• ವಿದ್ಯಾ ವಿ.ಹಾಲಭಾವಿ

ನಮ್ಮ ಭಾರತದ ಅತಿದೊಡ್ಡ ಹಾಗೂ ಪುರಾತನ ವಸ್ತು ಸಂಗ್ರಹಾಲಯವನ್ನು ನೋಡವ ಆಸೆ ನಿಮಗಿದೆಯೇ? ಅಲ್ಲಿ ಯಾವ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಗೊತ್ತಾ? ಇವೆಲ್ಲವನ್ನು ತಿಳಿಯಲು ನೀವು ಕಲ್ಕತ್ತಾದ ಭಾರತೀಯ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಲೇಬೇಕು.

ಬಂಗಾಳದ ಏಷ್ಯಾಟಿಕ್ ಸೊಸೈಟಿಯ ತೊಟ್ಟಿಲಲ್ಲಿ ಭಾರತೀಯ ವಸ್ತುಸಂಗ್ರಹಾಲಯ ಜನ್ಮ ತಾಳಿತು. ಇದು ಏಷ್ಯಾದಲ್ಲೇ ಅತ್ಯಂತ ಹಳೆಯ ಹಾಗೂ ಅತಿ ದೊಡ್ಡ ಮ್ಯೂಸಿಯಂ. 1814ರಲ್ಲಿ ಪ್ರಾರಂಭವಾಯಿತು. ಇತಿಹಾಸ ಮತ್ತು ಸಂಸ್ಕೃತಿಯನ್ನು ಆಳವಾಗಿ ಅರಿಯಲು ಇದು ಅತ್ಯುತ್ತಮ ತಾಣವಾಗಿದೆ.

ಇದನ್ನೂ ಓದಿ: ಹಂಪ್ಟಾ ಪಾಸ್‌ ಚಾರಣದ ಮನಮೋಹಕ ಕಥನ

ಭಾರತೀಯ ವಸ್ತುಸಂಗ್ರಹಾಲಯ ಸ್ಥಾಪನೆಯೊಂದಿಗೆ, ವಸ್ತುಸಂಗ್ರಹಾಲಯ ಚಳುವಳಿ ಭಾರತದಲ್ಲಿ ಪ್ರಾರಂಭವಾಯಿತು. ನಂತರದ ವರ್ಷಗಳಲ್ಲಿ ಹೊಸ ಹುರುಪು ಪಡೆಯಿತು. ಅಂದಿನಿಂದ ಇದು ಸಾಕಷ್ಟು ಅಭಿವೃದ್ಧಿ ಹೊಂದಿ, ದೇಶದಲ್ಲಿ 400ಕ್ಕೂ ಹೆಚ್ಚು ವಸ್ತುಸಂಗ್ರಹಾಲಯಗಳ ಅಸ್ತಿತ್ವಕ್ಕೆ ಕಾರಣವಾಯಿತು.

Untitled design (10)

ಮೊದಲ ಮ್ಯೂಸಿಯಂ

ಭಾರತೀಯ ವಸ್ತುಸಂಗ್ರಹಾಲಯದ ಉಗಮ ಮತ್ತು ಬೆಳವಣಿಗೆಯ ಇತಿಹಾಸವನ್ನು ಅವಲೋಕಿಸಲು ನಾವು 18ನೆಯ ಶತಮಾನದ ಕೊನೆಯ ತ್ರೈಮಾಸಿಕಕ್ಕೆ ಪಯಣಿಸಬೇಕು. ಆ ಕಾಲಕ್ಕೆ ಸರ್ ವಿಲಿಯಂ ಜೋನ್ಸ್ ಎನ್ನುವ ವಿದ್ವಾಂಸ ತಮ್ಮ ಜೀವನವನ್ನೆಲ್ಲಾ ಭಾರತದ ಸೇವೆಗೆ ಮುಡುಪಾಗಿಟ್ಟು1784ರಲ್ಲಿ ಕಲ್ಕತ್ತಾದಲ್ಲಿ ಏಷಿಯಾಟಿಕ್ ಸೊಸೈಟಿಯನ್ನು ಸ್ಥಾಪಿಸಿದರು. ಏಷ್ಯಾದ ಭೌಗೋಳಿಕ ಮಿತಿಗಳಲ್ಲಿ ಕಲೆ, ಸಂಸ್ಕೃತಿಯ ಅಭಿವೃದ್ಧಿ, ಮನೋರಂಜನೆ, ಜ್ಞಾನ ಪ್ರಸಾರ ಮತ್ತು ಮನುಕುಲದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವುದು ಈ ಸೊಸೈಟಿಯ ಉದ್ದೇಶವಾಗಿತ್ತು. 1796ರಲ್ಲಿ ಏಷಿಯಾಟಿಕ್ ಸೊಸೈಟಿಯ ಸದಸ್ಯರು ಮಾನವ ನಿರ್ಮಿತ ಅಥವಾ ಪ್ರಕೃತಿದತ್ತ ವಸ್ತುಗಳ ಸಂರಕ್ಷಣೆಗಾಗಿ ವಸ್ತುಸಂಗ್ರಹಾಲಯವನ್ನು ಸ್ಥಾಪಿಸುವ ಕಲ್ಪನೆಯನ್ನು ರೂಪಿಸಿದರು. ನಂತರ ಡ್ಯಾನಿಶ್ ಸಸ್ಯಶಾಸ್ತ್ರಜ್ಞ ಡಾ. ನಥಾನಿಯಲ್ ವಾಲಿಚ್‌ರವರ ಮಾರ್ಗದರ್ಶನದಲ್ಲಿ ಫೆಬ್ರವರಿ 2, 1814ರಂದು ಏಷ್ಯಾಟಿಕ್ ಸೊಸೈಟಿಯಲ್ಲಿ ಒಂದು ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಯಿತು. ಡಾ. ನಥಾನಿಯಲ್ ವಾಲಿಚ್‌ರನ್ನು ಏಷಿಯಾಟಿಕ್ ಸೊಸೈಟಿಯ ಓರಿಯೆಂಟಲ್ ಮ್ಯೂಸಿಯಂ ಕ್ಯುರೇಟರ್‌ ಸ್ಥಾನಕ್ಕೆ ನೇಮಿಸಲಾಯಿತು.

