Tuesday, July 14, 2026
Tuesday, July 14, 2026

ಉತ್ಪಲ ಆಯುರ್ಧಾಮ

ಇಂದಿನ ಜೀವನಶೈಲಿ, ಆಹಾರ ಪದ್ಧತಿ ಮತ್ತು ಮಾನಸಿಕ ಒತ್ತಡಗಳು ಅನೇಕ ಆರೋಗ್ಯ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತವೆ. ಇಂಥ ಸಂದರ್ಭದಲ್ಲಿ ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯಾದ ಆಯುರ್ವೇದವು ನೈಸರ್ಗಿಕ ಮತ್ತು ಶಾಶ್ವತ ಪರಿಹಾರವನ್ನು ಒದಗಿಸುತ್ತದೆ. ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಉಳಿಸಿ ಬೆಳೆಸುವ ಹಾಗೂ ಈ ಅಮೂಲ್ಯ ಪರಂಪರೆಯನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ಬೆಸೆದು ಗುಣಮಟ್ಟದ ಆರೋಗ್ಯ ಸೇವೆಯನ್ನು ಕಲ್ಪಿಸುವ ಉದ್ದೇಶದಿಂದಲೇ ಬೆಂಗಳೂರಿನ ಹೃದಯ ಭಾಗದಲ್ಲಿ ʻಉತ್ಪಲ ಆಯುರ್ಧಾಮʼ ಆಯುರ್ವೇದ ಕೇಂದ್ರ ಕಾರ್ಯಪ್ರವೃತ್ತವಾಗಿದೆ.

ಆಯುರ್ವೇದವು ಭಾರತದ ಅತ್ಯಂತ ಪ್ರಾಚೀನ ವೈದ್ಯಕೀಯ ಪದ್ಧತಿಯಾಗಿದ್ದು, ಸುಮಾರು ಐದು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ‘ಆಯುಃ’ ಎಂದರೆ ಜೀವನ ಮತ್ತು ‘ವೇದ’ ಎಂದರೆ ಜ್ಞಾನ. ಹೀಗಾಗಿ ಆಯುರ್ವೇದ ಎಂದರೆ ‘ಜೀವನದ ಜ್ಞಾನ’ ಎಂಬ ಅರ್ಥವನ್ನು ನೀಡುತ್ತದೆ. ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವನ್ನು ಕಾಪಾಡುವ ಮೂಲಕ ಆರೋಗ್ಯವನ್ನು ವೃದ್ಧಿಸುವುದು ಆಯುರ್ವೇದದ ಮುಖ್ಯ ಉದ್ದೇಶ. ಆದರೆ ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಚಿಕಿತ್ಸೆ ಪಡೆದುಕೊಳ್ಳುವುದು ದುಬಾರಿಯೆಂಬಂತಾಗಿದ್ದು, ಚಿಕಿತ್ಸೆಗಾಗಿ ಅನ್ಯ ರಾಜ್ಯಗಳ ಮೊರೆಹೋಗುವ ಮಂದಿಯೇ ಹೆಚ್ಚು. ಬೆಂಗಳೂರಿನಲ್ಲೇ ಇಂಥದೊಂದು ಸುಸಜ್ಜಿತ, ಗುಣಮಟ್ಟಕ್ಕೆ ಹೆಸರಾಗಿರುವ ಹಾಗೂ ಸೂಪರ್ ಸ್ಪೆಷಾಲಿಟಿ ಆಯುರ್ವೇದ ಆಸ್ಪತ್ರೆಯಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಯೋಚಿಸುವವರೇ ಅನೇಕರು.

ಇದನ್ನೂ ಓದಿ:ಆರೋಗ್ಯಕ್ಕೊಂದು ಹೊಸ ಆಯಾಮ - ಯೋಗಬನ

ಸಮಾಜದ ಈ ಬೇಡಿಕೆ ಅನುಗುಣವಾಗಿ ಬೆಂಗಳೂರಿನ ಡಾಲರ್ಸ್‌ ಕಾಲೋನಿ ಸಮೀಪದ ಚಿಕ್ಕಮಾರನ ಹಳ್ಳಿಯಲ್ಲಿ ತಲೆ ಎತ್ತಿರುವುದೇ ʻಉತ್ಪಲ ಆಯುರ್ಧಾಮʼ. ಡಾ. ಲೇಖನಾ ಮಂಜುನಾಥ್‌ ಅವರ ಕನಸಿನ ಕೂಸು ʻಉತ್ಪಲ ಆಯುರ್ಧಾಮʼ ಆಯುರ್ವೇದ ಹಾಗೂ ಪಂಚಕರ್ಮ ಚಿಕಿತ್ಸೆಗಳಿಗೆ ಹೇಳಿಮಾಡಿಸಿದ ತಾಣ.

