'ರಿಲಯನ್ಸ್ ಫೌಂಡೇಷನ್' ನಿರ್ವಹಣೆಯಲ್ಲಿರುವ ಪ್ರಾಣಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ 'ವನತಾರಾ' ಮೇಲಿನ ಆರೋಪಗಳ ಬಗ್ಗೆ ತನಿಖೆ ನಡೆಸಿದ ವಿಶೇಷ ತನಿಖಾ ತಂಡ ಸಲ್ಲಿಸಿದ ವರದಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದ್ದು, 'ವನತಾರಾ'ವನ್ನು ಆರೋಪ ಮುಕ್ತಗೊಳಿಸಿದೆ. ವನ್ಯಪ್ರಾಣಿಗಳ ಸ್ವಾಧೀನ ಪ್ರಕ್ರಿಯೆ ವಿಚಾರದಲ್ಲಿ ವನತಾರಾದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಆನೆಗಳು ಸೇರಿದಂತೆ ಪ್ರಾಣಿಗಳ ಸ್ವಾಧೀನ ಕಾನೂನು ಪ್ರಕ್ರಿಯೆಗಳಿಗೆ ಅನುಗುಣವಾಗಿಯೇ ನಡೆದಿದೆ ಎಂದು 'ಎಸ್‌ಐಟಿ' ವರದಿ ಸಲ್ಲಿಸಿದೆ.

'ವನತಾರಾ' ವಶದಲ್ಲಿರುವ ಆನೆಗಳನ್ನು ದೇವಾಲಯಗಳಿಗೆ ಹಿಂತಿರುಗಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಂಕಜ್ ಮಿಥಲ್ ಮತ್ತು ನ್ಯಾ. ಪ್ರಸನ್ನ ಬಿ.ವರಾಳೆ ಅವರ ದ್ವಿಸದಸ್ಯ ಪೀಠ ವಜಾಗೊಳಿಸಿದೆ. 'ಎಸ್‌ಐಟಿ' ವರದಿ ಸಮರ್ಪಕವಾಗಿದೆ. ಬೇರೆ ಯಾವುದೇ ಆಕ್ಷೇಪಣೆಗಳನ್ನು ವನತಾರಾ ವಿಚಾರದಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಪೀಠ ಸ್ಪಷ್ಟವಾಗಿ ಹೇಳಿದೆ.