ತಿರುತಿರುಗಿ ಬರಲೇ ಬೇಕನಿಸುವ ತಿರುವಣ್ಣಾಮಲೈ..!
ಹುಣ್ಣಿಮೆಯಂದು ಈ ಬೆಟ್ಟಕ್ಕೆ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ಸಿದ್ಧಿಸುತ್ತದೆಂಬ ನಂಬಿಕೆ ಇದೆ. ಹಾಗಾಗಿಯೇ ಪ್ರತಿ ಹುಣ್ಣಿಮೆಯಂದು ಲಕ್ಷಾಂತರ ಜನರು ಹೆಜ್ಜೆ ಹಾಕುತ್ತಾರೆ. ಒಬ್ಬೊರಿಗೊಬ್ಬರ ಮೈ ತಾಕುವಷ್ಟು, ಗುಂಪಿನಲ್ಲಿ ಕಳೆದುಹೋಗದಿರಲೆಂದು ಕೈಗೆ ಬಟ್ಟೆ ಕಟ್ಟಿಕೊಂಡು ನಡೆಯುವಷ್ಟು ಜನಜಂಗುಳಿ ಅಂದ್ರೆ, ತಿರುವಣ್ಣಾಮಲೈ ಪವರ್ ಅರ್ಥವಾದೀತು. ಅಧ್ಯಾತ್ಮದ ಹಾದಿಯಲ್ಲಿ ನೂರಾರು ಹೆಜ್ಜೆಗಳು!
- ಶೋಭಾ ಮಳವಳ್ಳಿ
ಬೆಟ್ಟವೇ ದೇವರಾಗಿರುವ ಸ್ಥಳ ಎಂಬುದೊಂದಿದ್ದರೆ ಅದು ತಿರುವಣ್ಣಾಮಲೈ. ಬಹುತೇಕ ಎಲ್ಲ ದೇವಾಲಯಗಳಲ್ಲೂ ದೇವರ ಪೂಜೆ, ಪ್ರಾರ್ಥನೆ, ಹೋಮ- ಹವನಾದಿಗಳಿಗಾಗಿಯೇ ಭಕ್ತರು ಬರುವುದು ಸಹಜ. ಆದರೆ, ತಿರುವಣ್ಣಾಮಲೈ ಅಂದ್ರೆ ಅದು ಗಿರಿಪ್ರದಕ್ಷಿಣೆ. ಅರುಣಾಚಲೇಶ್ವರನನ್ನು ಗಿರಿಪ್ರದಕ್ಷಿಣೆ ಮೂಲಕವೇ ಧ್ಯಾನಿಸುತ್ತಾ, 14 ಕಿಮೀ ಬೆಟ್ಟವನ್ನು ಬರಿಗಾಲಲ್ಲಿ ಸುತ್ತುವುದೇ ಗಿರಿಪ್ರದಕ್ಷಿಣೆ.
ಇದನ್ನೂ ಓದಿ: ಪ್ರವಾಸವೆಂದರೆ ನೋಡುವುದೊಂದೇ ಅಲ್ಲ, ತಿನ್ನುವುದೂ ಹೌದು !