Untitled design (62)

ಉತ್ಫಲ ಆಯುರ್ಧಾಮವು ಕೇವಲ ಒಂದು ಚಿಕಿತ್ಸಾ ಕೇಂದ್ರವಲ್ಲ; ಇದು ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವನ್ನು ಪುನಃಸ್ಥಾಪಿಸುವ ಆರೋಗ್ಯಧಾಮವಾಗಿದೆ. ಇಲ್ಲಿ ಪ್ರತಿಯೊಬ್ಬರ ದೇಹಪ್ರಕೃತಿ ಹಾಗೂ ಆರೋಗ್ಯ ಸ್ಥಿತಿಯನ್ನು ಆಧರಿಸಿ ವೈಯಕ್ತಿಕ ಚಿಕಿತ್ಸಾ ಯೋಜನೆಗಳನ್ನು ರೂಪಿಸಲಾಗುತ್ತದೆ. ಇಲ್ಲಿನ ನುರಿತ ವೈದ್ಯರು ಹಾಗೂ ಥೆರಪಿಸ್ಟ್ ಗಳ ರೋಗಿಗಳೊಂದಿಗೆ ಮುಕ್ತವಾಗಿ ಬೆರೆತು, ಚಿಕಿತ್ಸೆ ನೀಡುವ ವಿಧಾನ ರೋಗಿಗಳಲ್ಲಿ ಹೊಸ ಚೈತನ್ಯವನ್ನು ತುಂಬುವಂತಿದೆ.

ವಿನೂತನ ವಿನ್ಯಾಸದ ಆಯುರ್ಧಾಮ

ಈ ಆರೋಗ್ಯ ಕೇಂದ್ರಕ್ಕೆ ಕಾಲಿಟ್ಟರೆ ಸುಂದರವಾದ ಹೊಸ ಪ್ರಪಂಚದ ಅನುಭವವಾಗುತ್ತದೆ. ಸೂಪರ್ ಸ್ಪೆಷಾಲಿಟಿ ಆಯುರ್ವೇದ ಆಸ್ಪತ್ರೆಗಳೇ ಥಟ್ಟನೆ ನೆನಪಿಗೆ ಬರುತ್ತವೆ. ಆಸ್ಪತ್ರೆಯ ಒಳಾಂಗಣ ವಿನ್ಯಾಸವಂತೂ ಅತ್ಯದ್ಭುತವಾಗಿದ್ದು, ಕೇರಳದ ಪಾರಂಪರಿಕ ವೈದ್ಯಶಾಲೆಗಳಿಗೆ ಆಧುನಿಕ ರೂಪವನ್ನು ನೀಡಿದಂತಿದೆ. ಇಲ್ಲಿನ ಗೋಡೆಯ ಮೇಲಿನ ವರ್ಣರಂಜಿತ ಚಿತ್ತಾರಗಳು, ವಿಶೇಷ ಕಲಾಕೃತಿಗಳು ಎಂಥವರನ್ನೂ ಬೆರಗುಗೊಳಿಸುತ್ತವೆ.

