾಗುವುದಕ್ಕಾಗಲಿ ಸಮಾಜದಲ್ಲಿ ಮುಕ್ತ ಅವಕಾಶವಿದೆ.

ಮೇಘಾಲಯದ ಮೂರು ಸ್ತಂಭಗಳು

ಮೇಘಾಲಯದ ಒಟ್ಟು ಜನಸಂಖ್ಯೆಯ ಪ್ರಧಾನ ಶಕ್ತಿಯಾಗಿ ನಿಂತಿರುವುದು ಇಲ್ಲಿನ ಮೂರು ಪ್ರಮುಖ ಬುಡಕಟ್ಟು ಸಮುದಾಯಗಳು. ಮಧ್ಯ ಮೇಘಾಲಯದ ಸುಂದರ ಬೆಟ್ಟಗಳಲ್ಲಿ ವಾಸಿಸುವ, ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಖಾಸಿ ಸಮುದಾಯ; ಪಶ್ಚಿಮ ಭಾಗದ, ವಿಭಿನ್ನ ಭಾಷೆ-ಸಂಸ್ಕೃತಿಯ ‘ಗಾರೋ’ ಜನರು; ಪೂರ್ವ ಭಾಗದ ಜೈಂತಿಯಾ ಬೆಟ್ಟಗಳಲ್ಲಿ ತಮ್ಮದೇ ಆದ ಭವ್ಯ ಐತಿಹಾಸಿಕ ಹಿನ್ನೆಲೆ ಕಾಯ್ದುಕೊಂಡಿರುವ ‘ಜೈಂತಿಯಾ’ ಸಮುದಾಯ. ಈ ಮೂರೂ ಪಂಗಡಗಳ ಭಾಷೆ ಬೇರೆಯಾಗಿದ್ದರೂ, ಇವರನ್ನು ಬೆಸೆಯುವ ಅಂಶವೇ 'ಮಾತೃಪ್ರಧಾನ ವ್ಯವಸ್ಥೆ'.

Untitled design (2)

ಪ್ರಕೃತಿಯ ನಂಬಿದ ಬದುಕು

ಕೃಷಿ ಇಲ್ಲಿನ ಜನರ ಜೀವಾಳ. ಕಡಿದಾದ ಪರ್ವತಗಳ ಇಳಿಜಾರು ಭೂಮಿಯಲ್ಲಿ 'ಝೂಮ್' ಎನ್ನುವ ಮೆಟ್ಟಿಲು ಜಮೀನು ಪದ್ಧತಿಯಲ್ಲಿ ಬೇಸಾಯ ಮಾಡುತ್ತಾರೆ. ಭತ್ತ, ಜೋಳದೊಂದಿಗೆ ಜಗತ್ತಿನಲ್ಲೇ ಅತಿ ಹೆಚ್ಚು ಖಾರವಿರುವ 'ಭೂತ್ ಜೊಲೋಕಿಯಾ' ಮೆಣಸಿನಕಾಯಿಯನ್ನು ಇವರು ಬೆಳೆಯುತ್ತಾರೆ. ದಾರಿಯುದ್ದಕ್ಕೂ ಕಣ್ಣಿಗೆ ಬೀಳುವ ಕಿತ್ತಳೆ, ಅನಾನಸ್, ಅಡಿಕೆ ಮತ್ತು ಬಿರಿಯಾನಿ ಎಲೆ ತೋಟಗಳು ಇವರ ಆರ್ಥಿಕತೆಯ ಬೆನ್ನೆಲುಬು. ಇತ್ತೀಚಿನ ದಿನಗಳಲ್ಲಿ ಪ್ರಕೃತಿಯನ್ನು ಹಾಳುಮಾಡದೆ ಹೋಮ್‌ಸ್ಟೇ ಮಾಡಿಕೊಂಡು ಮತ್ತು ಗೈಡ್‌ಗಳಾಗಿ ಪ್ರವಾಸೋದ್ಯಮವನ್ನೇ ಬದುಕಾಗಿಸಿಕೊಂಡಿರುವುದನ್ನೂ ಕಾಣಬಹುದು.

10:10:80 ನಿಯಮ

ಇಲ್ಲಿನ ಆಸ್ತಿ ಹಂಚಿಕೆಯ ಸೂತ್ರ ಅತ್ಯಂತ ವಿಶಿಷ್ಟವಾದದ್ದು. ಗಂಡುಮಕ್ಕಳಿಗೆ ಇಲ್ಲಿ ಆಸ್ತಿಯ ಹಕ್ಕಿರುವುದಿಲ್ಲ. ಅದು ಕೇವಲ ಹೆಣ್ಣುಮಕ್ಕಳಿಗೆ ಮಾತ್ರ ಹಂಚಿಕೆಯಾಗುತ್ತದೆ. ಅದಕ್ಕಿರುವ ಸೂತ್ರವೇ 10:10:80 ನಿಯಮ.

