Tuesday, March 31, 2026
Tuesday, March 31, 2026

ಸರ್ಕಾರಿ ಅಧಿಕಾರಿ ಎರಡು ದಶಕಗಳ ಪ್ರಯತ್ನ ಈ ಶಿಲ್ಪ ಉದ್ಯಾನ

ಚಂಡೀಗಢ ರಾಕ್ ಗಾರ್ಡನ್… ಇದು ಸರ್ಕಾರಿ ಅಧಿಕಾರಿಯೊಬ್ಬನ ಕನಸಿನ ಕೂಸು.18 ವರ್ಷಗಳ ಕಾಲ ಪ್ರಪಂಚಕ್ಕೆ ಪರಿಚಯಿಸದೇ ಸದಿಲ್ಲದೇ ನಿರ್ಮಾಣ ಮಾಡಿದ್ದ ಈ ಉದ್ಯಾನವು, ಬಳಕೆಗೆ ಯೋಗ್ಯವಲ್ಲದ ಗೃಹ ಹಾಗೂ ಕೈಗಾರಿಕೆಯ ತ್ಯಾಜ್ಯಗಳಿಂದ ನಿರ್ಮಾಣವಾದ ಮಾಯಾಲೋಕ. ಈ ವಿಭಿನ್ನ ಲೋಕವನ್ನು ಹುಟ್ಟುಹಾಕಿರುವ ನೇಕ್‌ ಚಂದ್‌ ಅವರ ಕುಸುರಿ ಕೆಲಸ, ವಿಶೇಷ ಚಿಂತನೆಗೆ ಇಂದಿಗೂ ಪ್ರವಾಸಿಗರು ಸಲಾಂ ಎನ್ನುತ್ತಾರೆ.

ಬೆಂಗಳೂರಿನ ಲಾಲ್‌ಬಾಗ್‌, ಮೈಸೂರಿನ ಬೃಂದಾವನ, ಊಟಿಯ ಬೊಟಾನಿಕಲ್‌ ಗಾರ್ಡನ್‌, ಮುಂಬೈನ ಹ್ಯಾಂಗಿಂಗ್‌ ಗಾರ್ಡನ್‌, ಆಗ್ರಾದ ತಾಜ್‌ ಮಹಲ್‌ ಗಾರ್ಡನ್‌ ಹೀಗೆ ರಾಜ್ಯ, ದೇಶದಲ್ಲಿ ಹೆಸರುಮಾಡಿರುವ ಸಾಕಷ್ಟು ಉದ್ಯಾನವನಗಳಿವೆ. ಆದರೂ ಚಂಡೀಗಢದ ಭೇಟಿಯ ವೇಳೆ ಹೋಗಿದ್ದ ರಾಕ್‌ ಗಾರ್ಡನ್‌ ಇವೆಲ್ಲದಕ್ಕೂ ವಿಭಿನ್ನವಾಗಿತ್ತು. ಅಷ್ಟಕ್ಕೂ ಗಾರ್ಡನ್‌ ಅನ್ನುವುದಕ್ಕೆ ಇಲ್ಲಿ ಹೂವು, ಗಿಡ, ಮರ ಬಳ್ಳಿಗಳ ಮೂಲಕ ಪ್ರವಾಸಿಗರನ್ನು ಸೆಳೆಯುವ ತಾಣವಲ್ಲ. ಬದಲಾಗಿ ಇಲ್ಲಿರುವುದು ಎಲೆಕ್ಟ್ರಾನಿಕ್‌ ತ್ಯಾಜ್ಯಗಳಿಂದ, ಬಳಕೆಗೆ ಯೋಗ್ಯವಲ್ಲದ ಅನೇಕ ವಸ್ತುಗಳಿಂದ ನಿರ್ಮಾಣವಾದ ವಿಶೇಷ ಶಿಲ್ಪಗಳು, ಗ್ರಾಮೀಣ ಭಾಗದ ಜನರ ಜೀವನಶೈಲಿಯನ್ನು ಪ್ರತಿಬಿಂಬಿಸುವ ಕಲಾಕೃತಿಗಳು, ಪಾರಂಪರಿಕವಾಗಿ ಬಳಸಲಾಗುತ್ತಿದ್ದ ಅನೇಕ ವಸ್ತುಗಳು, ಕುಟೀರಗಳು..

