Sunday, October 12, 2025
Sunday, October 12, 2025

ಪ್ರವಾಸಿತಾಣವಾದ ಬಂಗಾರಪ್ಪ ಸ್ಮಾರಕ!

ಕರ್ನಾಟಕದ ರಾಜಕೀಯ ಇತಿಹಾಸವನ್ನು ಅರಸಿ ಓಡಾಡುವವರು ಭೇಟಿ ನೀಡಲೇಬೇಕಾದ ಸ್ಥಳ ಬಂಗಾರಧಾಮ. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಾರೆಕೊಪ್ಪ ಬಂಗಾರಪ್ಪನವರನ್ನು ಹೊರತು ಪಡಿಸಿ, ಕರ್ನಾಟಕದ ರಾಜಕೀಯ ಚರಿತ್ರೆ ಬರೆದರೆ ಅದು ಚರಿತ್ರೆಯೇ ಅಲ್ಲ. ಬದಲಿಗೆ ಅಪೂರ್ಣ ಇತಿಹಾಸ. ದೇವರಾಜ ಅರಸು ನಂತರ ನಾಡಿನ ಅಸಂಖ್ಯಾತ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕೆಲಸ ಮಾಡಿದ, ಜೀವನ ಪ್ರೀತಿಯ ರಾಜಕಾರಣಿ ಶ್ರೀ ಬಂಗಾರಪ್ಪನವರುʼ. ಹೀಗಂತ ಬರೆಯುತ್ತಾರೆ ಜ್ಞಾನಪೀಠ ಸಾಹಿತಿ ಡಾ. ಚಂದ್ರಶೇಖರ ಕಂಬಾರರು.

ಶಿವಮೊಗ್ಗ ಜಿಲ್ಲೆ, ಮಲೆನಾಡಿನ ಹೆಬ್ಬಾಗಿಲು. ಇಲ್ಲಿ ಹೇರಳವಾದ ಅರಣ್ಯ ಸಂಪತ್ತು, ಆನೆ ಶಿಬಿರ, ಅಭಯಾರಣ್ಯ, ಜೋಗ ಜಲಪಾತ, ಕಣ್ಣು ಕಟ್ಟುವ ಇತಿಹಾಸಗಳಿಂದ ಒಂದೊಂದು ಸ್ಥಳಗಳು ಮನಮೋಹಕವಾಗಿವೆ. ಜಿಲ್ಲೆಯಾದ್ಯಂತ ಓಡಾಡಲು, ನೋಡಲು, ತಿಳಿಯಲೂ ಸಾಕಷ್ಟು ಅವಕಾಶಗಳನ್ನು ಶಿವಮೊಗ್ಗ ನೀಡುತ್ತದೆ. ನೀವು ಈ ಕಡೆಗೆ ಭೇಟಿ ಕೊಟ್ಟಾಗ ಪ್ರಕೃತಿ ಸಿರಿಯನ್ನು ಮತ್ತು ವನ್ಯ ಸಂಪತ್ತನ್ನು ಕಣ್ತುಂಬಿಕೊಂಡೆ ಎಂದು ಈ ಒಂದು ಸ್ಥಳವನ್ನು ಮರೆತು ಬಂದರೆ ನಿಮ್ಮ ಶಿವಮೊಗ್ಗ ಪ್ರವಾಸ ಅಪೂರ್ಣವಾದಂತೆ.

ಹೌದು. ನಾವು ಹೇಳುತ್ತಿರುವ ಸ್ಥಳದ ಹೆಸರು ಬಂಗಾರಧಾಮ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕು ಕೇಂದ್ರದಲ್ಲಿ ಈಗ ಸಮಸ್ತ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಅಪರೂಪದ ಕಣ್ಮನ ತಣಿಸುವ ತಾಣವೆಂದರೆ ಅದು ಬಂಗಾರಧಾಮ.

ಬಂಗಾರಧಾಮ.. ಬಂಗಾರಧಾಮ.. ಅರೆ ಏನಿದು ಬಂಗಾರಧಾಮ? ಚಿನ್ನದ ಅದಿರು ಸಿಗುವ ತಾಣವಾ ಅಥವಾ ಸ್ವರ್ಣ ಮಂದಿರ ಇರುವ ಜಾಗವಾ? ಏನೀ ಸ್ಥಳಮಹಿಮೆ?

