ನಿಮಗೆ ರವೀಂದ್ರನಾಥ ಟ್ಯಾಗೋರ್‌ ಗೊತ್ತು, ಆದರೆ ಟ್ಯಾಗೋರ್‌ ಹೆಸರಿನ ಡೈನೋಸಾರ್‌ನ ಕತೆ ಗೊತ್ತಿದೆಯೇ? ಗೊತ್ತಿಲ್ಲ ಎಂದಾದರೆ ಆ ಡೈನೋಸಾರ್‌ ಒಂದರ ಬೆನ್ನುಹತ್ತಿದ ನಮ್ಮ ಈ ಪುರಾಣವನ್ನು ನೀವು ಓದಲೇಬೇಕು.

ಬಹುಶಃ ಮೂರ್ನಾಲ್ಕು ವರ್ಷಗಳೇ ಆದವೇನೋ. ನನ್ನ ಮಗ ಡೈನೋಸಾರ್‌ ಹುಚ್ಚು ಹಿಡಿಸಿಕೊಂಡಿದ್ದ ಕಾಲವದು. ಆಗವನಿಗೆ ಆರೇಳು ವಯಸ್ಸು. ಎಷ್ಟರಮಟ್ಟಿಗಿನ ಹುಚ್ಚು ಅಂದರೆ, ಆಗ ಡೈನೋಸಾರ್‌ ಕುರಿತಾದ ಬಗೆಬಗೆಯ ಪುಸ್ತಕಗಳು ಮನೆ ತುಂಬಿದ್ದವು. ಕತ್ತಲಲ್ಲಿ ಹೊಳೆಯುವ ಡೈನೋಸಾರ್‌ ಚಿತ್ರವಿರುವ ಟಿ ಶರ್ಟು, ಆಟಿಕೆ, ಮಡಚಿರುವ ಪುಸ್ತಕವನ್ನು ಬಿಡಿಸಿದ ಕೂಡಲೇ ಅದರಿಂದ ಡೈನೋಸಾರ್‌ ದಿಗ್ಗನೆ ಮೇಲೇಳುವ ಪಾಪ್‌-ಅಪ್‌ ಪುಸ್ತಕಗಳು, ಸಿಕ್ಕಸಿಕ್ಕಲೆಲ್ಲ ಅಂಟಿಸಬಹುದಾದ ಡೈನೋಸಾರ್‌ ಸ್ಟಿಕರ್‌ಗಳು.. ಹೀಗೆ ಬಹುಕೃತ ವೇಷ ಧರಿಸಿ ಡೈನೋಸಾರ್‌ ನಮ್ಮ ಮನೆಯೊಳಗೆ ನಾನಾ ಅವತಾರಗಳಲ್ಲಿ ಪ್ರವೇಶ ಪಡೆದಿತ್ತು.

ಹೆಚ್ಚು ಕಡಿಮೆ ಮಗನ ಇದೇ ವಯಸ್ಸಿನಲ್ಲಿದ್ದಾಗಲೇ ನನಗೆ ಡೈನೋಸಾರ್‌ ಎಂಬ ಜೀವಿ ಭೂಮಿ ಮೇಲೆ ಇತ್ತು ಎಂಬ ಹೊಸ ವಿಷಯ ಗೊತ್ತಾಗಿತ್ತು. ನಮ್ಮೂರಿನ ಏಕೈಕ ಚಿತ್ರಮಂದಿರಕ್ಕೆ ಬಂದ ಜುರಾಸಿಕ್‌ ಪಾರ್ಕ್‌ ನೋಡಲು ಶಾಲೆಯಿಂದ ಟೀಚರು-ಮಕ್ಕಳ ಜತೆ ಹೋಗಿ ಬಂದು, ಹೆದರಿಕೆಯಿಂದ ಗಡಗಡ ನಡುಗಿದ್ದೆ. ಕರೆಂಟು ಹೋಗಿ ಕತ್ತಲಾದಾಗ ಹಿಂದಿನಿಂದ ಡೈನೋಸಾರ್‌ ಬಂದರೆ ಎಂಬ ಯೋಚನೆಯಲ್ಲೇ ಬೆವರುತ್ತಿದ್ದೆ. ಅಂದಿನ ನನಗೂ, ಅದೇ ವಯಸ್ಸಿನ ಈಗಿನ ಕಾಲದ ಇವನಿಗೂ ಅಜಗಜಾಂತರ ವ್ಯತ್ಯಾಸ. ನಾನು ಕತ್ತಲಲ್ಲಿ ನಡುಗುತ್ತಿದ್ದರೆ, ಇವ ಡೈನೋಸಾರ್‌ ಹಿಡಿದೇ ಮಲಗುತ್ತಿದ್ದ.