ಚಂಡೀಗಢದ ರಾಕ್ ಗಾರ್ಡನ್..ಇದು ಶಿಲ್ಪ ಉದ್ಯಾನ. ಚಂಡೀಘರ್‌ ನಗರದ ಹೃದಯಭಾಗದಲ್ಲಿ ಸೆಕ್ಟರ್‌ ಒಂದರಲ್ಲಿ ಸುಖ್ನಾ ಲೇಕ್ ಸಮೀಪದಲ್ಲೇ 40 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಹರಡಿ ನಿಂತಿರುವ ಈ ಕಲಾಕೃತಿಗಳ ಉದ್ಯಾನಕ್ಕೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಮಾಹಿತಿಯೊಂದಿಗೆ ಮನರಂಜನೆಯನ್ನೂ ಪಡೆಯುತ್ತಾರೆ. ಅಷ್ಟಕ್ಕೂ ಈ ಉದ್ಯಾನದಲ್ಲಿರುವ ವಿಶೇಷತೆಯೇನು ? ಎಲ್ಲ ಉದ್ಯಾನಗಳಿಂತ ಹೇಗೆ ಭಿನ್ನವಾಗಿದೆ ಎಂಬ ಪ್ರಶ್ನೆ ಮೂಡುವುದು ಸಹಜ.

ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ವಿಶೇಷ ಆತಿಥ್ಯಕೂಟ

ಮರುಬಳಕೆಯ ವಸ್ತುಗಳಿಂದ ಕಲಾಕೃತಿಗಳು

ಪ್ರಶಾಂತವಾದ ನೋಟವನ್ನು ನೀಡುವ ಈ ರಾಕ್‌ ಗಾರ್ಡನ್‌, ಕಲೆಯ ಜತೆಗೆ ಇತಿಹಾಸವನ್ನೂ ತಿಳಿಯುವ ವಿಶೇಷ ತಾಣ. ಈ ಉದ್ಯಾನದ ಒಳಗೆ ಹೆಜ್ಜೆ ಹಾಕುತ್ತಿದ್ದರೆ ಹಳೆಯ ಪಳೆಯುಳಿಕೆಗಳಿಂದ ತಯಾರಾದ ಸೃಜನಶೀಲ ಕಲಾಕೃತಿಗಳೇ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ. ಇದನ್ನು ಸಂಪೂರ್ಣವಾಗಿ ಮರುಬಳಕೆಯ ವಸ್ತುಗಳಾದ ಗಾಜಿನ ಬಳೆಗಳು, ಸೆರಾಮಿಕ್ ತುಂಡುಗಳು, ಟೈಲ್ಸ್, ಮುರಿದ ಎಲೆಕ್ಟ್ರಾನಿಕ್‌ ತ್ಯಾಜ್ಯದಂಥ ವಸ್ತುಗಳಿಂದ ರಚಿಸಲಾಗಿದೆ. ಈ ನಿರುಪಯೋಗಿ ಉತ್ಪನ್ನಗಳಿಂದ ಮಾನವನ ಆಕೃತಿಗಳು, ಪ್ರಾಣಿ-ಪಕ್ಷಿಗಳು ಮತ್ತು ಅಲಂಕಾರ ಯೋಗ್ಯ ಕಲಾಕೃತಿಗಳನ್ನು ನಿರ್ಮಿಸಲಾಗಿದ್ದು, ಇದು ಉದ್ಯಾನಕ್ಕೆ ಹೊಸ ರೂಪವನ್ನೇ ನೀಡಿದೆ.

Untitled design (21)

ನೇಕ್‌ ಚಂದ್ ಕುಂಚದಲ್ಲರಳಿದ ಶಿಲ್ಪಕಲೆ

ಚಂಡೀಗಢ ರಾಕ್‌ ಗಾರ್ಡನ್‌ ಹುಟ್ಟಿಕೊಂಡಿರುವ ಬಗೆ ನಿಜಕ್ಕೂ ಅಚ್ಚರಿಯೆನಿಸುತ್ತದೆ. ಈ ಉದ್ಯಾನಕ್ಕೆ ನೇಕ್ ಚಂದ್ ಅವರ ರಾಕ್ ಗಾರ್ಡನ್ ಎಂಬುದಾಗಿಯೂ ಕರೆಯುತ್ತಾರೆ. ಯಾಕೆಂದರೆ ಈ ಉದ್ಯಾನವನ್ನು ಹುಟ್ಟುಹಾಕಿದವರು ನೇಕ್ ಚಂದ್ ಎಂಬ ಸರ್ಕಾರಿ ಅಧಿಕಾರಿ. ರೋಡ್‌ ಇನ್ಸ್ಪೆಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದ ನೇಕ್ ಚಂದ್ ಅವರು, 1957 ರಲ್ಲಿ ಈ ಉದ್ಯಾನವನ್ನು ಪ್ರಾರಂಭಿಸಿದ್ದು, ತಮ್ಮ ಬಿಡುವಿನ ವೇಳೆಯಲ್ಲಿ ರಹಸ್ಯವಾಗಿ ನಿರ್ಮಾಣ ಮಾಡಿದ್ದರು. ಕೆಲಸದ ಸಮಯವನ್ನು ಹೊರತುಪಡಿಸಿ, ರಾತ್ರಿ, ಹಗಲೆನ್ನದೆ, ವಾರಾಂತ್ಯಗಳೆನ್ನದೆ, ಕಸದಿಂದ ರಸವನ್ನು ಹೀರಿ ವಿಶಿಷ್ಠವಾದ ಶಿಲ್ಪಗಳನ್ನು ನಿರ್ಮಿಸಿದರು. 12 ಎಕರೆಯಷ್ಟು ಸಂರಕ್ಷಿತ ಸರ್ಕಾರಿ ಭೂಮಿಯಲ್ಲಿ ನಿರ್ಮಿಸುತ್ತಿದ್ದರಿಂದ, ಪೂರ್ಣವಾಗುವವರೆಗೂ ಸರಕಾರ ಗಮನಕ್ಕೂ ತರದೆ ಸುಮಾರು 18 ವರ್ಷಗಳ ಕಾಲ ಗೌಪ್ಯವಾಗಿಯಿದರ ನಿರ್ಮಾಣದ ಕಾರ್ಯವನ್ನು ಮಾಡಿದ್ದರು.