ಹೊಸತನದ ಚಿಕಿತ್ಸಾ ವಿಧಾನ

ಆಸ್ಪತ್ರೆಯ ಒಳಪ್ರವೇಶಿಸುತ್ತಲೇ ಪ್ರೀತಿಯಿಂದ ಬರಮಾಡಿಕೊಳ್ಳುವ ಇಲ್ಲಿನ ರಿಸೆಪ್ಶನ್‌ ಕೌಂಟರ್‌ ಸಿಬ್ಬಂದಿ, ಆರೋಗ್ಯ ಸಮಸ್ಯೆಗಳು ಹಾಗೂ ಇತರೆ ಮಾಹಿತಿಯನ್ನು ಭರ್ತಿ ಮಾಡಲು ಫಾರಂ ಒಂದನ್ನು ನೀಡುತ್ತಾರೆ. ಮೊದಲ ಹಂತದಲ್ಲೇ ಚಿಕಿತ್ಸೆಯನ್ನು ಸೂಚಿಸುವ ಅದೆಷ್ಟೇ ಆಸ್ಪತ್ರೆಗಳ ನಡುವೆ ಇಲ್ಲಿನ ನುರಿತ ವೈದ್ಯರ ತಂಡ ರೋಗಿಗಳೊಂದಿಗೆ ಸಮಾಲೋಚನೆ ನಡೆಸುವುದಕ್ಕಾಗಿಯೇ ಪ್ರಾರಂಭದ ಭೇಟಿಯನ್ನು ಮೀಸಲಿಡುತ್ತಾರೆ. ರೋಗಿಯ ಅಥವಾ ವ್ಯಕ್ತಿಯ ತೊಂದರೆಯನ್ನು ನಿಖರವಾಗಿ ಪತ್ತೆ ಹಚ್ಚಲು ಅವರ ಆಹಾರ ಹಾಗೂ ಜೀವನ ಶೈಲಿಯ ಬಗೆಗೆ ಸಂಪೂರ್ಣ ಮಾಹಿತಿ ಕಲೆಹಾಕಿ, ದೇಹ ಪ್ರಕೃತಿಯನ್ನು ತಿಳಿದುಕೊಳ್ಳುತ್ತಾರೆ. ಆನಂತರಷ್ಟೇ ಸೂಕ್ತ ಚಿಕಿತ್ಸೆ ಪ್ರಾರಂಭಿಸುತ್ತಾರೆ.

Untitled design (64)

ರೋಗಮುಕ್ತಿಗೆ ಪಂಚಕರ್ಮ ಚಿಕಿತ್ಸೆ

ʻಉತ್ಪಲ ಆಯುರ್ಧಾಮʼದಲ್ಲಿ ಪಂಚಕರ್ಮ ಚಿಕಿತ್ಸೆಗಳು ವಿಶೇಷ ಸ್ಥಾನವನ್ನು ಹೊಂದಿವೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ದೇಹವನ್ನು ಶುದ್ಧೀಕರಿಸುವ ಪಂಚಕರ್ಮ ವಿಧಾನಗಳು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ನೆರವಾಗುತ್ತವೆ. ಅಭ್ಯಂಗ, ಶಿರೋಧಾರಾ, ನಸ್ಯ, ಕಟಿ ಬಸ್ತಿ, ಜಾನು ಬಸ್ತಿ ಹಾಗೂ ವಿವಿಧ ರೀತಿಯ ಚಿಕಿತ್ಸೆಗಳು ಇಲ್ಲಿ ಲಭ್ಯವಿದ್ದು, ಆರೋಗ್ಯ ಪುನಶ್ಚೇತನಕ್ಕೆ ಸಹಕಾರಿಯಾಗುತ್ತವೆ.

ಈ ಆಸ್ಪತ್ರೆಯಲ್ಲಿ ಜೀರ್ಣಕ್ರಿಯೆಯ ಸಮಸ್ಯೆಗಳು, ಸಂಧಿವಾತ, ಬೆನ್ನುನೋವು, ಚರ್ಮರೋಗಗಳು, ಮೈಗ್ರೇನ್, ಉಸಿರಾಟದ ತೊಂದರೆಗಳು, ಮಧುಮೇಹ, ಪಿಸಿಓಎಸ್, ಬಂಜೆತನ ಹಾಗೂ ನರವೈಜ್ಞಾನಿಕ ಸಮಸ್ಯೆಗಳಂಥ ಅನೇಕ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದ ಆಧಾರಿತ ಚಿಕಿತ್ಸೆಯನ್ನು ನೀಡಲಾಗುತ್ತದೆ. ಜತೆಗೆ ಗರ್ಭಿಣಿಯರ ಆರೈಕೆ, ಗರ್ಭಸಂಸ್ಕಾರ, ಪ್ರಸವೋತ್ತರ ಆರೈಕೆ, ಮಕ್ಕಳ ಆರೋಗ್ಯ, ಸ್ವರ್ಣ ಬಿಂದು ಪ್ರಾಶನ, ಪೌಷ್ಠಿಕ ಆಹಾರ ಮಾರ್ಗದರ್ಶನ ಮತ್ತು ಯೋಗ-ಜೀವನಶೈಲಿ ಸಲಹೆಗಳನ್ನೂ ಒದಗಿಸಲಾಗುತ್ತದೆ.