ಅದೇನೇ ಇರಲಿ, ಮನೆಯಲ್ಲಿದ್ದ ಡೈನೋಸಾರ್‌ ಪುಸ್ತಕಗಳನ್ನೆಲ್ಲ ಅರೆದು ಕುಡಿದು ಎಲ್ಲ ಬಗೆಯ ಡೈನೋಸಾರ್‌ಗಳ ಹೆಸರುಗಳನ್ನೂ ಕನಸಿನಲ್ಲೂ ಹೇಳುವಷ್ಟು ಕರತಲಾಮಲಕ ಮಾಡಿಕೊಂಡ ಮೇಲೆ ಮಗನಿಗೆ ಹುಟ್ಟಿದ ಹೊಸ ಬಯಕೆ ಡೈನೋಸಾರ್‌ನ ಸಂಪೂರ್ಣ ಅಸ್ಥಿಪಂಜರ ನೋಡಬೇಕು! ಅವನು ಈ ಬಯಕೆ ವ್ಯಕ್ತಪಡಿಸುವುದಕ್ಕೂ ಮೊದಲೇ ನಾವು ಗುಜರಾತ್‌ನ ಕಚ್‌ ಬಳಿಯ ಧೊಲವೀರದಲ್ಲಿ ಡೈನೋಸಾರ್‌ ಫಾಸಿಲ್‌ ಪಾರ್ಕ್‌ ನೋಡಿ ಬಂದಿದ್ದೆವು. ಅಲ್ಲಿ ಡೈನೋಸಾರ್‌ನ ಅಸ್ಥಿಪಂಜರವಿಲ್ಲದಿದ್ದರೂ, ಡೈನೋಸಾರ್‌ ಕಾಲಘಟ್ಟದ ಕೆಲವು ಕುರುಹುಗಳು, ಮೊಟ್ಟೆಗಳು, ಪಳೆಯುಳಿಕೆಗಳು, ಬ್ಯಾಟರಿ ಚಾಲಿತ ಡೈನೋಸಾರ್‌ ಪ್ರತಿಕೃತಿಗಳು ಇವೆಲ್ಲವೂ ಇದ್ದವು. ಆದರೆ ಇವುಗಳಿಂದ ಅವನ ಹೊಟ್ಟೆ ತುಂಬಿರಲಿಲ್ಲ.

ಡೈನೋಸಾರ್‌ ಅಸ್ಥಿಪಂಜರ ನೋಡಬೇಕಾದರೆ ಅಮೆರಿಕಾ, ಯುರೋಪ್‌, ಚೈನಾಗಳಿಗೇ ಹೋಗಬೇಕಾ? ಇಷ್ಟೊಂದು ವೈವಿಧ್ಯಮಯ ಭೌಗೋಳಿಕತೆ ಹಾಗೂ ಇತಿಹಾಸ ಹೊಂದಿರುವ ನಮ್ಮ ಭಾರತದಲ್ಲಿ ಇಲ್ಲವೇ ಎಂಬ ಹೊಸ ಪ್ರಶ್ನೆ ಆಗ ನಮ್ಮ ತಲೆಯಲ್ಲಿ ಹುಟ್ಟಿಕೊಂಡಿದ್ದೇ ತಡ, ಹುಡುಕಾಟವೂ ಆರಂಭವಾಯಿತು. ಅದಕ್ಕೆ ಸಿಕ್ಕಿದ ಉತ್ತರ ಕೋಲ್ಕತ್ತಾ!

dino museum 2

ಬೊರೋಪಾಸಾರಸ್‌ ಟ್ಯಾಗೋರಿ!

ಹೌದು. ಕೋಲ್ಕತ್ತಾದಲ್ಲೊಂದು ಡೈನೋಸಾರ್‌ ಅಸ್ಥಿಪಂಜರ ಇದೆ. ಅದರ ಹೆಸರು ಬೊರೋಪಾಸಾರಸ್‌ ಟ್ಯಾಗೋರಿ (barapasaurus tagorei)! ಈ ಟ್ಯಾಗೋರಿ ಬಂದಿದ್ದು ಹೇಗೆ ಅನಿಸಿದರೆ ಅದಕ್ಕೊಂದು ಹಿನ್ನೆಲೆಯಿದೆ. ಬೊರೋಪಾಸಾರಸ್‌ ಎಂದು ಹೆಸರಿಡಲಾದ ಈ ಡೈನೋಸಾರ್‌ನ ಅಸ್ಥಿಪಂಜರ 1961ರಲ್ಲಿ ಕೋಲ್ಕತ್ತಾದ ಕೆಲ ಭೂವಿಜ್ಞಾನಿಗಳಿಗೆ ತೆಲಂಗಾಣದ ಗೋದಾವರಿ ನದೀತೀರದ ಸುತ್ತಮುತ್ತಲ ಪ್ರದೇಶದ ಉತ್ಖನನ ಸಂದರ್ಭ ದೊರೆಯಿತಂತೆ. ಅಲ್ಲಿ ಸಿಕ್ಕಿದ ಈ ಡೈನೋಸಾರ್‌ನ ತೊಡೆಯ ಮೂಳೆಗಳೇ ಸುಮಾರು ಆರು ಅಡಿ ಉದ್ದವಿತ್ತು. ʻಬೊರೋ/ಬರಾ/ಬಡಾʼ ಅಂದರೆ ಬೆಂಗಾಲಿ/ಹಿಂದಿಯಲ್ಲಿ ದೊಡ್ಡ ಎಂದರ್ಥ. ಪಾ ಎಂದರೆ ಕಾಲು. ಹಾಗಾಗಿ ದೊಡ್ಡ ಕಾಲುಗಳುಳ್ಳ ದೈತ್ಯ ಹಲ್ಲಿ ಎಂಬ ಅರ್ಥ ಬರುವ ಹಾಗೆ ಆ ಡೈನೋಸಾರ್‌ ಹೆಸರು ಬೊರೋಪಾಸಾರಸ್‌ ಎಂದಾಯ್ತು. ಏಷ್ಯಾದ ಮೊದಲ ನೊಬೆಲ್‌ ಪುರಸ್ಕೃತ ಸಾಹಿಸಿ ರವೀಂದ್ರನಾಥ ಟ್ಯಾಗೋರರ ಜನ್ಮಶತಮಾನೋತ್ಸವವೂ ಕಾಕತಾಳೀಯವಾಗಿ ಅದೇ ವರ್ಷ ಅಂದರೆ 1961ರಲ್ಲೇ ಆಗಿತ್ತು. ಹೀಗಾಗಿ, ಟ್ಯಾಗೋರರ ನೆನಪಿನಲ್ಲಿ ಕೋಲ್ಕತ್ತಾದ ವಿಜ್ಞಾನಿಗಳು ಅವರ ಗೌರವಾರ್ಥವಾಗಿ ಈ ಹೊಸ ಮಹತ್ವದ ಶೋಧವಾದ ಡೈನೋಸಾರ್‌ ಹೆಸರಿನ ಜತೆಗೆ ಟ್ಯಾಗೋರ್‌ ಹೆಸರನ್ನೂ ಸೇರಿಸಿದರು. ಹೀಗಾಗಿ ಅದು ಬೊರೋಪಾಸಾರಸ್‌ ಟ್ಯಾಗೋರಿ ಆಯಿತು.

