• ಪಾರ್ವತಿ ಶಂಭು

ಮೇಘಾಲಯಕ್ಕೆ ಹೋಗಬೇಕೆಂಬುದು ನಮ್ಮ ಬಹು ದಿನಗಳ ಕನಸಾಗಿತ್ತು. ಪರ್ವತ ಶ್ರೇಣೆಗಳ ನಾಡಾದ್ದರಿಂದ ಅಲ್ಲಿನ ಜಲಪಾತಗಳು, ಪ್ರಕೃತಿ ಸೌಂದರ್ಯದ ಸೆಳೆವು ನಮ್ಮಲ್ಲಿತ್ತು. ನಾವು ಮೂರು ಜನ ಗೆಳತಿಯರು ಅನೇಕ ಕಲ್ಪನೆ, ಕನಸುಗಳನ್ನು ಹೊತ್ತು ಮೇಘಾಲಯವನ್ನು ಕಣ್ತುಂಬಿಕೊಳ್ಳಲು ವಿಮಾನವೇರಿ ಹೊರಟೆವು.

ಬೆಟ್ಟ, ಗುಡ್ಡ, ಹಸಿರು, ಜಲಪಾತಗಳನ್ನು ನೋಡಬೇಕೆಂಬ ಬಯಕೆ ನಮ್ಮಲ್ಲಿತ್ತು. ಆದರೆ, ʻಬ್ಯಾಂಬುಟ್ರಕ್ʼ ಟ್ರೆಕ್ಕಿಂಗ್ ಹೋಗಬೇಕೆಂಬುದು ನಮ್ಮ ಕಲ್ಪನೆಯಲ್ಲಿಯೇ ಇರಲಿಲ್ಲ. ಮೇಘಾಲಯ, ಚಿರಾಪುಂಜಿಗಳಲ್ಲಿ ಅಡ್ಡಾಡುವಾಗ ಬ್ಯಾಂಬೂ ಟ್ರೆಕ್ಕಿಂಗ್‌ ಮಾತುಗಳು ಕಿವಿಗೆ ಬೀಳಲಾರಂಭಿಸಿದವು. ಗೂಗಲ್‌ನಲ್ಲಿ ಸರ್ಚ್‌ ಮಾಡಿ ಅದರ ಬಗ್ಗೆ ಮಾಹಿತಿ ಪಡೆದು, ಹೊರಡಲು ನಿರ್ಧರಿಸಿದೆವು. ಈ ಕುರಿತು ಮನೆಗಳಿಗೆ ಫೋನ್‌ ಮಾಡಿದರೆ, ಮಕ್ಕಳು ʻಏ ನೀವು ಸಾಹಸ ಮಾಡಲು ಹೋಗಿದ್ದಾ ಅಥವಾ ಪ್ರವಾಸಕ್ಕಾ? ಟ್ರೆಕ್ಕಿಂಗ್‌ ಅಭ್ಯಾಸ ಮೂವರಿಗೂ ಇಲ್ಲ. ಜತೆಯಲ್ಲೂ ಬೇರ‍್ಯಾರೂ ಇಲ್ಲ. ಅಂಥ ಸಾಹಸಕ್ಕೆ ಕೈಹಾಕಬೇಡಿ!ʼ ಎಂದರು. ಜಲಪಾತಗಳನ್ನು ತಲುಪಲು ಕಚ್ಚಾ ರಸ್ತೆಗಳಲ್ಲಿ ಹತ್ತಿ ಇಳಿದು ಮಾಡುತ್ತಾ, ‘ನಾವು ನಾಳೆ ಬ್ಯಾಂಬೂ ಟ್ರೆಕ್ಕಿಂಗ್ ಹೋಗುತ್ತೇವೆ. ಬೆಳಿಗ್ಗೆ ನಮ್ಮನ್ನು ಅಲ್ಲಿಗೆ ಬಿಡಿ’ ಎಂದು ನಮ್ಮ ಕಾರಿನ ಡ್ರೆವರ್‌ಗೆ ಹೇಳಿದೆವು. ನಾವು ಮೇಘಾಲಯದಲ್ಲಿ ಓಡಾಡಿದ ರಭಸ, ಉತ್ಸಾಹ ನೋಡಿದ್ದ ನಮ್ಮ ಡ್ರೆವರ್ ನಮ್ಮ ಉತ್ಸಾಹಕ್ಕೆ ತಣ್ಣೀರೆರಚಲಿಲ್ಲ. ʻಆಪ್‌ಲೋಗ್ ಕರ್‌ಸಕ್ತೆ ಹೈ ಬ್ಯಾಂಬೂ ಟ್ರೆಕ್ಕಿಂಗ್ʼ ಎಂದು ಪ್ರೋತ್ಸಾಹಿಸಿದ. ಕೊನೆಗೆ ಮನೆಗಳಿಗೆ ಕಾಲ್‌ ಮಾಡಿ ನಾವು ನಾಳೆ ಟ್ರೆಕ್ಕಿಂಗ್ ಹೋಗುತ್ತಿದ್ದೇವೆ ಎಂದು ಹೇಳಿಯೇ ಬಿಟ್ಟೆವು. ಮಕ್ಕಳೂ ಹೂಂ ಹೋಗಿ ತೀರಾ ಕಠಿಣ ಅನಿಸಿದ್ರೆ ಮರಳಿ ಬಂದುಬಿಡಿ ಎಂದರು.

Untitled design (8)

ʻಬ್ಯಾಂಬೂ ಟ್ರೆಕ್ಕಿಂಗ್ʼ ಏಷ್ಯಾದಲ್ಲೇ ಕಷ್ಟಕರ ಟ್ರೆಕ್ಕಿಂಗ್ ಎಂದು ಗುರುತಿಸಲ್ಪಟ್ಟಿದೆ. ವಾಂಖೆ ಗ್ರಾಮಸ್ತರಿಂದ 2006ರಿಂದ ಈ ಟ್ರೆಕ್ಕಿಂಗ್ ಪ್ರಾರಂಭವಾಯ್ತು. ಶಿಲ್ಲಾಂಗ್ ನಗರದಿಂದ 45 ಕಿಮೀ ದೂರದಲ್ಲಿದೆ. ಒಟ್ಟು 3.7 ಕಿಮೀ ಉದ್ದ ಮತ್ತು 880 ಅಡಿ ಎತ್ತರವಿದೆ. ಕಲ್ಲು ಹಾಗೂ ಬ್ಯಾಂಬೂಗಳಿಂದ ಸೇತುವೆ ಮಾರ್ಗ ಮಾಡಲಾಗಿದೆ. ಸ್ಥಳೀಯರೇ ಈ ಸೇತುವೆಗಳನ್ನು ನಿರ್ಮಿಸಿದ್ದಾರೆ. ಇಲ್ಲಿನ ಪ್ರಾದೇಶಿಕ ಭಾಷೆ ಖಾಸಿ. ಈ ಬೆಟ್ಟಗುಡ್ಡವನ್ನು ಹವಾಯ್ ದ್ವೀಪಕ್ಕೆ ಹೋಲಿಸಲಾಗುತ್ತದೆ. ಈ ಸೇತುವೆ ನಿರ್ಮಾಣಕ್ಕೆ 1000 ಜನರು ಶ್ರಮವಹಿಸಿದ್ದಾರೆ.

ಆಸರೆಗಾಗಿ ಕೈಯಲ್ಲೊಂದು ಉದ್ದನೆಯ ಕೋಲು ಹಿಡಿದು ಏರಲಾರಂಭಿಸಿದೆವು. ಕಡಿದಾದ ಜಾಗ ದೊಡ್ಡ, ದೊಡ್ಡ ಕಲ್ಲುಗಳ ಕಚ್ಛಾರಸ್ತೆ, ಸೇತುವೆ ದಾಟಿ ಮುಂದೆ ಮುಂದೆ ಹೋಗುತ್ತಾ ನೂರಾರು ಜಾತಿಯ ಸಸ್ಯಸಂಪತ್ತು. ಕೀಟಗಳು, ಬೆತ್ತದ ಕಾಡುಗಳು, ಜಲಪಾತಗಳು, ಹರಿಯುವ ತೊರೆಗಳು, ಕಣ್ಣು ಹಾಯಿಸಿದಲ್ಲೆಲ್ಲಾ ನಿತ್ಯಹರಿದ್ವರ್ಣ. ಇದೊಂದು ಹಿಡನ್‌ ಬ್ಯೂಟಿ ಅನಿಸಿತು. ಮಾರ್ಗಮಧ್ಯೆ ಸ್ವಚ್ಫ ನೀರಿನ ತೊರೆಯಲ್ಲಿ ಕಾಲು ಇಳಿಬಿಟ್ಟು ಮುಖಕ್ಕೆ ನೀರು ಹಾಕಿಕೊಂಡೆವು, ಅಲ್ಲಿನ ನೀರು ಕುಡಿದರೆ ಅದೊಂದು ಅಮೃತದಂಥ ರುಚಿ. ಸ್ವಲ್ಪ ಸಮಯ ದಣಿವಾರಿಸಿಕೊಂಡು ಮುಂದೆ ಸಾಗಿದೆವು. ಬ್ಯಾಂಬೂ ಸೇತುವೆಗಳು ಏಕಮುಖ ಸಂಚಾರಕ್ಕೆ ಯೋಗ್ಯವಾಗಿದ್ದವು. ಎದುರಿಂದ ಯಾರಾದರೂ ಬಂದರೆ ದಾರಿ ಬಿಡುವುದೇ ಕಷ್ಟ. ಮುಂದೆ ಒಂದು ಚಾಯ್ ’ದುಖಾನ್’ ಸಿಕ್ಕಿತು. ಸ್ಥಳೀಯ ಚಹಾ ಕುಡಿದು ಉತ್ಸಾಹ ತಂದುಕೊಂಡೆವು.