ಯೋಗದ ಮೂಲಕ ದೀರ್ಘಕಾಲೀನ ಆರೋಗ್ಯ

ʻಉತ್ಪಲ ಆಯುರ್ಧಾಮʼದ ವಿಶೇಷತೆಯೆಂದರೆ ಇಲ್ಲಿ ಚಿಕಿತ್ಸೆಯ ಜತೆಗೆ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ತಿಳಿಸಿಕೊಡಲಾಗುತ್ತದೆ. ನೈಸರ್ಗಿಕ ಔಷಧಿಗಳು, ಆಹಾರ ನಿಯಮಗಳು, ಯೋಗ ಮತ್ತು ಧ್ಯಾನದ ಮೂಲಕ ದೀರ್ಘಕಾಲೀನ ಆರೋಗ್ಯವನ್ನು ಸಾಧಿಸಲು ರೋಗಿಗಳಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಶಾಂತ ಮತ್ತು ಆರಾಮದಾಯಕ ವಾತಾವರಣದಿಂದ ಚಿಕಿತ್ಸೆಯ ಅನುಭವ ಇನ್ನಷ್ಟು ಹೆಚ್ಚುತ್ತದೆ.

ರಾಜೇಶ್ವರಿ ಆಯುರ್ಧಾಮ

ವಿದ್ಯಾಭ್ಯಾಸದ ನಂತರ ಹೆಸರುಘಟ್ಟ ಮುಖ್ಯರಸ್ತೆಯಲ್ಲಿ ತಮ್ಮ ತಾಯಿಯವರ ಹೆಸರಿನಲ್ಲಿ ಆರೋಗ್ಯಕೇಂದ್ರವನ್ನು ತೆರೆದ ಡಾ.ಲೇಖನಾ ಮಂಜುನಾಥ್‌, ಅದಕ್ಕೆ ʻರಾಜೇಶ್ವರಿ ಆಯುರ್ಧಾಮʼವೆಂದು ನಾಮಕರಣ ಮಾಡಿದರು. ಅಲ್ಲದೆ ಪಂಚಕರ್ಮದಂಥ ಅನೇಕ ಆಯುರ್ವೇದ ಚಿಕಿತ್ಸೆಗಳನ್ನೂ ನೀಡುವ ಮೂಲಕ ಹೆಸರು ಮಾಡಿದ್ದಾರೆ. ಉತ್ಪಲ ಆಧುನಿಕ ಶೈಲಿಯಲ್ಲಿ ವಿನ್ಯಾಸಗೊಳಿಸಿದರೆ, ರಾಜೇಶ್ವರಿ ಆಯುರ್ಧಾಮವು ಸಂಪೂರ್ಣವಾಗಿ ಪುರಾತನ ಪರಂಪರೆಯನ್ನು ಆಧಾರವಾಗಿಸಿ ನಿರ್ಮಾಣಗೊಂಡಿದೆ. ಮೊದಲ ನೋಟಕ್ಕೆ ಕೇರಳದ ಮನೆ ಅಥವಾ ವೈದ್ಯ ಶಾಲೆಗಳ ವಿನ್ಯಾಸ, ಬಿದಿರಿನಿಂದ ತಯಾರಿಸಿರುವ ವಿಶೇಷ ಅಲಂಕಾರಿಕ ವಸ್ತುಗಳು ಬೆಂಗಳೂರಿನಲ್ಲೇ ಅನ್ಯ ರಾಜ್ಯಗಳ ಅನುಭವವನ್ನು ನೀಡುವಂತಿವೆ.