ವರ್ಷಪೂರ್ತಿ ನಡೆದ ಈ ಉತ್ಖನನದಲ್ಲಿ ಸುಮಾರು 300 ಮೂಳೆಗಳು ಆ ಸ್ಥಳದಲ್ಲಿ ದೊರೆತವು. ಇದು 18 ಮೀಟರ್‌ ಉದ್ದ, ಏಳು ಟನ್‌ ತೂಕದ ಅಸ್ಥಿಪಂಜರ. ಇದು ಏಷ್ಯಾದ ಮೊದಲ ಸಜ್ಜುಗೊಳಿಸಿದ ಡೈನೋಸಾರ್‌ ಕೂಡಾ ಹೌದು. ಇವು ಆರು ಪ್ರತ್ಯೇಕ ಡೈನೋಸಾರ್‌ಗಳ ಬೇರೆ ಬೇರೆ ಕಾಲ ಘಟ್ಟದ ಮೂಳೆಗಳಾಗಿದ್ದು, ಸುಮಾರು 180ರಿಂದ 200 ಮಿಲಿಯನ್‌ ವರ್ಷಗಳ ಹಿಂದೆ ಭಾರತದ ನೆಲದಲ್ಲಿ ಓಡಾಡಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಇದೊಂದೇ ಅಲ್ಲದೆ, 1974-82ರ ಸಂದರ್ಭ ಇದೇ ಅದಿಲಾಬಾದ್‌ ಸುತ್ತಮುತ್ತ ಉತ್ಖನನ ಮಾಡಿದ ಮತ್ತೊಂದು ಡೈನೋಸಾರ್‌ ಕೊಟಾಸಾರಸ್‌ ಹೈದರಾಬಾದ್‌ನ ಬಿರ್ಲಾ ಸೈನ್ಸ್‌ ಸೆಂಟರ್‌ನಲ್ಲಿ ಇಡಲಾಗಿದೆ.