ಮನೆಯ ಹಿರಿಯ ಹೆಣ್ಣುಮಕ್ಕಳಿಗೆ ತಲಾ ಶೇಕಡಾ 10ರಷ್ಟು ಆಸ್ತಿ ಸಿಕ್ಕರೆ, ಮನೆಯ ಕಿರಿಯ ಮಗಳಿಗೆ ಸಿಂಹಪಾಲು, ಅಂದರೆ ಶೇಕಡಾ 80ರಷ್ಟು ಆಸ್ತಿ ಸಿಗುತ್ತದೆ. ಆದರೆ ಈ ಆಸ್ತಿ ಕೇವಲ ಸೌಲಭ್ಯವಲ್ಲ, ಅದೊಂದು ದೊಡ್ಡ ಜವಾಬ್ದಾರಿ. ವಯಸ್ಸಾದ ಪೋಷಕರನ್ನು ಕೊನೆಯವರೆಗೂ ನೋಡಿಕೊಳ್ಳುವುದು. ಅವಿವಾಹಿತ ಒಡಹುಟ್ಟಿದವರ ಹೊಣೆ ಹೊರುವುದು. ಮನೆತನದ ಧಾರ್ಮಿಕ ಆಚರಣೆಗಳನ್ನು ಮುನ್ನಡೆಸುವುದು ಸಹ ಆ ಕಿರಿಯ ಮಗಳ ಕರ್ತವ್ಯ.

ಮಣ್ಣಿನ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ

ಹಣವಿದ್ದರೆ ಜಗತ್ತಿನಲ್ಲಿ ಏನನ್ನು ಬೇಕಾದರೂ ಕೊಳ್ಳಬಹುದು ಎಂಬ ಭ್ರಮೆಗೆ ಇಲ್ಲಿ ಜಾಗವಿಲ್ಲ. ತಮ್ಮ ಪಾರಂಪರಿಕ ಭೂಮಿಯನ್ನು ಅಥವಾ ಆಸ್ತಿಯನ್ನು ಯಾವುದೇ ಕಾರಣಕ್ಕೂ ಸಮುದಾಯದ ಹೊರಗಿನವರಿಗೆ ಮಾರಾಟ ಮಾಡುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮ ಇಲ್ಲಿದೆ. ಭಾರತೀಯ ಸಂವಿಧಾನದ 6ನೆಯ ಅನುಸೂಚಿಯ ಅಡಿಯಲ್ಲಿ ಇಲ್ಲಿನ ಬುಡಕಟ್ಟು ಮಂಡಳಿಗಳಿಗೆ ಸ್ವಾಯತ್ತತೆ ಇದೆ. ಹಾಗಾಗಿ ಹೊರಗಿನವರು ಇಲ್ಲಿ ಜಮೀನು ಖರೀದಿಸುವುದು ಕಾನೂನುಬದ್ಧವಾಗಿ ನಿಷೇಧಿಸಲ್ಪಟ್ಟಿದೆ. ಕಾರ್ಪೊರೇಟ್ ಕಣ್ಣುಗಳಿಂದ ಮತ್ತು ಆಧುನಿಕತೆಯ ಆಕ್ರಮಣದಿಂದ ತಮ್ಮ ಕಾಡು, ಕಣಿವೆಗಳನ್ನು ರಕ್ಷಿಸಿಕೊಳ್ಳಲು ಇವರು ಮಾಡಿಕೊಂಡ ರಕ್ಷಾ ಕವಚವಿದು.