ಒಟ್ಟಿನಲ್ಲಿ ಆಯುರ್ವೇದವು ಕೇವಲ ಒಂದು ಚಿಕಿತ್ಸಾ ಪದ್ಧತಿಯಲ್ಲ, ಅದು ಆರೋಗ್ಯಕರ ಜೀವನದ ಮಾರ್ಗವಾಗಿದೆ. ಪಂಚಕರ್ಮವು ಅದರ ಪ್ರಮುಖ ಶೋಧನ ಚಿಕಿತ್ಸೆಯಾಗಿದ್ದು, ದೇಹ ಮತ್ತು ಮನಸ್ಸಿನ ಶುದ್ಧೀಕರಣಕ್ಕೆ ಮಹತ್ತರ ಪಾತ್ರ ವಹಿಸುತ್ತದೆ. ಪ್ರಾಚೀನ ಜ್ಞಾನ ಮತ್ತು ನೈಸರ್ಗಿಕ ಚಿಕಿತ್ಸೆಗಳ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಯುರ್ವೇದ ಮತ್ತು ಪಂಚಕರ್ಮವು ಇಂದಿಗೂ ಪ್ರಸ್ತುತವಾಗಿದೆ ಎಂಬುದನ್ನು ʻಉತ್ಪಲ ಆಯುರ್ಧಾಮʼದ ಮೂಲಕ ಡಾ. ಲೇಖನಾ ಮಂಜುನಾಥ್‌ ಅವರು ಸಾಬೀತುಪಡಿಸಿದ್ದಾರೆ.

Untitled design (63)

ಡಾ.ಲೇಖನಾ ಮಂಜುನಾಥ್‌ ಅವರು ಆಯುರ್ವೇದ ವೈದ್ಯ ಪದ್ಧತಿಯಡಿ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚಿಗೆ ಇವರನ್ನು ಪ್ರತಿಷ್ಠಿತ ಕರ್ನಾಟಕ ಆಯುರ್ವೇದ ಹಾಗೂ ಯುನಾನಿ ಮಂಡಳಿಯ ನಾಮನಿರ್ದೇಶಿತ ಸದಸ್ಯರಾಗಿ ರಾಜ್ಯ ಸರಕಾರ ನೇಮಕ ಮಾಡಿದೆ. ಇವರು ತುಮಕೂರಿನ ಪ್ರಸಿದ್ಧ ಆಯುರ್ವೇದ ಕುಟುಂಬದವರು. ಇವರ ತಂದೆ ಡಾ. ಲಕ್ಷ್ಮೀನಾರಾಯಣ್‌ ಪಂಡಿತ್‌, ಇವರ ತಾತ ಡಾ. ಶ್ರೀನಿವಾಸ ಪಂಡಿತ್‌ ಅವರು ಪ್ರಖ್ಯಾತ ಆಯುರ್ವೇದ ಪಂಡಿತರು. ಪ್ರತಿಷ್ಠಿತ ವೈದ್ಯ ಪಂಡಿತ ಪ್ರಶಸ್ತಿಗೂ ಇವರು ಪಾತ್ರರಾಗಿದ್ದರು.

