ಟಾಟಾ ಸಮೂಹದ ಒಡೆತನದಲ್ಲಿರುವ ಏರ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ 2025-26 ಹಣಕಾಸು ವರ್ಷದಲ್ಲಿ ಒಟ್ಟಾರೆ 22,238 ಕೋಟಿ ರು. ನಷ್ಟ ದಾಖಲಿಸಿವೆ. ಇದು ಹಿಂದಿನ ಹಣಕಾಸು ವರ್ಷದ 10,859 ಕೋಟಿ ರು. ನಷ್ಟಕ್ಕಿಂತ ಎರಡು ಪಟ್ಟು ಹೆಚ್ಚು. ಇದೇ ವೇಳೆ, ಎರಡೂ ಸಂಸ್ಥೆಗಳ ಒಟ್ಟು ಆದಾಯವು ಸುಮಾರು 9% ಕುಸಿದು 71,870 ಕೋಟಿ ರು. ಗೆ ಇಳಿದಿದೆ. ಏರ್ ಇಂಡಿಯಾ 51,452 ಕೋಟಿ ರು. ಆದಾಯದೊಂದಿಗೆ 15,368 ಕೋಟಿ ರು. ನಷ್ಟ ದಾಖಲಿಸಿದರೆ, ಏರ್ ಇಂಡಿಯಾ ಎಕ್ಸ್‌ಪ್ರೆಸ್ 19,088 ಕೋಟಿ ರು. ಆದಾಯದ ಮೇಲೆ 6,767 ಕೋಟಿ ರು. ನಷ್ಟ ಅನುಭವಿಸಿದೆ.

ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು, ಏರ್ ಇಂಡಿಯಾದ ಪುನಶ್ಚೇತನ ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳಲಿದ್ದು, 5 ರಿಂದ 10 ವರ್ಷಗಳವರೆಗೆ ಸಾಗಬಹುದು ಎಂದು ತಿಳಿಸಿದ್ದಾರೆ. ಪೂರೈಕೆ ಸರಪಳಿ ಅಡಚಣೆಗಳು, ಹಳೆಯ ವ್ಯವಸ್ಥೆಗಳ ಆಧುನೀಕರಣ, ಸಿಬ್ಬಂದಿ ವಿಸ್ತರಣೆ, ಮಧ್ಯಪ್ರಾಚ್ಯದ ಉದ್ವಿಗ್ನತೆಯಿಂದ ಹೆಚ್ಚಿದ ಇಂಧನ ವೆಚ್ಚ ಹಾಗೂ ಇತ್ತೀಚಿನ ಸವಾಲುಗಳು ಪುನಶ್ಚೇತನ ಪ್ರಕ್ರಿಯೆಯನ್ನು ನಿಧಾನಗೊಳಿಸಿವೆ ಎಂದಿದ್ದಾರೆ. ಆದಾಗ್ಯೂ, ದೀರ್ಘಾವಧಿಯಲ್ಲಿ ಏರ್ ಇಂಡಿಯಾವನ್ನು ಜಾಗತಿಕ ಮಟ್ಟದ ಸ್ಪರ್ಧಾತ್ಮಕ ವಿಮಾನಯಾನ ಸಂಸ್ಥೆಯನ್ನಾಗಿ ರೂಪಿಸುವ ಗುರಿಯೊಂದಿಗೆ ಸಂಸ್ಥೆ ಮುಂದುವರೆಯುತ್ತಿದೆ.