ಭಕ್ತಿಯೋ, ಧ್ಯಾನವೋ, ಸೆಳೆತವೋ, ಒಟ್ಟಿನಲ್ಲಿ ತಿರುವಣ್ಣಾಮಲೈ ಗಿರಿಪ್ರದಕ್ಷಿಣೆ ಎಂಬುದು ಅಯಸ್ಕಾಂತದಂತೆ ಭಕ್ತರನ್ನು ಸೆಳೆಯುತ್ತಿರುವುದಂತೂ ಸುಳ್ಳಲ್ಲ. ಇತ್ತೀಚೆಗಂತೂ ಸೋಷಿಯಲ್ ಮೀಡಿಯಾ ಪ್ರಭಾವವೂ ಸೇರಿ ಜನರೂ ವಾರಾಂತ್ಯದಲ್ಲಿ ತಿರುವಣ್ಣಾಮಲೈಗೆ ಧಾವಿಸುತ್ತಿದ್ದಾರೆ. ವೀಕೆಂಡ್ ಹಾಟ್ ಸ್ಪಾಟ್ ಆಗಿ ಬದಲಾಗಿದೆ ತಿರುವಣ್ಣಾಮಲೈ. ಶನಿವಾರ, ಭಾನುವಾರ ಅಷ್ಟೇ ಏಕೆ ರಜಾ ದಿನಗಳಲ್ಲಿ ತಿರುವಣ್ಣಾಮಲೈ, ಭಕ್ತರಿಂದ ಗಿಜಿಗುಡುತ್ತಿರುತ್ತದೆ. ವಿಶೇಷ ಅಂದ್ರೆ ಪ್ರತಿ ಹುಣ್ಣಿಮೆಯಲ್ಲೂ ಕನಿಷ್ಠ 6ರಿಂದ 7 ಲಕ್ಷ ಜನರು ಗಿರಿಪ್ರದಕ್ಷಿಣೆ ಮಾಡ್ತಾರೆ. ಬಹುಶಃ ಭಾರತದ ಯಾವ ದೇವಾಲಯದಲ್ಲೂ ಪ್ರತಿ ಮಾಸವೂ ಲಕ್ಷಗಟ್ಟಲೇ ಭಕ್ತರು ಜಮಾಯಿಸುವ ಉದಾಹರಣೆ ಇಲ್ಲ.

ರಮಣಮಹರ್ಷಿಗಳ ನಂಟು
ತಿರುವಣ್ಣಾಮಲೈ ಅರುಣಾಚಲೇಶ್ವರ ದೇವಾಲಯ, ತಮಿಳುನಾಡಿನ ಅತಿದೊಡ್ಡ ದೇವಾಲಯಗಳಲ್ಲಿ ಒಂದು. 25 ಎಕರೆ ಭೂಮಿಯಲ್ಲಿ ಹರಡಿಕೊಂಡಿದೆ.
ಗೋಡೆಯ ಪ್ರತಿ ಬದಿಯಲ್ಲಿ ನಾಲ್ಕು ಮುಖ್ಯ ಗೋಪುರಗಳಿವೆ. ರಾಜ ಗೋಪುರ (ಮುಖ್ಯ ಗೋಪುರ) ಪೂರ್ವ ದಿಕ್ಕಿನಲ್ಲಿದೆ. ಇದು ತಮಿಳುನಾಡಿನ 2ನೆಯ ಅತಿದೊಡ್ಡ ಗೋಪುರ. 217 ಅಡಿ ಎತ್ತರ ಮತ್ತು 11 ಹಂತಗಳನ್ನು ಹೊಂದಿದೆ.
ದಕ್ಷಿಣ ಗೋಪುರವನ್ನು ತಿರುಮಂಜನ ಗೋಪುರ, ಪಶ್ಚಿಮ ಗೋಪುರ - ಪೇಯ್ ಗೋಪುರ ಮತ್ತು ಉತ್ತರದ ಗೋಪುರವನ್ನು ಅಮ್ಮಣಿ ಅಮ್ಮಾಳ್ ಗೋಪುರ ಎಂದು ಕರೆಯಲಾಗುತ್ತದೆ.
ದೇವಾಲಯ ಪ್ರವೇಶಿಸಿದ ತಕ್ಷಣ ಕಾಣಸಿಗುವುದು ರಮಣ ಮಹರ್ಷಿಗಳು ತಪಸ್ಸಿನ ಮೂಲಕ ಅನುಗ್ರಹ ಪಡೆದ ಸ್ಥಳ. ಬೃಹದಾಕಾರದ ನಂದೀಶ್ವರನ ಪೂಜೆ ನೋಡಲು ಎರಡು ಕಣ್ಣೂ ಸಾಲದು.
ಕೃಷ್ಣದೇವರಾಯನ ಕೃಪೆ
ತಿರುವಣ್ಣಾಮಲೈ ದೇವಸ್ಥಾನ ನಿರ್ಮಿಸಿದ್ದು ವಿಜಯನಗರದ ರಾಜ ಕೃಷ್ಣದೇವರಾಯ.