ಡೈನೋಸಾರ್‌ ಬೆನ್ನತ್ತಿ ಪಯಣ

ನಮ್ಮ ಕೋಲ್ಕತ್ತಾ ಪಯಣದ ಯೋಜನೆ ಸಿದ್ಧವಾಗಿದ್ದೇ ಆ ಕಾರಣದಿಂದ. ಅದರ ಮೂಲಕ ಉದ್ದೇಶ ಡೈನೋಸಾರ್‌ ಆದರೂ, ಅದರ ಜತೆ ಹಲವಾರು ಬೇರೆ ಉದ್ದೇಶಗಳೂ ಸೇರ್ಪಡೆಗೊಂಡು ಒಂದು ದೊಡ್ಡ ಪಯಣದ ಯೋಜನೆ ಸಿದ್ಧವಾಯಿತು. ದೆಹಲಿಯಿಂದ ಕೋಲ್ಕತ್ತಾ ಸುಮಾರು 1500 ಕಿಮೀಗೂ ಹೆಚ್ಚು. ಎಂದಿನಂತೆ ಕಾರಿನಲ್ಲೇ ಡ್ರೈವ್‌ ಮಾಡಿ ಹೋಗಿ ತಲುಪಿದ್ದೇನೋ ಆಗಿತ್ತು. ಗುರುತು ಹಾಕಿಕೊಂಡಿದ್ದ ಜಾಗಗಳು, ನೋಡಬೇಕಾಗಿದ್ದ ಗಲ್ಲಿಗಳು, ತಿನ್ನಬೇಕಾಗಿದ್ದ ತಿನಿಸುಗಳು ಕೂಡಾ ಸೇರಿದಂತೆ ಎಲ್ಲವೂ ಅಂದುಕೊಂಡದ್ದಕ್ಕಿಂತ ಚೆನ್ನಾಗಿಯೇ ಆಗಿತ್ತು. ಆದರೆ ವಿಚಿತ್ರ ಅಂದರೆ, ಯಾವುದನ್ನು ಮಗನಿಗೆ ತೋರಿಸಬೇಕು ಎಂಬ ಮೂಲ ಉದ್ದೇಶದಿಂದ ಬಂದಿದ್ದೆವೋ ಅದೇ ನಮಗೆ ಸಿಕ್ಕಿರಲಿಲ್ಲ. ಭಾರತದ ಬಹು ದೊಡ್ಡ ಮ್ಯೂಸಿಯಂಗಳಲ್ಲಿ ಪ್ರಮುಖವಾದ ಕೋಲ್ಕತ್ತಾ ಮ್ಯೂಸಿಯಂನಲ್ಲಿ ದಿನವಿಡೀ ಪಾದ ಸವೆಸಿದ್ದರೂ ನಮಗೆ ಅಲ್ಲಿ ನಮಗೆ ಬೇಕಾಗಿದ್ದ ಡೈನೋಸಾರ್‌ ಸಿಕ್ಕಿರಲಿಲ್ಲ. ಅಷ್ಟರಲ್ಲಿ ನಮಗೆ ತಿಳಿದ ಸತ್ಯವೆಂದರೆ, ಈ ಡೈನೋಸಾರ್‌ ಅಸ್ಥಿಪಂಜರ ಕೋಲ್ಕತ್ತಾ ಮ್ಯೂಸಿಯಂನಲ್ಲಿಲ್ಲ, ಬದಲಾಗಿ ಅದು ಇಂಡಿಯನ್‌ ಸ್ಟಾಟಿಸ್ಟಿಕಲ್‌ ಇನ್ಸ್‌ಟಿಟ್ಯೂಟ್‌ (ISI)ನ ಜಿಯಾಲಾಜಿ ವಿಭಾಗದಲ್ಲಿದೆ ಎಂಬುದು. ಅಷ್ಟೇ ಅಲ್ಲ, ಅಲ್ಲಿ ಸಾಮಾನ್ಯ ನಾಗರಿಕರ ವೀಕ್ಷಣೆಗೆ ಅವಕಾಶವೂ ಇಲ್ಲ ಎಂಬ ವಿಚಾರವೂ ತಿಳಿದು ಮಗನ ಜತೆಗೆ ಆಸೆಗೆ ತಣ್ಣೀರೆರಚಿದಂತಾಗಿತ್ತು.

dino museum

ಆದರೆ, ನಮ್ಮ ಪ್ರಯತ್ನ ಮಾಡಬಾರದು ಎಂದಿಲ್ಲವಲ್ಲ! ಆದದ್ದಾಗಲಿ, ಇಷ್ಟು ದೂರ ಬಂದಾಗಿದೆ, ಡೈನೋಸಾರ್‌ ನೋಡದೆ ಹೋಗುವ ಮಾತೇ ಇಲ್ಲ ಎಂದು ನಾವು ಅವನನ್ನು ಹುರಿದುಂಬಿಸಿ, ಮಾರನೇ ದಿನ ಬೆಳಿಗ್ಗೆ ಗೇಟು ತೆರೆಯುವ ಹೊತ್ತಿಗೆ ಸ್ಟಾಟಿಸ್ಟಿಕಲ್‌ ಇನ್ಸ್‌ಟಿಟ್ಯೂಟ್‌ ಎದುರು ಕಾರು ನಿಲ್ಲಿಸಿದೆವು. ಅಲ್ಲಿನ ಸಿಬ್ಬಂದಿ ಸಹಜವಾಗಿಯೇ ಸಾರ್ವಜನಿಕರಿಗೆ ವಿಶೇಷ ಅನುಮತಿ ಪತ್ರವಿಲ್ಲದೆ ಪ್ರವೇಶವಿಲ್ಲ ಎಂದು ನಿರಾಕರಿಸಿದರು.

