ಕೇರಳಂನ ಗ್ರಾಮಕ್ಕೆ ಅಮೆರಿಕದ ಪ್ರಾಧ್ಯಾಪಕರ ಭೇಟಿ
ಗ್ರಾಮದಲ್ಲಿರುವ 1881ರಲ್ಲಿ ಸ್ಥಾಪಿತವಾದ ಸರಕಾರಿ ಎಲ್.ಪಿ ಶಾಲೆ ಮತ್ತು 1956ರ ಎಂ.ಜಿ.ಎಂ ಯು.ಪಿ ಶಾಲೆಗೆ ಭೇಟಿ ನೀಡಿ ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಸಾಮಾನ್ಯ ಪ್ರವಾಸಿ ತಾಣಗಳ ಪರಿಧಿಯನ್ನು ಮೀರಿರುವ ಕೇರಳಂನ ಕೊಟ್ಟಾಯಂ ಜಿಲ್ಲೆಯ ಸೆಂಟ್ರಲ್ ಟ್ರಾವಂಕೂರ್ ಪ್ರದೇಶದ 'ಚಿರಕ್ಕಡವು' ಗ್ರಾಮಕ್ಕೆ ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದ ಇಬ್ಬರು ಪ್ರಾಧ್ಯಾಪಕರು ಭೇಟಿ ನೀಡಿದ್ದಾರೆ. ಕೇರಳದ ಗ್ರಾಮೀಣ ಜೀವನ, ಶೈಕ್ಷಣಿಕ ಪದ್ಧತಿಗಳು, ಸ್ಥಳೀಯ ಸಂಪ್ರದಾಯಗಳು ಮತ್ತು ಸಮುದಾಯ ಸಂಸ್ಥೆಗಳನ್ನು ಹತ್ತಿರದಿಂದ ಅರಿಯುವ ಉದ್ದೇಶದಿಂದ ಡಾ. ಸಾರಾ ಹರ್ವಿಟ್ಜ್ ಮತ್ತು ಡಾ. ಆಡಮ್ ಮಾಲ್ಟೀಸ್ ಈ ಗ್ರಾಮಕ್ಕೆ ಭೇಟಿ ನೀಡಿ, ಇಲ್ಲಿನ ಜನಜೀವನವನ್ನು ಕಣ್ತುಂಬಿಕೊಂಡಿದ್ದಾರೆ.
ಇದನ್ನೂ ಓದಿ: ಒಂದು ದಿನ ಮಲಯಾಳಿಯಾಗಿ ಬದುಕಿ: ಕೇರಳಂ ಹೊಸ ಟ್ರೆಂಡ್
ಸ್ವಾತಂತ್ರ್ಯ ಹೋರಾಟಗಾರ್ತಿ ಅಕ್ಕಮ್ಮ ಚೆರಿಯನ್ ಅವರ ಜನ್ಮಸ್ಥಳವಾಗಿರುವ ಚಿರಕ್ಕಡವು ಗ್ರಾಮವು ಐತಿಹಾಸಿಕ ಮಹತ್ವವನ್ನೂ ಪಡೆದುಕೊಂಡಿದೆ. ದೆಹಲಿ ಮತ್ತು ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 'ಹ್ಯಾಪಿನೆಸ್ ಕರಿಕ್ಯುಲಮ್' ಅನುಷ್ಠಾನಗೊಳಿಸುವಲ್ಲಿ ಶ್ರಮಿಸಿರುವ ಸಂಶೋಧಕರಾದ ಡಾ. ಶ್ರೀಹರಿ ರವೀಂದ್ರನಾಥ್ ಮತ್ತು ಡಾ. ಅಮಿತ್ ಅವರನ್ನೊಳಗೊಂಡ ತಂಡದೊಂದಿಗೆ ಈ ಅಮೆರಿಕದ ಪ್ರಾಧ್ಯಾಪಕರು ಗ್ರಾಮಕ್ಕೆ ಭೇಟಿ ನೀಡಿದ್ದರು.
