ಸಿಕ್ಕಿಂನಲ್ಲಿ ಸಿಕ್ಕಿತು ಒಂದೇ ಜಾಗದಲ್ಲಿ ಚಾರ್ ಧಾಮ್!
ಸಿಕ್ಕಿಂ ಸರಕಾರರ ಇಲ್ಲಿ ಪ್ರವಾಸಿಗರ ಆಕರ್ಷಣೆಗೆಂದೇ ಇಂಥದ್ದೊಂದು ಹೊಸತನಕ್ಕೆ ಮುಂದಾಗಿದೆ. ಇಲ್ಲಿ ಉತ್ತರ ದಿಕ್ಕಿನಲ್ಲಿನ ಬದರಿಯ ಬದರಿನಾಥ, ಪೂರ್ವ ದಿಕ್ಕಿನಲ್ಲಿನ ಪುರಿಯ ಜಗನ್ನಾಥ, ಪಶ್ಚಿಮ ದಿಕ್ಕಿನಲ್ಲಿನ ದ್ವಾರಕ ಮತ್ತು ದಕ್ಷಿಣ ದಿಕ್ಕಿನ ರಾಮೇಶ್ವರಂನ ರಾಮೇಶ್ವರಂ ದೇವಾಲಯಗಳ ಪ್ರತಿಕೃತಿ ದೇವಾಲಯಗಳು ನಿರ್ಮಿಸಿ ಸಾಕ್ಷಾತ್ ಅಲ್ಲಿಗೇ ಹೋಗಿ ಬಂದ ಭಾವಭಕ್ತಿ ತರಿಸುತ್ತಿದ್ದಾರೆ.
- ಶ್ರೀನಿವಾಸ ಮೂರ್ತಿ ಎನ್ ಎಸ್
ಚಾರ್ ಧಾಮ್ ಎಂದರೆ ನಮಗೆ ನೆನಪಾಗುವುದು ಬದರಿನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ. ಆದರೆ ಒಂದೊಂದು ಮೂಲೆಯಲ್ಲಿರುವ ಈ ನಾಲ್ಕೂ ಧಾಮಗಳು ಒಂದೇ ಜಾಗದಲ್ಲಿ ಸಿಕ್ಕರೆ?
ಸಿಕ್ಕಿಂನಲ್ಲಿ ಅಂಥದ್ದೊಂದು ವಿಶೇಷ ಜಾಗವಿದೆ. ಸಿಕ್ಕಿಂ ಪ್ರವಾಸ ಹೋಗುವವರು ಒಂದೇ ಸ್ಥಳದಲ್ಲಿ ಸಿಗುವ ಈ ಚಾರ್ ಧಾಮ್ ಭೇಟಿ ಮಿಸ್ ಮಾಡಲೇಬಾರದು. ಹಿಮಾಲಯದ ಬಳಿ ಒಂದೇ ಕಡೆ ಸಿಗುವ ಈ ಚಾರ್ ಧಾಮ್ ಎಂಬುದು ಸಿಕ್ಕಿಂನ ನಾಮಚಿಯಲ್ಲಿ ಎಂಬಲ್ಲಿದೆ. ದೇಶದ ನಾಲ್ಕು ದಿಕ್ಕಿನಲ್ಲಿರುವ ಚಾರ್ ಧಾಮ್ ಎಂದು ಕರೆಯುವ ಪುಣ್ಯ ಸ್ಥಳಗಳ ಪ್ರತಿಕೃತಿಯನ್ನು ಹಿಮಾಲಯದ ಈ ತಪ್ಪಲಿನಲ್ಲಿ ನಿರ್ಮಿಸಿ ಅದಕ್ಕೆ ಹೊಸ ರೂಪವನ್ನು ನೀಡಿದ್ದಾರೆ.
ಸಿಕ್ಕಿಂ ಟೂರಿಸಂ ಆಕರ್ಷಣೆ!
ಸಮುದ್ರ ಮಟ್ಟದಿಂದ ಸುಮಾರು ಆರು ಸಾವಿರ ಅಡಿ ಎತ್ತರದಲ್ಲಿರುವ ನಾಮಚಿಯ ಬಳಿ ಹಿಮಾಲಯದ ಸೋಲೋಪಾಕ್ ಬೆಟ್ಟದ ತಪ್ಪಲಿನಲ್ಲಿ ಇರುವ ಸಿದ್ದೇಶ್ವರ ಧಾಮ್ ಎಂದು ಕರೆಯಲಾಗುವ ಇಲ್ಲಿ ದೇವಾಲಯಗಳ ಪ್ರತಿಕೃತಿಯನ್ನು ನಿರ್ಮಿಸಿದ್ದಾರೆ. ಸಿಕ್ಕಿಂ ಸರ್ಕಾರ ಇಲ್ಲಿ ಪ್ರವಾಸಿಗರ ಆಕರ್ಷಣೆಗೆಂದೇ ಇಂಥದ್ದೊಂದು ಹೊಸತನಕ್ಕೆ ಮುಂದಾಗಿದೆ. ಇಲ್ಲಿ ಉತ್ತರ ದಿಕ್ಕಿನಲ್ಲಿನ ಬದರಿಯ ಬದರಿನಾಥ, ಪೂರ್ವ ದಿಕ್ಕಿನಲ್ಲಿನ ಪುರಿಯ ಜಗನ್ನಾಥ, ಪಶ್ಚಿಮ ದಿಕ್ಕಿನಲ್ಲಿನ ದ್ವಾರಕ ಮತ್ತು ದಕ್ಷಿಣ ದಿಕ್ಕಿನ ರಾಮೇಶ್ವರಂನ ರಾಮೇಶ್ವರಂ ದೇವಾಲಯಗಳ ಪ್ರತಿಕೃತಿ ದೇವಾಲಯಗಳು ನಿರ್ಮಿಸಿ ಸಾಕ್ಷಾತ್ ಅಲ್ಲಿಗೇ ಹೋಗಿ ಬಂದ ಭಾವಭಕ್ತಿ ತರಿಸುತ್ತಿದ್ದಾರೆ.