ಶಿವಮೊಗ್ಗ ಜಿಲ್ಲೆಯ ಪ್ರತಿ ತಾಲೂಕು ಕೂಡ ಪ್ರವಾಸೋದ್ಯಮ ದೃಷ್ಟಿಯಿಂದ ಗುರುತಿಸಿಕೊಂಡಿದೆ. ಪ್ರತಿ ತಾಲೂಕಿನಲ್ಲೂ ಇತಿಹಾಸ, ಪುರಾಣ ಅಥವಾ ಪ್ರಕೃತಿ ಪ್ರಸಿದ್ಧ ತಾಣ ಒಂದಾದರೂ ಇದೆ. ಆದರೆ ಈ ಕೊರತೆ ಇದ್ದದ್ದು ಸೊರಬದಲ್ಲಿ ಮಾತ್ರ. ಬಂಗಾರಧಾಮ ಎಂಬ ಅದ್ಭುತ ಮನಮೋಹಕ ಸ್ಥಳ ಇದೀಗ ಇಡೀ ಕರ್ನಾಟಕ ಸೊರಬದತ್ತ ತಿರುಗಿ ನೋಡುವಂತೆ ಮಾಡುತ್ತಿದೆ. ಪ್ರವಾಸಿಗರೂ ಸೊರಬಕ್ಕೆ ಒಮ್ಮೆ ಭೇಟಿ ಕೊಡಬೇಕೆನಿಸುವಂತೆ ಮಾಡುತ್ತಿದೆ. ಹಾಗನಿಸಲು ಕಾರಣ ಇದೇ ಬಂಗಾರಧಾಮ!

ಇಲ್ಲೇ ಇದ್ದಾರೆ ಬಂಗಾರಪ್ಪ!

ಯೆಸ್. ಬಂಗಾರಧಾಮ ಅಂದರೆ ಕರ್ನಾಟಕ ಕಂಡ ಜನಪ್ರಿಯ ಮುಖ್ಯಮಂತ್ರಿ, ವರ್ಣರಂಜಿತ ರಾಜಕಾರಣಿ, ಸ್ಫುರದ್ರೂಪಿ ಜನನಾಯಕ ಎನಿಸಿಕೊಂಡಿದ್ದ ಸಾರೇಕೊಪ್ಪ ಬಂಗಾರಪ್ಪನವರ ಸ್ಮಾರಕ! ಸೊರಬ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರರಾಗಿ ಉಳಿದಿದ್ದ ಜನಾನುರಾಗಿ ನಾಯಕ ಬಂಗಾರಪ್ಪ ಹಾಗೂ ಅವರ ಪತ್ನಿ ಶಕುಂತಲಾ ಬಂಗಾರಪ್ಪ ಅವರ ಸ್ಮಾರಕವನ್ನು ಇಡೀ ರಾಜ್ಯಕ್ಕೆ ರಾಜ್ಯವೇ ಆಕರ್ಷಿತವಾಗುವ ಹಾಗೆ ಉದ್ಯಾನ ಮಾದರಿಯಲ್ಲಿ ನಿರ್ಮಿಸಿ ಬೆರಗುಮೂಡಿಸಿದೆ ಸೊರಬ.

ಕರ್ನಾಟಕದಲ್ಲೇ ಪ್ರಥಮ!

ರಾಜ್ಯ ಮುಖ್ಯಮಂತ್ರಿಯೊಬ್ಬರ ಸ್ಮಾರಕ ಉದ್ಯಾನ ನಿರ್ಮಿಸಿರುವುದು ಇದೇ ಮೊದಲು. ಇಡೀ ರಾಜ್ಯದಲ್ಲಿ ಈ ರೀತಿಯಲ್ಲಿ ನಿರ್ಮಾಣವಾದ, ಮುಖ್ಯಮಂತ್ರಿ ಅಥವಾ ರಾಜಕಾರಣಿಯ ಹೆಸರಿನ ಸ್ಮಾರಕ ಉದ್ಯಾನವಿಲ್ಲ ಎಂದು ದಾಖಲೆಗಳೇ ಹೇಳುತ್ತವೆ.

