• ಮೃಣಾಲಿನಿ

ದಿಲ್ಲಿಯ ಬ್ಯಾಟರಿ ಚಾಲಿತ ಟುಕ್ ಟುಕ್ ವಾಹನಗಳಿವೆ. ಆರಾಮಾಗಿ ಐದು ಜನ ಕುಳಿತುಕೊಳ್ಳಬಹುದಾದ ಗಾಡಿ. ದಿಲ್ಲಿಯ ಚಾಂದನಿ ಚೌಕ್, ಪಾಲಿಕಾ ಬಜಾರ್, ಹನುಮಾನ್ ಮಂದಿರ್, ಕಾಲ್ಕಾಜಿ ಮಂದಿರ್ ಮುಂತಾದ ಸ್ಥಳಗಳಿಗೆ, ಕಿರಿದಾದ ಗಲ್ಲಿಗಳಲ್ಲಿ ನುಸುಳಿಕೊಂಡು ಹೋಗಲು ಅನುಕೂಲವಾಗುವಂಥ ಉದ್ದ ಮೂತಿಯ ವಾಹನ. ವೇಗವಾಗಿ ಮತ್ತು ಶಬ್ದರಹಿತವಾಗಿ ಚಲಿಸುತ್ತವೆ. ಹಾಗಾಗಿ ಈ ‘ಟುಕ್ ಟುಕ್’ ಗಾಡಿಗಳು ನನ್ನ ಮನ ಸೆಳೆದವು.

ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಒಬ್ಬರಿಗೆ ದರ ಹತ್ತು ರುಪಾಯಿಗಳು. ಅಲ್ಲಲ್ಲಿ ಪ್ರವಾಸಿ ಸ್ಥಳಗಳಿಗೆ ಸುತ್ತಾಡಿಸಿ, ನಾವು ಬರೋವರೆಗೂ ನಮಗಾಗಿ ಗೇಟ್‌ನಲ್ಲಿ ವೇಟ್ ಮಾಡಿ, ನಾವು ಹೇಳಿದ ಸ್ಥಳಕ್ಕೆ ತಲುಪಿಸಿ ಟ್ರಿಪ್ ಎಂಡ್ ಮಾಡುತ್ತಾರೆ.

ಇದನ್ನೂ ಓದಿ: ‌ಜ್ಞಾನ ವಿಜ್ಞಾನದ ಜಾದೂಘರ್

ನಾವು ಇಂಥ ಒಂದು ಟುಕ್ ಟುಕ್‌ನಲ್ಲಿ ಈಡಿ ಚಾಂದನಿ ಚೌಕ್ ಸುತ್ತಾಡಿದೆವು. ಮಧ್ಯ ಇಳಿದು ಕೆಲವು ಅಂಗಡಿಗಳಲ್ಲಿ ಶಾಪಿಂಗ್ ಮಾಡಿದೆವು. ʻಗರ್ಮಿ ಲಗ್‌ರಹಿ ಹೈ ಭಯ್ಯಾ, ಅಚ್ಛಿಸೀ ಲಸ್ಸಿ ಕೀ ದುಕಾನ್ ಪರ ಲೇ ಚಲೋನಾʼ ಎಂದಾಗ, ʻಜೀ ಜೀʼ ಎನ್ನುತ್ತಾ, ಪುಟ್ಟ ಗಲ್ಲಿಯೊಂದನ್ನು ಹೊಕ್ಕರು. ಒಂದೊಳ್ಳೆ ಲಸ್ಸಿ ಹಾಗೂ ಬನ್ ಮಸ್ಕಾ ದೊರಕುವ ಅಂಗಡಿಗೆ ತಂದು ನಿಲ್ಲಿಸಿದರು. ಆ ಸಣ್ಣ ರಸ್ತೆಯಲ್ಲಿ ಐದು ಜನ ಒಟ್ಟಿಗೆ ನಿಲ್ಲಲೂ ಸ್ಥಳವಿರಲಿಲ್ಲ. ಟುಕ್ ಟುಕ್‌ನಲ್ಲೇ ಕುಳಿತು, ಕೆನೆ ಭರಿತ ಮಟ್ಕಾ ಲಸ್ಸಿ ಸವಿದೆವು.