ಚಾರ್ ಧಾಮ್ ಇತಿಹಾಸ
ಇದಕ್ಕಾಗಿಯೇ ಒಂದು ದೇಶದಲ್ಲಿನ ನಾಲ್ಕು ಭಾಗದ ವಿಷ್ಣುವಿನ ದೇವಾಲಯಗಳನ್ನು ತನ್ನದೇ ಆದ ವಿಶಿಷ್ಟ ಕಾರಣಗಳಿಂದ ಅಯ್ದು ಕೊಳ್ಳಲಾಗಿದೆ. ಬದರಿಯಲ್ಲಿ ವಿಷ್ಣುವಿನ ಅವತಾರವಾದ ನರನಾರಾಯಣ ಇಲ್ಲಿ ತಪಸ್ಸು ಮಾಡಿದ ಎಂಬ ನಂಬಿಕೆ ಇದೆ. ಆ ಸಮಯದಲ್ಲಿ ಇಲ್ಲಿ ಸಾಕಷ್ಟು ಬೆರ್ರಿ ಮರಗಳು ಇದ್ದವು. ಸಂಸ್ಕೃತದಲ್ಲಿ ಬೆರ್ರಿಗೆ ಬದರಿ ಎಂದು ಕರೆಯುತ್ತಾರೆ. ಹಾಗಾಗಿ ಬದರಿ ಕಾ ಬನ ಎಂದು ಕರೆಯುತ್ತಾರೆ. ಇನ್ನು ಪುರಿಯಲ್ಲಿ ವಿಷ್ಣುವನ್ನು ಜಗನ್ನಾಥನ ಸ್ವರೂಪದಲ್ಲಿ ಪೂಜೆ ಮಾಡಲಾಗುತ್ತದೆ. ದ್ವಾರಕೆ ವಿಷ್ಣುವಿನ ಅವತಾರವಾದ ಶ್ರೀ ಕೃಷ್ಣ ಜನಿಸಿದ ಸ್ಥಳವಾಗಿದ್ದು ಇಲ್ಲಿ ಪೂಜಿತನಾಗುತ್ತಿದ್ದಾನೆ. ರಾಮೇಶ್ವರಂನಲ್ಲಿ ಶ್ರೀ ರಾಮನು ತನ್ನ ಪೂಜೆಗಾಗಿ ಸ್ವತಃ ಶಿವಲಿಂಗ ಸ್ಥಾಪಿಸಿದ ಎಂಬ ನಂಬಿಕೆ ಇದೆ. ಹಾಗಾಗಿ ಈ ನಾಲ್ಕು ದೇವಾಲಯಗಳನ್ನು ಚಾರ್ ಧಾಮ್ ಎಂದು ಕರೆಯುವ ನಂಬಿಕೆ ಇದೆ.
ದ್ವಾದಶ ಜ್ಯೋತಿರ್ಲಿಂಗವೂ ಇದೆ!
ದೇವಾಲಯದ ಆರಂಭದಲ್ಲಿ ಸುಮಾರು 16.5 ಅಡಿ ಎತ್ತರದ ಅಪರೂಪದ ಕಿರಾತೇಶ್ವರನ ಮೂರ್ತಿ ಇದೆ. ಇದನ್ನು ಹಾದು ಮುಂದೆ ಹೋದರೆ ಚಾರ್ ಧಾಮ್ ನ ನಾಲ್ಕು ಪ್ರತಿಕೃತಿ ಮಂದಿರಗಳು ಜೊತೆಯಲ್ಲಿ ದ್ವಾದಶ ಜ್ಯೋತಿರ್ಲಿಂಗ ದೇವಾಲಯಗಳನ್ನು ಸಹ ನೋಡಬಹುದು. ಇಲ್ಲಿ ಇದರ ನಡುವೆ ಸಾಯಿ ಬಾಬಾ ಮಂದಿರವನ್ನೂ ನೋಡಬಹುದು.