ಈ ಮ್ಯೂಸಿಯಂನಲ್ಲಿ ಆಸಕ್ತಿದಾಯಕ ಮತ್ತು ಕುತೂಹಲಕಾರಿ ವಸ್ತುಗಳನ್ನು ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಲಾಯಿತು. 1816ರಲ್ಲಿ 27 ಯುರೋಪಿಯನ್ ದಾನಿಗಳು 174 ವಸ್ತುಗಳನ್ನು ಉಡುಗೊರೆಯಾಗಿ ನೀಡಿದರು. ಅನೇಕ ಭಾರತೀಯ ಸಂಗ್ರಹಕಾರರೂ ತಮ್ಮಲ್ಲಿದ್ದಅಪರೂಪದ ವಸ್ತುಗಳನ್ನು ವಸ್ತುಸಂಗ್ರಹಾಲಯಕ್ಕೆ ಉಡುಗೊರೆಯಾಗಿ ನೀಡಲು ಪ್ರಾರಂಭಿಸಿದರು. ಆರಂಭದಲ್ಲಿ ಎರಡು ಗ್ಯಾಲರಿಗಳೊಂದಿಗೆ ಈ ವಸ್ತುಸಂಗ್ರಹಾಲಯವನ್ನು ತೆರೆಯಲಾಯಿತು. ನಂತರ ಅದನ್ನು ಬಹುಪಯೋಗಿ ಸಂಸ್ಥೆಯನ್ನಾಗಿ ಪರಿವರ್ತಿಸಲಾಯಿತು. ಈಗ ಈ ವಸ್ತುಸಂಗ್ರಹಾಲಯವು ಅರವತ್ತಕ್ಕೂ ಹೆಚ್ಚು ಗ್ಯಾಲರಿಗಳನ್ನು ಹೊಂದಿದೆ. ಹತ್ತು ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ.

ಮೊದಲು ʻಏಷ್ಯಾಟಿಕ್ ಸೊಸೈಟಿ ಮ್ಯೂಸಿಯಂʼಎಂದು ಕರೆಯಲ್ಪಡುತ್ತಿದ್ದ ಈ ವಸ್ತುಸಂಗ್ರಹಾಲಯ ನಂತರ ʻಇಂಪೀರಿಯಲ್ ಮ್ಯೂಸಿಯಂʼ ಎಂದು ಪ್ರಸಿದ್ಧವಾಯಿತು. ನಂತರ ಇದನ್ನು ʻಇಂಡಿಯನ್ ಮ್ಯೂಸಿಯಂʼ ಎಂದು ಕರೆಯಲಾಯಿತು. ಈ ವಸ್ತುಸಂಗ್ರಹಾಲಯವು ಸಂದರ್ಶಕರಿಗೆ ʻಜಾದುಘರ್ʻ ಅಥವಾ ʻಅಜಬ್ಘರ್ʻ ಎಂಬ ಹೆಸರಿನಿಂದಲೇ ಹೆಚ್ಚು ಪರಿಚಿತವಾಗಿದೆ.