Untitled design (14)

ಪರಿಸರ ಸ್ನೇಹಿ

ಪೆಟ್ರೋಲ್-ಡಿಸೈಲ್ ಬಳಿಸದೆ, ಪರಿಸರಕ್ಕೆ ಹಾನಿ ಉಂಟು ಮಾಡದೆ, ಪ್ರಯಾಣಿಕರ ಜೇಬಿಗೂ ಹೊರೆಯಾಗದೆ ಇರುವ ಈ ‘ಟುಕ್ ಟುಕ್’ ವಾಹನ ನನಗೆ ಸೋಜಿಗವನುಂಟು ಮಾಡಿತು. ಈವಿ ಟುಕ್ ಟುಕ್, ಟೈಲ್ ಪೈಪ್‌ನಿಂದ ಹೊಗೆ ಉಗಳುವುದಿಲ್ಲ. ಮೂರರಿಂದ ನಾಲ್ಕು ತಾಸು ಚಾರ್ಜ್ ಮಾಡಿದರೆ 120 - 150 ಕಿಮಿ ಮೈಲೇಜ್ ಕೊಡುತ್ತದೆ. ನಿರ್ವಹಣಾ ವೆಚ್ಚ ಸುಮಾರು 70% ಕಡಿಮೆ. ಸಾಕಷ್ಟು ಜನರ ಜೀವನೋಪಾಯಕ್ಕೆ ದಾರಿಯಾಗುತ್ತದೆ.

ಮಥುರಾ ಮತ್ತು ಬೃಂದಾವನದಲ್ಲಿ

ಮಥುರಾ ಹಾಗೂ ಬೃಂದಾವನ್ ಪ್ರವಾಸದಲ್ಲಿ ನಾವು ಇಂಥ ಹಲವು ಮಾದರಿಯ ‘ಟುಕ್ ಟುಕ್’ ನೋಡಿದೆವು. ಮಥುರೆಯಲ್ಲಿ ಮಾನವ ಚಾಲಿತ ಸೈಕಲ್ ರಿಕ್ಷಾ ಕೂಡ ಚಲಾವಣೆಯಲ್ಲಿವೆ. ಬಾಂಕೆ ಬಿಹಾರಿ ಮಂದಿರ್‌ದಿಂದ ಪ್ರೇಮ್ ಮಂದಿರವರೆಗೂ ಟುಕ್ ಟುಕ್‌ನಲ್ಲಿ ಬಂದೆವು. ಒಂದು ಘಾಟ್‌ನಿಂದ ಇನ್ನೊಂದು ಘಾಟ್‌ವರೆಗೂ ಈ ಟುಕ್ ಟುಕ್‌ನಲ್ಲಿ ತಲುಪಬಹುದು. ನಸುಕಿನ ಐದು ಗಂಟೆಗೆ, ಯಮುನಾ ಆರತಿ ನೋಡಲು ಲಗುಬಗೆಯಿಂದ ಹೊರಟ ನನಗೆ, ಓರ್ವ ಟುಕ್ ಟುಕ್ ಚಾಲಕ, ವಿಶ್ರಾಮ್ ಘಾಟ್‌ವರೆಗೂ ಡ್ರಾಪ್ ಮಾಡಿದ. ದುಡ್ಡು ಕೊಡಲು ಹೋದರೆ ನಿರಾಕರಿಸಿ, ʻಯಮುನಾಜಿ ಕೀ ಆರತಿ ಚಲ್ ರಹಿ ಹೈ…ಜಾಯಿಯೇ ಜಾಯಿಯೇ…ʼ ಎಂದು ಸಮಯಕ್ಕೆ ಸರಿಯಾಗಿ ದೇವರಂತೆ ಬಂದ.

ಬೃಂದಾವನದಲ್ಲಿ, ಉತ್ತರ ಪ್ರದೇಶ ‘ಬ್ರಜ್ ತೀರ್ಥ ವಿಕಾಸ್ ಪರಿಷದ್’ನ ಎಲೆಕ್ಟ್ರಿಕ್ ಗೊಲ್ಫ್ ಕ್ಯಾರ್ಟ್ಸ್ ಅಂದರೆ ಬ್ಯಾಟ್ರಿ ಚಾಲಿತ ಬಗ್ಗೀಗಳಿವೆ. ಇವು ಸರಕಾರದಿಂದ ಯಾತ್ರಿಗಳ ಅನುಕೂಲಕ್ಕಾಗಿ ಕಲ್ಪಿಸಿಲಾಗಿರುವ ಸೌಲಭ್ಯಗಳ ಒಂದು ಭಾಗ. ಇದರಲ್ಲಿ ಎಂಟರಿಂದ ಹತ್ತು ಜನ ಎಕಕಾಲಕ್ಕೆ ಹೋಗಬಹುದು. ಬೃಂದಾವನದ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣದಿಂದ, ಬೃಂದಾವನದ ಗಲ್ಲಿಗಳಲ್ಲಿರುವ ಪ್ರಮುಖ ದೇಗುಲಗಳಿಗೆ ಈ ವಾಹನಗಳು ಯಾತ್ರಿಕರನ್ನು ತಲುಪಿಸುತ್ತವೆ. ಇದರಿಂದ ಪರಿಸರ ಸಂರಕ್ಷಣೆ ಜತೆಗೆ ಟ್ರಾಫಿಕ್ ಜಾಮ್ ತಪ್ಪಿಸಬಹುದು. ಇಂಧನ ಉಳಿತಾಯವೂ ಆಗುತ್ತದೆ.

