ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರಾಣಿ ದತ್ತು ನೀತಿಯನ್ನು ಪರಿಷ್ಕರಿಸಲಾಗಿದ್ದು, ಈಗ ಐದು ವರ್ಷಗಳವರೆಗೆ ಪ್ರಾಣಿಗಳನ್ನು ದತ್ತು ಪಡೆಯಬಹುದು ಮತ್ತು ಅವುಗಳಿಗೆ ಹೆಸರಿಡಬಹುದು. ಈ ಪರಿಷ್ಕೃತ ನೀತಿಯು ದತ್ತು ಪಡೆಯುವವರಿಗೆ ತೆರಿಗೆ ವಿನಾಯಿತಿ ಮತ್ತು ಉಚಿತ ಪ್ರವೇಶ ಪಾಸ್‌ಗಳಂಥ ಪ್ರೋತ್ಸಾಹಗಳನ್ನು ನೀಡುತ್ತದೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದ 159ನೇ ಆಡಳಿತ ಮಂಡಳಿ ಸಭೆಯಲ್ಲಿ ಪ್ರಾಣಿ ದತ್ತು ಸಂಬಂಧ ಪರಿಷ್ಕೃತ ನೀತಿಗೆ ಒಪ್ಪಿಗೆ ನೀಡಲಾಗಿದೆ. ಮೊದಲಿನಂತೆ ದತ್ತು ಮೊತ್ತದ ಶೇ.25 ರಷ್ಟು ಹೆಚ್ಚುವರಿ ನಾಮಕರಣ ಶುಲ್ಕ ಇರುವುದಿಲ್ಲ. ನೀತಿಯ ಮಾರ್ಗಸೂಚಿಗೆ ಅನುಗುಣವಾಗಿ ಇಟ್ಟ ಹೆಸರು ಪ್ರಾಣಿಯ ಜೀವನಪರ್ಯಂತ ಇರಲಿದೆ.

ಪ್ರಾಣಿ ದತ್ತು ಪಡೆದರೆ ದತ್ತು ಪ್ರಮಾಣ ಪತ್ರ ನೀಡಲಾಗುವುದು. ಐದು ವರ್ಷಗಳವರೆಗೆ ಪ್ರತಿ ವರ್ಷ ಮೃಗಾಲಯ, ಸಫಾರಿ ಮತ್ತು ಚಿಟ್ಟೆ ಉದ್ಯಾನಕ್ಕೆ 5 ಉಚಿತ ಪ್ರವೇಶ ಪಾಸ್ ಸಿಗಲಿದೆ. ಆಸಕ್ತರು ತಮ್ಮ ಇಷ್ಟದ ಪ್ರಾಣಿಯನ್ನು ಆಯ್ಕೆಮಾಡಿಕೊಳ್ಳುವ ಅವಕಾಶವಿದೆ. ಪ್ರಸ್ತಾಪಿತ ಹೆಸರನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ನಾಮಕರಣ ಸಮಿತಿಗೆ ಅನುಮೋದನೆಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಮಾರ್ಕೆಟಿಂಗ್ ಮ್ಯಾನೇಜರ್ ಮ್ಯಾಕ್ಯೂ ಅವರನ್ನು ಸಂಪರ್ಕಿಸಬಹುದು.

ಸಂಪರ್ಕ ಸಂಖ್ಯೆ: 88673 80727