ಸಾರೇಕೊಪ್ಪ ಬಂಗಾರಪ್ಪನವರ ವ್ಯಕ್ತಿತ್ವ ಮತ್ತು ರಾಜಕೀಯ ಜೀವನ ಬಲ್ಲವರು, ಖಂಡಿತವಾಗಿಯೂ ಇದು ಬೇಕಿತ್ತು ಎನ್ನುತ್ತಾರೆ. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಬಂಗಾರಪ್ಪ ಅವರ ಸ್ವಕ್ಷೇತ್ರ ಸೊರಬದಲ್ಲಿ ನಿರ್ಮಾಣಗೊಂಡಿರುವ ಬಂಗಾರಧಾಮ ಇಡೀ ರಾಜ್ಯ ಹೆಮ್ಮೆ ಪಡುವಂಥ ಒಂದು ತಾಣ.

ಕರ್ನಾಟಕದ ರಾಜಕೀಯ ಇತಿಹಾಸವನ್ನು ಅರಸಿ ಓಡಾಡುವವರು ಭೇಟಿ ನೀಡಲೇಬೇಕಾದ ಸ್ಥಳ ಬಂಗಾರಧಾಮ. ಹೆಚ್ಚೂಕಮ್ಮಿ ಐದು ದಶಕಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದು, 1990 ರಿಂದ 1992ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಾರೆಕೊಪ್ಪ ಬಂಗಾರಪ್ಪನವರನ್ನು ಹೊರತು ಪಡಿಸಿ, ಕರ್ನಾಟಕದ ರಾಜಕೀಯ ಚರಿತ್ರೆ ಬರೆದರೆ ಅದು ಚರಿತ್ರೆಯೇ ಅಲ್ಲ. ಬದಲಿಗೆ ಅಪೂರ್ಣ ಇತಿಹಾಸ. ದೇವರಾಜ ಅರಸು ನಂತರ ನಾಡಿನ ಅಸಂಖ್ಯಾತ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕೆಲಸ ಮಾಡಿದ, ಜೀವನ ಪ್ರೀತಿಯ ರಾಜಕಾರಣಿ ಶ್ರೀ ಬಂಗಾರಪ್ಪನವರುʼ. ಹೀಗಂತ ಬರೆಯುತ್ತಾರೆ ಜ್ಞಾನಪೀಠ ಸಾಹಿತಿ ಡಾ. ಚಂದ್ರಶೇಖರ ಕಂಬಾರರು. ಸೊರಬ ಪಾಲಿಗಂತೂ ಬಂಗಾರಪ್ಪ ಅಂದರೆ ಸಾಕ್ಷಾತ್ ದೇವರೆನೆಸಿಕೊಂಡವರು. ಸೊರಬದ ಪ್ರತಿಯೊಬ್ಬರ ಪಾಲಿನ ಕಣ್ಮಣಿ ಆಗಿದ್ದ ಬಂಗಾರಪ್ಪನವರು ಒಂದು ಅತ್ಯಂತ ಸುಂದರ ಸ್ಮಾರಕವಾಗಿ ಸೊರಬದ ಸೊಬಗಾಗಿ ಬಂಗಾರಧಾಮದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.

ತೆರೆದಿದೆ ಮನೆ ಓ ಬಾ ಅತಿಥಿ!

