• ನಂದಿನಿ ಪಟೇಲ್‌

ಒಂದು ಕೋಟೆಯ ಶಿಖರದ ಮೇಲೆ ನಿಂತು ದೂರದ ದಿಗಂತವನ್ನು ನೋಡುವ ಕ್ಷಣವೇ ಒಂದು ಅನನ್ಯ ಅನುಭವ. ಅಲ್ಲಿ ಕಾಣುವುದು ಕೇವಲ ಕಲ್ಲಿನ ಗೋಡೆಗಳಲ್ಲ. ಶೌರ್ಯ, ಸ್ವಾಭಿಮಾನ ಮತ್ತು ಅಜೇಯ ಸಂಕಲ್ಪದ ಸಾವಿರಾರು ಪುಟಗಳ ಇತಿಹಾಸ. ಆ ಗೋಡೆಗಳು ಯುದ್ಧಗಳ ಗರ್ಜನೆಯನ್ನು ಕೇಳಿವೆ, ವಿಜಯೋತ್ಸವಗಳ ಸಂಭ್ರಮವನ್ನು ಕಂಡಿವೆ, ಸೋಲುಗಳ ನೋವನ್ನೂ ಮೌನವಾಗಿ ಹೊತ್ತಿವೆ.

ಶತಮಾನಗಳಲ್ಲಿ ಕಾಲ ಕಾಲಕ್ಕೆ ನಡೆದ ಯುದ್ಧ ಪರೀಕ್ಷೆಯನ್ನು ಎದುರಿಸಿ ಇಂದು ಕೂಡ ಹೆಮ್ಮೆಯಿಂದ ತಲೆಯೆತ್ತಿ ನಿಂತಿರುವ ಈ ಕೋಟೆಗಳು, ಭಾರತದ ಸಾಂಸ್ಕೃತಿಕ ಮತ್ತು ಐತಿಹಾಸಿಕ ವೈಭವದ ಜೀವಂತ ಸಾಕ್ಷಿಗಳಾಗಿವೆ. ಇಂತಹ ಅಮೂಲ್ಯ ಪರಂಪರೆಯನ್ನು ಒಳಗೊಂಡ 'ಮರಾಠಾ ಮಿಲಿಟರಿ ಲ್ಯಾಂಡ್‌ಸ್ಕೇಪ್ಸ್ ಆಫ್ ಇಂಡಿಯಾ'ಗೆ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿ ಸ್ಥಾನ ದೊರೆತಿರುವುದು, ಭಾರತದ ಇತಿಹಾಸಕ್ಕೆ ಸಂದ ಮತ್ತೊಂದು ಜಾಗತಿಕ ಗೌರವವಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದ ವನ್ಯಜೀವಿ ಸಫಾರಿಗೆ ಐಆರ್‌ಸಿಟಿಸಿಯ ಪ್ಯಾಕೇಜ್

ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿ ಭಾರತದ 44ನೆಯ ತಾಣ

2025ರ ಜುಲೈ 11ರಂದು ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿ ಭಾರತದ 44ನೇ ತಾಣವಾಗಿ ಗುರುತಿಸಿಕೊಂಡ ಈ ತಾಣ, ಮರಾಠ ಸಾಮ್ರಾಜ್ಯದ ಅಸಾಧಾರಣ ಸೈನಿಕ ಪರಂಪರೆಯನ್ನು ಜಗತ್ತಿನ ಮುಂದೆ ಅನಾವರಣಗೊಳಿಸಿದೆ. ಮಹಾರಾಷ್ಟ್ರದ 11 ಮತ್ತು ತಮಿಳುನಾಡಿನ ಒಂದು ಸೇರಿದಂತೆ ಒಟ್ಟು 12 ಐತಿಹಾಸಿಕ ಕೋಟೆಗಳನ್ನು ಒಳಗೊಂಡಿದೆ. ಪ್ರತಿಯೊಂದು ಕೋಟೆಯೂ ಮರಾಠರ ಶೌರ್ಯ, ವಾಸ್ತುಶಿಲ್ಪದ ನೈಪುಣ್ಯ, ದೂರದೃಷ್ಟಿಯ ಯುದ್ಧತಂತ್ರ ಮತ್ತು ಪ್ರಕೃತಿಯೊಡನೆ ಬೆಸೆದ ರಕ್ಷಣಾ ವ್ಯವಸ್ಥೆಯ ಅದ್ಭುತ ಪ್ರತೀಕವಾಗಿದೆ.

