ಕಾಂತಾರ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ಅವರು ಸದ್ಯ ಸ್ವಲ್ಪ ವಿರಾಮ ಪಡೆದು ರೆಸ್ಟ್ ಮೋಡ್‌ನಲ್ಲಿದ್ದಾರೆ. ಕನ್ನಡ ಚಿತ್ರರಂಗದಲ್ಲೇ ಈ ವರ್ಷದ ಅತ್ಯಂತ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿರುವ ‘ಕಾಂತಾರ: ಚಾಪ್ಟರ್–1’, ರಿಷಬ್ ಶೆಟ್ಟಿಯವರ ಬಹುಮುಖ ಪ್ರತಿಭೆಯ ಜತೆಗೆ ಕರ್ನಾಟಕದ ಸಂಸ್ಕೃತಿ, ತುಳುನಾಡಿನ ದೈವಾರಾಧನೆ ಮತ್ತು ಭಕ್ತಿಯ ಪರಂಪರೆಯನ್ನು ಅದ್ಭುತವಾಗಿ ತೆರೆಯ ಮೇಲೆ ಮೂಡಿಸಿರುವ ಚಿತ್ರವಾಗಿದೆ.

ಈ ಚಿತ್ರವು ಕೇವಲ ಮನರಂಜನೆಗಾಗಿ ಸೀಮಿತವಾಗದೆ, ನಮ್ಮ ನಾಡಿನ ಸಾಂಸ್ಕೃತಿಕ ವೈಭವವನ್ನು ದೇಶ–ವಿದೇಶಗಳಲ್ಲಿ ಗುರುತಿಸುವಂತೆ ಮಾಡಿದ್ದು, ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಭಾರೀ ಮೆಚ್ಚುಗೆ ಪಡೆದಿದೆ. ಚಿತ್ರದ ಚಿತ್ರೀಕರಣದ ಅವಧಿಯಲ್ಲಿ ರಿಷಬ್ ಶೆಟ್ಟಿ ಹಲವು ದೈಹಿಕ ಹಾಗೂ ಮಾನಸಿಕ ಸವಾಲುಗಳನ್ನು ಎದುರಿಸಿದ್ದರೂ, ಆತ್ಮವಿಶ್ವಾಸ ಮತ್ತು ಭಕ್ತಿಯಿಂದ ಅವನ್ನು ಜಯಿಸಿದ್ದಾರೆ.

After Kantara Success, Rishab Shetty Visits Hampi’s Kodandarama Temple

ಚಿತ್ರದ ಶೂಟಿಂಗ್ ಪ್ರಾರಂಭದಿಂದ ಅಂತ್ಯದವರೆಗೆ, ರಿಷಬ್ ಶೆಟ್ಟಿ ಅವರು ದೈವದ ಮೊರೆ ಹೋಗುವುದನ್ನು ಎಂದಿಗೂ ಮರೆತಿಲ್ಲ. ದೈವದ ಮೇಲಿನ ಭಕ್ತಿಯ ದ್ಯೋತಕವಾಗಿ ಅವರು ಟೆಂಪಲ್‌ ರನ್‌ನಲ್ಲಿ ನಿರತರಾಗಿರುತ್ತಾರೆ.

ಈ ಟೆಂಪಲ್‌ ರನ್‌ನ ಭಾಗವಾಗಿ ಇತ್ತೀಚೆಗೆ ರಿಷಬ್ ಶೆಟ್ಟಿ ಅವರು ತಮ್ಮ ಕುಟುಂಬದೊಂದಿಗೆ ಹಂಪಿಯ ಪುರಾತನ ಹಾಗೂ ಪೌರಾಣಿಕ ಮಹತ್ವ ಹೊಂದಿರುವ ಶ್ರೀ ಕೋದಂಡರಾಮ ದೇವಾಲಯ ಹಾಗೂ ಶ್ರೀಯಂತ್ರೋದ್ಧಾರಕ ಮುಖ್ಯಪ್ರಾಣದೇವರ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.