ಇಷ್ಟೆಲ್ಲಾ ತಿಳಿದುಕೊಳ್ಳುತ್ತಾ ಸಾಗಿದಾಗ ಈ ನೆಲದ ಬಗ್ಗೆ ಅದೊಂದು ರೀತಿಯ ಹೆಮ್ಮೆ. ಅದಿರಲಿ ಈ ಪ್ರವಾಸಕ್ಕೆ ಎಲ್ಲಕ್ಕಿಂತ ಮುಖ್ಯವಾಗಿ ನಾವು ಮಾನಸಿಕ ಮತ್ತು ದೈಹಿಕವಾಗಿ ತಯಾರಾಗಿದ್ದರೆ ಒಳ್ಳೆಯದು. ಪ್ರತಿ ಮೈಲಿಗೆ ಒಂದು ಸುಂದರವಾದ ನೀರಿನ ಜಲಪಾತ, ಪರ್ವತ ಶ್ರೇಣಿಗಳ ಆಚೆ ಈಚೆ ಇಣುಕುತ್ತಿರುತ್ತದೆ. ದೂರದಿಂದ ನೋಡಿ ಕಣ್ಣು ತುಂಬಿಕೊಳ್ಳುವುದು ಅಷ್ಟೇ ಅಲ್ಲ ಅದರ ನಿಜವಾದ ಅನುಭವ ಪಡೆಯಲು ಜಲಪಾತಗಳ ಹತ್ತಿರಕ್ಕೆ ಮೆಟ್ಟಿಲುಗಳ ಮೂಲಕ ಇಳಿದು ಹೋಗುವ ಇಲ್ಲವೇ ಬೆಟ್ಟಗಳನ್ನು ಹತ್ತಿ ಸಾಗುವ ಸೌಕರ್ಯಗಳನ್ನು ಪ್ರವಾಸಿಗರಿಗೆ ಇವರು ಮಾಡಿದ್ದಾರೆ. ನೂರಾರು ಕೆಲವೊಮ್ಮೆ ಸಾವಿರಾರು ಮೆಟ್ಟಿಲುಗಳನ್ನು ಇಳಿಯುವ, ಮತ್ತೆ ಅಷ್ಟೇ ಉತ್ಸಾಹದಿಂದ ಏರುವ ಈ ಹಾದಿ ನಮ್ಮ ತಾಳ್ಮೆ ಮತ್ತು ದೈಹಿಕ ಸಾಮರ್ಥ್ಯಕ್ಕೆ ಒಡ್ಡಿಕೊಳ್ಳುವ ದೊಡ್ಡ ಪರೀಕ್ಷೆ.

ಶಿಲ್ಲಾಂಗ್‌ನ ಎಲಿಫೆಂಟ್ ಫಾಲ್ಸ್‌ನ ಸೌಂದರ್ಯ ಸವಿಯುತ್ತಾ, ಮುಂದೆ ಚಿರಾಪುಂಜಿಯ (ಸೋಹ್ರಾ) ಪ್ರಸಿದ್ಧ ನೋಹ್ಕಾಲಿಕೈ ಜಲಪಾತ ಹೀಗೆ ಅದೆಷ್ಟು ಚಿಕ್ಕ ಪುಟ್ಟ ಜಲಪಾತಗಳನ್ನು ನೋಡಿದೆವೋ ಲೆಕ್ಕವೇ ಇಲ್ಲ. ಪ್ರಪಾತಕ್ಕೆ ಧುಮುಕುವ ಆ ನೀರಿನ ವೇಗ ಮತ್ತು ಅಲ್ಲಿ ಸೃಷ್ಟಿಯಾಗುವ ಮಂಜಿನ ಮುಸುಕು, ಪ್ರಕೃತಿಯ ಮುಂದೆ ನಾವೆಷ್ಟು ಚಿಕ್ಕವರು ಎಂದು ಮತ್ತೆ ಮತ್ತೆ ಮನವರಿಕೆ ಮಾಡಿ ಕೊಡುತ್ತಿತ್ತು.

Untitled design

ಜೀವಂತ ಬೇರುಗಳ ಅದ್ಭುತ ಲೋಕ

ಚಿರಾಪುಂಜಿಯ ಪ್ರವಾಸ ಪೂರ್ಣವಾಗುವುದು ಅಲ್ಲಿನ ಲಿವಿಂಗ್ ರೂಟ್ ಬ್ರಿಡ್ಜ್‌ಗಳನ್ನು ನೋಡಿದಾಗಲೇ. ಮನುಷ್ಯನ ಬುದ್ಧಿವಂತಿಕೆ ಮತ್ತು ಪ್ರಕೃತಿಯ ಸಹಯೋಗಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಸಿಗಲಿಕ್ಕಿಲ್ಲ. ರಬ್ಬರ್ ಮರಗಳ ಬೇರುಗಳನ್ನು ಒಂದಕ್ಕೊಂದು ಹೆಣೆದು ಮಾಡಿರುವ ಈ ನೈಸರ್ಗಿಕ ಸೇತುವೆಗಳನ್ನು ತಲುಪಲು ನಾವು ದಾಟಬೇಕಾದ ಮೆಟ್ಟಿಲುಗಳು ನೂರಾರಲ್ಲ, ಸಾವಿರಾರು! ಕಾಡಿನ ನಡುವಿನ ಆ ನಿಗೂಢ ಹಾದಿಯಲ್ಲಿ ಸರಿಸುಮಾರು ಏಳು ಸಾವಿರ ಮೆಟ್ಟಿಲುಗಳ ದಾರಿ. ಆದರೆ ಬೆವರು ಸುರಿಸುತ್ತಾ, ಅಲ್ಲಲ್ಲಿ ನಿಂತು ಸುಧಾರಿಸಿಕೊಳ್ಳುತ್ತಾ ಇದನ್ನು ಮುಗಿಸಿದಾಗ ಸಿಗುವ ಆನಂದ ಪದಗಳಿಗೆ ನಿಲುಕುವುದಿಲ್ಲ.

