ಚೋಳರ ನಾಡಿನಲ್ಲಿ ಎರಡು ದಿನಗಳ ಪ್ರವಾಸ
ಇದು ರಾಜರಾಜ ಚೋಳನ ಮಗ ರಾಜೇಂದ್ರ ಚೋಳ ನಿರ್ಮಾಣ ಮಾಡಿದ ಶಿವನ ದೇವಾಲಯ. ಎಲ್ಲ ರಾಜ್ಯಗಳ ಮೇಲೂ ಯುದ್ಧಮಾಡಿ ಹಲವು ಪ್ರಾಂತ್ಯಗಳನ್ನು ವಶಪಡಿಸಿಕೊಂಡಿದ್ದ ಈತ ಈವರೆಗೂ ಯಾವ ಚೋಳ ದೊರೆಯೂ ಮಾಡಿರದಿದ್ದ ಸಾಧನೆ ಮಾಡಲು ಯೋಜನೆ ರೂಪಿಸಿದ್ದ. ಅದು ಗಂಗೆಯ ಪ್ರಾಂತ್ಯವನ್ನು ವಶಪಡಿಸಿಕೊಳ್ಳುವ ಸಾಹಸ. ಇದಕ್ಕಾಗಿ ದಂಡೆತ್ತಿ ಹೋದ ಆತ ಅದರಲ್ಲಿ ಜಯಶಾಲಿಯಾದ. ಅದರ ಸ್ಮರಣಾರ್ಥವಾಗಿ ಗಂಗೆಯನ್ನು ತಮಿಳುನಾಡಿಗೆ ತಂದು ಪ್ರತಿಷ್ಟಾಪನೆ ಮಾಡಿದ.
- ಸಿರಿ ಮೈಸೂರು
ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಸಾಕಷ್ಟು ದೇವಾಲಯಗಳು ಇವೆ. ಅದರಲ್ಲೂ ವಿಶೇಷವಾಗಿ ತಮಿಳುನಾಡಿಗೆ ಹೋದರೆ ದೇವಾಲಯಗಳ ತವರಿಗೆ ಹೋದ ಅನುಭವ ಆಗುವುದರಲ್ಲಿ ಅನುಮಾನವೇ ಇಲ್ಲ. ವರ್ಣರಂಜಿತ ಗೋಪುರಗಳು, ಆಸಕ್ತಿ ಮೂಡಿಸುವ ಇತಿಹಾಸ, ಅದ್ಭುತ ವಾಸ್ತುಶಿಲ್ಪ ಹೀಗೆ ತಮಿಳುನಾಡಿನ ದೇವಾಲಯಗಳು ಸಾಕಷ್ಟು ವಿಶೇಷಗಳನ್ನು ಹೊಂದಿವೆ. ನಾನು ತಮಿಳುನಾಡು ನೋಡಿದ್ದು ಇದೇ ಮೊದಲ ಬಾರಿಗೆ. ಹೋಗಿದ್ದು ಎರಡೇ ದಿನಗಳ ತಮಿಳುನಾಡಿನ ಪುಟ್ಟ ಪ್ರವಾಸವಾದರೂ ಅನುಭವಗಳು ಮಾತ್ರ ಅದ್ಭುತವಾದವು.
ಇದನ್ನೂ ಓದಿ: ತಿರುತಿರುಗಿ ಬರಲೇ ಬೇಕನಿಸುವ ತಿರುವಣ್ಣಾಮಲೈ..!
