ಹೆಸರು ಕೆಂಪಾದರೂ ಇರುವುದು ಕಲರ್‌ಫುಲ್ ಕುಸುಮಗಳು
ಅರಮನೆಯ ವಿಶೇಷತೆ ಎಂದರೆ ಇಲ್ಲಿ ಅಡುಗೆಮನೆಯೇ ಇಲ್ಲ. ಅಡುಗೆಮನೆಯ ಬಿಸಿ- ಬೆಂಕಿ- ಧೂಳು- ಹೊಗೆಯಿಂದ ಅರಮನೆಯ ಸೌಂದರ್ಯ ಹಾಳಾಗಬಹುದು ಎಂಬ ಉದ್ದೇಶದಿಂದ ಹತ್ತಿರ ಹರಿಯುವ ನದಿಯ ಇನ್ನೊಂದು ದಡದಲ್ಲಿ ಅಡುಗೆ ಮನೆಯನ್ನು ನಿರ್ಮಿಸಲಾಗಿದೆ. ಅಲ್ಲಿ ಸಿದ್ಧವಾದ ಆಹಾರ ಸುರಂಗ ಮಾರ್ಗವಾಗಿ ಅರಮನೆಗೆ ಬಂದು ಕೈಯಿಂದ ಚಲಾಯಿಸುವ ಲಿಫ್ಟಿನ ಮೂಲಕ ಊಟದ ಹಜಾರಕ್ಕೆ ಬರುತ್ತಿತ್ತು. ಈ ಲಿಫ್ಟನ್ನು ಈಗಲೂ ಅಲ್ಲಿ ನೋಡಬಹುದು.
- ವೇದಾ ಆಠವಳೆ , ಬೆಂಗಳೂರು
ಲಾಲ್ ಬಾಗ್ ಎಂದಾಗ ಬೆಂಗಳೂರಿನ ಲಾಲ್ ಬಾಗ್ ಉದ್ಯಾನ ನೆನಪಾಗುತ್ತದೆ. ಆದರೆ ಇತ್ತೀಚೆಗೆ ಮಧ್ಯಪ್ರದೇಶದ ಇಂದೋರ್‌ಗೆ ಹೋದಾಗ ಲಾಲ್ ಬಾಗ್ ಹೆಸರು ಕಿವಿಗೆ ಬಿತ್ತು. ಅದು ಅರಮನೆಯೆಂದು ತಿಳಿದಾಗ ಕುತೂಹಲದಿಂದಲೇ ಭೇಟಿಕೊಟ್ಟೆವು. ಅರಮನೆಯ ಸುತ್ತಲೂ ಇದ್ದ ಕೆಂಪು ಗುಲಾಬಿಗಳ ಉದ್ಯಾನದಿಂದಾಗಿ ಅರಮನೆಗೆ ಲಾಲ್ ಬಾಗ್ ಪ್ಯಾಲೇಸ್ ಎಂಬ ಹೆಸರು ಬಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದಿನಿಂದ ಮೂರು ದಿನಗಳ ಇಂಡಿಯಾ ಇಂಟರ್‌ನ್ಯಾಷನಲ್ ಟ್ರಾವೆಲ್ ಮಾರ್ಟ್
ನಿರ್ಮಾಣ ಇತಿಹಾಸ