ಈ ಕೋಟೆಗಳ ವಿಶೇಷತೆ ಅವುಗಳ ಸ್ಥಳ ಆಯ್ಕೆಯಲ್ಲೇ ಅಡಗಿದೆ. ಕೆಲವು ಆಕಾಶ ಮುಟ್ಟುವ ಬೆಟ್ಟಗಳ ತುದಿಯಲ್ಲಿ, ಕೆಲವು ಕರಾವಳಿಯಲ್ಲಿ ಅರಬ್ಬೀ ಸಮುದ್ರದ ಅಲೆಗಳನ್ನು ಎದುರಿಸುತ್ತಾ ಮತ್ತೆ ಕೆಲವು ಸಮುದ್ರದ ಮಧ್ಯದಲ್ಲೇ ಕಲ್ಲಿನ ದ್ವೀಪಗಳ ಮೇಲೆ ನಿರ್ಮಾಣಗೊಂಡಿವೆ. ಪ್ರಕೃತಿಯನ್ನೇ ಕೋಟೆಯ ರಕ್ಷಣಾ ಕವಚವನ್ನಾಗಿ ಬಳಸಿಕೊಂಡ ಮರಾಠರ ದೂರದೃಷ್ಟಿ ಇಂದಿಗೂ ವಿಸ್ಮಯ ಮೂಡಿಸುತ್ತದೆ.

maratha fort

ಇತಿಹಾಸದ ಕುತೂಹಲಕಾರಿ ಅಧ್ಯಾಯ

ಛತ್ರಪತಿ ಶಿವಾಜಿ ಮಹಾರಾಜರ ಆಡಳಿತದಲ್ಲಿ ಈ ಕೋಟೆಗಳು ಕೇವಲ ಸೇನಾ ನೆಲೆಗಳಾಗಿರಲಿಲ್ಲ. ಅವು ಆಡಳಿತ, ಆಹಾರ ಸಂಗ್ರಹ, ಶಸ್ತ್ರಾಸ್ತ್ರ ಭಂಡಾರ, ಗುಪ್ತ ಸಂದೇಶ ವಿನಿಮಯ ಮತ್ತು ಜನರ ಸುರಕ್ಷತೆಯ ಕೇಂದ್ರಗಳಾಗಿದ್ದವು. ಬೆಟ್ಟದ ಮೇಲಿಂದ ಬೆಟ್ಟಕ್ಕೆ ಹೊಗೆ ಮತ್ತು ಬೆಳಕಿನ ಸಂಕೇತಗಳ ಮೂಲಕ ಸಂದೇಶ ರವಾನಿಸುವ ವ್ಯವಸ್ಥೆಯೂ ಇಲ್ಲಿ ಅಸ್ತಿತ್ವದಲ್ಲಿತ್ತು ಎಂಬುದು ಇತಿಹಾಸದ ಕುತೂಹಲಕಾರಿ ಅಧ್ಯಾಯ.

ಇತಿಹಾಸದಲ್ಲಿ ಆಸಕ್ತಿ ಹೊಂದಿರುವವರಿಗೆ ಮಾತ್ರವಲ್ಲ, ಚಾರಣಪ್ರಿಯರಿಗೆ, ಛಾಯಾಗ್ರಾಹಕರಿಗೆ ಹಾಗೂ ಪ್ರಕೃತಿಪ್ರಿಯರಿಗೂ ಈ ಕೋಟೆಗಳು ಆಕರ್ಷಣೆಯ ತಾಣಗಳಾಗಿವೆ. ಮೋಡಗಳ ನಡುವೆ ಸಾಗುವ ಹಾದಿಗಳು, ಪುರಾತನ ಬಾಗಿಲುಗಳು, ಬಲಿಷ್ಠ ಗೋಡೆಗಳು ಮತ್ತು ಅನಂತ ದಿಗಂತವನ್ನು ತೋರಿಸುವ ಕೋಟೆಯ ಮೇಲ್ಭಾಗಳು ಒಂದು ಹೊಸ ಅನುಭವವನ್ನು ನೀಡುತ್ತದೆ.

ಯುನೆಸ್ಕೋ ಮಾನ್ಯತೆ ಈ ಕೋಟೆಗಳಿಗೆ ಕೇವಲ ಜಾಗತಿಕ ಗೌರವವಲ್ಲ. ಭಾರತದ ಪರಂಪರೆಯನ್ನು ಸಂರಕ್ಷಿಸುವ ಹೊಸ ಹೊಣೆಗಾರಿಕೆಯೂ ಹೌದು. ಈ ಕೋಟೆಗಳತ್ತ ಮಾಡುವ ಪ್ರವಾಸ, ಕೇವಲ ಒಂದು ಸ್ಥಳದ ಭೇಟಿಯಾಗಿರದೆ ಅದು ನಮ್ಮ ದೇಶದ ಶೌರ್ಯ, ಸ್ವಾಭಿಮಾನ ಮತ್ತು ಭಾರತದ ಅಸ್ಮಿತೆಯನ್ನು ಅನುಭವಿಸುವ ಮರೆಯಲಾಗದ ಪಯಣ ಎಂದರೆ ಅತಿಶಯೋಕ್ತಿಯಲ್ಲ.

