ಅರಾವಳಿ ಜಂಗಲ್ ಸಫಾರಿ ಯೋಜನೆ ಸ್ಥಗಿತ
ಹರಿಯಾಣ ಸರ್ಕಾರದ ಮಹತ್ವಾಕಾಂಕ್ಷಿ ಅರಾವಳಿ ಜಂಗಲ್ ಸಫಾರಿ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅಕ್ಟೋಬರ್ 15ರ ಮುಂದಿನ ವಿಚಾರಣೆ ತನಕ, ಈ ಯೋಜನೆಯ ಸಂಬಂಧಿತ ಹರಿಯಾಣ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಬಾರದೆಂಬ ಸೂಚನೆಯನ್ನೂ ನೀಡಿದೆ.
ಹರಿಯಾಣ ಸರ್ಕಾರದ ಮಹತ್ವಾಕಾಂಕ್ಷಿ ಅರಾವಳಿ ಜಂಗಲ್ ಸಫಾರಿ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅಕ್ಟೋಬರ್ 15 ರ ಮುಂದಿನ ವಿಚಾರಣೆ ತನಕ, ಈ ಯೋಜನೆಯ ಸಂಬಂಧಿತ ಹರಿಯಾಣ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಬಾರದೆಂಬ ಸೂಚನೆಯನ್ನೂ ನೀಡಿದೆ.
ಈ ಯೋಜನೆಯು ಅರಾವಳಿ ಬೆಟ್ಟಗಳಲ್ಲಿ ಸುಮಾರು 10,000 ಎಕರೆ ಪ್ರದೇಶವನ್ನು ಒಳಗೊಂಡ ವಿಶ್ವದ ಅತ್ಯಂತ ದೊಡ್ಡ ಜಂಗಲ್ ಸಫಾರಿ ಉದ್ಯಾನವನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ. ಹರಿಯಾಣ ಸರ್ಕಾರದ ಪ್ರಕಾರ, ಈ ಉದ್ಯಾನವು ವಿವಿಧ ವನ್ಯಜೀವಿಗಳ ವಾಸಸ್ಥಾನವಾಗಿ ಮತ್ತು ವಿಶಿಷ್ಟ ಬೊಟಾನಿಕಲ್ ಗಾರ್ಡನ್‌ಗಳ ಮುಖೇನ ಪ್ರವಾಸಿಗರಿಗೆ ಉತ್ತಮ ಅನುಭವ ನೀಡಲಿದೆ. ಯುಎಇ ಯ ಶಾರ್ಜಾ ಜಂಗಲ್ ಸಫಾರಿ ಮಾದರಿಯಲ್ಲಿ ಅದಕ್ಕಿಂತ ಐದು ಪಟ್ಟು ದೊಡ್ಡದಾದ ಅರಾವಳಿ ಜಂಗಲ್ ಸಫಾರಿ ಉದ್ಯಾನವನ್ನು ನಿರ್ಮಿಸುವ ಯೋಜನೆ ಹರಿಯಾಣ ಸರ್ಕಾರದ್ದಾಗಿತ್ತು. ಈಗ ಸರ್ವೋಚ್ಛ ನ್ಯಾಯಾಲಯದ ಆದೇಶದಿಂದ ಈ ಯೋಜನೆಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ.

ಪರಿಸರ ಸಂಘಟನೆಗಳು ಮತ್ತು ನಿವೃತ್ತ ಭಾರತೀಯ ಅರಣ್ಯ ಸೇವೆ ಅಧಿಕಾರಿಗಳು ಈ ಯೋಜನೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅರಾವಳಿ ಬೆಟ್ಟಗಳು ದೆಹಲಿಯ ಹವಾಮಾಲಿನ್ಯವನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಜಲಮಟ್ಟದ ಸುಧಾರಣೆಗೆ ಮತ್ತು ಮಣ್ಣು ತನ್ನ ಸತ್ವವನ್ನು ಕಳೆದುಕೊಳ್ಳದಂತೆ ಕಾಪಾಡಲು ಸಹಕಾರಿ. ಇಂಥ ಅರಾವಳಿ ಬೆಟ್ಟಗಳನ್ನು ಸರ್ಕಾರದ ವ್ಯಾಪಾರಿ ಮನೋಭಾವದ ಈ ಯೋಜನೆಯು ಹಾನಿಯನ್ನುಂಟುಮಾಡುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪರಿಸರದಲ್ಲಿ ಈಗಾಗಲೇ ನಗರೀಕರಣ ಮತ್ತು ಗಣಿಗಾರಿಕೆಯ ಒತ್ತಡವಿರುವ ಈ ಸಂದರ್ಭದಲ್ಲಿ ಆರ್ಥಿಕ ಲಾಭವನ್ನೇ ನೆಚ್ಚಿ ಸರ್ಕಾರವು ಪರಿಸರ ಸಂರಕ್ಷಣೆಯನ್ನು ಕಡೆಗಣಿಸುತ್ತಿರುವುದಕ್ಕೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.