ಹೋಳ್ಕರ್ ವಂಶಸ್ಥರಿಂದ ನಿರ್ಮಿಸಲ್ಪಟ್ಟ ಈ ಅರಮನೆ, ಗಾತ್ರದಲ್ಲಿ ಚಿಕ್ಕದಾದರೂ, ವೈಭವದಲ್ಲಿ ಅದ್ಭುತವಾಗಿದೆ. ಸಂಪೂರ್ಣವಾಗಿ ಬ್ರಿಟಿಷ್ ಶೈಲಿಯಲ್ಲಿದೆ. ಹಾಲ್ಗೆನೆಬಣ್ಣದ ಈ ಅರಮನೆಯನ್ನು ನೋಡುವಾಗ ಯುರೋಪಿನಲ್ಲಿ ಇರುವಂತೆ ಭಾಸವಾಗುತ್ತದೆ. 1886ರಲ್ಲಿ ಎರಡನೆಯ ತುಕೋಜಿರಾವ್ ಹೋಳ್ಕರ್‌ನಿಂದ ಈ ಅರಮನೆಯ ಕಾಮಗಾರಿ ಆರಂಭವಾಯಿತು. 1926ರಲ್ಲಿ ಮೂರನೆಯ ತುಕೋಜಿರಾವ್ ಹೋಳ್ಕರ್‌ನ ಕಾಲಕ್ಕೆ ಪೂರ್ಣವಾಯಿತು. ದೇಶಕ್ಕೆ ಸ್ವಾತಂತ್ರ್ಯ ಬಂದು, ರಾಜತ್ವದ ಮಾನ್ಯತೆ ಹೋದಮೇಲೂ ರಾಜ ಪರಿವಾರ ಇಲ್ಲಿ 1978ರವರೆಗೆ ವಾಸವಿದ್ದರು. ಈಗ ಇದು ಮ್ಯೂಸಿಯಂ ಆಗಿ ಜನರ ಕುತೂಹಲ ತಣಿಸುತ್ತಿದೆ.
ಅರಮನೆಯ ವಸ್ತುಗಳ ವಿಷಯ
ಅರಮನೆಯ ಪರಿಸರ ವಿಸ್ತೀರ್ಣದಲ್ಲಿ 75 ಎಕರೆಗಳಷ್ಟಿದೆ. ಇದರ ಗೇಟುಗಳು ಲಂಡನ್ನಿನ ಬಕ್ಕಿಂಗ್ ಹ್ಯಾಮ್ ಅರಮನೆಯ ಗೇಟುಗಳ ಪಡಿಯಚ್ಚು. ಇವುಗಳನ್ನು ಇಂಗ್ಲೆಂಡಿನಲ್ಲೆ ಮಾಡಿಸಿ ಇಲ್ಲಿಗೆ ತಂದು ಜೋಡಿಸಿದ್ದಾರೆ. ಇಲ್ಲಿನ ಇಟಾಲಿಯನ್ ಅಮೃತಶಿಲೆಯ ಕಂಬಗಳು, ಬೆಲ್ಜಿಯಂ ಗಾಜುಗಳು, ಪರ್ಷಿಯನ್ ರತ್ನ ಕಂಬಳಿಗಳು, ಬೃಹತ್ ತೂಗುದೀಪಗಳು ಅರಮನೆಗೆ ವಿಶೇಷ ಮೆರಗು ನೀಡಿವೆ. ಇಲ್ಲಿನ ಪೀಠೋಪಕರಣಗಳು, ಗೋಡೆಗಳ ಮೇಲಿನ ಉಬ್ಬು ಚಿತ್ರಗಳು, ಕಂಚಿನ ಪ್ರತಿಮೆಗಳು ಮತ್ತು ಒಳಾಂಗಣದ ಇತರೆ ವಸ್ತುಗಳನ್ನು ಯುರೋಪಿನವಾಗಿದ್ದು, ಹಡಗಿನಲ್ಲಿ ಮುಂಬೈ ಬಂದರಿಗೆ ತರಿಸಿ, ಅಲ್ಲಿಂದ ಆನೆಗಳ ಸಹಾಯದಿಂದ ಇಂದೋರಿಗೆ ತರಲಾಗಿದೆ.

