ಎಡಕಲ್ಲು ಗುಡ್ಡದ ಮೇಲೆ
ಎಡಕಲ್ಲು ಗುಡ್ಡ ಕೇವಲ ಪ್ರೇಮಿಗಳ ತಾಣವಲ್ಲ, ಪ್ರಾಚ್ಯವಸ್ತು ಸಂಶೋಧನೆ ಮತ್ತು ಪ್ರಕೃತಿ ಪ್ರಿಯರಿಗೆ ಹೇಳಿಮಾಡಿಸಿದಂಥ ಪಾರಂಪಾರಿಕ ಸ್ಥಳ. ಈ ಗುಹೆಗಳು ಪ್ರಾಗೈತಿಹಾಸಿಕ ಹಿನ್ನೆಲೆಯಿಂದಲೂ ಹೆಸರುವಾಸಿ.
- ಸಿ.ಬಿ. ಶೈಲಾ ಜಯಕುಮಾರ್
ಕೇರಳ ಎಂದರೆ ಎಲ್ಲೆಡೆ ಹಸಿರು ಅರಣ್ಯ, ನಳನಳಿಸುವ ಕಾಫಿ ಮತ್ತು ಟೀ ತೋಟಗಳು, ಆಹ್ಲಾದಕರ ಜಲಧಾರೆ, ಚಾರಣಿಗರನ್ನು ಕೈಬೀಸಿ ಕರೆಯುವ ಬೆಟ್ಟಗುಡ್ಡಗಳು, ಇಂಥ ಕೇರಳದ ಪ್ರವಾಸವೇ ಮನಕ್ಕೆ ಮುದನೀಡುತ್ತದೆ. ನಾವು ಭೇಟಿನೀಡಿದ ಎಡಕಲ್ಲು ಗುಡ್ಡ ಕೇರಳ ರಾಜ್ಯದ ವಯನಾಡು ಜಿಲ್ಲೆಯ ಅಂಬಲ್ ವಾಯಲ್ ಬಳಿ ಅಂಬುಕುತ್ತಿ ಬೆಟ್ಟದಲ್ಲಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಕೇರಳ ಪ್ರವಾಸೋದ್ಯಮ ಇಲಾಖೆಯ ಉಸ್ತುವಾರಿಯಲ್ಲಿದೆ.
ಇದನ್ನೂ ಓದಿ: ರಾಮನಿಗಾಗಿ ಶಬರಿ ಕಾಯುತ್ತಿದ್ದ ಸ್ಥಳ
1890ರಲ್ಲಿ ಬ್ರಿಟಿಷ್ ಮಲಬಾರ್ ಪ್ರದೇಶದ ಪೊಲೀಸ್ ಅಧಿಕಾರಿಯಾಗಿದ್ದ ಫ್ರೆಡ್ ಫಾಸೆಟ್ ಎಂಬಾತ ಶಿಕಾರಿಗೆ ಬಂದಾಗ ಈ ಗುಹೆಗಳು ಕಾಣಿಸಿದವು. ಆತ ಅಲ್ಲಿನ ಕೆತ್ತನೆಗಳನ್ನು ಗಮನಿಸಿದ. ಆತನೆ ಇತ್ತ ಜಗತ್ತಿನ ದಿಟ್ಟಿಯನ್ನೂ ತಿರುಗಿಸಿದ.

ಎಡಕಲ್ ಗುಡ್ಡದ ಮಹತ್ವ
ಶ್ರೀ ರಾಮಚಂದ್ರನ ಮಕ್ಕಳಾದ ಲವಕುಶರು ಬಿಟ್ಟ ಬಾಣಗಳಿಂದ ಈ ಬೆಟ್ಟ ಸೀಳಿ ಗುಹೆಗಳಾದವು ಎಂಬ ನಂಬಿಕೆ ಜನರಲ್ಲಿದೆ.
ಸಮುದ್ರ ಮಟ್ಟದಿಂದ ಸುಮಾರು 3900 ಅಡಿ ಎತ್ತರದಲ್ಲಿ ಎಡಕಲ್ಲು ಗುಹೆಗಳಿದ್ದು, ಎರಡು ದೊಡ್ಡ ಕಲ್ಲುಬಂಡೆಗಳ ನಡುವಿನ ಸೀಳಿನಿಂದ ರಚನೆಯಾದಂತಿವೆ. ಮಲಯಾಳಂನಲ್ಲಿ ಎಡಕಲ್ಲು ಎಂದರೆ 'ಎರಡು ಬಂಡೆಗಳ ನಡುವೆ ಸಿಲುಕಿರುವ ಕಲ್ಲು' ಎಂಬ ಅರ್ಥವಿದೆ.