ಗ್ರಾಮದಲ್ಲಿರುವ 1881ರಲ್ಲಿ ಸ್ಥಾಪಿತವಾದ ಸರಕಾರಿ ಎಲ್.ಪಿ ಶಾಲೆ ಮತ್ತು 1956ರ ಎಂ.ಜಿ.ಎಂ ಯು.ಪಿ ಶಾಲೆಗೆ ಭೇಟಿ ನೀಡಿ ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದೇಶಿ ಅತಿಥಿಗಳಿಗೆ ಅತ್ಯಂತ ವಿನೂತನ ಹಾಗೂ ಸ್ಮರಣೀಯ ಅನುಭವವನ್ನು ನೀಡಿದವು.
ಇದಲ್ಲದೆ, 1968ರಲ್ಲಿ ಸಣ್ಣ ಅಂಗಡಿಯೊಂದರಲ್ಲಿ ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ಸಾಮಾನ್ಯ ರೈತರಿಂದ ಆರಂಭಗೊಂಡು ಇಂದು ದೊಡ್ಡ ಗ್ರಂಥಾಲಯವಾಗಿ ಬೆಳೆದಿರುವ 'ಜ್ಯೋತಿ ಸಾರ್ವಜನಿಕ ಗ್ರಂಥಾಲಯ'ಕ್ಕೂ ಭೇಟಿ ನೀಡಿ ಅಲ್ಲಿನ ಓದುವ ಸಂಸ್ಕೃತಿಯನ್ನು ಕೊಂಡಾಡಿದರು. ಇಲ್ಲಿ ಪ್ರಕೃತಿ ಸಂರಕ್ಷಣೆಯಲ್ಲಿ ಪವಿತ್ರ ಕಾಡುಗಳ (ಸರ್ಪಕಾವೂಕುಳ್) ಪಾತ್ರ ಹಾಗೂ ಸ್ಥಳೀಯ ನಾಟಿ ದನಗಳ ಸಂರಕ್ಷಣೆ ಮೂಲಕ ಸಾವಾಯವ ಕೃಷಿಯನ್ನು ಉತ್ತೇಜಿಸುವ ಸಾಧ್ಯತೆಗಳ ಕುರಿತು ಚರ್ಚೆ ನಡೆಸಲಾಯಿತು.
ಚಿರಕ್ಕಡವು ಮಹಾದೇವ ದೇವಸ್ಥಾನಕ್ಕೂ ಭೇಟಿ ನೀಡಿ ಅಲ್ಲಿನ ಇತಿಹಾಸ ಮತ್ತು ಸಂಪ್ರದಾಯಗಳನ್ನು ತಿಳಿದುಕೊಂಡರು. ಅಂತಿಮವಾಗಿ, ಸ್ಥಳೀಯ ಶಿಕ್ಷಕ ಪಿ.ಜಿ. ಬಿನ್ ಅವರ ನಿವಾಸದಲ್ಲಿ ಬಿನ್ ಅವರ ತಾಯಿ ಗೌರಿಕುಟ್ಟಿ ಹಾಗೂ ಕುಟುಂಬದವರು ಬಾಳೆಎಲೆಯಲ್ಲಿ ತಯಾರಿಸಿದ ಸಾಂಪ್ರದಾಯಿಕ ಕೇರಳದ 'ಓಣಂ ಹಬ್ಬದ ಊಟ'ವನ್ನು ಅತಿಥಿಗಳು ಸವಿದರು. ಈ ಭೇಟಿಯು ಕೇವಲ ಶೈಕ್ಷಣಿಕ ಅಧ್ಯಯನವಷ್ಟೇ ಅಲ್ಲದೆ, ಕೇರಳದ ಅತಿಥ್ಯ ಸತ್ಕಾರ ಹಾಗೂ ಗ್ರಾಮದ ಸಾಮಾಜಿಕ ಬಾಂಧವ್ಯದ ಪರಿಪೂರ್ಣ ನೋಟವನ್ನು ಅಮೆರಿಕದ ಪ್ರಾಧ್ಯಾಪಕರಿಗೆ ನೀಡಿತು.