ಬೆಳಗ್ಗೆ ಮೈಸೂರು ಬಿಟ್ಟ ನಾನು ಬನ್ನಾರಿ ಅಮ್ಮನ್ ದೇವಸ್ಥಾನ ನೋಡಿಕೊಂಡು ಮಧ್ಯಾಹ್ನದ ವೇಳೆಗೆ ತಲುಪಿದ್ದು ನಾಮಕ್ಕಲ್ ಆಂಜನೇಯನ ದೇವಾಲಯಕ್ಕೆ. ಈ ದೇವಸ್ಥಾನದ ವಿಶೇಷತೆ ಎಂದರೆ ಇಲ್ಲಿರುವುದು ಭಾರತದ ಅತಿ ದೊಡ್ಡ ಆಂಜನೇಯನ ವಿಗ್ರಹ. ಹದಿನೆಂಟು ಅಡಿ ಎತ್ತರ ಇರುವ ಇದು ಏಕಶಿಲಾ ವಿಗ್ರಹ. ಈ ದೇವಸ್ಥಾನಕ್ಕೆ ಗೋಪುರ ಇಲ್ಲ. ಆನಂಜನೇಯನ ಮೇಲೆ ಸೂರು/ಮಾಳಿಗೆಯೂ ಇಲ್ಲ. ಎಂಟನೆಯ ಶತಮಾನದ ಈ ದೇವಸ್ಥಾನವಿದು.

ತಂಜಾವೂರು ಬೃಹದೇಶ್ವರ
ನಾಮಕ್ಕಲ್ ದೇವಸ್ಥಾನ ನೋಡಿದ ಬಳಿಕ ಪುಷ್ಕಳ ಊಟ ಸವಿದು ನಂತರ ತೆರಳಿದ್ದು ತಂಜಾವೂರಿನ ಬೃಹದೇಶ್ವರನ ದೇವಸ್ಥಾನಕ್ಕೆ. ಕರ್ನಾಟಕದ ಸೋಮನಾಥಪುರ, ಬೇಲೂರು, ಹಳೆಬೀಡು, ಕಿಕ್ಕೇರಿ ಮುಂತಾದ ಹೊಯ್ಸಳರ ಅದ್ಭುತ ದೇವಾಲಯಗಳನ್ನು ಮಾತ್ರ ನೋಡಿದ್ದ ನನಗೆ ತಂಜಾವೂರಿನ ಚೋಳರ ಬೃಹದೇಶ್ವರ ದೇವಾಲಯ ಅಚ್ಚರಿ ಮೂಡಿಸಿತ್ತು. ಹಾಗಿದೆ ಚೋಳರ ವಾಸ್ತುಶಿಲ್ಪ ಹಾಗೂ ಅದರ ಭವ್ಯತೆ. ದೂರದಿಂದಲೇ ಕಣ್ಣಿಗೆ ಬೀಳುವ ಗೋಪುರ ಹುಬ್ಬೇರಿಸುವಂತೆ ಮಾಡುತ್ತದೆ. ಒಳಗೆ ಹೋಗುತ್ತಿದ್ದಂತೆ ವಿಶಿಷ್ಟ ಗೋಪುರದಂಥ ಕಮಾನುಗಳು ನಮ್ಮನ್ನು ಸ್ವಾಗತಿಸುತ್ತವೆ. ಇದು ಯುನೆಸ್ಕೋ ವರ್ಲ್ಡ್ ಹೆರಿಟೇಜ್ ಸೈಟ್. ಒಂದೆರಡು ಕಮಾನುಗಳನ್ನು ದಾಟಿ ಮುಂದೆ ಹೋದರೆ ಮೊದಲು ಕಾಣುವುದು ಬೃಹತ್ ನಂದಿ. ಹದಿಮೂರು ಅಡಿ ಎತ್ತರ ಇರುವ ಇದು ಏಕಶಿಲಾ ನಂದಿ. ಗರ್ಭಗುಡಿಯ ಮುಖ್ಯ ಶಿವಲಿಂಗಕ್ಕೆ ಮುಖಮಾಡಿ ಕುಳಿತಿದೆ. ಇನ್ನೊಂದಷ್ಟು ಮುಂದೆ ಹೋದರೆ ಕಾಣುವುದು ಮುಖ್ಯ ದೇವಾಲಯದ ಗೋಪುರ. ಇದರ ಒಳಗೆ ಇರುವುದು 29 ಅಡಿ ಎತ್ತರದ ಬೃಹದಾಕಾರದ ಶಿವಲಿಂಗ. ಈ ದೇವಸ್ಥಾನದ ಮುಖ್ಯ ಗೋಪುರದ ನೆರಳು ದಿನದ ಯಾವ ಸಮಯದಲ್ಲೂ ನೆಲದ ಮೇಲೆ ಬೀಳುವುದಿಲ್ಲ! ಇಂಜಿನಿಯರಿಂಗ್‌ನ ಪರಿಕಲ್ಪನೆಯೇ ಇಲ್ಲದಿದ್ದ ಆ ಕಾಲದಲ್ಲಿ ಇದು ಸೃಷ್ಟಿಯಾಗಿದ್ದು ಹೇಗೆ ಎಂಬುದೇ ಅತ್ಯಂತ ಆಶ್ಚರ್ಯಕರ ಸಂಗತಿ. ಆ ಗೋಪುರದ ನೆತ್ತಿಯ ಮೇಲೆ 80 ಟನ್ ತೂಕದ ಒಂದು ದೊಡ್ಡ ಕಲ್ಲು ವಿರಾಜಮಾನವಾಗಿದೆ.
