ಉತ್ತರಾಖಂಡ ಸರಕಾರವು ರಾಜ್ಯದ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿರುವ ಟಾನ್ಸ್ (Tons) ಕಣಿವೆಯನ್ನು ಭಾರತದ ಮುಂದಿನ ಪ್ರಮುಖ ಸಾಹಸ ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿದೆ. ಧಾರ್ಮಿಕ ಮತ್ತು ಪರ್ವತ ಪ್ರವಾಸೋದ್ಯಮಕ್ಕೆ ಹೆಸರಾದ ಉತ್ತರಾಖಂಡವು ಇದೀಗ ಅನುಭವಾಧಾರಿತ ಹಾಗೂ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ.

ಟಾನ್ಸ್ ನದಿಯ ಸುತ್ತಮುತ್ತ ಹರಡಿರುವ ಈ ಕಣಿವೆ, ಅಲ್ಪೈನ್ ಹುಲ್ಲುಗಾವಲುಗಳು, ದಟ್ಟ ದೇವದಾರು ಕಾಡುಗಳು ಹಾಗೂ ಹಿಮಾಲಯದ ಸಾಂಪ್ರದಾಯಿಕ ಗ್ರಾಮಗಳ ಸೊಬಗಿನಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ವೈಟ್ ವಾಟರ್ ರಾಫ್ಟಿಂಗ್, ಟ್ರೆಕ್ಕಿಂಗ್, ಕ್ಯಾಂಪಿಂಗ್, ಪ್ರಕೃತಿ ವೀಕ್ಷಣೆ, ಜೀವವೈವಿಧ್ಯ ಅನ್ವೇಷಣೆ ಮತ್ತು ಸ್ಥಳೀಯ ಸಂಸ್ಕೃತಿಯ ಅನುಭವ ಸೇರಿದಂತೆ ಹಲವು ಸಾಹಸ ಚಟುವಟಿಕೆಗಳಿಗೆ ಅವಕಾಶವಿದೆ.

Untitled design (66)

ಇತ್ತೀಚೆಗೆ ನಡೆದ ಮೊದಲ 'ಟೋಟಲ್ ಟಾನ್ಸ್ ಎಕ್ಸ್‌ಪಿಡಿಷನ್'ನಲ್ಲಿ ಬ್ರಿಟನ್ ಮತ್ತು ಅಮೆರಿಕದ ಸಾಹಸ ಪ್ರವಾಸಿಗರು ಭಾಗವಹಿಸಿ ರಾಫ್ಟಿಂಗ್, ಟ್ರೆಕ್ಕಿಂಗ್ ಹಾಗೂ ಕಾಡು ಶಿಬಿರಗಳಲ್ಲಿ ಪಾಲ್ಗೊಂಡಿದ್ದು, ಈ ಪ್ರದೇಶದ ಜಾಗತಿಕ ಮಟ್ಟದ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಇದರ ಯಶಸ್ಸಿನ ಬಳಿಕ ಟಾನ್ಸ್ ಕಣಿವೆಯನ್ನು ದೇಶೀಯ ಹಾಗೂ ವಿದೇಶಿ ಸಾಹಸ ಪ್ರವಾಸಿಗರ ಗಮನಕ್ಕೆ ತರಲು ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆ ವಿಶೇಷ ಪ್ರಚಾರ ಆರಂಭಿಸಿದೆ.

ರಾಜ್ಯದ ಪ್ರವಾಸೋದ್ಯಮ ಕಾರ್ಯದರ್ಶಿ ಧೀರಜ್ ಸಿಂಗ್ ಗರ್ಬ್ಯಾಲ್ ಅವರ ಪ್ರಕಾರ, ಈ ಯೋಜನೆಯಿಂದ ಸ್ಥಳೀಯರಿಗೆ ಉದ್ಯೋಗ ಮತ್ತು ಆದಾಯದ ಹೊಸ ಅವಕಾಶಗಳು ಸೃಷ್ಟಿಯಾಗಲಿದ್ದು, ಪರಿಸರ ಸಂರಕ್ಷಣೆಯೊಂದಿಗೆ ಸಮುದಾಯ ಆಧಾರಿತ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ. ಸಾಹಸ ಪ್ರವಾಸೋದ್ಯಮ ಸಂಸ್ಥೆ ಆಕ್ವಾಟೆರಾ ಅಡ್ವೆಂಚರ್ಸ್ ಸಹ ಈ ಅಭಿಯಾನದಲ್ಲಿ ಪಾಲುದಾರಿಕೆಯಾಗಿದ್ದು, ಜವಾಬ್ದಾರಿಯುತ ಮತ್ತು ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸರಕಾರದೊಂದಿಗೆ ಕೈಜೋಡಿಸಿದೆ.