ಬೆಂಗಳೂರಿನಿಂದ ಸೊರಬಕ್ಕೆ 380ಕಿಮೀ ಪ್ರಯಾಣ. ಸೊರಬದ ಬಸ್‌ ನಿಲ್ದಾಣದ ಹೊಸ್ತಿಲಿನಲ್ಲೇ ನಿಂತು ಸುತ್ತ ಕಣ್ಣಾಯಿಸಿದರೆ ಈ ಬಂಗಾರಧಾಮ ನಿಮ್ಮ ಕಣ್ಣಿಗೆ ಬೀಳುತ್ತದೆ. ಅತ್ತ ಕಡೆ ಹೆಜ್ಜೆಹಾಕಿ ನಡೆದರೆ, ರಸ್ತೆ ಬದಿಯಲ್ಲಿ ತಲೆ ಎತ್ತಿ ನಿಂತಿರುವ 56 ಅಡಿ ಎತ್ತರದ ಬೃಹದಾಕಾರದ ಗಡಿಯಾರ ’ಬಾ ಮಾರಾಯ ಸ್ವಲ್ಪ ಸಮಯ ಇಲ್ಲೂ ಸುತ್ತಾಡು’ ಎನ್ನುತ್ತದೆ. ಸುತ್ತಲೂ ಹಸಿರು ಬಳಿದಂತೆ ಕಂಗೊಳಿಸುವ ಪರಿಸರ, ಗದ್ದೆ, ಹಸಿರು ಗಿಡಗಳಿಂದ ತುಂಬಿದ್ದು ತಂಗಾಳಿಯಲ್ಲಿ ಅಹ್ಲಾದಕರ ಅನುಭವ ನೀಡುತ್ತದೆ. ಉದ್ಯಾನದೊಳಗಿನ ಹೂಗಿಡಗಳ ತೋಟ ಮಧ್ಯದಲ್ಲಿ ಆಕರ್ಷಕವಾದ ಸ್ಮಾರಕದ ಕಟ್ಟಡ, ಹೊರಗಿನಿಂದಲೇ ನಿಮ್ಮ ಮನ ಮತ್ತು ಗಮನವನ್ನು ಕಟ್ಟಿ ಎಳೆಯುತ್ತದೆ.

ಪ್ರವಾಸಿಗರಿಗೊಂದು ಸಂತಸದ ಸುದ್ದಿ ಏನೆಂದರೆ, ಈ ಉದ್ಯಾನಕ್ಕೆ ಪ್ರವೇಶಿಸಲು ಮತ್ತು ಇಲ್ಲಿ ವಿಹರಿಸಲು, ಯೋಗ, ಧ್ಯಾನಗಳನ್ನು ಮಾಡಲು, ಫೊಟೋ ಕ್ಲಿಕ್ಕಿಸಿಕೊಳ್ಳಲು, ವಿಡಿಯೋಗ್ರಫಿ ಮಾಡಿಕೊಳ್ಳಲು ಯಾವ ಟಿಕೆಟ್ ಹಣವನ್ನು ಕೂಡ ಪಾವತಿ ಮಾಡಬೇಕಾಗಿಲ್ಲ. ಬದಲಿಗೆ ನೀವು ಈ ಉದ್ಯಾನದಲ್ಲಿ ತೆಗೆದ ಸುಂದರ ವಿಡಿಯೋ ತುಣುಕುಗಳನ್ನು ಅಲ್ಲಿನ ಸಿಬ್ಬಂದಿಗಳ ಜತೆಗೆ ಹಂಚಿಕೊಳ್ಳಬಹುದು. ಉದ್ಯಾನದ ಮುಂಭಾಗದಲ್ಲೇ ಇರುವ ಟಿವಿ ಪರದೆಯಲ್ಲಿ ಅವುಗಳನ್ನು ನೋಡಿ ಸಂತೋಷ ಪಡಬಹುದು. ಕೌತುಕದಿಂದ ಉದ್ಯಾನದ ಒಳ ಹೊಕ್ಕರೆ ಸುಂದರ ಹಾಗೂ ಅಚ್ಚುಕಟ್ಟಾಗಿ ನಿರ್ಮಿಸಲಾದ ಮತ್ತು ನಿರ್ವಹಿಸಲಾದ ಸ್ಮಾರಕ ಉದ್ಯಾನ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಖಾಸಗಿ ವಾಹನದಲ್ಲಿ ಪ್ರವಾಸಕ್ಕೆ ಹೋಗುವವರಿಗೆ ಪಾರ್ಕಿಂಗ್ ವ್ಯವಸ್ಥೆಯಿದೆ. ಸಾಲು ಸಾಲು ಸರಕಾರಿ ಬಸ್‌ಗಳ ಓಡಾಟವೂ ಇಲ್ಲಿಗೆ ದಿನನಿತ್ಯ ಇದ್ದೇ ಇದೆ.

bangarappa 2

ಜನಮಾನಸದಲ್ಲಿ ಬಂಗಾರಪ್ಪ

ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ, ಜನಮಾನಸದಲ್ಲಿ ಮೆರೆದವರ ಸ್ಮಾರಕಗಳು ನೋಡಲು ಸಿಗುವುದೇ ಅಪರೂಪ. ಅಂಥವುಗಳ ಪಟ್ಟಿಯಲ್ಲಿ ಇಲ್ಲಿನ ಬಂಗಾರಧಾಮ ಅಗ್ರಮಾನ್ಯ ಸಾಲಿನಲ್ಲಿ ನಿಲ್ಲುತ್ತದೆ. ಸ್ಮಾರಕವಾದ ನಂತರವೂ ಸಾರ್ವಜನಿಕರಿಗೆ ಉಪಯೋಗಕಾರಿಯಾಗಿ ಜನಮಾನಸದಲ್ಲಿ ಬಹುಮುಖ್ಯ ಸ್ಥಾನಗಳಿಸಿದೆ.

ನೀವಿಲ್ಲಿಗೆ ಭೇಟಿ ನೀಡಿದರೆ ಇಲ್ಲಿನ ಸುಂದರ ವಾತಾವರಣವನ್ನು ಆಸ್ವಾದಿಸಿ ಜತೆಗೆ ಅಲ್ಲಿನ ಜನರನ್ನೊಮ್ಮೆ ಮಾತನಾಡಿಸಿ ನೋಡಿ. ಪ್ರತಿಯೊಬ್ಬರೂ ಸಾರೆಕೊಪ್ಪ ಬಂಗಾರಪ್ಪನವರ ಗುಣಗಾನ ಮಾಡುತ್ತಾರೆ. ’ನಮ್ಮ ಸಾಯೆಬ್ರು ಬಾಳ ಕೆಲ್ಸ ಮಾಡಿದ್ದಾರೆ’ ಅಂತ ಶುರುಮಾಡಿ, ಭೂಸುಧಾರಣೆ, ಪಂಪ್‌ಸೆಟ್, ಬಿಸಿಯೂಟ ಹೀಗೆ ಬಂಗಾರಪ್ಪ ಅವರು ಕೈಗೊಂಡ ಅನೇಕ ಯೋಜನೆಗಳ ಕುರಿತು ಸಾಕಷ್ಟು ಸಂಗತಿಗಳನ್ನು ಸುಲಲಿತವಾಗಿ ನಿಮ್ಮ ಮುಂದೆ ಬಿಚ್ಚಿಡುತ್ತಾರೆ. ಅವರ ಭಾಷೆ ಸೊಗಡಂತೂ ಮೊದಲೇ ಚಂದ. ಅದರಲ್ಲೂ ಬಂಗಾರಪ್ಪನವರ ಕುರಿತು ಮಾತನಾಡುವಾಗ ಎದೆಯುಬ್ಬಿಸಿ ನಮ್ಮ ರಾಜ್ಯಕ್ಕೆ ಅವರು ಬಂಗಾರವಿದ್ದಂತೆ ಎನ್ನುತ್ತಾರೆ.

ಸರ್ವಧರ್ಮೀಯರ ಪ್ರವಾಸಿ ತಾಣ!