ಈ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದು ರಾಜರಾಜ ಚೋಳ. ಆಗಿನ ರಾಜರ ಕಾಲದಲ್ಲಿ ಅದೆಷ್ಟು ವೈಭವೋಪೇತವಾಗಿ ಇಲ್ಲಿ ಪೂಜೆಗಳು, ಉತ್ಸವಗಳು ನಡೆದಿರಬಹುದು? ಸಾವಿರಾರು ವರ್ಷಗಳು ಉಳಿಯವ ಇಂಥ ಅದ್ಭುತವನ್ನು ಸೃಷ್ಟಿಸಲು ಆತನಿಗಿದ್ದ ಭಕ್ತಿ-ಭಾವಗಳೆಷ್ಟು? ನೆರಳು ಬೀಳದ ಗೋಪುರವನ್ನು ನಿರ್ಮಾಣ ಮಾಡಿದ್ದಾರೆಂದರೆ ಅವರಿಗಿದ್ದ ಜ್ಞಾನ ಅದೆಷ್ಟು? ಎಂಬ ಯೋಚನಗಳಲ್ಲೇ ಇಡೀ ದೇವಸ್ಥಾನವನ್ನು ಸುತ್ತುತ್ತಿದ್ದೆ. ಇಲ್ಲಿನ ಒಂದೊಂದು ಕೆತ್ತನೆ, ಗೋಪುರ, ಒಂದಿಂಚೂ ಜಾಗವಿಲ್ಲದೆ ಕಲ್ಲಿನಲ್ಲಿ ಮೂಡಿದ್ದ ಚಿತ್ರಗಳು ರಾಜರಾಜ ಚೋಳನ ಹಾಗೂ ಈ ದೇವಸ್ಥಾನ ನಿರ್ಮಿಸಿದ ಸಾವಿರಾರು ಜನರನ್ನು ಸ್ಮರಿಸುವಂತೆ ಮಾಡುತ್ತಿತ್ತು. ತಿಳಿ ಇಟ್ಟಿಗೆ ಬಣ್ಣದ ಈ ಬೃಹದಾಕಾರದ ದೇವಾಲಯದ ವೈಭವವನ್ನು ಪದಗಳಲ್ಲಿ ವರ್ಣಿಸಲು ಎಂತವರಿಗೂ ಅಸಾಧ್ಯವೆನಿಸುತ್ತದೆ.