ಅಷ್ಟೇ ಅಲ್ಲ, 217 ಅಡಿ ಎತ್ತರದಲ್ಲಿ ಭವ್ಯವಾಗಿ ನಿಂತಿರುವ ಪೂರ್ವ ರಾಜಗೋಪುರ, ಶಿವಗಂಗಾ ಕೊಳ, ಸಾವಿರ ಕಂಬದ ಮಂಟಪ, ಇಂದ್ರ ವಿಮಾನ, ವಿನಾಯಕ ರಥ, ತಿರುಮಲಾದೇವಿ ಸಮುದ್ರ ಸರೋವರ, ಉತ್ಸವ ಮಂಟಪ, ಗರ್ಭಗುಡಿಯಲ್ಲಿ 2 ಬಾಗಿಲುಗಳು, ಬಾಗಿಲುಗಳಿಗೆ ಚಿನ್ನದ ಲೇಪನ. ಗರ್ಭಗುಡಿ ಸೇರಿದಂತೆ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಿದ್ದು ಕೃಷ್ಣದೇವರಾಯ ಎಂಬ ದಾಖಲೆ ಇದೆ.
ಪಂಚತತ್ತ್ವಕ್ಕೆ ನಿಷ್ಠ!
ಭಾರತದ ಬಹುತೇಕ ದೇವಾಲಯಗಳು 5 ತತ್ತ್ವಗಳ ಮೇಲೆಯೇ ನಿರ್ಮಿತವಾದುವು. ಅಂದರೆ ಪಂಚಭೂತಗಳು. ಪೃಥ್ವಿ, ಜಲ,ಅಗ್ನಿ, ವಾಯು ಮತ್ತು ಅಂತರಿಕ್ಷ, ಈ ಐದು ತತ್ತ್ವಗಳ ಆಧಾರದ ಮೇಲೆಯೇ ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಜಲ ಪ್ರತಿನಿಧಿಸುವ ಲಿಂಗವು ತಿರುವನೈಕವಲ್ ಮಂದಿರದಲ್ಲಿದೆ. ಅಗ್ನಿ ಪ್ರತಿನಿಧಿಸುವುದು ತಿರುವಣ್ಣಾಮಲೈ, ವಾಯು- ಕಾಳಹಸ್ತಿ, ಪೃಥ್ವಿ- ಕಾಂಚಿಪುರಂ, ಕೊನೆಯದಾಗಿ ಅಂತರಿಕ್ಷ ಪ್ರತಿನಿಧಿಸುವ ಲಿಂಗ ಚಿದಂಬರಂ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಂಡಿದೆ. ವಾಸ್ತು- ವಿಜ್ಞಾನ- ವೇದದ ಅದ್ಭುತ ಸಮಾಗಮವನ್ನು ಈ ದೇವಾಲಯಗಳಲ್ಲಿ ಕಾಣಬಹುದು.
ಗಿರಿಪ್ರದಕ್ಷಿಣೆಯಿಂದ ಮೋಕ್ಷ
ತಿರುವಣ್ಣಾಮಲೈ ಮೋಕ್ಷ ನೀಡುವ ಸ್ಥಳ ಎಂಬ ನಂಬಿಕೆ ಇದೆ. ಬೆಟ್ಟವೇ ದೇವರು. ಬೆಟ್ಟಕ್ಕೆ ಪ್ರದಕ್ಷಿಣೆ ಹಾಕುವುದೇ (ಗಿರಿ ಪ್ರದಕ್ಷಿಣೆ) ಇಲ್ಲಿನ ವಿಶೇಷ.
ಶಿವನನ್ನು ಸುತ್ತುವರಿದ ಗಿರಿಯ ಪ್ರದಕ್ಷಿಣೆಯಿಂದ ಮನಸಿಗೆ ನೆಮ್ಮದಿ, ಬಯಸಿದ್ದು ಈಡೇರುವುದೆಂಬ ನಂಬಿಕೆ.
ಬೆಟ್ಟದ ಸುತ್ತಳತೆ 14 ಕಿಮೀ. ಎಲ್ಲಿಂದ ಪ್ರದಕ್ಷಿಣೆ ಆರಂಭಿಸುತ್ತಿರೋ ಅಲ್ಲಿಯೇ ಬಂದು ಪೂರ್ಣಗೊಳಿಸಬೇಕು. ಅದು ಪದ್ಧತಿ. ಬಹುತೇಕರು ಅರುಣಾಚಲೇಶ್ವರ ದೇವಾಲಯದಿಂದಲೇ ಗಿರಿಪ್ರದಕ್ಷಿಣೆ ಆರಂಭಿಸುತ್ತಾರೆ.

