ಡಿಜಿಸಿಎ ಜಾರಿಗೊಳಿಸಿರುವ ವಿಮಾನ ಯಾನದ ನಿಯಮವೊಂದು ಪ್ರಯಾಣಿಕರಿಗೆ ಸಿಹಿ ಸುದ್ದಿಯಾಗಿ ಪರಿಣಮಿಸಿದೆ. ಇತ್ತೀಚೆಗೆ ವಿಮಾನ ಪ್ರಯಾಣವನ್ನು ಪ್ರಯಾಣಿಕಪ್ರಿಯವಾಗಿಸುವ ಮತ್ತು ನ್ಯಾಯಯುತ ಪ್ರಯಾಣ ಕಲ್ಪಿಸುವ ನಿಟ್ಟಿನಲ್ಲಿ ಡಿಜಿಸಿಎ ಈ ನಿಯಮಗಳನ್ನು ಜಾರಿಗೆ ತಂದಿದೆ.

ಈವರೆಗೆ ಅಕ್ಕ-ಪಕ್ಕದ ಸೀಟ್‌ಗಳಲ್ಲಿ ಕುಳಿತು ವಿಮಾನ ಪ್ರಯಾಣ ಮಾಡಲು ಬಯಸುವ ಪ್ರಯಾಣಿಕರಿಗೆ ಒಂದೆಡೆ ಸೀಟುಗಳು ಸಿಗುತ್ತಿರಲಿಲ್ಲ. ಬೇರೆ ಬೇರೆ ಸೀಟುಗಳಲ್ಲಿ ಕುಳಿತು ಅವರು ಪ್ರಯಾಣಿಸಬೇಕಿತ್ತು. ಒಂದುವೇಳೆ ಸಿಕ್ಕರೂ ಅದಕ್ಕೆ ವಿಮಾನಯಾನ ಸಂಸ್ಥೆಗಳು ಹೆಚ್ಚುವರಿ ಶುಲ್ಕ ಪಡೆದುಕೊಳ್ಳುತ್ತಿದ್ದವು. ಇಲ್ಲವಾದರೆ ಸೀಟುಗಳನ್ನು ಬದಲಾಯಿಕೊಳ್ಳಲು ಸಹಪ್ರಯಾಣಿಕರಿಂದ ಸಹಾಯ ಪಡೆಯಬೇಕಾಗುತ್ತಿತ್ತು. ಈ ಸಮಸ್ಯೆಗಳಿಗೆ ಡಿಜಿಸಿಎ ನೂತನ ನಿಯಮ ಪರಿಹಾರ ನೀಡಿದೆ.

ಒಟ್ಟಿಗೆ ಪ್ರಯಾಣಿಸಲು ಬಯಸುವ ಪ್ರಯಾಣಿಕರು ಒಂದೇ ಪಿಎನ್‌ಆರ್‌ ಅಡಿ ಪ್ರಯಾಣ ಟಿಕೆಟ್‌ ಬುಕ್‌ ಮಾಡಬೇಕು. ಹೀಗೆ ಮಾಡಿದರೆ ಅಕ್ಕಪಕ್ಕದ ಸೀಟುಗಳನ್ನೇ ಅವರಿಗೆ ನೀಡುವಂತೆ ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ನಿಯಮ ಜಾರಿಗೊಳಿಸಿದೆ. ವಿಮಾನಯಾನ ಸಂಸ್ಥೆಗಳು 60 ಪ್ರತಿಶತ ಸೀಟುಗಳನ್ನು ಆಯ್ಕೆಗೆ ಮುಕ್ತವಾಗಿ ಇಡುವಂತೆಯೂ ನಿಯಮದಲ್ಲಿ ಉಲ್ಲೇಖಿಸಿದೆ.

ಈ ನಿಯಮ ಜಾರಿಯಿಂದ ಸೀಟುಗಳ ಆಯ್ಕೆ ಸುಲಭವಾಗಲಿದೆ. ಕಿಟಕಿ, ಹಜಾರ ಮತ್ತು ಅಕ್ಕ-ಪಕ್ಕದ ಸೀಟುಗಳು ಮತ್ತಿತರ ಕಾರಣಗಳಿಗಾಗಿ ವಿಮಾನ ಪ್ರಯಾಣಿಕರು ಹೆಚ್ಚುವರಿ ಹಣ ತೆರುವುದು ತಪ್ಪಲಿದೆ.

ಏರ್ ಇಂಡಿಯಾ ವಿಮಾನದಲ್ಲಿ ನಾಯಿಗಳಿವೆ ಎಚ್ಚರಿಕೆ!

ಇದರ ಜತೆಗೆ ವಿಮಾನಗಳಲ್ಲಿ ಸಾಕು ಪ್ರಾಣಿಗಳನ್ನು ಮತ್ತು ಕ್ರೀಡಾ ಸಾಮಾಗ್ರಿಗಳನ್ನು ಕೊಂಡೊಯ್ಯಲು, ಮರುಪಾವತಿ ಮತ್ತು ಪರಿಹಾರ, ವಿಮಾನ ವಿಳಂಬ ಮತ್ತು ರದ್ದತಿಗಳ ಕುರಿತು ಮಾಹಿತಿ, ಬೋರ್ಡಿಂಗ್‌ ಪ್ರಕ್ರಿಯೆಗಳಲ್ಲೂ ತೊಡಕುಗಳಾಗುತ್ತಿರುವ ಕುರಿತು ಪ್ರಯಾಣಿಕರು ದೂರುಗಳನ್ನು ನೀಡಿದ್ದು, ಅವುಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಮತ್ತು ಪ್ರಯಾಣಿಕ ಸ್ನೇಹಿ ನೀತಿಗಳನ್ನು ಅಳವಡಿಸಿಕೊಳ್ಳುವಂತೆ ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ನಿರ್ದೇಶನ ನೀಡಿದೆ.