ಮೈಸೂರು ಮೂಲದವರಾದ ಡಾ.ಲೇಖನಾ ಮಂಜುನಾಥ್‌ ಮೈಸೂರಿನ ಜೆಎಸ್‌ಎಸ್‌ ಕಾಲೇಜಿನಲ್ಲಿ ಬಿಎಎಂಎಸ್‌ ಪದವಿ, ತುಮಕೂರಿನ ಅಶ್ವಿನಿ ಮೆಡಿಕಲ್‌ ಕಾಲೇಜಿನಲ್ಲಿ ಪಂಚಕರ್ಮ ವಿಷಯದಲ್ಲಿ ಎಂಡಿ ಅಧ್ಯಯನ ಮಾಡಿದ್ದಾರೆ. ಮೈಸೂರು ವಿವಿ ನಲ್ಲಿ ನ್ಯೂಟ್ರೀಷನ್‌ ಮತ್ತು ಡಯಟ್‌ ನಲ್ಲಿ ಪಿಜಿ ಡಿಪ್ಲೊಮೋ ಮಾಡಿರುವುದಲ್ಲದೆ, ಮುಂಬೈನಲ್ಲಿ ಪಿಜಿ ಡಿಪ್ಲಮೋ ಇನ್‌ ಆಯುರ್ವೇದಿಕ್‌ ಕಾಸ್ಮಟಾಲಜಿ ಕೋರ್ಸ್‌ ಮಾಡಿಕೊಂಡಿದ್ದಾರೆ. ಅಮೆರಿಕಾದ ಫೊಲೋ ಆಫ್‌ ದಿ ಇಂಟರ್‌ ನ್ಯಾಷನಲ್‌ ಕೌಂಸಿಲ್‌ ಕೂಡ ಇವರ ಅಧ್ಯಯನದ ಭಾಗವಾಗಿತ್ತು. ದೇಶದ ಹಲವೆಡೆ ನಡೆದ ರಾಷ್ಟ್ರೀಯ ಅಂತಾರಾಷ್ಟ್ರೀಯ ಸೆಮಿನಾರ್‌ಗಳಲ್ಲಿ ಆಯುರ್ವೇದಕ್ಕೆ ಸಂಬಂಧಿಸಿ ಪ್ರೌಢ ಪ್ರಬಂಧಗಳನ್ನು ಮಂಡಿಸಿದ್ದಾರೆ. ರಾಜ್ಯದ ಹಲವು ಗ್ರಾಮಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ಆರೋಗ್ಯ ಮತ್ತು ಪಂಚಕರ್ಮ ಚಿಕಿತ್ಸೆಯ ಮಹತ್ವವನ್ನು ಸಾರಿದ್ದಾರೆ. ವೈದ್ಯಕೀಯ ರಂಗದಲ್ಲಿನ ಈ ಯಶಸ್ಸಿನ ಹಿಂದೆ ಪತಿ ಮಂಜುನಾಥ್‌ ಬಳ್ಳಾರಿ ಅವರ ಪ್ರೋತ್ಸಾಹವಿದೆ ಎನ್ನುವ ಡಾ. ಲೇಖನಾ ಮಂಜುನಾಥ್‌ ಅವರು, ಆಯುರ್ವೇದ ಕ್ಷೇತ್ರದಲ್ಲಿ ಭರವಸೆಯ ಬೆಳಕಾಗಿದ್ದಾರೆ.

ಪ್ರತಿ ವ್ಯಕ್ತಿಯೂ ಪಂಚಕರ್ಮ ಚಿಕಿತ್ಸೆಯನ್ನು ವರ್ಷಕ್ಕೆ ಒಮ್ಮೆಯಾದರೂ ಮಾಡಿಸಿಕೊಳ್ಳಲೇಬೇಕಾದ ಪ್ರಕ್ರಿಯೆ. ಇದು ವ್ರತವಿದ್ದಂತೆ. ನಮಗೋಸ್ಕರ, ನಮ್ಮ ದೇಹದ ಆರೋಗ್ಯಕ್ಕೋಸ್ಕರ ಪಂಚಕರ್ಮ ಮಾಡಿಸಿಕೊಳ್ಳಲೇಬೇಕು. ಭಾರತೀಯರಾಗಿ ನಮ್ಮ ದೇಶದ ಈ ಪದ್ಧತಿಯನ್ನು ಒಪ್ಪಿಕೊಂಡು ಅನುಸರಿಸುವ ಮೂಲಕ ರೋಗಗಳು ಬರುವುದನ್ನು ಮುಂಚಿತವಾಗಿಯೇ ತಡೆಯಬಹುದು. ಸಾಮಾನ್ಯ ಜನರಿಗೆ ಸುಲಭದಲ್ಲಿ ಈ ಆಯುರ್ವೇದ ಸಿಗುವಂತಾಗಬೇಕೆಂಬ ಉದ್ದೇಶದಿಂದ ಉತ್ಪಲ ಆಯುರ್ಧಾಮವನ್ನು ಸ್ಥಾಪನೆ ಮಾಡಿದೆ. ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಕಲ ಸೌಕರ್ಯಗಳನ್ನು ನೀಡುತ್ತಿದ್ದೇನೆ. ಆದರೆ ಚಿಕಿತ್ಸೆ ಬಲು ದುಬಾರಿ ಎಂದುಕೊಳ್ಳಬೇಕಿಲ್ಲ. ಎಲ್ಲ ವರ್ಗದ ಜನರಿಗೂ ಆಯುರ್ವೇದ ಚಿಕಿತ್ಸೆ ಲಭ್ಯವಾಗವಂತೆ ಕಡಿಮೆ ವೆಚ್ಚದಲ್ಲೇ ರೂಪುರೇಷಗಳನ್ನು ಸಿದ್ಧಪಡಿಸಿಕೊಂಡಿದ್ದೇನೆ. ಇಲ್ಲಿಗೆ ಚಿಕಿತ್ಸೆ ಪಡೆದುಕೊಳ್ಳುವುದಕ್ಕಾಗಿ ಇಲ್ಲಿಗೆ ಬರುವ ರೋಗಿಗಳು ವಾರ, ತಿಂಗಳ ಕಾಲ ಚಿಕಿತ್ಸೆಯಾದರೆ ನಿತ್ಯವೂ ಭೇಟಿ ನೀಡಿ ತೆರಳುತ್ತಾರೆ. ಆದರೆ ದೇಶ ವಿದೇಶಗಳಿಂದಲೂ ಆಯುರ್ವೇದ ಪದ್ಧತಿಯೇ ಬೇಕೆಂದು ಬರುವ ಮಂದಿ ವಾಸ್ತವ್ಯವನ್ನೂ ಕೇಳುತ್ತಾರೆ. ಸದ್ಯಕ್ಕೆ ವಾಸ್ತವ್ಯಕ್ಕೆ ಅವಕಾಶವಿಲ್ಲ. ಆದರೆ ಅದಕ್ಕಿರುವ ಸಕಲ ಸಿದ್ಧತೆಗಳೂ ಆಗುತ್ತಿದ್ದು, ತಿಂಗಳ ಅವಧಿಯಲ್ಲಿ ವಾಸ್ತವ್ಯದ ಜತೆಗೆ ಆಯುರ್ವೇದ ಚಿಕಿತ್ಸೆ ಲಭ್ಯವಾಗಲಿದೆ. ಆನ್‌ ಲೈನ್‌ ಮೂಲಕವೂ ರೋಗಿಗಳು ವೈದ್ಯರನ್ನು ಸಂಪರ್ಕಸೇವೆ ಲಭ್ಯವಿದ್ದು, ಆಯುರ್ವೇದ ಚಿಕಿತ್ಸೆಗೆ ಮನಸೋತವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಖುಷಿಯ ವಿಚಾರವೆಂದರೆ ಭಾರತದ ಅತ್ಯಂತ ಪ್ರಾಚೀನ ವೈದ್ಯಕೀಯ ಪದ್ಧತಿಯ ಬಗ್ಗೆ ಜನರಲ್ಲಿ ಅರಿವು ಮೂಡುತ್ತಿದೆ. ಆಯುರ್ವೇದದ ಕುರಿತು ನಂಬಿಕೆ ಹೆಚ್ಚುತ್ತಿದ್ದು, ಆರೋಗ್ಯ ಸಮಸ್ಯೆಗಳಿಂದ ತ್ವರಿತಗತಿಯಲ್ಲಿ ಮುಕ್ತಿ ಹೊಂದುವ ಬದಲು, ಸಮಸ್ಯೆಗಳಿಗೆ ಮೂಲದಿಂದಲೇ ಪರಿಹಾರ ನೀಡುವ ಆಯುರ್ವೇದ ಪದ್ಧತಿಯೇ ಉತ್ತಮ ಎನ್ನುತ್ತಿರುವುದು ಮೆಚ್ಚಿಕೊಳ್ಳುವ ವಿಚಾರ.
- ಡಾ. ಲೇಖನಾ ಮಂಜುನಾಥ್‌, ವೈದ್ಯರು

--

ವಿಳಾಸ

ಉತ್ಪಲ ಆಯುರ್ಧಾಮ, ನ್ಯೂ ಬಿಇಎಲ್ ರಸ್ತೆ, ಚಿಕ್ಕಮಾರನಹಳ್ಳಿ, ಡಾಲರ್ಸ್ ಕಾಲೋನಿ, ಆರ್.ಎಂ.ವಿ. 2ನೇ ಹಂತ, ಬೆಂಗಳೂರು, ಕರ್ನಾಟಕ 560094

ಮೊ: +91 72591 95959

ರಾಜೇಶ್ವರಿ ಆಯುರ್ಧಾಮ, ಹಾವನೂರು ಬಡಾವಣೆ, 8ನೇ ಮೈಲಿ ಹತ್ತಿರ, ಬೆಂಗಳೂರು.

ಮೊ: +91 821 736 8304

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..