ನೋಡಬನ್ನಿ ಜ್ಯೋತಿರ್ಲಿಂಗ - ವಾರಾಣಸಿಯ ಕಾಶಿ ವಿಶ್ವನಾಥ
ಕಾಶಿ ವಿಶ್ವನಾಥ ದೇವಾಲಯವು ಉತ್ತರ ಪ್ರದೇಶ ರಾಜ್ಯದ ವಾರಾಣಸಿ ನಗರದಲ್ಲಿರುವ ಪವಿತ್ರವಾದ ಹಿಂದೂ ದೇವಾಲಯವಾಗಿದೆ. ಸ್ಥಳ ಪುರಾಣದಿಂದಾಗಿಯೂ ವಾರಾಣಸಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ.
ಭಾರತದಲ್ಲಿ ಹನ್ನೆರಡು ಪವಿತ್ರ ಶಿವಸ್ಥಾನಗಳಿವೆ. ಅದನ್ನು ಹನ್ನೆರಡು ಜ್ಯೋತಿರ್ಲಿಂಗಗಳು ಎಂದು ಕರೆಯಲಾಗುತ್ತದೆ. ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗೂ ಸಾಕಷ್ಟು ಶಿವನ ದೇಗುಲಗಳಿವೆ. ಆದರೆ ಈ ಹನ್ನೆರಡು ಜ್ಯೋತಿರ್ಲಿಂಗಗಳಿಗೆ ಅದರದ್ದೇ ಆದ ಮಹತ್ವ ಮತ್ತು ವಿಶೇಷತೆಯಿದೆ. ಶೈವ ಭಕ್ತರ ಪಾಲಿಗೆ ಅದು ಪರಮ ಪವಿತ್ರ ಕ್ಷೇತ್ರ.
ಜ್ಯೋತಿರ್ಲಿಂಗದಲ್ಲಿ ನೆಲೆಸಿರುವ ಶಿವನು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ ಕಷ್ಟಗಳನ್ನು ಪರಿಹರಿಸುತ್ತಾನೆ ಎಂಬ ನಂಬಿಕೆಯಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಶಿವನು ಜ್ಯೋತಿಯ ರೂಪದಲ್ಲಿ ಇರುತ್ತಾನೆ ಎಂದು ಹೇಳಲಾಗುತ್ತದೆ. ಜ್ಯೋತಿರ್ಲಿಂಗವು ಮಹಾದೇವನ ಸ್ವಯಂಭೂ ಅವತಾರವಾಗಿದ್ದು, ಭಗವಾನ್ ಶಿವನ ಜ್ಯೋತಿ ಗೋಚರಿಸುವಲ್ಲೆಲ್ಲಾ ಜ್ಯೋತಿರ್ಲಿಂಗವನ್ನು ಸ್ಥಾಪಿಸಲಾಗಿದೆ.

ವಾರಾಣಸಿಯ ಕಾಶಿ ವಿಶ್ವನಾಥ
ಕಾಶಿ ವಿಶ್ವನಾಥ ದೇವಾಲಯವು ಉತ್ತರ ಪ್ರದೇಶ ರಾಜ್ಯದ ವಾರಾಣಸಿ ನಗರದಲ್ಲಿರುವ ಪವಿತ್ರವಾದ ಹಿಂದೂ ದೇವಾಲಯವಾಗಿದೆ. ಸ್ಥಳ ಪುರಾಣದಿಂದಾಗಿಯೂ ವಾರಾಣಸಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ. ಅಷ್ಟೇ ಅಲ್ಲದೆ ಪವಿತ್ರ ಗಂಗಾ ನದಿಯ ದಡದಲ್ಲಿರುವ ವಿಶ್ವನಾಥ ದೇವಾಲಯವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು ಇದನ್ನು ಅತ್ಯಂತ ಪವಿತ್ರ ಮತ್ತು ಶಕ್ತಿಯುತ ಜ್ಯೋತಿರ್ಲಿಂಗವೆಂದು ಹೇಳಲಾಗಿದೆ.
ವಿಶ್ವೇಶ್ವರ, ಅಂದರೆ ಬ್ರಹ್ಮಾಂಡವನ್ನು ಆಳುವವನು ಎಂಬ ಅರ್ಥವನ್ನು ಕೊಡುತ್ತದೆ. ಪ್ರಾಚೀನ ಹಿಂದೂ ಧರ್ಮಗ್ರಂಥಗಳಲ್ಲೂ ಈ ದೇವಾಲಯದ ಹತ್ತು ಹಲವು ಉಲ್ಲೇಖಗಳಿವೆ. ಈಶ್ವರನ ದರ್ಶನಕ್ಕಾಗಿ ಜಗತ್ತಿನಾದ್ಯಂತ ಯಾತ್ರಾರ್ಥಿಗಳು ಇಲ್ಲಿಗೆ ಬರುತ್ತಾರೆ. ಅಂದಹಾಗೆ ಈ ನಗರವನ್ನು ಶಿವನೇ ನಿರ್ಮಿಸಿದ್ದಾನೆಂದು ನಂಬಲಾಗಿದೆ. ಇಲ್ಲಿ ಸ್ಥಾಪಿತವಾಗಿರುವ ಜ್ಯೋತಿರ್ಲಿಂಗದ ಸುತ್ತ ಹತ್ತಾರು ದಂತಕಥೆಗಳು ಹೆಣೆದುಕೊಂಡಿವೆ. ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ವಿಶ್ವನಾಥನ ಸನ್ನಿಧಿಯು ಶ್ರೀಮಂತ ದೇವಾಲಯ. ಈ ಕಾಶಿಯಲ್ಲಿ ಗಂಗಾ ನದಿ ಹರಿಯುವುದರಿಂದ ಭಕ್ತರು ಗಂಗೆಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಾರೆ.