ಮೇಘಾಲಯದ ಈ ಸೇತುವೆ ಬೀಳೋದಲ್ಲ ಬೆಳೆಯೋದು
ಎರಡು ಹಂತದ ‘ಡಬಲ್ ಡೆಕ್ಕರ್ ಲಿವಿಂಗ್ ರೂಟ್ʼ ಜೀವಂತ ಬಳ್ಳಿಯ ಸೇತುವೆಗೆ ನೊಂಗ್ರಿಯಾಟ್ ಪ್ರಸಿದ್ಧವಾಗಿದೆ. ನದಿಯಲ್ಲಿನ ಪ್ರವಾಹ ಅಥವಾ ನೀರಿನ ಮಟ್ಟ ಹೆಚ್ಚಾದಾಗ ಕೆಳಗಿನ ಸೇತುವೆಯು ಮುಳುಗುವುದರಿಂದ, ಅದರ ಮೇಲ್ಭಾಗದಲ್ಲಿ ಮತ್ತೊಂದು ಜೀವಂತ ಸೇತುವೆಯನ್ನು ನಿರ್ಮಿಸಲಾಗಿದೆ. ವಿಶೇಷವೆಂದರೆ ಈ ಡಬಲ್ ಡೆಕ್ಕರ್ ಲಿವಿಂಗ್ ರೂಟ್ ಸರಿಸುಮಾರು 250 ವರ್ಷಗಳಷ್ಟು ಹಳೆಯದು ಎನ್ನಲಾಗಿದೆ. ಮೇಘಾಲಯದ ಸುಂದರ ವಾತಾವರಣ ಮತ್ತು ಜೀವಂತ ಸೇತುವೆ ನೋಡಲೆಂದೇ ಸಾಕಷ್ಟು ಜನರು ಅಲ್ಲಿಗೆ ಬೇಟಿ ನೀಡುತ್ತಾರೆ.
- ಸಂತೋಷ್ ರಾವ್ ಪೆರ್ಮುಡ
ಸೇತುವೆಗಳನ್ನು ಸಾಮಾನ್ಯವಾಗಿ ಕಾಂಕ್ರೀಟ್ ಅಥವಾ ಕಬ್ಬಿಣದಿಂದ ನಿರ್ಮಿಸುತ್ತಾರೆ. ಆದರೆ, ಮೇಘಾಲಯದ ದಕ್ಷಿಣ ಭಾಗದಲ್ಲಿ ಜೀವಂತ ಬಳ್ಳಿಗಳ ಸೇತುವೆಗಳು ಕಾಣಸಿಗುತ್ತವೆ. ಶಿಲ್ಲಾಂಗ್ ಪ್ರಸ್ಥಭೂಮಿಯ ದಕ್ಷಿಣದ ಪರ್ವತ ಪ್ರದೇಶದ ಖಾಸಿ ಮತ್ತು ಜೈಂಟಿಯಾ ಪಂಗಡದ ಜನರು ‘ಫಿಕಸ್ ಎಲಾಸ್ಟಿಕ್’ ಪ್ರಬೇಧದ ರಬ್ಬರ್ ಅಂಜೂರದ ಮರಗಳ ತೂಗಾಡುವ ಬೇರುಗಳನ್ನು ಸೇರಿಸಿ ಗಟ್ಟಿಯಾಗಿ ಬೆಸೆದು ಈ ಸೇತುವೆಗಳನ್ನು ತಯಾರಿಸುತ್ತಾರೆ. ನಾಗಾಲ್ಯಾಂಡ್‌ನಲ್ಲೂ ಇಂಥ ಜೀವಂತ ಬಳ್ಳಿಗಳ ಸೇತುವೆಗಳನ್ನು ಕಾಣಬಹುದು. ಇಂಡೋನೇಷ್ಯಾದಲ್ಲಿ ಸುಮಾತ್ರಾ ದ್ವೀಪದ ಜೆಂಬಾಟನ್ ಅಕರ್ ಮತ್ತು ಜಾವಾದ ಬಾಂಟೆನ್ ಪ್ರೂವೆನ್‌ನಲ್ಲಿ, ಬದುಯ್ ಜನರೂ ತಮ್ಮ ಗುಡ್ಡಗಾಡು ಪ್ರದೇಶಗಳ ನಡುವಿನ ತೊರೆಗಳನ್ನು ದಾಟಲು ಇಂಥ ಸೇತುವೆಗಳನ್ನು ಬಳಸುತ್ತಾರೆ.