ಮೇಘಾಲಯ ಮೋಡಗಳ ತವರು. ನಾವು ರಸ್ತೆಯಲ್ಲಿ ಸಾಗುತ್ತಿರುವಾಗ ದಿಢೀರನೆ ಮಂಜು ಬಂದು ನಮ್ಮನ್ನು ಆವರಿಸಿಕೊಳ್ಳುತ್ತದೆ. ಮರುಕ್ಷಣದಲ್ಲೇ ರಣಬಿಸಿಲು. ಆಮೇಲೆ ಸಣ್ಣದಾಗಿ ಚಿಮುಕಿಸುವ ಮಳೆಹನಿಗಳು! ಪ್ರಕೃತಿಯ ಈ ಕಣ್ಣಾಮುಚ್ಚಾಲೆ ಆಟ ನಮ್ಮ ಇಡೀ ಪ್ರವಾಸದ ಆಯಾಸವನ್ನು ಮರೆಸಿಬಿಡುತ್ತದೆ. ಅಲ್ಲಿನ ಪ್ರತಿ ಹಳ್ಳಿಯೂ ಸ್ವಚ್ಛ, ಸುಂದರ. ಪ್ರತಿ ಮನೆಯ ಮುಂದೆ ಗುಲಾಬಿ ಹೂಗಳ ಗೊಂಚಲುಗಳು ಮತ್ತೆ ಹಲವಾರು ಬಗೆಯ ಬಣ್ಣ ಬಣ್ಣದ ಹೂವುಗಳು. ಆ ಮನೆಗಳ ಬಣ್ಣಗಳು, ಮನೆಯ ಮುಂದಿನ ನೂರಾರು ಬಗೆಯ ಹೂವುಗಳು ಪ್ರತಿ ರಸ್ತೆಯೂ ಸುಂದರವಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಇಲ್ಲಿನ ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ 'ಮಾವ್ಲಿನ್ನಾಂಗ್' ಅನ್ನು ಅದೆಷ್ಟು ಅಚ್ಚುಕಟ್ಟಾಗಿ ಕಟ್ಟಿಕೊಂಡಿದ್ದಾರೆ, ನಿರ್ವಹಿಸುತ್ತಿದ್ದಾರೆ ಎಂದರೆ ನಮ್ಮ ನವರಾತ್ರಿ ಬೊಂಬೆಗಳ ಊರಿನಂತಿತ್ತು. ಡಾವ್ಕಿ ನದಿಯ ಸ್ಪಟಿಕದಂಥ ತಿಳಿ ನೀರಿನಲ್ಲಿ ದೋಣಿಯಲ್ಲಿ ಸಂಚರಿಸುವ ಸುಂದರ ಅನುಭವಕ್ಕಾಗಿ ನಾವು ಡಾವ್ಕಿ ತಲುಪಿದೆವು. ಆದರೆ ಹೆಚ್ಚು ಮಳೆಯಾಗಿ ನದಿಯ ನೀರೆಲ್ಲ ಕಲಸಿ ಹೋದಂತಿತ್ತು. ಆದರೂ ಅಲ್ಲಿನ ದೋಣಿ ವಿಹಾರದ ಅನುಭವ ಮನಸಿಗೆ ಮುದ ನೀಡಿತು.

ಹತ್ತು ದಿನಗಳ ಪ್ರವಾಸ ಪ್ರತಿ ದಿನವೂ ಪ್ರತಿ ಸ್ಥಳವೂ ವಿಶಿಷ್ಟ ಅನಿಸದೆ ಇರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸ್ವರ್ಗ ಸಮಾನವಾದ ಪ್ರಕೃತಿಯ ಮಡಿಲು…

ದಾರಿ ಹೇಗೆ?

ಗುವಾಹಟಿಯ ಲೋಕಪ್ರಿಯ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಅಲ್ಲಿಂದ ಸ್ಥಳೀಯ ವಾಹನಗಳ ಮೂಲಕ ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ಗೆ ತಲುಪಬಹುದು.