ಡಿವೈನ್ ನೈಟ್ ಲೈಫ್
ಹಗಲು- ರಾತ್ರಿ, ದಿನದ 24 ಗಂಟೆಯೂ ಪ್ರದಕ್ಷಿಣೆ ಹಾಕುವ ಭಕ್ತರಿಗೆ ರಾತ್ರಿಯ ಭಯವಿಲ್ಲ. ದಾರಿಯುದ್ದಕ್ಕೂ ತೆರೆದಿರುವ ಅಂಗಡಿಗಳು, ಹೊಟ್ಟೆ ತುಂಬಿಸಲು ಹೊಟೇಲ್ ಗಳು, ಕಾಲು ನೋವಾದರೆ ಮಸಾಜ್ ಮಾಡುವ ಮೆಷಿನ್‌ಗಳು ಸಿಗುತ್ತವೆ. ಹತ್ತು ನಿಮಿಷ ಮಸಾಜ್‌ಗೆ ನೂರು ರುಪಾಯಿ. ಮಳೆ ಬಂದರೆ ರೇನ್ ಕೋಟ್ ಸಿಗುತ್ತೆ. ಟಾಯ್ಲೆಟ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯೂ ಇದೆ. ದಣಿವಾದರೆ ಕುಳಿತುಕೊಳ್ಳಲು ವ್ಯವಸ್ಥೆಇದೆ. ಸಂಜೆ ಹೊತ್ತು ಅಲ್ಲಲ್ಲಿ ಪ್ರಸಾದ ಹಂಚಿ ಹೊಟ್ಟೆ ತುಂಬಿಸುವ ದಾನಿಗಳು, ರಸ್ತೆಯುದ್ದಕ್ಕೂ ಮಲಗಿ, ಕುಳಿತು ಭಿಕ್ಷೆ ಬೇಡುವವರು, ಕಾವಿಧರಿಸಿ ಕಣ್ಮುಚ್ಚಿ ಕುಳಿತ ಧ್ಯಾನಾಸಕ್ತರು, ಹಾಡುವವರು, ಬೇಡುವವರು, ಫುಟ್‌ಪಾತ್‌ನಲ್ಲೇ ಸುಖ ನಿದ್ರೆಗೆ ಜಾರಿದವರು, ರಸ್ತೆ ಬದಿಯಲ್ಲೇ ಇಡ್ಲಿ ಬೇಯಿಸುತ್ತಾ ವ್ಯಾಪಾರ ನಡೆಸುವ ಹೆಂಗಸರು, ಕಾಫಿ-ಟೀ ಮಾರುವವರು, ವಾಹ್ ಅದೊಂದು ಅದ್ಭುತ ಲೋಕ.
ವಾಹನದಲ್ಲೇ ಕೂತು ಪ್ರದಕ್ಷಿಣೆ
ಗಿರಿಪ್ರದಕ್ಷಿಣೆ ಸಾಕಾಗಿ, ಕಾಲು ನೋವು/ ಮಂಡಿ ನೋವಿನ ನೆಪವೊಡ್ಡಿ ಅರ್ಧದಲ್ಲೇ ಆಟೋ, ಬೈಕ್ ಏರುವವರು, ಆಟೋ, ಕಾರಿನಲ್ಲೇ ಕುಳಿತು ಪ್ರದಕ್ಷಿಣೆ ಹಾಕುವವರು ಕೂಡ ಕಾಣಸಿಗುತ್ತಾರೆ. ದುಡ್ಡಿದ್ದರೆ ಸಾಕು, ಪ್ರದಕ್ಷಿಣೆ ಮಾಡಲೇಬೇಕಿಲ್ಲ. ಆಟೋದಲ್ಲೇ 14 ಕಿಮೀ ನಡೆಸಿ, ಪ್ರದಕ್ಷಿಣೆ ಮಾಡಿಸುವ ಆಟೋ ಚಾಲಕರು ಕೂಡ ಇಲ್ಲಿದ್ದಾರೆ. ಹೇಗಾದರೂ ಸರಿ, ಜೀವನದಲ್ಲಿ ಒಮ್ಮೆಯಾದರೂ ಗಿರಿ ಪ್ರದಕ್ಷಿಣೆ ಮಾಡಲೇಬೇಕೆಂಬ ಆಸೆ ಹೊತ್ತ ವೃದ್ಧರು, ಮಹಿಳೆಯರಿಗೆ ನಿರಾಸೆ ಆಗುವುದಿಲ್ಲ.