40 ಎಕರೆ ಪ್ರದೇಶದಲ್ಲಿ ಶಿಲ್ಪೋದ್ಯಾನ

ಇಂದಿನ ಯುವ ಜನತೆಯಲ್ಲಿ ಕಲಾಸಕ್ತಿಯನ್ನು ಬೆಳೆಸುವುದು, ಗ್ರಾಮೀಣ ಕಲೆ, ಸಂಪ್ರದಾಯವನ್ನು ಬಿತ್ತುವ ಉದ್ದೇಶದೊಂದಿಗೆ ಚಿಕ್ಕದಾಗಿ ಪ್ರಾರಂಭಿಸಿದ್ದ ಈ ಉದ್ಯಾನದ ಯೋಜನೆ ದಿನಕಳೆದಂತೆ ವಿಸ್ತಾರಗೊಳ್ಳುತ್ತಾ ಬೃಹತ್‌ ರೂಪವನ್ನು ಪಡೆದುಕೊಂಡು, ಸುಮಾರು 40 ಎಕರೆಗಳಿಗೂ ಹೆಚ್ಚು ಪ್ರದೇಶದಲ್ಲಿ ಹರಡಿನಿಂತಿದೆ. ವಿಶೇಷವಾದ ಕಾರಿಡಾರ್‌ಗಳು, ಆಂಫಿಥಿಯೇಟರ್‌ಗಳು, ಕೃತಕ ಜಲಪಾತಗಳು ಹೀಗೆ ಹತ್ತು ಹಲವು ವಿಭಾಗಗಳನ್ನು ಒಳಗೊಂಡಿದೆ. ಗ್ರಾಮೀಣ ಜೀವನ ಮತ್ತು ಸಾಂಪ್ರದಾಯಿಕ ಕಥೆಗಳಿಂದ ಪ್ರೇರಿತವಾದ ನೇಕ್ ಚಂದ್ ಅವರ ಕಾಲ್ಪನಿಕ ಪ್ರಪಂಚವನ್ನು ಪ್ರತಿಬಿಂಬಿಸುವ ಶಿಲ್ಪಗಳಂತೂ ನೋಡುಗರನ್ನು ಮೋಡಿಮಾಡುತ್ತದೆ.

Untitled design (22)

ನೇಕ್ ಚಂದ್ ಅವರ ಈ ಪ್ರಯತ್ನಕ್ಕೆ ಸರಕಾರ ಪ್ರಾರಂಭದಲ್ಲಿ ವಿರೋಧ ವ್ಯಕ್ತಪಡಿಸಿದರೂ ನಂತರ ದಿನಗಳಲ್ಲಿ ಅವರನ್ನು ಗೌರವಿಸಿ, ಬೆಂಬಲವನ್ನೂ ನೀಡಿತ್ತು. ನೇಕ್ ಚಂದ್ ಅವರ ಸೃಷ್ಟಿ ಕಾನೂನುಬಾಹಿರವಾಗಿ ಮತ್ತು ರಹಸ್ಯವಾಗಿ ಪ್ರಾರಂಭವಾದರೂ, ಸರಕಾರ ಅಂತಿಮವಾಗಿ ಅದರ ಅದ್ಭುತ ಸಾಂಸ್ಕೃತಿಕ ಮೌಲ್ಯವನ್ನು ಗುರುತಿಸಿತು. ಸ್ಥಳವನ್ನು ಕೆಡವುವ ಬದಲು, ಅಧಿಕಾರಿಗಳು ಚಂದ್ ಅವರಿಗೆ ಅಧಿಕೃತ ಹಣಕಾಸು ಮತ್ತು ಕಾರ್ಮಿಕರ ತಂಡ ಸೇರಿದಂತೆ ಸಂಪೂರ್ಣ ಬೆಂಬಲವನ್ನು ನೀಡಿ, ಈ ಅದ್ಭುತವಾದ ಉದ್ಯಾನದ ವಿಸ್ತರಣೆಗೆ ನೆರವಾಗಿತ್ತು.

ಇತ್ತೀಚೆಗೆ, ರಸ್ತೆ ಅಗಲೀಕರಣ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸುವುದಕ್ಕಾಗಿ ರಾಕ್ ಗಾರ್ಡನ್‌ನ ಹೊರ ಗೋಡೆಯ ಒಂದು ಭಾಗವನ್ನು ಕೆಡವಲಾಗಿತ್ತು. ಆದರೆ ಚಂಡೀಗಢದ ಜನರು ಇದರ ವಿರುದ್ಧ ಧ್ವನಿಯೆತ್ತಿದ್ದರು. ಯಾಕೆಂದರೆ ಈ ಉದ್ಯಾನ ಕೇವಲ ಒಬ್ಬ ವ್ಯಕ್ತಿಯ ಉತ್ಸಾಹ ಮತ್ತು ಮಹತ್ವಾಕಾಂಕ್ಷೆಯಷ್ಟೇ ಅಲ್ಲದೆ ನಾಡಿನ ಸಂಸ್ಕೃತಿ, ಪರಂಪರೆಯ ಭಾಗವಾಗಿಯೂ ಗುರುತಿಸಿಕೊಂಡಿದೆ.