Untitled design (12)

ಮಹಿಳೆಯರೂ ಸುಲಭವಾಗಿ ಚಲಾಯಿಸಬಹುದು

ಇಂಥ ಎಲೆಕ್ಟ್ರಿಕ್ ಟುಕ್ ಟುಕ್ ಆಸ್ಸಾಂ, ರಾಜಸ್ಥಾನ, ಹರಿಯಾಣ, ಬಿಹಾರ್ ಮುಂತಾದ ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಹೆಚ್ಚಾಗಿ ಕಾಣಬಹುದು. ಇತ್ತೀಚೆಗೆ ದಕ್ಷಿಣದಲ್ಲಿ ಎಲೆಕ್ಟ್ರಿಕ್ ಆಟೋಗಳು ನೀಲಿ ಬಣ್ಣ ಹೊತ್ತು ರಸ್ತೆಗಿಳಿದಿವೆ. ಮಹಿಳೆಯರೂ ಸುಲಭವಾಗಿ ಡ್ರೈವ್ ಮಾಡುತ್ತಿದ್ದಾರೆ. ಆದರೆ ಕಡಿಮೆ ದೂರದವರೆಗೆ ಪ್ರಯಾಣಕ್ಕೆ ಅನುಕೂಲಕರ ದಿಲ್ಲಿ ಮಾದರಿಯ ಶೇರ್ಡ್ ಟುಕ್ ಟುಕ್ ಇನ್ನೂ ಬಂದಿಲ್ಲ. ಕರ್ನಾಟಕದಲ್ಲಿ ರೈಲು ನಿಲ್ದಾಣ, ದೊಡ್ಡ ದೊಡ್ಡ ದೇವಸ್ಥಾನಗಳು, ಐಟಿ ಕಂಪೆನಿಗಳಲ್ಲಿ ಬ್ಯಾಟರಿ ಚಾಲಿತ ಬಗ್ಗೀಗಳು ಓಡಾಡುತ್ತವೆಯಷ್ಟೇ.

ಆತ್ಮ ನಿರ್ಭರತೆಗೆ ಕೈಜೋಡಿಸೋಣ

ʻಉಳಿತಾಯವಾದ ಪ್ರತಿಯೊಂದು ಇಂಧನದ ಹನಿ ಭಾರತದ ಭವಿಷ್ಯವನ್ನು ಬಲಪಡಿಸುತ್ತದೆ. ಶಾಶ್ವತ ಮತ್ತು ಆತ್ಮನಿರ್ಭರ ಭಾರತದತ್ತ ಸಾಗೋಣ.ʼ ಎಂದು ಇತ್ತೀಚೆಗೆ ಮಾನ್ಯ ಪ್ರಧಾನ ಮಂತ್ರಿಗಳ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿ, ಇಂಥ ಸಾರ್ವಜನಿಕ ಸಾರಿಗೆ ಬಳಿಸಿ ಪ್ರಯಾಣಿಸುವ ಸೌಲಭ್ಯ ನಮ್ಮ ರಾಜ್ಯಕ್ಕೆ ದೊರಕಬೇಕು. ಎಲೆಕ್ಟ್ರಿಕ್ ಆಟೋಗಳ ಸಂಖ್ಯೆ ಹೆಚ್ಚಾಗಬೇಕು. ಇಂಧನದ ಅವಲಂಬನೆ ಕಡಿಮೆ ಮಾಡುವ ಪ್ರಧಾನಿಗಳ ಕರೆಗೆ ಓಗೋಡಬೇಕು.