ಅಷ್ಟಲಿಂಗ ವಿಶೇಷ
ಬೆಟ್ಟದ ಸುತ್ತ ಎಂಟು ವಿಶೇಷ ದಿಕ್ಕಿನ ಲಿಂಗಗಳಿವೆ. ಗಿರಿಪ್ರದಕ್ಷಿಣೆ ಉದ್ದಕ್ಕೂ ಅಷ್ಟಲಿಂಗಗಳ ದೇವಾಲಯಗಳಿವೆ. ಅಷ್ಟಲಿಂಗಗಳೆಂದರೆ ಇಂದ್ರಲಿಂಗ, ಅಗ್ನಿಲಿಂಗ, ಯಮಲಿಂಗ, ನಿರುತಿಲಿಂಗ, ವರುಣ ಲಿಂಗ, ವಾಯುಲಿಂಗ, ಕುಬೇರಲಿಂಗ ಮತ್ತು ಈಶಾನ್ಯಲಿಂಗ.
ಅಷ್ಟಭುಜಾಕೃತಿಯಲ್ಲಿರುವ ಎಂಟು ಶಿವ ಲಿಂಗಗಳು ಮತ್ತು ಮಧ್ಯದಲ್ಲಿರುವ ಅರುಣಾಚಲೇಶ್ವರವನ್ನು ನವಗ್ರಹಗಳು ಎಂದು ಕರೆಯಲಾಗುತ್ತದೆ. ಪೂರ್ವಕ್ಕೆ ಇಂದ್ರ ಲಿಂಗ (ಸೂರ್ಯ), ಆಗ್ನೇಯಕ್ಕೆ ಅಗ್ನಿ ಲಿಂಗ (ಚಂದ್ರ), ದಕ್ಷಿಣಕ್ಕೆ ಯಮ ಲಿಂಗ (ಮಂಗಳ), ನೈರುತ್ಯಕ್ಕೆ ನಿರುತಿ ಲಿಂಗ (ರಾಹು), ಪಶ್ಚಿಮಕ್ಕೆ ವರುಣ ಲಿಂಗ (ಶನಿ), ವಾಯವ್ಯಕ್ಕೆ ವಾಯು ಲಿಂಗ (ಕೇತು), ಉತ್ತರಕ್ಕೆ ಕುಬೇರ ಲಿಂಗ (ಗುರು), ಈಶಾನ್ಯಕ್ಕೆ ಈಶಾನ್ಯ ಲಿಂಗ (ಬುಧ).
ಇದು ತಿರುವಣ್ಣಾಮಲೈ ಪವರ್!
ರಾತ್ರಿ ಎಂಟು ಗಂಟೆ ಬಳಿಕ ಅಷ್ಟಲಿಂಗ ದೇವಾಲಯಗಳ ಬಾಗಿಲು ಮುಚ್ಚುತ್ತಾರೆ. ಆದರೆ, ಹೊರಗಿನಿಂದಲೇ ಲಿಂಗದ ದರ್ಶನ ಪಡೆಯಬಹುದು. ದೇವಸ್ಥಾನದ ಬಾಗಿಲು ಮುಚ್ಚಿದ್ದರೂ, ಹೊರಗೆ ತುಪ್ಪದ ದೀಪ ಮಾರಾಟ ಜೋರು.