ಎಡಕಲ್ಲು ಗುಡ್ಡ ಕೇವಲ ಪ್ರೇಮಿಗಳ ತಾಣವಲ್ಲ, ಪ್ರಾಚ್ಯವಸ್ತು ಸಂಶೋಧನೆ ಮತ್ತು ಪ್ರಕೃತಿ ಪ್ರಿಯರಿಗೆ ಹೇಳಿಮಾಡಿಸಿದಂಥ ಪಾರಂಪಾರಿಕ ಸ್ಥಳ. ಈ ಗುಹೆಗಳು ಪ್ರಾಗೈತಿಹಾಸಿಕ ಹಿನ್ನೆಲೆಯಿಂದಲೂ ಹೆಸರುವಾಸಿಯಾಗಿವೆ. ಹಾಗಾಗಿ ಈ ಚಾರಣದ ದಾರಿಯುದ್ದಕ್ಕೂ ಪ್ರವಾಸಿಗರು, ಭದ್ರತಾ ಸಿಬ್ಬಂದಿ, ಸ್ವಚ್ಛತಾ ಕಾರ್ಯದವರು ಕಾಣಸಿಗುತ್ತಾರೆ. ಸಿಸಿಟಿವಿ ಕಣ್ಗಾವಲು ಸದಾ ಇದ್ದೇ ಇರುತ್ತದೆ.
ಗಟ್ಟಿಯಾಳುಗಳೇ ಬೇಕು
ಈ ಚಾರಣಕ್ಕೆ ದೈಹಿಕ ಸ್ಥಿರತೆ ತೀರಾ ಅಗತ್ಯ. ವಾಹನ ನಿಲ್ದಾಣದಿಂದ ಪ್ರವೇಶ ಕೌಂಟರ್ಗೆ ಏರಿ ಬರುವಷ್ಟರಲ್ಲಿ ಇನ್ನು ಎಷ್ಟು ದೂರ ಇದೆ? ಎಂದು ಹತ್ತಾರು ಸಲ ಕೆಳಗಿಳಿಯುತ್ತಿರುವ ಸಹಪ್ರಯಾಣಿಕರನ್ನು ಕೇಳುವಂತಾಗುತ್ತದೆ. ಸುಮಾರು ಒಂದರಿಂದ ಒಂದೂವರೆ ಕಿಮೀ ಏರುಮುಖದಲ್ಲಿ ನಡೆದು ಬೆಟ್ಟವನ್ನು ಹತ್ತಿ, ಕೊನೆಯಲ್ಲಿ ಗುಹೆಯ ಒಳಗೆ ಹೋಗಲು ಬಂಡೆಗಳ ನಡುವೆ ಮೆಟ್ಟಿಲುಗಳನ್ನು ಹತ್ತಬೇಕು. ಮೆಟ್ಟಿಲುಗಳು ಅತ್ಯಂತ ಎತ್ತರವಾಗಿದ್ದು ಹತ್ತುವಾಗ ಬೇಗ ದಣಿವಾಗುತ್ತದೆ. ಹಾಗಾಗಿ ಅಲ್ಲಲ್ಲಿ ವಿರಮಿಸಲು ಮರಗಳ ಕೆಳಗೆ ಚೆಂದ ವಿನ್ಯಾಸದ ಶಿಲಾ ಪೀಠಗಳಿವೆ. ಸುಮಾರು 350 ಮೆಟ್ಟಿಲುಗಳನ್ನು ಪ್ರಯಾಸದಿಂದ ಹತ್ತಬೇಕು. ಕೆಲವೊಮ್ಮೆ ಎರಡು ಕೈಗಳು- ಕಾಲುಗಳನ್ನು ಬಳಸಿಕೊಂಡು ಗುಡ್ಡ- ಬಂಡೆಗಳ ಇಕ್ಕಟ್ಟಾದ ದಾರಿಯಲ್ಲಿ ವಾನರನಂತೆ ಹತ್ತಿ, ಅಂತೂ ಬೆಟ್ಟದ ಅಗ್ರ ಭಾಗ ತಲುಪಿದಾಗ ಕಣ್ಮನಗಳಿಗೆ ನಿಲುಕುವ ನಿಸರ್ಗ ಸೌಂದರ್ಯ ಅಕ್ಷರಶಃ ಅಕ್ಷರಗಳಿಗೆ ಮೀರಿದ್ದು! ಎತ್ತರದಲ್ಲಿ ನಿಂತು ಕೆಳಗೆ ಕಿರಿದಾಗಿ ಕಾಣುವ ಭೂಪ್ರದೇಶ, ಅರಣ್ಯ ಎಲ್ಲವೂ ಸೊಗಸೇ!