ಗಂಗೈಕೊಂಡ ಚೋಳಪುರಂ ದೇವಾಲಯ
ತಂಜಾವೂರಿನ ದೇವಸ್ಥಾನ ನೋಡಿದ ಮರುದಿನ ಬೆಳಗ್ಗೆ ನಾಗಪಟ್ಟಿನಂ ಹಾಗೂ ತಿರುನಲ್ಲೂರ್‌ನಲ್ಲಿ ಇನ್ನೆರಡು ಪುರಾತನ ದೇವಾಲಯಗಳನ್ನು ನೋಡಿಕೊಂಡು ಆನಂತರ ಮೈಸೂರಿಗೆ ಮರಳುವ ಮಧ್ಯೆ ನಾನು ತೆರಳಿದ್ದು ಗಂಗೈಕೊಂಡ ಚೋಳಾಪುರಂ ದೇವಸ್ಥಾನಕ್ಕೆ. ಇದು ರಾಜರಾಜ ಚೋಳನ ಮಗ ರಾಜೇಂದ್ರ ಚೋಳ ನಿರ್ಮಾಣ ಮಾಡಿದ ಶಿವನ ದೇವಾಲಯ. ಎಲ್ಲ ರಾಜ್ಯಗಳ ಮೇಲೂ ಯುದ್ಧಮಾಡಿ ಹಲವು ಪ್ರಾಂತ್ಯಗಳನ್ನು ವಶಪಡಿಸಿಕೊಂಡಿದ್ದ ಈತ ಈವರೆಗೂ ಯಾವ ಚೋಳ ದೊರೆಯೂ ಮಾಡಿರದಿದ್ದ ಸಾಧನೆ ಮಾಡಲು ಯೋಜನೆ ರೂಪಿಸಿದ್ದ. ಅದು ಗಂಗೆಯ ಪ್ರಾಂತ್ಯವನ್ನು ವಶಪಡಿಸಿಕೊಳ್ಳುವ ಸಾಹಸ. ಇದಕ್ಕಾಗಿ ದಂಡೆತ್ತಿ ಹೋದ ಆತ ಅದರಲ್ಲಿ ಜಯಶಾಲಿಯಾದ. ಅದರ ಸ್ಮರಣಾರ್ಥವಾಗಿ ಗಂಗೆಯನ್ನು ತಮಿಳುನಾಡಿಗೆ ತಂದು ಪ್ರತಿಷ್ಟಾಪನೆ ಮಾಡಿದ. ಆಗ ತಂದ ಗಂಗೆ ಈ ದೇವಸ್ಥಾನದ ಗರ್ಭಗುಡಿಯಲ್ಲಿ ಈಗಲೂ ಇದೆ ಎಂಬ ಪ್ರತೀತಿ ಇದೆ. ಇದೇ ಕಾರಣಕ್ಕಾಗಿ ಈ ಊರಿಗೆ ಗಂಗೈಕೊಂಡ ಚೋಳಾಪುರಂ ಎಂಬ ಹೆಸರು ಬಂದಿದೆ. ಜತೆಗೆ ಇಲ್ಲಿರುವ ಸಿಂಹದಂಥ ಬಾವಿಯೂ ಬಹಳ ಪ್ರಸಿದ್ಧಿ ಪಡೆದಿದೆ. ಈ ದೇವಸ್ಥಾನ ತಂಜಾವೂರು ಬೃಹದೇಶ್ವರ ದೇವಾಲಯದ ಚಿಕ್ಕ ಪ್ರತಿರೂಪದಂತೆ ಕಾಣುತ್ತದೆ. ಗೋಪುರದ ವಿನ್ಯಾಸ, ನಂದಿಯ ವಿಗ್ರಹ, ಚೋಳರ ಕೆತ್ತನೆಗಳು ಎಲ್ಲದರಲ್ಲೂ ಸಾಮ್ಯತೆಯನ್ನು ನಾವು ನೋಡಬಹುದು.
ಎರಡೇ ದಿನಗಳ ತಮಿಳುನಾಡು ಪ್ರವಾಸದಲ್ಲಿ ನೋಡಿದ ಈ ಎರಡು ಅತಿ ಸುಂದರ ದೇವಾಲಯಗಳಿಂದ ನನಗೆ ಚೋಳರ ವಾಸ್ತುಶಿಲ್ಪದ ಪರಿಚಯವಾಯಿತು. ಇನ್ನುಮುಂದೆ ಕರ್ನಾಟಕದಲ್ಲಿನ ಚೋಳರ ದೇವಾಲಯಗಳನ್ನು ನೋಡುವ ಯೋಜನೆ ರೂಪಿಸಿಕೊಂಡಿದ್ದೇನೆ.