ಹುಣ್ಣಿಮೆಯಂದು ಈ ಬೆಟ್ಟಕ್ಕೆ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ಸಿದ್ಧಿಸುತ್ತದೆಂಬ ನಂಬಿಕೆ ಇದೆ. ಹಾಗಾಗಿಯೇ ಪ್ರತಿ ಹುಣ್ಣಿಮೆಯಂದು ಲಕ್ಷಾಂತರ ಜನರು ಹೆಜ್ಜೆ ಹಾಕುತ್ತಾರೆ. ಒಬ್ಬೊರಿಗೊಬ್ಬರ ಮೈ ತಾಕುವಷ್ಟು, ಗುಂಪಿನಲ್ಲಿ ಕಳೆದುಹೋಗದಿರಲೆಂದು ಕೈಗೆ ಬಟ್ಟೆ ಕಟ್ಟಿಕೊಂಡು ನಡೆಯುವಷ್ಟು ಜನಜಂಗುಳಿ ಅಂದ್ರೆ, ತಿರುವಣ್ಣಾಮಲೈ ಪವರ್ ಅರ್ಥವಾದೀತು.
ತೊರೆದು ಜೀವಿಸಬಹುದು.....
ಇನ್ನು ಗಿರಿಪ್ರದಕ್ಷಿಣೆ ಅಷ್ಟೇ ಅಲ್ಲ, ತಿರುವಣ್ಣಾಮಲೈನಲ್ಲಿ ಶ್ರೀ ರಮಣ ಮಹರ್ಷಿಗಳ ಆಶ್ರಮ ಮತ್ತೊಂದು ಆಕರ್ಷಣೆ. ಆಶ್ರಮದ ಹಿಂದೆ ಸ್ಕಂದಾಶ್ರಮ, ವಿರೂಪಾಕ್ಷ ಗುಹೆ ಹೊಸ ಅನುಭೂತಿ ನೀಡುತ್ತದೆ.
ಸ್ಕಂದಾಶ್ರಮ ಏರುವುದು ಒಂಥರ ಪ್ರಶಾಂತತೆ, ಮನಸಿಗೆ ನೆಮ್ಮದಿ ಮೂಡಿಸುತ್ತದೆ. ಇಲ್ಲಿ ಧ್ಯಾನ ಮಾಡಲೆಂದೇ ಬರುವ ನೂರಾರು ಜನರಿದ್ದಾರೆ.
ರಮಣರು ತಮ್ಮ 21ನೇ ವಯಸ್ಸಿನಲ್ಲಿ ತಿರುವಣ್ಣಾಮಲೈಗೆ ಬಂದು ವಿರೂಪಾಕ್ಷ ಗುಹೆಯಲ್ಲಿ ಅನೇಕ ವರ್ಷಗಳ ಕಾಲ ಧ್ಯಾನಮಗ್ನರಾಗಿದ್ದರು ಎಂಬ ಐತಿಹ್ಯವಿದೆ.
ತಿರುವಣ್ಣಾಮಲೈ ಸಿಟಿ ವಿದೇಶಿಗರಿಂದ ಸದಾ ಗಿಜಿಗುಡುತ್ತಿರುತ್ತದೆ. ರಮಣರ ಪ್ರಭಾವಕ್ಕೊಳಗಾಗಿ ತಿರುವಣ್ಣಾಮಲೈಗೆ ಬಂದ ವಿದೇಶಿಗರ ಸಂಖ್ಯೆಯೇ ಬಹುದೊಡ್ಡದು. ಸ್ಥಾನ, ಮಾನ, ಹಣ- ಅಂತಸ್ತು ಎಲ್ಲವನ್ನೂ ತಮ್ಮ ಊರಲ್ಲೇ ಬಿಸಾಕಿ, ಇಲ್ಲಿಗೆ ಬಂದವರು, ರಮಣರ ಎದುರು ಧ್ಯಾನಾಸ್ತಕರಾದವರು, ಬದುಕನ್ನೇ ರಮಣರಿಗೆ ಅರ್ಪಿಸಿ, ಅಧ್ಯಾತ್ಮದಲ್ಲೇ ಸುಖ ಕಂಡವರು, ಗಿರಿಪ್ರದಕ್ಷಿಣೆಯನ್ನೇ ಧ್ಯಾನವನ್ನಾಗಿಸಿ ಸಾಗುವವರು, ಎಲ್ಲವನ್ನೂ ತೊರೆದು ಜೀವಿಸುತ್ತಿರುವವರು. ಭಕ್ತಿ, ನಂಬಿಕೆ, ದೇವರು, ಆಧ್ಯಾತ್ಮ.. ಎಲ್ಲ ಅವರವರ ಆಯ್ಕೆ, ಆದರೆ, ವಾಸ್ತವ ಬದುಕಿನ ಭ್ರಮೆ ಕಳಚಿ, ಬೇಕುಗಳನ್ನೆಲ್ಲ ಬೀದಿಗೆಸೆದು ಜೀವಿಸಬಹುದೆಂಬ ಹಲವು ಮಾರ್ಗಗಳನ್ನು ಕಂಡವರು ತಿರುವಣ್ಣಾಮಲೈನಲ್ಲಿ ಕಾಣಸಿಗುತ್ತಾರೆ. ನಮ್ಮನ್ನೂ ಅಧ್ಯಾತ್ಮದತ್ತ ಸೆಳೆಯುತ್ತಾರೆ. ಎಲ್ಲವನ್ನೂ ತೊರೆದು ಸ್ಮಶಾನವಾಸಿಯಾದ ಶಿವನೇ ಬಹುಶಃ ತೊರೆದು ಜೀವಿಸಬಹುದು ಎಂಬುದಕ್ಕೆ ಸಾಕ್ಷಾತ್ ಉದಾಹರಣೆ.

ತಿರುವಣ್ಣಾಮಲೈ ಎಂಬುದು ಮೋಕ್ಷ ಮಾರ್ಗವೋ, ಅತ್ಮದತ್ತ ಎಳೆದೊಯ್ಯುವ ದಾರಿಯೋ, ಬಯಸಿದ್ದು ಸಿಗುತ್ತೆಂಬ ನಂಬಿಕೆಯ ಜಾಗವೋ, ತರ್ಕಕ್ಕೆ ನಿಲುಕದ್ದು. ನಂಬಿದವರಿಗೆ ಉಂಟು, ನಂಬದವರಿಗಿಲ್ಲ..!
---
14 ಕಿಮೀ ಗಿರಿಪ್ರದಕ್ಷಿಣೆ ಮುಗಿಸಲು 3 ರಿಂದ 4 ತಾಸು ಬೇಕು. ಆದರೆ, ಗಿರಿಪ್ರದಕ್ಷಿಣೆ ಎಂಬುದು ಧ್ಯಾನವಿದ್ದಂತೆ. ಬೇಗ, ಬೇಗ ನಡೆದು ಮುಗಿಸಿಬಿಡಬೇಕೆಂಬ ಒತ್ತಡ ಬೇಕಿಲ್ಲ ಅಂತಾರೆ ಯೋಗಿಗಳು. ಅದರಲ್ಲೂ ತಿರುವಣ್ಣಾಮಲೈನಲ್ಲೇ ಬದುಕು ಸವೆಸಿದ ಶ್ರೀರಮಣರು ಹೇಳುತ್ತಿದ್ದದ್ದು, ಗಿರಿಪ್ರದಕ್ಷಿಣೆ, ತುಂಬು ಗರ್ಭಿಣಿ ಹೆಜ್ಜೆ ಹಾಕಿದಂತೆ ಇರಬೇಕು. ದೇಹ ಬೇರೆಯಾಗಿ, ಮನಸ್ಸು ದೇವರ ಸ್ಮರಣೆಯಲ್ಲೇ ಸಾಗಬೇಕು. ಆದರೆ, ಈಗಿನ ಬಹುತೇಕರಿಗೆ ಗಿರಿಪ್ರದಕ್ಷಿಣೆ ಅಂದ್ರೆ, ವೀಕೆಂಟ್ ಔಟಿಂಗ್, ಟ್ರಕ್ಕಿಂಗ್ ಆದಂತಾಗಿದೆ. ತಿನ್ನವುದು, ಕುಡಿಯುವುದು, ಮಾತು, ಹರಟೆ, ರೀಲ್ಸ್ ಹಾವಳಿ ಪ್ರದಕ್ಷಿಣೆಯ ಮಹತ್ವವನ್ನೇ ಕಸಿದಿದೆ. ಮಾತಿಗಿಂತ ಮೌನವೇ ಧ್ಯಾನ ಎಂಬುದು ಅರ್ಥವಾದರೆ ಗಿರಿಪ್ರದಕ್ಷಿಣೆ ಸಾರ್ಥಕ...!!