ರಾಯಗಡ ಕೋಟೆ

  • ಮರಾಠ ಸಾಮ್ರಾಜ್ಯದ ರಾಜಧಾನಿ,
  • ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ
  • ಸಮುದ್ರಮಟ್ಟದಿಂದ ಸುಮಾರು 2,700 ಅಡಿ ಎತ್ತರದಲ್ಲಿರುವ ಈ ಕೋಟೆ ಇತಿಹಾಸ ಮತ್ತು ಪ್ರಕೃತಿ ಸೌಂದರ್ಯದ ಅಪೂರ್ವ ಸಂಗಮವಾಗಿದೆ.

ರಾಜಗಡ ಕೋಟೆ

  • ಸುಮಾರು 25 ವರ್ಷಗಳ ಕಾಲ ಶಿವಾಜಿ ಮಹಾರಾಜರ ಪ್ರಮುಖ ರಾಜಧಾನಿ
  • ವಿಶಾಲ ಕೋಟೆಗೋಡೆಗಳು ಮತ್ತು ದುರ್ಗಮ ಬೆಟ್ಟಗಳಿಂದ ಪ್ರಸಿದ್ಧ
  • ಸಹ್ಯಾದ್ರಿ ಪರ್ವತಗಳ ವಿಹಂಗಮ ನೋಟ ಇಲ್ಲಿನ ವಿಶೇಷ ಆಕರ್ಷಣೆ.

ಪ್ರತಾಪಗಡ ಕೋಟೆ

  • 1659ರಲ್ಲಿ ನಡೆದ ಶಿವಾಜಿ ಮಹಾರಾಜ ಮತ್ತು ಅಫ್ಜಲ್ ಖಾನ್ ನಡುವಿನ ಐತಿಹಾಸಿಕ ಯುದ್ಧಕ್ಕೆ ಸಾಕ್ಷಿಯಾದ ಕೋಟೆ - ದಟ್ಟ ಕಾಡುಗಳ ನಡುವೆ ನೆಲೆಸಿರುವ ಈ ಕೋಟೆಯಿಂದ ಪಶ್ಚಿಮ ಘಟ್ಟದ ಅದ್ಭುತ ದೃಶ್ಯ ಕಾಣಬಹುದು.

ಪನ್ಹಾಲಾ ಕೋಟೆ

  • ಮಹಾರಾಷ್ಟ್ರದ ಅತಿ ದೊಡ್ಡ ಬೆಟ್ಟದ ಕೋಟೆಗಳಲ್ಲಿ ಒಂದು
  • ಶಿವಾಜಿಯ ಸಾಹಸಮಯ ಪಲಾಯನದ ಕಥೆಗೆ ಹೆಸರುವಾಸಿಯಾಗಿದೆ.
  • "ಅಂಧಾರ್ ಬಾವಿ" ಮತ್ತು "ಅಂಬರ್ ಖಾನಾ" ಇಲ್ಲಿನ ಪ್ರಮುಖ ಆಕರ್ಷಣೆಗಳು.

ಶಿವನೇರಿ ಕೋಟೆ

  • ಛತ್ರಪತಿ ಶಿವಾಜಿ ಮಹಾರಾಜರ ಜನ್ಮಸ್ಥಳ
  • ಮರಾಠರ ಇತಿಹಾಸದ ಪವಿತ್ರ ತಾಣ
  • ಕೋಟೆಯೊಳಗಿನ ಶಿವಾಯಿ ದೇವಿ ದೇವಸ್ಥಾನ ವಿಶೇಷ ಮಹತ್ವ ಹೊಂದಿದೆ.

ಲೋಹಗಡ ಕೋಟೆ

  • 'ಕಬ್ಬಿಣದ ಕೋಟೆ' ಎಂದೇ ಪ್ರಸಿದ್ಧ
  • ಬಲಿಷ್ಠ ಕೋಟೆಗೋಡೆಗಳಿಗೆ ಹೆಸರುವಾಸಿ
  • ಮಳೆಗಾಲದಲ್ಲಿ ಹಸಿರಿನಿಂದ ಕಂಗೊಳಿಸುವ ಈ ಕೋಟೆ ಚಾರಣಪ್ರಿಯರ ನೆಚ್ಚಿನ ತಾಣವಾಗಿದೆ.

