ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಎನ್‌ಟಿಆರ್ ಜಿಲ್ಲಾಡಳಿತವು ‘ಆಂಧ್ರ ಟ್ಯಾಕ್ಸಿ’ ಮೊಬೈಲ್ ಅಪ್ಲಿಕೇಶನ್‌ ಅನ್ನು ಅಧಿಕೃತವಾಗಿ ಆರಂಭಿಸಿದೆ. ಈ ಆ್ಯಪ್ ಮೂಲಕ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಸುಲಭ, ಸುರಕ್ಷಿತ ಮತ್ತು ಪಾರದರ್ಶಕ ಸಾರಿಗೆ ಸೇವೆ ಒದಗಿಸುವುದು ಸರಕಾರದ ಮುಖ್ಯ ಉದ್ದೇಶವಾಗಿದೆ.

ಜಿಲ್ಲಾಡಳಿತದ ಮಾಹಿತಿ ಪ್ರಕಾರ, ‘ಆಂಧ್ರ ಟ್ಯಾಕ್ಸಿ’ ಆ್ಯಪ್‌ನ ಮೂಲಕ ಕನಕದುರ್ಗಾ ದೇವಸ್ಥಾನ, ಭವಾನಿ ದ್ವೀಪ, ಕೃಷ್ಣಾ ನದಿ ತೀರದ ಪ್ರವಾಸಿ ಸ್ಥಳಗಳು ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ಟ್ಯಾಕ್ಸಿ ಮತ್ತು ಆಟೋ ಸೇವೆಗಳನ್ನು ಸುಲಭವಾಗಿ ಬುಕ್ ಮಾಡಬಹುದು. ನಿಗದಿತ ದರ ವ್ಯವಸ್ಥೆ ಜಾರಿಗೊಂಡಿರುವುದರಿಂದ ಪ್ರಯಾಣಿಕರಿಗೆ ದರ ಸಂಬಂಧಿತ ತೊಂದರೆ ತಪ್ಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Andhra Pradesh Launches ‘Andhra Taxi’ App to Boost Tourism in NTR District

ಈ ಯೋಜನೆಯಿಂದ ಸ್ಥಳೀಯ ಚಾಲಕರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಲಿದ್ದು, ಎಲ್ಲ ವಾಹನಗಳು ಸರಕಾರದಲ್ಲಿ ನೋಂದಾಯಿತವಾಗಿದ್ದು, ಸುರಕ್ಷತಾ ಮಾನದಂಡಗಳನ್ನು ಪೂರೈಸಿರುವುದು ಕಡ್ಡಾಯವಾಗಿದೆ. ಪ್ರಯಾಣಿಕರ ಭದ್ರತೆಯ ದೃಷ್ಟಿಯಿಂದ ಆ್ಯಪ್ ಅನ್ನು ಪೊಲೀಸ್ ಇಲಾಖೆ ಮತ್ತು ರಾಜ್ಯ ಡೇಟಾ ಕೇಂದ್ರದೊಂದಿಗೆ ಕನೆಕ್ಟ್‌ ಮಾಡಲಾಗಿದ್ದು, ಪ್ರಯಾಣದ ವಿವರಗಳನ್ನು ನಿಗಾವಹಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಆ್ಯಪ್ ಮೂಲಕ ಮೊಬೈಲ್, ಕ್ಯೂಆರ್ ಕೋಡ್, ವಾಟ್ಸ್ಅ್ಯಪ್ ಅಥವಾ ಫೋನ್ ಕರೆ ಮೂಲಕವೂ ಟ್ಯಾಕ್ಸಿ ಬುಕ್ಕಿಂಗ್ ಮಾಡುವ ಅವಕಾಶ ನೀಡಲಾಗಿದೆ. ಮುಂದಿನ ಹಂತದಲ್ಲಿ ಹೊಟೇಲ್ ಬುಕ್ಕಿಂಗ್ ಹಾಗೂ ಪ್ರವಾಸಿ ಪ್ಯಾಕೇಜ್‌ಗಳನ್ನೂ ಈ ಆ್ಯಪ್‌ಗೆ ಸೇರಿಸುವ ಯೋಜನೆ ಹೊಂದಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.