ಈ ದೇವಾಲಯಗಳನ್ನು ನೋಡಿ ಮೇಲೆ ಬಂದರೆ ನಮಗೆ ಕಾಣಸಿಗುವುದೇ ಬೃಹತ್ ನಂದಿ. ಅದರ ಎದುರಲ್ಲಿ ಸುಮಾರು 108 ಅಡಿ ಎತ್ತರದ ಬೃಹತ್ ದೇವಾಲಯವಿದ್ದು ಇಲ್ಲಿ 88 ಅಡಿ ಎತ್ತರದ ಶಿವನ ಮೂರ್ತಿ ಇದೆ. ದೇವಾಲಯದ ಒಳ ಭಾಗದಲ್ಲಿ ಶಿವನ ದೇವಾಲಯದಲ್ಲಿನ ಶಿವನ ಕಥನಗಳು, ಶಿವ ಪಾರ್ವತಿ ವಿವಾಹ, ಶಿವನ ಅವತಾರದ ಹಲವು ಕಥೆಗಳ ಉಬ್ಬು ಶಿಲ್ಪಗಳ ಕೆತ್ತನೆ ನೋಡಬಹುದು.

ಕಾಂಚನಜುಂಗ ಬೋನಸ್!
ಈ ದೇವಾಲಯ ಸಂಪೂರ್ಣ ಪ್ರಶಾಂತವಾಗಿದ್ದು ದೇಶದ ಉದ್ದಕ್ಕೂ ಚಲಿಸಲಾಗದವರಿಗೆ ಒಂದೇ ಜಾಗದಲ್ಲಿ ಎಲ್ಲ ಪುಣ್ಯಕ್ಷೇತ್ರಗಳನ್ನು ನೋಡಿದ ನೆಮ್ಮದು ಮತ್ತು ಆತ್ಮತೃಪ್ತಿ ಸಿಗುತ್ತದೆ. ವಾತಾವರಣ ಪೂರಕವಾಗಿದಲ್ಲಿ ಕಾಂಚನಜುಂಗದ ಸುಂದರ ದೃಶ್ಯ ಕೂಡ ನೋಡಬಹುದು. ಪ್ರಕೃತಿ ಇಷ್ಟ ಪಡುವವರಿಗೂ ಹಿಮಾಲಯದ ಮಡಿಲಿನ ವಾತಾವರಣ ಮುದ ನೀಡುವಂತಿದ್ದು ತಾನಾಗಿ ಭಕ್ತಿಭಾವ ಮೂಡುವ ಜಾಗವಿದು. ದೇವಾಲಯದ ಅವರಣದಲ್ಲಿ ವಿಶಾಲವಾದ ಪಾರ್ಕಿಂಗ್ ಜಾಗ, ಸುಸಜ್ಜಿತ ಯಾತ್ರಿ ನಿವಾಸಗಳು ಲಭ್ಯವಿದ್ದು ಪ್ರಶಾಂತ ವಾತಾವರಣದಲ್ಲಿ ಉಳಿಯುವ ಬಯಸುವವರಿಗೆ ಎಲ್ಲ ಸೌಲಭ್ಯಗಳು ಇವೆ.
ತಲುಪುವ ಬಗೆ
ಬೆಂಗಳೂರಿನಿಂದ ರೈಲು (ನ್ಯೂ ಜಲಪೈಗುರಿ) ಅಥವಾ ವಿಮಾನದ (ಭಾಗ್ದೋದರ) ಮೂಲಕ ಸಿಲಿಗುರಿ ತಲುಪಿದರೆ ಅಲ್ಲಿಂದ ಸುಮಾರು ಮೂರು ಘಂಟೆ ಪ್ರಯಾಣ (90 ಕಿ ಮೀ) ಪ್ರವಾಸಿ ವಾಹನಗಳು ರೈಲು ಮತ್ತು ವಿಮಾನ ನಿಲ್ದಾಣದಲ್ಲಿಯೇ ಸಿಗುತ್ತದೆ. ನೋಂದಾಯಿತ ಪ್ರವಾಸಿ ಟ್ರಾವೆಲ್ಸ್ ಮೂಲಕವೂ ಹೋಗಬಹುದು.
ಸೂಕ್ತ ಸಮಯ
ನವೆಂಬರಿನಿಂದ ಮೇ ತಿಂಗಳಿನವರೆಗೂ ಇಲ್ಲಿನ ಭೇಟಿಗೆ ಸೂಕ್ತ ಸಮಯ. ಇಲ್ಲಿ ಹಿಮಪಾತದ ಭಯವಿರದ ಕಾರಣ, ವಾತಾವರಣ ಹಿತವಾಗಿರುವ ಕಾರಣ ಭೇಟಿ ನೀಡಲು ತೊಂದರೆಯಿಲ್ಲ. ಆದರೆ ಹಿಮಾಲಯದ ಮಡಿಲಿನ ಇತರ ಜಾಗಗಳನ್ನು ನೋಡಲು ಬಯಸುವವರಿಗೆ ಮಾರ್ಚ್ ನಿಂದ ಮೇ ಸೂಕ್ತ ಸಮಯ.