ಅಷ್ಟರಲ್ಲಿ ನಮ್ಮ ಸೈನ್ಯದ ಬಹುಮುಖ್ಯ ಪಾತ್ರಧಾರಿಯನ್ನೇ ಮುಂದಿಟ್ಟುಕೊಂಡು, ನಾವು ದೆಹಲಿಯಿಂದ ಈ ಪುಟಾಣಿಗೋಸ್ಕರವೇ, ಡೈನೋಸಾರ್‌ ಅಸ್ಥಿಪಂಜರ ನೋಡಲೆಂದೇ ಬಂದಿದ್ದೇವೆ. ದಯವಿಟ್ಟು ನೋಡಲು ಅನುಮತಿ ಕೊಡುವಿರಾ ಎಂದು ನಮ್ಮ ಅರಿಕೆ ಮುಂದಿಟ್ಟೆವು. ಅದೇನಾಯಿತೋ ಏನೋ, ಮಗನ ಮುಖವನ್ನು ನೋಡಿ, ಅವರು ಜಿಯಾಲಾಜಿಕಲ್‌ ವಿಭಾಗಕ್ಕೆ ಫೋನ್‌ ಮಾಡಿದರು. ಅಲ್ಲಿ ಅವರಿಗೆ ಪುಟಾಣಿ ಹುಡುಗನಿಗೆ ಡೈನೋಸಾರ್‌ ಅಸ್ಥಿಪಂಜರ ನೋಡಬೇಕೆಂಬ ವಿಚಾರವನ್ನು ದಾಟಿಸಿದರು. ಸ್ವಲ್ಪ ಮಾತಕತೆಗಳು ನಡೆದು, ನಮ್ಮನ್ನು ಕೊಂಚ ಕಾಲ ಕಾಯಲು ಹೇಳಿ, ಕೊನೆಗೂ ಪಾಸ್‌ ನೀಡಿ ನಮ್ಮನ್ನು ಜಿಯಾಲಾಜಿಕಲ್‌ ವಿಭಾಗಕ್ಕೆ ಕಳುಹಿಸಿಕೊಟ್ಟರು. ತೀರಾ ಹತ್ತಿರಕ್ಕೇ ಹೋಗಲು ಅವಕಾಶ ಸಿಕ್ಕದಿದ್ದರೂ, ಅದನ್ನು ಗಾಜಿನ ಕವಚದ ಹೊರಗಿನಿಂದ ಸ್ವಲ್ಪ ದೂರದಿಂದ ನೋಡುವ ಅವಕಾಶವನ್ನಾದರೂ ಕೊಟ್ಟುದಕ್ಕೆ ಧನ್ಯವಾದ ಹೇಳಿ ಅಲ್ಲಿಂದ ಹೊರಬಂದೆವು.

ಮಿಲಿಯಗಟ್ಟಲೆ ವರ್ಷಗಳ ಹಿಂದೆ ಭಾರತದ ನೆಲದಲ್ಲಿ ಓಡಾಡಿದ ಡೈನೋಸಾರ್‌ನ ಅಸ್ಥಿಪಂಜರವನ್ನು ನೋಡಿದ ಹೊಳಪು ಪುಟಾಣಿಯ ಕಣ್ಣಲ್ಲಿ ಮಿಂಚಿತ್ತು. ನಮ್ಮ ಸಂತೋಷಕ್ಕೆ ಅಷ್ಟು ಸಾಕಿತ್ತು.