ಇದನ್ನೂ ಓದಿ: ಸರ್ಕಾರಿ ಅಧಿಕಾರಿ ಎರಡು ದಶಕಗಳ ಪ್ರಯತ್ನ ಈ ಶಿಲ್ಪ ಉದ್ಯಾನ
ಬಳ್ಳಿಗಳ ಜತೆಗೆ ಸೇತುವೆಯೂ ಬಲವಾಗುತ್ತದೆ
‘ಫಿಕಸ್‌ಎಲಾಸ್ಟಿಕ್’ ಮರದ ಬೇರುಗಳನ್ನು ನದಿಯ ಎರಡೂ ಬದಿಗಳಿಂದ ಅಡ್ಡಲಾಗಿ ಎಳೆದು ಕಟ್ಟಿ ಈ ಜೀವಂತ ಬಳ್ಳಿಗಳ ಸೇತುವೆ ನಿರ್ಮಿಸಲಾಗುತ್ತದೆ. ನಂತರ ಬೇರುಗಳು ಮನುಷ್ಯನ ತೂಕವನ್ನು ಹಿಡಿದಿಟ್ಟುಕೊಳ್ಳುವಷ್ಟು ಸಾಮರ್ಥ್ಯ ಪಡೆದುಕೊಳ್ಳುವಂತೆ ಬೆಳೆಯಲು ಅವಕಾಶ ನೀಡಲಾಗುತ್ತದೆ. ಎಳೆಯ ಬೇರುಗಳನ್ನೂ ಕೆಲವೊಮ್ಮೆ ಪ್ರಬುದ್ಧ ಬೇರುಗಳೊಂದಿಗೆ ಒಟ್ಟಿಗೆ ಸೇರಿಸಿ ಅಥವಾ ತಿರುಚಿ ಕಟ್ಟಲಾಗುತ್ತದೆ. ಬಳ್ಳಿಗಳು ಪರಸ್ಪರ ಬೆಸೆದುಕೊಳ್ಳುವಂತೆ ಅವುಗಳನ್ನು ಹೆಣೆಯಲಾಗುತ್ತದೆ. ಫಿಕಸ್ ಎಲಾಸ್ಟಿಕ್ ಮರ ಮತ್ತು ಅದರ ಬಳ್ಳಿಗಳು ಕಡಿದಾದ ಇಳಿಜಾರು ಮತ್ತು ಕಲ್ಲಿನ ಮೇಲ್ಮೈಗಳನ್ನು ಭದ್ರವಾಗಿ ಹಿಡಿದುಕೊಂಡು ಬೆಳೆಯುವ ಗುಣವನ್ನು ಹೊಂದಿವೆ. ಆದ್ದರಿಂದ ಇಂಥ ಜೀವಂತ ಬಳ್ಳಿಗಳ ಸೇತುವೆಗಳು ಹಲವು ಶತಮಾನಗಳಷ್ಟು ಜೀವಿತಾವಧಿಯನ್ನು ಹೊಂದುತ್ತವೆ. ಸೇತುವೆ ನಿರ್ಮಾಣಕ್ಕೆ ಬಳಸಿದ ಮರವು ಆರೋಗ್ಯಕರವಾಗಿ ಇರುವವರೆಗೂ ಸೇತುವೆಯು ಅದರ ಘಟಕದ ಬೇರುಗಳು ದಪ್ಪವಾಗಿ ಬೆಳೆದಂತೆ ಸ್ವಾಭಾವಿಕವಾಗಿ ಸ್ವಯಂ ನವೀಕರಣಗೊಳ್ಳುತ್ತದೆ ಮತ್ತು ಸ್ವಯಂ ಬಲಗೊಳ್ಳುತ್ತದೆ. ಈ ಸಮಯದಲ್ಲಿ ಜನರು ಆಗ್ಗಾಗ್ಗೆ ಬಳ್ಳಿಗಳ ನಡುವೆ ಕಲ್ಲು, ಮಣ್ಣುಗಳನ್ನು ಹಾಕಿ ಅವುಗಳನ್ನು ಸಮತಟ್ಟಾದ ಸೇತುವೆಯಂತೆ ಬದಲಾಯಿಸುತ್ತಾರೆ.