ಗಾಳಿ ಬೆಳಕಿನ ವ್ಯವಸ್ಥೆ
ಮೇಲಿನ ಗುಹೆಯ ಪ್ರವೇಶದ್ವಾರದ ಬಳಿ ಕಿರಿದಾದ ಬಂಡೆಗಳ ನಡುವೆ ಇರುವ ಕಬ್ಬಿಣದ ಸೋಪಾನಗಳನ್ನು ಜಾಗರೂಕತೆಯಿಂದ ಇಳಿದರೆ ಒಳಗೆ ಕಾಣುವ ವಿಶಾಲವಾದ ಹಜಾರದಂಥ ಜಾಗವೇ ಎಡಕಲ್ ಗುಹೆ! ಇದು ಕಗ್ಗತ್ತಲ ತಾಣವಲ್ಲ, ಹೆಬ್ಬಂಡೆಗಳು ಮೇಲ್ಭಾಗದಲ್ಲಿ ಛಾವಣಿಯಂತೆ ಒಂದಕ್ಕೊಂದು ಚಾಚಿಕೊಂಡಂತಿದ್ದು, ನೈಸರ್ಗಿಕ ಬೆಳಕು, ಗಾಳಿ ತೂರಿ ಬರುವುದರಿಂದ ತಂಪು ತಂಪು ಪ್ರಶಾಂತ ವಾತಾವರಣ. ಇಲ್ಲಿ ಬಿದ್ದ ಮಳೆ ನೀರು ಹರಿದು ಹೋಗಲು ಸಹ ಅಚ್ಚರಿಯ ವ್ಯವಸ್ಥೆಯಿದೆ.
ಗೋಡೆಗಳಲ್ಲಿ ಶಿಲಾಯುಗದ ಕುರುಹುಗಳು
ಸುಮಾರು 6000 - 8000 ವರ್ಷಗಳಷ್ಟು ಹಳೆಯದಾದ ಶಿಲಾಯುಗದ ಈ ಗುಹೆಯ ಗೋಡೆಗಳ ಮೇಲೆ ಮಾನವ, ಪ್ರಾಣಿ, ವಿವಿಧ ಕೃಷಿ ಉಪಕರಣ, ಬಿಲ್ಲು- ಬಾಣ ಇತ್ಯಾದಿ ಆಯುಧಗಳ, ಚಕ್ರ, ಹೂವು, ರಹಸ್ಯ ಸಂಕೇತಗಳ ಕೆತ್ತನೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಬ್ರಾಹ್ಮಿ ಲಿಪಿಯ ಅಕ್ಷರಗಳೂ ಕಾಣುತ್ತವೆ. ಇಲ್ಲಿನ ಕೆಲವು ಚಿಹ್ನೆಗಳು ಸಿಂಧೂ ಕಣಿವೆ ನಾಗರಿಕತೆಯ ಮುದ್ರೆಗಳನ್ನು ಹೋಲುತ್ತವೆಯೆಂಬುದು ಸಂಶೋಧಕರ ಅಭಿಪ್ರಾಯ.
ಸ್ಥಳೀಯ ಬುಡಕಟ್ಟು ಜನಾಂಗದವರು ಈ ಬೆಟ್ಟವನ್ನು ಕುಟ್ಟಿ ಚಾತನ್ (ಕಾವಲು ದೇವತೆ/ ಕ್ಷೇತ್ರಪಾಲ) ಮತ್ತು ಮುಡಿಯಂಪಳ್ಳಿ ದೇವಿಯ ಪವಿತ್ರ ತಾಣವೆಂದು ಪೂಜಿಸುತ್ತಾರೆ. ಇಂಥ ಹಲವು ಮಹತ್ವಗಳು ಒಟ್ಟಾದ ತಾಣ ಎಡಕಲ್ಲು ಗುಡ್ಡ. ನಿಜಕ್ಕೂ ಈ ಚಾರಣ ನೆನಪಿಲ್ಲಿ ಉಳಿಯುತ್ತದೆ.
ನೆನಪಿರಲಿ:
ಎಡಕಲ್ಲು ಗುಡ್ಡ ಹತ್ತಿ ಇಳಿಯಲು ಕನಿಷ್ಠ ಎರಡ್ಮೂರು ಗಂಟೆಗಳ ಸಮಯ ಬೇಕು.
ದಾಹ ತಣಿಸಲು ನೀರಿನ ಬಾಟಲಿ, ಉತ್ತಮ ಹಿಡಿತವಿರುವ ವಾಕಿಂಗ್ ಶೂಗಳಿದ್ದರೆ ಉತ್ತಮ.
ಚಾರಣದಲ್ಲಿ ಬೆವರುವುದರಿಂದ ಗಾಳಿಯಾಡುವ ಹತ್ತಿಯ ಬಟ್ಟೆಗಳನ್ನು ಧರಿಸುವುದೊಳಿತು.
ಮಾಹಿತಿಗಾಗಿ
ವಯಸ್ಕರಿಗೆ 50 ರು. ಮಕ್ಕಳಿಗೆ 30 ರು. ಪ್ರವೇಶ ಶುಲ್ಕವಿರುತ್ತದೆ. ಪ್ಲಾಸ್ಟಿಕ್ ನೀರಿನ ಬಾಟಲಿಯಿದ್ದರೆ 20ರು. ಠೇವಣಿ ಇಡಬೇಕು. ಮರಳುವಾಗ ಆ ಬಾಟಲಿಯನ್ನು ತೋರಿಸಿದರೆ ಠೇವಣಿ ಇಟ್ಟ ಹಣವನ್ನು ಮರುಪಾವತಿಸುತ್ತಾರೆ.