ನಾಗರಹೊಳೆಯಲ್ಲಿ ಸಫಾರಿ: ನಟ ಶಿವಣ್ಣ ಕುಟುಂಬ ಫುಲ್‌ಖುಷ್
ಇತ್ತೀಚೆಗಷ್ಟೇ ನಟ ಡಾಲಿ ಧನಂಜಯ್ ಪತ್ನಿ ಧನ್ಯತಾ ಜತೆಗೆ ಕಬಿನಿಯ ಹಿನ್ನೀರಿನ ವನಸಿರಿಯಲ್ಲಿ ಕಾಲ ಕಳೆದು, ಸಾಮಾಜಿಕ ಜಾಲತಾಣದಲ್ಲಿ ಕಬಿನಿಯನ್ನು ಹಾಡಿ ಹೊಗಳಿರುವ ವಿಡಿಯೋ ಎಲ್ಲೆಡೆ ಸುದ್ದಿಯಾಗಿತ್ತು. ಇದೀಗ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟ ಕುಟುಂಬ ಸಮೇತರಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿನೀಡಿದ್ದಾರೆ.
ಎಚ್.ಡಿ. ಕೋಟೆ: ರಿಯಾಲಿಟಿ ಶೋಗಳು, ಸಿನಿಮಾ ಚಿತ್ರೀಕರಣದ ನಡುವೆಯೇ ಬ್ಯುಸಿಯಾಗಿರುವ ನಟ ಶಿವರಾಜ್ ಕುಮಾರ್ ತಮ್ಮ ಒತ್ತಡದ ಜೀವನದಿಂದ ಹೊರಬರಲು, ಕುಟುಂಬಕ್ಕೆ ಅಮೂಲ್ಯವಾದ ಸಮಯವನ್ನು ನೀಡುವ ಸಲುವಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದರು.

ಪತ್ನಿ ಗೀತಾ ಶಿವರಾಜಕುಮಾರ್ , ಇಬ್ಬರು ಪುತ್ರಿಯರು ಹಾಗೂ ನಿರ್ಮಾಪಕ ಶ್ರೀಕಾಂತ್ ಸೇರಿ ಎಚ್.ಡಿ. ಕೋಟೆ ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟೆ ಸಫಾರಿಗೆ ತೆರಳಿ ವನ್ಯ ಜೀವಿಗಳನ್ನು ವೀಕ್ಷಿಸಿ ಖುಷಿಪಟ್ಟರು. ಕಬಿನಿ ಹಿನ್ನೀರಿನ ಸಂದೇಶ್ ವಾಟರ್ ಎಡ್ಜ್ ರೆಸಾರ್ಟ್ ನಲ್ಲಿ ಒಂದಷ್ಟು ಹೊತ್ತು ವಿಶ್ರಾಂತಿ ಪಡೆದು, ಮಧ್ಯಾಹ್ನ ದಮ್ಮನಕಟ್ಟೆ ಸಫಾರಿ ಕೇಂದ್ರದ ವಾಹನದಲ್ಲಿ ತೆರಳಿ,ಅರಣ್ಯವನ್ನು ಸುತ್ತಾಡಿ ಬಂದಿದ್ದರು. ಸಫಾರಿಯ ವೇಳೆ ಹುಲಿ, ಚಿರತೆ, ಆನೆ ಹಾಗೂ ಜಿಂಕೆಗಳನ್ನು ಕಂಡು, ಫೋಟೋ ಕ್ಲಿಕ್ಕಿಸಿಕೊಂಡು ಶಿವಣ್ಣ ಹಾಗೂ ಕುಟುಂಬದವರು ಸಂತಸಪಟ್ಟರು.