ಕೈಯಿಂದ ಬಳ್ಳಿಯ ಸೇತುವೆ ಉತ್ಪಾದನೆ
ಈ ಸೇತುವೆ ನಿರ್ಮಾಣವು ಕರಕುಶಲ ಕಲೆ ಎಂದರೆ ತಪ್ಪಾಗದು. ಬಳ್ಳಿಯ ಸೇತುವೆಗಳನ್ನು ಸಂಪೂರ್ಣವಾಗಿ ಕೈಯಿಂದ ನಿರ್ಮಿಸಲಾಗುತ್ತದೆ. ಆಗಾಗ್ಗೆ ಸ್ಥಳೀಯರು ಅವರ ಅಗತ್ಯಕ್ಕೆ ತಕ್ಕಂತೆ ಸೇತುವೆಯಲ್ಲಿ ಸಣ್ಣ ಸಣ್ಣ ಬದಲಾವಣೆಗಳನ್ನೂ ಮಾಡುತ್ತಾರೆ. ಇದರ ವಿನ್ಯಾಸವನ್ನು ಬೇಕಾದ ಆಕಾರಕ್ಕೆ ಬದಲಾಯಿಸಬಹುದು. ಪ್ರಾರಂಭದಲ್ಲಿ ಮರ ಅಥವಾ ಬಿದಿರಿನ ಗಳಗಳನ್ನು ಬಳಸಿ ಸೇತುವೆ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗುತ್ತದೆ. ಇದೇ ಅಡಿಪಾಯಕ್ಕೆ ಫಿಕಸ್ ಎಲಾಸ್ಟಿಕ್ ಮರದ ಬೇರುಗಳನ್ನು ಹೆಣೆದು 10-15 ವರ್ಷಗಳ ಬಳಿಕ ಜೀವಂತ ಸೇತುವೆ ರೂಪುಗೊಳ್ಳುತ್ತದೆ. ಈ ಸಮಯದಲ್ಲಿ ಬಳ್ಳಿಯ ಸೇತುವೆ ಬಲಗೊಳ್ಳುವವರೆಗೂ ಬಿದಿರು ಮತ್ತು ಮರದ ಕೊಂಬೆಗಳನ್ನು ಆಗ್ಗಾಗ್ಗೆ ಬದಲಿಸಲಾಗುತ್ತದೆ.
ಹೀಗೆ ಒಂದು ಸೇತುವೆ ಪೂರ್ಣಗೊಳ್ಳಲು ಕಡಿಮೆಯೆಂದರೂ 10-15 ವರ್ಷಗಳೇ ಬೇಕಾಗಬಹುದು. ಆದರೆ ಒಮ್ಮೆ ನಿರ್ಮಾಣವಾದ ಸೇತುವೆಗಳು ಬರೋಬ್ಬರಿ 50 ಜನರನ್ನು ಹೊತ್ತು ನಿಲ್ಲುವಷ್ಟು ಬಲಿಷ್ಟವಾಗಿರಬಲ್ಲವು. ವಿಶೇಷವೆಂದರೆ ಇವುಗಳ ಆಯಸ್ಸು ಸರಿಸುಮಾರು 500 ವರ್ಷಗಳಿಗೂ ಹೆಚ್ಚು ಎಂದರೆ ನಂಬಲೇಬೇಕು.

ಡಬಲ್ ಡೆಕ್ಕರ್ ಲಿವಿಂಗ್ ರೂಟ್
ಎರಡು ಹಂತದ ‘ಡಬಲ್ ಡೆಕ್ಕರ್ ಲಿವಿಂಗ್ ರೂಟ್ʼ ಜೀವಂತ ಬಳ್ಳಿಯ ಸೇತುವೆಗೆ ನೊಂಗ್ರಿಯಾಟ್ ಪ್ರಸಿದ್ಧವಾಗಿದೆ. ನದಿಯಲ್ಲಿನ ಪ್ರವಾಹ ಅಥವಾ ನೀರಿನ ಮಟ್ಟ ಹೆಚ್ಚಾದಾಗ ಕೆಳಗಿನ ಸೇತುವೆಯು ಮುಳುಗುವುದರಿಂದ, ಅದರ ಮೇಲ್ಭಾಗದಲ್ಲಿ ಮತ್ತೊಂದು ಜೀವಂತ ಸೇತುವೆಯನ್ನು ನಿರ್ಮಿಸಲಾಗಿದೆ. ವಿಶೇಷವೆಂದರೆ ಈ ಡಬಲ್ ಡೆಕ್ಕರ್ ಲಿವಿಂಗ್ ರೂಟ್ ಸರಿಸುಮಾರು 250 ವರ್ಷಗಳಷ್ಟು ಹಳೆಯದು ಎನ್ನಲಾಗಿದೆ. ಮೇಘಾಲಯದ ಸುಂದರ ವಾತಾವರಣ ಮತ್ತು ಜೀವಂತ ಸೇತುವೆ ನೋಡಲೆಂದೇ ಸಾಕಷ್ಟು ಜನರು ಅಲ್ಲಿಗೆ ಬೇಟಿ ನೀಡುತ್ತಾರೆ.