ಚಂಡೀಗಢಕ್ಕೆ ಭೇಟಿ ನೀಡದರೆ ಬರಿಯ ರಾಕ್‌ ಗಾರ್ಡನ್‌ ಸುತ್ತಾಡಿ ಬರುವುದಷ್ಟೇ ಅಲ್ಲದೆ, ಝಾಕಿರ್‌ ಹುಸೇನ್‌ ರೋಸ್‌ ಗಾರ್ಡನ್‌, ಸುಖ್ನಾ ಲೇಕ್‌ ಹಾಗೂ ವೈಲ್ಡ್‌ ಲೈಫ್‌ ಸ್ಯಾಂಚುರಿ, ಟಿಂಬರ್‌ ಟ್ರೈಲ್‌, ಟೆರೇಸ್ಡ್‌ ಗಾರ್ಡನ್‌, ಸೆಕ್ಟರ್‌ 17 ಮಾರ್ಕೆಟ್‌ ಸೇರಿದಂತೆ ಸಮೀಪದಲ್ಲೇ ಅನೇಕ ಪ್ರವಾಸಿ ತಾಣಗಳನ್ನೂ ನೋಡಿ ಬರಬಹುದು.

Untitled design (20)

ಸಂಪರ್ಕ ವ್ಯವಸ್ಥೆ

ವಿಮಾನದ ಮೂಲಕ

ಕೆಂಪೇಗೌಡ ವಿಮಾನ ನಿಲ್ದಾಣದಿಂದ ಚಂಡೀಗಢ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಇಂಡಿಗೋ, ಏರ್‌ ಇಂಡಿಯಾ, ಹಾಗೂ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ನೇರ ಸಂಪರ್ಕವನ್ನು ಕಲ್ಪಿಸಿದೆ. ವಿಮಾನ ನಿಲ್ದಾಣದಿಂದ ಸುಮಾರು 10-12 ಕಿಮೀ ದೂರದಲ್ಲಿರುವ ರಾಕ್‌ ಗಾರ್ಡನ್‌ಗೆ ಟ್ಯಾಕ್ಸಿ ಸೇವೆಯನ್ನು ಬಳಸಿಕೊಳ್ಳಬಹುದು.

ರೈಲಿನ ಮೂಲಕ

ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಚಂಡೀಗಢಕ್ಕೆ ರೈಲು ಸಂಪರ್ಕವಿದ್ದು, ಅಲ್ಲಿಂದ ಸುಮಾರು 7-8 ಕಿಮೀ ದೂರದಲ್ಲಿ ರಾಕ್‌ ಗಾರ್ಡನ್‌ ಇದೆ. ಟ್ಯಾಕ್ಸಿ, ಆಟೋ ಸೇವೆಗಳನ್ನು ಬಳಕೆ ಮಾಡಿಕೊಳ್ಳಬಹುದು.

ರಸ್ತೆಯ ಮೂಲಕ

ಚಂಡೀಗಢವು ಉತ್ತಮ ರಸ್ತೆ ಸಂಪರ್ಕಕ್ಕೂ ಹೆಸರುಮಾಡಿದೆ. ವಿಮಾನ, ರೈಲಿನ ಮೂಲಕ ದೆಹಲಿಗೆ ತಲುಪಿದರೆ ಅಲ್ಲಿಂದ ಬಸ್‌ ಸೇವೆಗಳನ್ನು ಉಪಯೋಗಿಸಿಕೊಳ್ಳಬಹುದು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