---
ತಿರುವಣ್ಣಾಮಲೈಗೂ, ಸೂಪರ್ ಸ್ಟಾರ್ ರಜನಿಕಾಂತ್‌ಗೂ ಅಧ್ಯಾತ್ಮದ ಲಿಂಕ್ ಇದೆ. ಇದಕ್ಕೆ ಕಾರಣವಾದ ಘಟನೆಯೊಂದು 1997ರಲ್ಲಿ ನಡೆಯಿತು.
ತಿರುವಣ್ಣಾಮಲೈ ದೇವಾಲಯ ಸುತ್ತ ಮತ್ತು ಗಿರಿ ಪ್ರದಕ್ಷಿಣೆ ಸಾಗುವ ದಾರಿಯುದ್ದಕ್ಕೂ ಬೀದಿಬದಿ ದೀಪಗಳು ಕೆಟ್ಟಿದ್ದವು. ಅಳಿದುಳಿದ ದೀಪಗಳ ಬೆಳಕು ಕತ್ತಲು ಸೀಳುವಷ್ಟು ಶಕ್ತಿ ಹೊಂದಿರಲಿಲ್ಲ. ಇಡೀ ವಿದ್ಯುತ್ ದೀಪಗಳನ್ನು ಬದಲಿಸಬೇಕಾದರೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕು ಮತ್ತು ವರ್ಷಾನುಗಟ್ಟಲೇ ಕಾಯಬೇಕು. ಇದನ್ನೆಲ್ಲ ಯೋಚಿಸಿದ ಅಲ್ಲಿನ ಆಡಳಿತಾಧಿಕಾರಿಯೊಬ್ಬರು, ಒಮ್ಮೆ ನಟ ರಜನಿಕಾಂತ್ ಅವರ ಭೇಟಿಗೆ ಬಂದರಂತೆ.
ರಜನಿಕಾಂತ್‌ಗೆ ವಿದ್ಯುತ್ ದೀಪಗಳ ಸಮಸ್ಯೆ ತಿಳಿಸಿದ ಅಧಿಕಾರಿ, ನಿಮ್ಮಿಂದಲೇ ಬೆಳಕು ಕಾಣಬೇಕು ಅಂದರಂತೆ. ಕೆಲ ದಿನ ಯೋಚನೆಗಿಳಿದ ರಜನಿಕಾಂತ್, ಸರಕಾರದಿಂದ ಆಗಬೇಕಿದ್ದ ಕೆಲಸ ನನ್ನಿಂದ ಕೇಳಲಾಗುತ್ತಿದೆ ಅಂದ್ರೆ, ಇದು ದೈವ ನಿರ್ಣಯವೇ ಇರಬೇಕು ಅಂದುಕೊಂಡವರೇ, ತಕ್ಷಣವೇ, ದೇವಾಲಯ ಗೋಪುರ ಮತ್ತು ಗಿರಿಪ್ರದಕ್ಷಿಣೆಯ ದಾರಿಯುದ್ದಕ್ಕೂ, ಅತ್ಯುತ್ತಮ ಗುಣಮಟ್ಟದ 148 ವಿದ್ಯುತ್ ದೀಪಗಳನ್ನು ಅಳವಡಿಸಲು 10 ಲಕ್ಷ ರುಪಾಯಿ ನೀಡಿದರಂತೆ. ಅಷ್ಟೇ ಅಲ್ಲದೇ, 2010ರಲ್ಲಿ ದೀಪಾವಳಿ ಸಂದರ್ಭದಲ್ಲೂ ಹೊಸ ವಿದ್ಯುತ್ ದೀಪಗಳು ಹಾಗೂ ರಾಜಗೋಪುರದ ಬದಿಯ ಎರಡು ಹೊಸ ಗೋಪುರಗಳನ್ನೂ ನಿರ್ಮಿಸಿಕೊಟ್ಟರಂತೆ ರಜನಿಕಾಂತ್..!