ಮಾರ್ಗದಲ್ಲೇ ಫೊಟೋ, ವಿಡಿಯೋ ಮಾಡಿಕೊಳ್ಳ ತೊಡಗಿದೆವು. ಎದುರಿಗೆ ಸಿಕ್ಕವರನ್ನು ʻಅಭಿ ಕಿತನಾ ದೂರ್ ಹೈ ಬಯ್ಯಾʼ ಅಂದರೆ ʻಅಭೀಭೀ ಆದಾ ದೂರ್ ಬಾಕಿಹೈʼ ಎಂದರು. ಟ್ರೆಕ್ಕಿಂಗ್ ದಾರಿಯಲ್ಲಿ ಪ್ಲಾಸ್ಟಿಕ್ ಬಾಟಲಿ, ಕಸಕಡ್ಡಿಗಳು ಇಲ್ಲವೇ ಇಲ್ಲ. ಅಲ್ಲಲ್ಲಿ ಬೆತ್ತದ ಕಸದ ತೊಟ್ಟಿಗಳಿದ್ದವು. ಅಲ್ಲದೇ ಕಸ ತೆಗೆಯಲು ಜನರು ಕೆಲಸಮಾಡುತ್ತಿದ್ದರು. ಅವರನ್ನು ಮಾತನಾಡಿಸುತ್ತಾ ಮುಂದೆ ಸಾಗಿದೆವು. ದೇಹಕ್ಕೆ ದಣಿವಾದರೂ, ಪರಿಸರ ನಮ್ಮ ಉತ್ಸಾಹಕ್ಕೆ ನೀರೆಯುತ್ತಲಿತ್ತು. ಮುಂದೆ ‘ಮಾವ್ರಿಂಗ್ ಖಾಂಗ್ ವ್ಯೂ ಪಾಯಿಂಟ್ʼ ತಲುಪಿದೆವು. ಅಲ್ಲಿ ನಮ್ಮ ಸಂಭ್ರಮಕ್ಕೆ ಎಣೆಯೇ ಇಲ್ಲವಾಗಿತ್ತು. ಯುವಜನರ ಗುಂಪೊಂದು ನಮಗೆ ಸಿಕ್ಕಿತ್ತು. ಅವರೆಲ್ಲಾ ಟ್ರೆಕ್ಕಿಂಗ್ ಅನ್ನು ಹವ್ಯಾಸ ಮಾಡಿಕೊಂಡವರು. ಮುಂಬಯಿ, ಹೈದರಾಬಾದ್, ಚೆನ್ನೈ ಕಡೆಯಿಂದ ಬಂದವರು. ಅವರೊಂದಿಗೆ ಒಂದಷ್ಟು ಮಾತುಕತೆಗಿಳಿದೆವು. ಅದೊಂದು ಟ್ರೆಕ್ಕಿಂಗ್‌ಗಾಗಿ ನಾವು 2.30 ಗಂಟೆ ಸಮಯ ತೆಗೆದುಕೊಂಡಿದ್ದೆವು.

Untitled design (9)

ವ್ಯೂ ಪಾಯಿಂಟ್‌ನಲ್ಲಿ ನಿಂತು ಸುತ್ತಲ ಜಗತ್ತನ್ನು ನೋಡಿ ಒಂದಷ್ಟು ಸಮಯ ಮಂತ್ರ ಮುಗ್ದರಾದೆವು. ಅಲ್ಲಿನ ಪರಿಸರ ಹಾಗಿದೆ. ಮನರಂಜಿಸುವ ಈ ವ್ಯೂ ಪಾಯಿಂಟ್‌ನಲ್ಲಿ ತನು-ಮನ ದಣಿಯುವ ತನಕ ಕುಣಿದು ಕುಪ್ಪಳಿಸಿದೆವು.

ಅಲ್ಲಿಂದ ಮರಳಿ ವಾಂಖೆ ಗ್ರಾಮ ತಲುಪಿ ಮೊದಲು ಮಾಡಿದ ಕೆಲಸ ಮಕ್ಕಳಿಗೆ ಫೋನ್ ಮಾಡಿ ‘ಟ್ರೆಕ್ಕಿಂಗ್ ಪೂರ್ಣಗೊಳಿಸಿದ್ವಿ’ ಎಂದು ಸಂದೇಶ ಕೊಟ್ಟಿದ್ದು. ಅವರೂ ನಮ್ಮಷ್ಟೇ ಖುಷಿಪಟ್ಟರು. ನಮಗಿಂತ ಮೊದಲು ನಾವಿದ್ದ ಹೋಂಸ್ಟೇಗೆ ಫೋನ್ ಮಾಡಿ ಪ್ರೋಟೀನ್ ಇರುವ ಕಾಳು, ಎಗ್‌ಗಳಿರುವ ಅಡಿಗೆ ಮಾಡಿ ಎಂದು ಹೇಳಿಬಿಟ್ಟಿದ್ದರು. ಒಂದು ವಾರದ ಪೂರ್ಣ ಪ್ರವಾಸದ ಏರ್ಪಾಟುಗಳನ್ನೆಲ್ಲಾ ಮಾಡಿ ನಮ್ಮ ಪ್ರವಾಸ ಸಾಂಗವಾಗಲು ನೆರವಾದ ಮಗಳು ದೀಪಿಕಾಗೆ ಯಾವ ರೀತಿ ಕೃತಜ್ಞತೆ ಹೇಳೋದು?