ಮ್ಯೂಸಿಯಂನಲ್ಲಿ ಏನಿದೆ?

ಇಲ್ಲಿ ಕಲೆ, ಪುರಾತತ್ವ, ಮಾನವಶಾಸ್ತ್ರ, ಪ್ರಾಣಿಶಾಸ್ತ್ರ, ಭೂವಿಜ್ಞಾನ ಮತ್ತು ಸಸ್ಯಶಾಸ್ತ್ರ ಹೆಸರಿನ ಆರು ವಿಭಾಗಗಳಲ್ಲಿ ಬಹಳ ಅಚ್ಚುಕಟ್ಟಾಗಿ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. 18ನೆಯ ಶತಮಾನದ ವರ್ಣಚಿತ್ರಗಳು, ಐತಿಹಾಸಿಕ ಪಳೆಯುಳಿಕೆಗಳು, ಅಸ್ಥಿಪಂಜರಗಳು, ಆಭರಣಗಳು, ರಕ್ಷಾ ಕವಚಗಳು, ವಿಲಕ್ಷಣ ಕಲಾಕೃತಿಗಳು ಮತ್ತು 4000 ವರ್ಷಗಳಷ್ಟು ಹಳೆಯದಾದ ಈಜಿಪ್ಟಿನ ಮಮ್ಮಿ ಮುಂತಾದ ಅಪರೂಪದ ವಸ್ತುಗಳ ಸಂಗ್ರಹವನ್ನೂ ಇಲ್ಲಿ ಕಾಣಬಹುದು.

ಭಾರತದ ಕುರಿತು ತಿಳಿದುಕೊಳ್ಳಲು ಬಯಸುವವರಿಗೆ ಬಹುತೇಕ ಎಲ್ಲಾ ಐತಿಹಾಸಿಕ ಮತ್ತು ಸಾಂಸ್ಕೃತಿಕ ವಿವರಗಳು ಇಲ್ಲಿ ಲಭ್ಯ. ಹಿಂದೂ ದೇವರುಗಳು, ಭಾರತೀಯ ರಾಜರು ಮತ್ತು ಅವರ ಸಂಸ್ಕೃತಿಗಳು, ಬೌದ್ಧ ಧರ್ಮದ ಅವಶೇಷಗಳು, ಈ ದೇಶವನ್ನು ವಶಪಡಿಸಿಕೊಂಡ ವಿಭಿನ್ನ ಆಡಳಿತಗಾರರು ಮತ್ತು ಭಾರತೀಯ ಇತಿಹಾಸವನ್ನು ಸಾರಿ ಹೇಳುವ ವಿವಿಧ ಶಿಲ್ಪಕಲಾಕೃತಿಗಳು ಮತ್ತು ಆವಿಷ್ಕಾರಗಳೆಲ್ಲವನ್ನೂ ಇಲ್ಲಿ ನೋಡಬಹುದು. ಒಂದೇ ಕಲ್ಲಿನಿಂದ ಮಾಡಿದ ಪ್ರಾಚೀನ ಶಿಲ್ಪಗಳು ಪ್ರಾಚೀನ ಭಾರತದ ಕುಶಲಕರ್ಮಿಗಳ ಅದ್ಭುತ ಕೌಶಲ್ಯವನ್ನು ಚಿತ್ರಿಸುತ್ತವೆ. ಬುದ್ಧನ ಕೆಲವು ಪ್ರತಿಮೆಗಳ ಮೇಲೆ ಮಾಡಿದ ಸಂಕೀರ್ಣವಾದ ಕೆತ್ತನೆ ಮತ್ತು ಸ್ತೂಪಗಳ ಅದ್ಭುತ ಮಾದರಿಗಳಂತೂ ಎಲ್ಲರನ್ನೂ ಬೆರಗುಗೊಳಿಸುತ್ತವೆ. ನಾಣ್ಯಗಳ ಸಂಗ್ರಹ ಮತ್ತು ಅವುಗಳನ್ನು ರೂಪಿಸುವ ಪ್ರಾಚೀನ ವಿಧಾನಗಳು ಇತಿಹಾಸವನ್ನು ನೆನೆಯಲು ಸಹಾಯ ಮಾಡುತ್ತದೆ. ಕಟ್ಟಡ ಸ್ವತಃ ಅದ್ಭುತ ವಾಸ್ತುಶಿಲ್ಪ. ಇದರ ಒಳಗೆ ದೃಶ್ಯ ಉದ್ಯಾನದೊಂದಿಗೆ ಬ್ರಿಟಿಷ್ ಪರಂಪರೆಯನ್ನು ನೆನಪಿಸುತ್ತದೆ.

