ಅನಿರೀಕ್ಷಿತ ಅಡೆತಡೆಗಳು ಅಥವಾ ಹವಾಮಾನ ವೈಪರೀತ್ಯಗಳು ಎದುರಾದರೂ ಭಾರತೀಯ ಪ್ರಯಾಣಿಕರು ತಮ್ಮ ರಜಾದಿನಗಳ ಪ್ರವಾಸದ ಉತ್ಸಾಹವನ್ನು ಕೈಬಿಡುವುದಿಲ್ಲ ಎಂಬುದನ್ನು ಪ್ರಮುಖ ಪ್ರವಾಸೋದ್ಯಮ ವರದಿಯೊಂದು ಸ್ಪಷ್ಟಪಡಿಸಿದೆ. ಪ್ರವಾಸದಲ್ಲಿ ಯಾವುದೇ ತೊಂದರೆಗಳು ಎದುರಾದರೆ ಬರೋಬ್ಬರಿ ಶೇ. 96ರಷ್ಟು ಭಾರತೀಯ ಪ್ರಯಾಣಿಕರು ಪ್ರವಾಸವನ್ನೇ ಸಂಪೂರ್ಣ ರದ್ದುಗೊಳಿಸುವ ಬದಲು, ತಮ್ಮ ಪ್ಲ್ಯಾನ್‌ಗಳನ್ನು ಬದಲಾಯಿಸಿಕೊಂಡು ಪ್ರಯಾಣ ಮುಂದುವರಿಸಲು ಆದ್ಯತೆ ನೀಡುತ್ತಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಜೆನ್- ಜಿಗಳನ್ನು ತಲುಪುವುದೇ ನಮ್ಮ ಮುಂದಿನ ಗುರಿ -ಶಿವರಾಮ್ ಬಾಬು

ಯಾವುದೇ ತುರ್ತು ಪರಿಸ್ಥಿತಿ, ವಿಮಾನ ವಿಳಂಬ ಅಥವಾ ಹವಾಮಾನ ವೈಪರೀತ್ಯ ಉಂಟಾದಾಗ ಶೇ. 4 ರಷ್ಟು ಜನರು ಮಾತ್ರ ಪ್ರವಾಸವನ್ನು ಸಂಪೂರ್ಣವಾಗಿ ಕ್ಯಾನ್ಸಲ್ ಮಾಡುತ್ತಾರೆ. ಇನ್ನುಳಿದ ಶೇ. 96 ರಷ್ಟು ಜನರು ಪರ್ಯಾಯ ದಿನಾಂಕ, ಬೇರೆ ಮಾರ್ಗ ಅಥವಾ ಹೊಸ ತಾಣಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಶೇ. 60 ಕ್ಕೂ ಹೆಚ್ಚು ಪ್ರವಾಸಿಗರು ಪ್ರವಾಸದ ಕೊನೆಯ ಕ್ಷಣದಲ್ಲೂ ತಮ್ಮ ಪ್ಲ್ಯಾನ್ ಬದಲಾಯಿಸಿಕೊಳ್ಳಲು ಸಿದ್ಧರಿರುತ್ತಾರೆ ಹಾಗೂ ಫ್ಲೆಕ್ಸಿಬಲ್ ಬುಕಿಂಗ್ ನೀಡುವ ಹೋಟೆಲ್ ಮತ್ತು ವಿಮಾನಯಾನ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.

ಉಚಿತ ದಿನಾಂಕ ಬದಲಾವಣೆ ಮತ್ತು ಟ್ರಾವೆಲ್ ಇನ್ಶೂರೆನ್ಸ್ ಸೌಲಭ್ಯಗಳಿರುವ ಟಿಕೆಟ್‌ಗಳನ್ನು ಖರೀದಿಸಲು ಭಾರತೀಯರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ನಿಗದಿತ ಪ್ರವಾಸಿ ತಾಣದಲ್ಲಿ ಬುಕಿಂಗ್‌ ಸಿಗದಿದ್ದರೆ ಅಥವಾ ಅಡಚಣೆ ಉಂಟಾದರೆ, ತಕ್ಷಣವೇ ಸನಿಹದ ಇತರ ಅಪರಿಚಿತ ಅಥವಾ ಜನಪ್ರಿಯವಲ್ಲದ ನೈಸರ್ಗಿಕ ತಾಣಗಳಿಗೆ ತೆರಳಲು ಬಯಸುತ್ತಾರೆ.

ಇಂದಿನ ಪ್ರವಾಸಿಗರು ರಿಯಲ್‌ ಟೈಮ್‌ ಟ್ರಾವೆಲ್ ಅಪ್ಡೇಟ್‌ಗಳನ್ನು ಒದಗಿಸುವ ಮೊಬೈಲ್ ಆಪ್‌ಗಳು ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಪ್ರವಾಸಿ ಗೈಡ್‌ಗಳನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಇದರಿಂದಾಗಿ ಪ್ರಯಾಣದ ವೇಳಾಪಟ್ಟಿಯಲ್ಲಿ ಏರುಪೇರಾದರೂ ತಕ್ಷಣವೇ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವುದು ಸುಲಭವಾಗಿದೆ.