ಈಗಾಗಲೇ ಸಾರೆಕೊಪ್ಪ ಬಂಗಾರಪ್ಪನವರು ವಿಧಿವಶರಾಗಿ 13 ವರ್ಷಗಳು ಕಳೆದಿವೆ. ಆದರೂ ಜನರ ಮನಸ್ಸಿನಲ್ಲಿ ಅವರ ಮೇಲಿನ ಅಭಿಮಾನ ಬಂಗಾರದಷ್ಟೆ ಮೌಲ್ಯಯುತವಾಗಿದೆ. ರಾಜಕೀಯವಾಗಿ ತಾನೂ ಬೆಳೆಯಬೇಕು ಜತೆಗೆ ತನ್ನವರನ್ನೂ ಬೆಳೆಸಬೇಕು ಎನ್ನುವ ಮನೋಭಾವ ಅವರದು. ಇದಕ್ಕೆ ಉದಾಹರಣೆ ಎಂಬಂತೆ ಇಲ್ಲಿನ ಸಾಕಷ್ಟು ಸಾಮಾನ್ಯ ಜನರಿಗೆ ಅವರು ರಾಜಕೀಯಕ್ಕೆ ಮೊದಲ ಹೆಜ್ಜೆಯಿಡಲು ಕಾರಣೀ ಕರ್ತರಾಗಿದ್ದಾರೆ. ಈ ಸಮಯದಲ್ಲಿ ಬಂಗಾರಪ್ಪನವರು ಯಾರ ಜಾತಿ- ಧರ್ಮಗಳನ್ನು ಗಮನಿಸದೆ ಸರ್ವರನ್ನೂ ತನ್ನವರೆಂದು ತಿಳಿದು ಕಾರ್ಯ ನಿರ್ವಹಿಸಿದವರು. ಇದೇ ಕಾರಣಕ್ಕೆ ಇಲ್ಲಿನ ಬಂಗಾರಧಾಮಕ್ಕೆ ಸರ್ವ ಜಾತಿ -ಧರ್ಮೀಯರು ಭೇಟಿನೀಡುತ್ತಾರೆ. ಬಂದವರೆಲ್ಲರೂ ಬಂಗಾರಪ್ಪ ಸ್ಮಾರಕಕ್ಕೆ ಪೂಜೆಯನ್ನೂ ಮಾಡುತ್ತಾರೆ.

ರಾಜಕೀಯ ಜೀವನದಲ್ಲಿ ಮಹಾನ್ ವ್ಯಕ್ತಿಯಾಗಿ ಬೆಳೆದ ಸಾರೆಕೊಪ್ಪ ಬಂಗಾರಪ್ಪ ಅವರು ಸಹಜವಾಗಿಯೇ ಐತಿಹಾಸಿಕ ವ್ಯಕ್ತಿಯಾಗಿ ಬಂಗಾರಧಾಮದಲ್ಲಿ ಸೊರಬದ ಸರ್ವ ಜನಾಂಗದ ಮನಗಳಲ್ಲಿ ಉಳಿದುಕೊಂಡಿದ್ದಾರೆ.

ಬಂಗಾರಪ್ಪ ಹೆಸರಲ್ಲಿ ಸಾಲು ಸಾಲು ಪ್ರಶಸ್ತಿಗಳು

ಪ್ರತಿ ವರ್ಷ ಸಾರೆಕೊಪ್ಪ ಬಂಗಾರಪ್ಪ ಅವರನ್ನು ನೆನೆಯಲು ಚಿಂತನ- ಮಂಥನ ಎಂಬ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಅಕ್ಟೋಬರ್ ಅಥವಾ ಡಿಸೆಂಬರ್ ಹೊತ್ತಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ, ಕ್ರೀಡಾ ಬಂಗಾರ, ಸಾಹಿತ್ಯ ಬಂಗಾರ, ಕಲಾ ಬಂಗಾರ, ಸೇವಾ ಬಂಗಾರ ಪ್ರಶಸ್ತಿಗಳನ್ನು ಈ ಸಮಯದಲ್ಲಿ ನೀಡಲಾಗುತ್ತದೆ. ಆಯಾ ಕ್ಷೇತ್ರದ ಸಾಧಕರನ್ನು ಗುರುತಿಸಲು ಕ್ಷೇತ್ರದ ಹಿರಿಯ ಸಾಧಕರನ್ನು ನೇಮಿಸಲಾಗುತ್ತದೆ. ಪ್ರಶಸ್ತಿಯು ಒಂದು ಲಕ್ಷ ರುಪಾಯಿ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಈ ಕಾರ್ಯಕ್ರಮ ನಡೆಯುವುದೂ ಬಂಗಾರಧಾಮದಲ್ಲೆ.