ಇಲ್ಲಿರುವ ಗ್ರಂಥಾಲಯದಲ್ಲಿ ಪುರಾತತ್ವ, ಮಾನವಶಾಸ್ತ್ರ, ಕಲೆ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಭೂವಿಜ್ಞಾನ ಇತ್ಯಾದಿಗಳಿಗೆ ಸಂಬಂಧಿತ ಪುಸ್ತಕಗಳು ಮತ್ತು ನಿಯತಕಾಲಿಕೆಗಳ ಬೃಹತ್‌ ಸಂಗ್ರಹವಿದೆ.

Untitled design (11)

ಈ ಸಂಸ್ಥೆಯು ಭಾರತದ ಕಲೆ ಮತ್ತು ಸಂಸ್ಕೃತಿಯ ಸಾರಾಂಶವಾಗಿ ಭಾರತದ ಜನರಿಗೆ ತನ್ನ ಸೇವೆಯನ್ನು ಸಲ್ಲಿಸುತ್ತಿದೆ. ಭಾರತೀಯ ವಸ್ತುಸಂಗ್ರಹಾಲಯದ ಪಾತ್ರವು ವಸ್ತುಸಂಗ್ರಹಾಲಯ ಮತ್ತು ಸಮಾಜದ ನಡುವಿನ ಸಾಮಾಜಿಕ-ಸಾಂಸ್ಕೃತಿಕ ಸಾಮರಸ್ಯಕ್ಕೆ ಸಾಕ್ಷಿ.

ಈ ಮ್ಯೂಸಿಯಂನಲ್ಲಿ ಉಚಿತ ಮಾರ್ಗದರ್ಶಿ ಸೇವೆ ಇದೆ. ಸಂದರ್ಶಕರಿಗೆ ಬ್ಯಾಗ್‌ ಮತ್ತಿತರ ಸಾಮಾನುಗಳನ್ನು ಇಡಲು ಲಾಕರ್ ವ್ಯವಸ್ಥೆಯಿದೆ. ಶೌಚಾಲಯವೂ ಇದೆ. ಕೆಫೆಟೇರಿಯಾವು ವಸ್ತು ಸಂಗ್ರಹಾಲಯದ ಮುಖ್ಯ ಕಟ್ಟಡದ ಹಿಂಭಾಗದಲ್ಲಿದೆ. ನೆಲ ಮಹಡಿಯ ಕಾರಿಡಾರ್‌ನಲ್ಲಿ ಕುಡಿಯುವ ನೀರಿನ ಸೌಲಭ್ಯವಿದೆ. ಅಂಗವಿಕಲರಿಗೆ ವೀಲ್‌ಚೇರ್‌ ಸಹ ಇಲ್ಲಿ ಲಭ್ಯವಿದೆ.

ಇತಿಹಾಸ ಮತ್ತು ಕಲಾ ಪ್ರಿಯರಿಗೆ ಇದು ನಿಜವಾದ ಸ್ವರ್ಗ. ವಿದ್ಯಾರ್ಥಿಗಳು ಮತ್ತು ಜ್ಞಾನದಾಹಿಗಳು ವೀಕ್ಷಿಸಲೇಬೇಕಾದ ಸ್ಥಳ. ಭಾರತದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ತಿಳಿದುಕೊಳ್ಳಲು ಒಮ್ಮೆಯಾದರೂ ಕಲ್ಕತ್ತಾದಲ್ಲಿನ ಈ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಲೇಬೇಕು.

ಪ್ರತಿ ಸೋಮವಾರ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ವಸ್ತು ಸಂಗ್ರಹಾಲಯ ಮುಚ್ಚಿರುತ್ತದೆ.

ಬೆಳಗ್ಗೆ 10:00 - ಸಂಜೆ 6ರವರೆಗೆ ಸಂದರ್ಶಕರಿಗೆ ತೆರೆದಿರುತ್ತದೆ.

ದಾರಿ ಹೇಗೆ?

ಈ ವಸ್ತು ಸಂಗ್ರಹಾಲಯ ಕಲ್ಕತ್ತಾದ ಹೃದಯಭಾಗದಲ್ಲಿದ್ದು, ಬಸ್, ಟ್ಯಾಕ್ಸಿ ಮತ್ತು ಮೆಟ್ರೋ ರೈಲು ಮಾರ್ಗಗಳಿಂದ ಉತ್ತಮ ಸಂಪರ್ಕ ಹೊಂದಿದೆ. ಪಾರ್ಕ್ ಸ್ಟ್ರೀಟ್ ಹತ್ತಿರದ ಮೆಟ್ರೋ ನಿಲ್ದಾಣ.