ಸಲ್ಹೇರ್ ಕೋಟೆ

  • ಮಹಾರಾಷ್ಟ್ರದ ಅತ್ಯುನ್ನತ ಕೋಟೆಗಳಲ್ಲಿ ಒಂದು
  • ಮರಾಠ ಮತ್ತು ಮೊಘಲ್ ಯುದ್ಧದ ಮಹತ್ವದ ವಿಜಯಕ್ಕೆ ಸಾಕ್ಷಿ
  • ಇಲ್ಲಿಂದ ಕಾಣುವ ಸಹ್ಯಾದ್ರಿ ಪರ್ವತ ಶ್ರೇಣಿಯ ನೋಟ ಮನಮೋಹಕವಾಗಿದೆ.

ಸಿಂಧುದುರ್ಗ ಕೋಟೆ

  • ಅರಬ್ಬೀ ಸಮುದ್ರದ ಮಧ್ಯದಲ್ಲಿ ನಿರ್ಮಿಸಲಾದ ಈ ಜಲದುರ್ಗ
  • ಶಿವಾಜಿ ಮಹಾರಾಜರು ನೌಕಾಪಡೆಯ ರಕ್ಷಣೆಗೆ ಕಟ್ಟಿಸಿದರು
  • ಕೋಟೆಯೊಳಗೆ ಶಿವಾಜಿ ಮಹಾರಾಜರಿಗೆ ಸಮರ್ಪಿತ ಅಪರೂಪದ ದೇವಾಲಯವಿದೆ.

ಸುವರ್ಣದುರ್ಗ ಕೋಟೆ

  • ಸಮುದ್ರದ ಅಲೆಗಳ ನಡುವೆ ದ್ವೀಪದ ಮೇಲೆ ನಿರ್ಮಾಣ
  • ಸುವರ್ಣದುರ್ಗ ಮರಾಠರ ಸಮುದ್ರ ರಕ್ಷಣಾ ವ್ಯವಸ್ಥೆಯ ಪ್ರಮುಖ ಭಾಗ
  • ಸೂರ್ಯಾಸ್ತದ ಸಮಯದಲ್ಲಿ ಈ ಕೋಟೆಯ ಸೌಂದರ್ಯ ಮತ್ತಷ್ಟು ಮನಸೆಳೆಯುತ್ತದೆ.

ವಿಜಯದುರ್ಗ ಕೋಟೆ

  • ಮೂರು ಕಡೆ ಸಮುದ್ರದಿಂದ ಸುತ್ತುವರಿದ ಕೋಟೆ
  • ಭಾರತದ ಅತ್ಯಂತ ಬಲಿಷ್ಠ ಸಮುದ್ರ ಕೋಟೆ
  • ನೀರಿನೊಳಗಿನ ರಕ್ಷಣಾ ಗೋಡೆ (Underwater Defence Wall) ಇದರ ವಿಶಿಷ್ಟ ವೈಶಿಷ್ಟ್ಯವಾಗಿದೆ.

ಖಾಂದೇರಿ ಕೋಟೆ

  • ಮುಂಬಯಿ ಕರಾವಳಿಯ ಸಮೀಪದ ದ್ವೀಪದಲ್ಲಿ ನಿರ್ಮಿಸಲಾದ ಈ ಕೋಟೆ ಸಮುದ್ರ ಮಾರ್ಗಗಳ ನಿಗಾವಹಣೆಗೆ ಬಳಕೆ
  • ದೀಪಸ್ತಂಭ ಮತ್ತು ಸಮುದ್ರದ ನೋಟ ಇಲ್ಲಿನ ಪ್ರಮುಖ ಆಕರ್ಷಣೆ

ಜಿಂಜಿ ಕೋಟೆ, ತಮಿಳುನಾಡು

  • "ಪೂರ್ವದ ಟ್ರಾಯ್" ಎಂದು ಖ್ಯಾತಿ ಪಡೆದ ಜಿಂಜಿ ಕೋಟೆ ಮೂರು ಪ್ರತ್ಯೇಕ ಬೆಟ್ಟಗಳ ಮೇಲೆ ನಿರ್ಮಿಸಲಾದ ಅದ್ಭುತ ಕೋಟೆ ಸಮೂಹ
  • ನೈಸರ್ಗಿಕ ರಕ್ಷಣಾ ವ್ಯವಸ್ಥೆ ಮತ್ತು ಬಲಿಷ್ಠ ಕೋಟೆಗೋಡೆಗಳು ಇದನ್ನು ಭಾರತದ ಅತ್ಯಂತ ಅಜೇಯ ಕೋಟೆ