bangarappa 3

ಬಂಗಾರಧಾಮದ ವಿನ್ಯಾಸ

ಬಂಗಾರಧಾಮದ ನಿರ್ಮಾಣಕ್ಕೆ ಇಂದಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಶಿಲಾನ್ಯಾಸ ಮಾಡಿದ್ದು, ಇಲ್ಲಿನ ಸ್ಮಾರಕದ ರೂಫ್‌, ಅಡಿಪಾಯಗಳ ವಿನ್ಯಾಸವನ್ನು ಹತ್ತಿರದಲ್ಲಿದ್ದು ಗಮನಿಸಿದ್ದಾರೆ. ಪ್ರತಿ ಬಾರಿಯೂ ಅವರಿಗೆ ಅನಿಸಿದ ಹೊಸತನವನ್ನು ತುಂಬಿ ಬಂಗಾರಧಾಮದ ಸೌಂದರ್ಯ ಹೆಚ್ಚಾಗಲು ಕಾರಣೀಭೂತರಾಗಿದ್ದಾರೆ. ಮರು ನಿರ್ಮಾಣ ಕೆಲಸಗಳನ್ನು ಮತ್ತೆ ಮತ್ತೆ ಮಾಡಿಸಿದ್ದಾರೆ. ಇಷ್ಟೆಲ್ಲ ಕಾರಣಗಳಿಂದ ಬಂಗಾರಧಾಮವು ಅಕ್ಷರಶಃ ಬಂಗಾರದಂತೆ ಇಂದು ಕಂಗೊಳಿಸುತ್ತಿದೆ.

ಹೌದು, 1ಎಕರೆ 16 ಗುಂಟೆ ವ್ಯಾಪ್ತಿಯಲ್ಲಿ ಸ್ಮಾರಕ ಉದ್ಯಾನವು ಹರಡಿಕೊಂಡಿದೆ. ಇಲ್ಲಿ ಶಾಂತಿಯಿಂದ ಸಮಯ ಕಳೆಯಲು ನಿಶ್ಶಬ್ದ ವಾತಾವರಣದಲ್ಲಿ ಯೋಗ ಧ್ಯಾನ ಕೇಂದ್ರವಿದೆ. ಇನ್ನು ಈ ಸುಂದರ ಉದ್ಯಾನವನದಲ್ಲಿ ಕಾಲು ಜಾಡಿಸುತ್ತ ಆರಾಮವಾಗಿ ಓಡಾಡಲು ಪಾತ್ ವೇ ಸಹ ಇದೆ. ಇವುಗಳ ಮಧ್ಯದಲ್ಲಿ ಎಸ್. ಬಂಗಾರಪ್ಪ ಮತ್ತು ಶ್ರೀಮತಿ ಬಂಗಾರಪ್ಪ ಅವರ ಸ್ಮಾರಕಗಳಿದ್ದು, ಇದರ ಮೇಲಿನ ರೂಫ್ ನೋಡಲು ಅತ್ಯಾಕರ್ಷಕವಾಗಿದೆ.

ಸ್ಮಾರಕದ ಮೇಸ್ತ್ರಿಯಾಗಿ ಕಾರ್ಯ ನಿರ್ವಹಿಸಿದ್ದ ಪ್ರಶಾಂತ್ ಅವರು ಹೇಳುವ ಪ್ರಕಾರ, ಉದ್ಯಾನ ನಿರ್ಮಾಣದ ಎಲ್ಲ ಕಾರ್ಯ ಮುಗಿಯುವ ಹೊತ್ತಿಗೆ ಆರೂವರೆ ವರ್ಷಗಳು ತಗುಲಿದೆ. ಆಗಾಗ್ಗೆ ಮರು ನಿರ್ಮಾಣ ಕಾರ್ಯವೂ ನಡೆದಿದೆ. ಅಷ್ಟು ವರ್ಷಗಳ ಶ್ರಮದಿಂದಾಗಿ ಈ ಧಾಮವು ಪ್ರವಾಸಿ ತಾಣವಾಗಿ ನಿರ್ಮಾಣವಾಗಿದೆ. ಉದ್ಯಾನವನವು ಕೂಡ ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಲ್ಪಟ್ಟಿದೆ.