ಅರಮನೆಯ ನೃತ್ಯದ ಕೋಣೆಯ ನೆಲವನ್ನು , ಸ್ಪ್ರಿಂಗ್‌ಗಳ ಮೇಲೆ ನಿರ್ಮಿಸಲಾಗಿದ್ದು, ನೃತ್ಯ ಮಾಡುವಾಗ ವಿಶೇಷ ಅನುಭವವನ್ನು ನೀಡುತ್ತಿತ್ತು ಎನ್ನಲಾಗಿದೆ. ಗ್ರೀಕ್ ದೇವತೆಗಳ ಉಬ್ಬುಶಿಲ್ಪಗಳು, ಇಟಾಲಿಯನ್ ಶೈಲಿಯ ಗೋಡೆಚಿತ್ರಗಳು ಹಾಗೂ ಮೇಲ್ಚಾವಣಿಯ ಅಲಂಕಾರಗಳಲ್ಲಿ ಯುರೋಪಿಯನ್ ಕಲೆಯ ಪ್ರಭಾವ ದಟ್ಟವಾಗಿದೆ. ಬೆಲ್ಜಿಯಂ ಗಾಜಿನ ಕಿಟಕಿಗಳು ವಿವಿಧ ಬಣ್ಣಗಳ ಬೆಳಕನ್ನು ಒಳಗೆ ಹರಡಿ ವಿಶಿಷ್ಟ ವಾತಾವರಣವನ್ನು ಸೃಷ್ಟಿಸಿವೆ. ಊಟದ ಸಭಾಂಗಣದ ಮೇಲ್ಚಾವಣಿಯಲ್ಲಿ ಗ್ರೀಕ್ ಪುರಾಣಗಳ ಚಿತ್ರಣಗಳಿದ್ದು, ಸಭಾಂಗಣದ ಆಸನ ವಿನ್ಯಾಸವನ್ನು ಮಹಾರಾಜ ತುಕೋಜಿರಾವ್ ಅವರ ಹೆಸರಿನ ʼTʼ ಅಕ್ಷರದ ರೂಪದಲ್ಲಿ ಮಾಡಲಾಗಿದೆ. ಗ್ರಂಥಾಲಯದ ಕೊಠಡಿ, ಬಿಲಿಯರ್ಡ್ಸ್ ಆಟದ ಕೊಠಡಿ ಮತ್ತು ರಾಣಿಯರ ಮಲಗುವ ಕೋಣೆಗಳು ವೈಭವೋಪೇತವಾಗಿವೆ. ಅರಮನೆಯ ಒಳಾಂಗಣದಲ್ಲಿ ನಿಂತಿರುವ ಎರಡು ಹುಲಿಗಳು ಜೀವಂತವಾಗಿವೆಯೇನೋ ಎನ್ನುವ ಭಾವನೆ ಕೊಡುತ್ತವೆ. ರಾಜನಿಂದ ಬೇಟೆಯಾದ ಈ ಹುಲಿಗಳ ದೇಹದ ಒಳಭಾಗವನ್ನು ಸಂಸ್ಕರಿಸಿ, ಗಾಜಿನ ಪೆಟ್ಟಿಗೆಗಳಲ್ಲಿ ನಿಲ್ಲಿಸಿದ್ದಾರೆ.
ಅರಮನೆಯಲ್ಲಿ ಅಡುಗೆ ಮನೆಯೇ ಇಲ್ಲ!
ಅರಮನೆಯ ಇನ್ನೊಂದು ವಿಶೇಷತೆ ಎಂದರೆ ಇಲ್ಲಿ ಅಡುಗೆಮನೆಯೇ ಇಲ್ಲ. ಅಡುಗೆಮನೆಯ ಬಿಸಿ- ಬೆಂಕಿ- ಧೂಳು- ಹೊಗೆಯಿಂದ ಇಲ್ಲಿನ ಸೌಂದರ್ಯ ಹಾಳಾಗಬಹುದು ಎಂಬ ಉದ್ದೇಶದಿಂದ ಅರಮನೆಯ ಹತ್ತಿರ ಹರಿಯುವ ನದಿಯ ಇನ್ನೊಂದು ದಡದಲ್ಲಿ ಅಡುಗೆ ಮನೆಯನ್ನು ನಿರ್ಮಿಸಲಾಗಿದೆ. ಅಲ್ಲಿ ಸಿದ್ಧವಾದ ಆಹಾರ ಸುರಂಗ ಮಾರ್ಗವಾಗಿ ಅರಮನೆಗೆ ಬಂದು ಕೈಯಿಂದ ಚಲಾಯಿಸುವ ಲಿಫ್ಟಿನ ಮೂಲಕ ಊಟದ ಹಜಾರಕ್ಕೆ ಬರುತ್ತಿತ್ತು. ಈ ಲಿಫ್ಟನ್ನು ಈಗಲೂ ಅಲ್ಲಿ ನೋಡಬಹುದು. ಈ ಅರಮನೆಯನ್ನು ಕಟ್ಟುವಾಗ ಇಂದೋರಿಗೆ ವಿದ್ಯುತ್ ಸಂಪರ್ಕ ಬಂದಿರಲಿಲ್ಲ. ಹಾಗಿದ್ದರೂ ವಿದ್ಯುತ್ ವೈರಿಂಗ್ ಅನ್ನು ಮೊದಲೇ ಮಾಡಲಾಗಿತ್ತು! ಎಂಥ ಮುಂದಾಲೋಚನೆ ಅಲ್ಲವೇ? ಮುಂದೆ 1910ರ ಸುಮಾರಿಗೆ ವಿದ್ಯುತ್ ಸಂಪರ್ಕ ಬಂದಮೇಲೆ ಅರಮನೆ ವಿದ್ಯುದ್ದೀಪಗಳಿಂದ ಜಗಮಗಿಸುತ್ತಿತ್ತು ಎನ್ನಲಾಗಿದೆ.

ಅರಮನೆಯನ್ನು ಕಂಡು ಸಂತಸವಾಯಿತು. ಆದರೆ ಬ್ರಿಟಿಷರಿಗೆ ಅಡಿಯಾಳಾಗಿ ಬದುಕಿ, ಅವರ ಮಾದರಿಯನ್ನೇ ತಮ್ಮ ಜೀವನಶೈಲಿ ಮಾಡಿಕೊಂಡ ರಾಜರ ಬಗ್ಗೆ ಬೇಸರವೆನಿಸಿತು. ತಾಯಿ ನೆಲದಲ್ಲಿ ಬದುಕಿ, ಯುರೋಪಿನ ವೈಭವವನ್ನು ಆಮದು ಮಾಡಿಕೊಂಡು ಮೆರೆಯುವ ಅಗತ್ಯವಿತ್ತೆ? ದೇಶದ ಯುವಕರು ಸ್ವಾತಂತ್ರ್ಯಕ್ಕಾಗಿ ಜೀವತೇಯುತ್ತಿದ್ದ ಕಾಲದಲ್ಲಿ ಅರಮನೆಗಳಲ್ಲಿ ಸುಖವಾಗಿ ಬದುಕಿದ ಇಂಥ ರಾಜರ ನೈತಿಕತೆಗೆ ಯಾವ ಅರ್ಥವಿದೆ? ಎಂಬ ಚಿಂತನೆ ನನ್ನ ಮನಸನ್ನು ಕದಡಿತು. ಆದರೆ ರಾಜರಿಗೆ ಆ ಕಾಲಕ್ಕೆ ಯಾವ ಒತ್ತಡಗಳಿದ್ದವೋ? ಅವರ ಅರಮನೆಗಳ ವೈಭವವನ್ನು ಮನಸಾರೆ ಕೊಂಡಾಡುವುದೊಂದೇ ನಮಗಿರುವ ದಾರಿ ಅಲ್ಲವೇ?
ಇಂದು ಅಲ್ಲಿ ರಾಜರಿಲ್ಲ. ವಿದೇಶದ ಕೆಂಪು ಗುಲಾಬಿಗಳೂ ಇಲ್ಲ. ನಮ್ಮ ನೆಲದ ಮಾವು- ಬೇವು- ಅಶ್ವತ್ಥಗಳು ಬೇರೂರಿವೆ. ಸುತ್ತಲಿನ ಉದ್ಯಾನದ ತುಂಬಾ ಕಾಡು ಹೂಗಳು. ಲಾಲ್ ಬಾಗ್ ಹೆಸರನ್ನು ಅಣಕಿಸುವಂತೆ ವೈವಿಧ್ಯಮಯ ಬಣ್ಣಗಳಲ್ಲಿ ಅರಳಿ ನಿಂತಿವೆ.