ಲಿವಿಂಗ್ ರೂಟ್ ಬ್ಲೀಚರ್ಸ್
ಖಾಸಿಸ್ ಮತ್ತು ಜೈನ್ತಿಯಾಸ್ ಜನರು ರಬ್ಬರ್ ಮರಗಳ ಬೇರುಗಳಿಂದ ಸೇತುವೆಯನ್ನು ನಿರ್ಮಿಸುವಂತೆ ಹಲವು ವಸ್ತುಗಳನ್ನೂ ತಯಾರಿಸುತ್ತಾರೆ. ಅವುಗಳ ಪೈಕಿ ಜೀವಂತ ಏಣಿ ಮತ್ತು ವೇದಿಕೆಗಳು ಪ್ರಮುಖವಾದವುಗಳು. ಪಶ್ಚಿಮ ಜೈನ್ತಿಯಾ ಬೆಟ್ಟದ ಕುಡೆಂಗ್ ರಿಮ್ ಎಂಬ ಹಳ್ಳಿಯಲ್ಲಿ ಫುಟ್ಬಾಲ್ ಮೈದಾನದ ಪಕ್ಕದ ರಬ್ಬರ್ ಮರವನ್ನು ಬಳಸಿ ಫುಟ್‌ಬಾಲ್ ಆಟ ನೋಡಲು ಆಗಮಿಸುವ ಪ್ರೇಕ್ಷಕರು ಕುಳಿತುಕೊಂಡು ವೀಕ್ಷಿಸುವ ‘ಲಿವಿಂಗ್ ರೂಟ್ ಬ್ಲೀಚರ್ಸ್’ ಆಗಿ ನಿರ್ಮಿಸಲಾಗಿದೆ.
ಒಟ್ಟಾರೆ ಮೇಘಾಲಯದಲ್ಲಿ ನಿರ್ಮಾಣವಾಗಿರುವ ಈ ಜೀವಂತ ಸೇತುವೆಗಳು ಅಲ್ಲಿನ ಜನರ ಬದುಕು, ಪರಿಸರ ಸಂರಕ್ಷಣೆಯ ಕಾಳಜಿ ಜತೆಗೆ ಅವರ ಐತಿಹಾಸಿಕ ಕೆಲಸಗಳನ್ನೂ ದಾಖಲಿಸಿಕೊಂಡು ಬಂದಿರುವ ಜೀವಂತ ಸಾಕ್ಷಿ ಎಂದರೆ ತಪ್ಪಾಗದು.

ಎಲ್ಲೆಲ್ಲಿವೆ ಇಂಥ ಜೀವಂತ ಸೇತುವೆಗಳು?
ಪಶ್ಚಿಮ ಜೈನ್ತಿಯಾಹಿಲ್ಸ್ ಜಿಲ್ಲೆ ಮತ್ತು ಪೂರ್ವ ಖಾಸಿಹಿಲ್ಸ್ ಜಿಲ್ಲೆಯಲ್ಲಿ ಜೀವಂತ ಬಳ್ಳಿಯ ಸೇತುವೆಗಳು ಕಂಡುಬರುತ್ತವೆ. ಜೈನ್ತಿಯಾ ಬೆಟ್ಟಗಳಲ್ಲಿನ ಶ್ನಾಂಗ್‌ಪೆಡೆಂಗ್, ನೊಂಗ್‌ಬರೆಹ್, ಖೊಂಗ್ಲಾ, ಪಡು, ಕುಡೆಂಗ್ ಥೈಮೈ ಮತ್ತು ಕುಡೆಂಗ್ ರಿಮ್ ಗ್ರಾಮಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಪೂರ್ವ ಖಾಸಿ ಬೆಟ್ಟಗಳಲ್ಲಿನ ಚಿರಾಪುಂಜಿಯ ಹತ್ತಿರದ ಟೈನ್‌ರಾಂಗ್, ಮೈಂಟೆಂಗ್, ನೊಂಗ್ರಿಯಾಟ್, ನೊಂಗ್ತಿಮ್ಮೆ ಮತ್ತು ಲೈಟ್‌ಕಿನ್‌ಸೆವ್ ಸುತ್ತಮುತ್ತಲಿನ ಗ್ರಾಮಗಳು ಸೇರಿ ಹಲವೆಡೆ ಇಂಥ ಸೇತುವೆಗಳು ಅಸ್ತಿತ್ವದಲ್ಲಿವೆ.