ಬ್ರಿಟನ್‌ನ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಡಿಯಾನಾ ಅವರ ಮೊದಲ ಲಡಾಖ್ ಪ್ರವಾಸವು ಅವರಿಗೆ ಮರೆಯಲಾಗದ ಅನುಭವವಾಗಿ ಪರಿಣಮಿಸಿದೆ. ಏಳು ದಿನಗಳ ಪ್ರವಾಸದಲ್ಲಿ ಲಡಾಖ್‌ನ ಅದ್ಭುತ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡ ಅವರು, ಹೊಸ ಸ್ನೇಹಿತರನ್ನು ಸಂಪಾದಿಸುವುದರ ಜತೆಗೆ ತಮ್ಮನ್ನು ತಾವು ಅರಿಯುವ ಅವಕಾಶವೂ ದೊರೆಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಭಾರತದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿದ್ದಾರೆ. ದೆಹಲಿ ಮತ್ತು ಮೈಸೂರಿನ ಪ್ರವಾಸದ ಬಳಿಕ ಅವರು ಲಡಾಖ್‌ಗೆ ತೆರಳಿದ್ದರು.

ಲಡಾಖ್‌ನಲ್ಲಿ ಥಿಕ್ಸೆ ಮಠ ಅವರಿಗೆ ವಿಶೇಷವಾಗಿ ಮೆಚ್ಚುಗೆಯಾಯಿತು. ಮಠದ ಒಳಾಂಗಣ ವಿನ್ಯಾಸ ಹಾಗೂ ಸುತ್ತಲಿನ ಪರ್ವತಗಳ ದೃಶ್ಯ ತಮ್ಮನ್ನು ಅಚ್ಚರಿಗೊಳಿಸಿತು ಎಂದು ಅವರು ಹೇಳಿದ್ದಾರೆ. ಲೇಹ್‌ನಲ್ಲಿ ಮುಂಜಾನೆ 4 ಗಂಟೆಗೆ ಎದ್ದು ಸೂರ್ಯೋದಯ ವೀಕ್ಷಿಸಿದ ಅವರು, ಶಾಂತಿ ಸ್ತೂಪ ಮತ್ತು ಲೇಹ್ ಅರಮನೆಗೂ ಭೇಟಿ ನೀಡಿದರು.

ಪ್ರವಾಸದ ವಿಭಿನ್ನ ಅನುಭವವಾಗಿ ರುಂಬಕ್ ಗ್ರಾಮದಲ್ಲಿ 24 ಗಂಟೆಗಳ ಕಾಲ ಮೊಬೈಲ್ ನೆಟ್‌ವರ್ಕ್ ಮತ್ತು ಇಂಟರ್ನೆಟ್ ಇಲ್ಲದೆ ಕಳೆದರು. ಬದಲಿಗೆ ಸ್ನೇಹಿತರೊಂದಿಗೆ ಪರ್ವತಗಳ ನಡುವೆ ಸಮಯ ಕಳೆಯುವ ಅವಕಾಶ ಪಡೆದರು.

ಇದರ ಜೊತೆಗೆ ಮೊಮೊ ತಯಾರಿಸುವುದನ್ನು ಕಲಿತ ಅವರು, ಸಂಜೆ ಸ್ನೇಹಿತರೊಂದಿಗೆ ಹಾಡಿ, ನೃತ್ಯ ಮಾಡಿ, ನಕ್ಷತ್ರಗಳ ಕೆಳಗೆ ಸಮಯ ಕಳೆದರು. ಪ್ರಕೃತಿ, ಸ್ನೇಹ ಮತ್ತು ಆತ್ಮಾವಲೋಕನದ ಈ ಅನುಭವವನ್ನು ಜೀವನಪೂರ್ತಿ ಮರೆಯುವುದಿಲ್ಲ ಎಂದು ಡಿಯಾನಾ ಹೇಳಿದ್ದಾರೆ.