ಬಹುಪಯೋಗಿ ಬಂಗಾರಧಾಮ

ಮಗುಚಿ ಬಿದ್ದ ಜೇಡರ ಬಲೆಯಂತೆ ಕಾಣುವ ಅತ್ಯಾಕರ್ಷಕ ಸ್ಮಾರಕದ ರೂಫ್ ಜತೆಗೆ ಸುಂದರ ಮತ್ತು ಸಣ್ಣ ಉದ್ಯಾನ, ರಾಜಕೀಯ ಇತಿಹಾಸಗಳನ್ನು ಮೆಲುಕು ಹಾಕುತ್ತಾ ಹೆಜ್ಜೆಹಾಕಲು, ಸ್ಮಾರಕದ ಸುತ್ತ ಸುತ್ತಲೂ ಪಾತ್‌ ವೇ, ಸಾರ್ವಜನಿಕರೂ ಉಪಯೋಗ ಪಡೆಯಬಹುದಾದ ನವೀನ ಚಿಂತನೆಯಿಂದ ನಿರ್ಮಿಸಿರುವುದು, ಇದರ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.

ಇದರ ಜತೆಜತೆಗೆ ಬಂಗಾರಧಾಮವು ಬಹುಪಯೋಗಿ ಉದ್ಯಾನವನವಾಗಿದೆ. ಈ ಉದ್ಯಾನದ ನಿರ್ಮಾಣದ ಉದ್ದೇಶವೂ ಅದೇ ಆಗಿತ್ತು. ಇಲ್ಲಿ ಸಾರ್ವಜನಿಕರು ತಮ್ಮ ಯಾವುದೇ ಸಭಾ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಅದಕ್ಕಾಗಿ ಸುಮಾರು 2000 ಜನರು ಕುಳಿತುಕೊಳ್ಳಬಹುದಾದ ಮತ್ತು ಸುವ್ಯವಸ್ಥಿತ ಬಯಲು ರಂಗಮಂದಿರವಿದೆ. ಉದ್ಯಾನದ ಯಾವ ಭಾಗದಲ್ಲಿ ಕುಳಿತರೂ ರಂಗಮಂದಿರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳನ್ನು ಆರಾಮವಾಗಿ ಕಣ್ತುಂಬಿಕೊಳ್ಳಬಹುದು. ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿ ಅಗತ್ಯ ಮೂಲ ಸೌಕರ್ಯಗಳಿಂದ ಈ ಉದ್ಯಾನ ಸುವ್ಯವಸ್ಥಿತವಾಗಿದೆ.

ನಗರದ ಗದ್ದಲದಿಂದ ಹೊರಹೋಗಿ ಶಾಂತ ವಾತಾವರಣದಲ್ಲಿ ವಿಹರಿಸಲು ಜನರು ಈ ಉದ್ಯಾನಕ್ಕೆ ಭೇಟಿ ನೀಡುತ್ತಾರೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸಮಯಕ್ಕೆ ಇಲ್ಲಿ ನೂರಾರು ಜನರು ತಮ್ಮ ವಿಹಾರದ ಕ್ಷಣಗಳನ್ನು ಕಳೆಯುತ್ತಾರೆ. ರಜೆ ದಿನಗಳಲ್ಲಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ವಿಹರಿಸಲು ಬರುತ್ತಾರೆ.

ಇನ್ನು ಇಲ್ಲಿನ ಸುಂದರ ಅವಕಾಶಗಳ ಮಧ್ಯೆ ಸಾರ್ವಜನಿಕರು ಜನ್ಮದಿನ, ವಾರ್ಷಿಕೋತ್ಸವ ಹೀಗೆ ಸಮಾರಂಭಗಳನ್ನೂ ನಡೆಸುತ್ತಾರೆ. ಹೀಗೆ ಯಾವುದೇ ಕಾರ್ಯಕ್ರಮಗಳನ್ನು ಇಲ್ಲಿ ಕೈಗೊಂಡರೂ ಹಣ ತೆರುವ ಅವಶ್ಯಕತೆಯೂ ಇಲ್ಲವಂತೆ. ಸಾಕಷ್ಟು ನಟ-ನಟಿಯರೂ ಇಲ್ಲಿ ಸಾಕಷ್ಟು ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ಸೋಲಿಲ್ಲದ ಸರದಾರ, ಸಾರೆಕೊಪ್ಪದ ಸರದಾರ, ಬಂಗಾರದ ಮನುಷ್ಯ ಎಂದು ತನ್ನ ನೆಚ್ಚಿನ ಜನರಿಂದ ಗುರುತಿಸಿಕೊಂಡಿರುವ ಎಸ್. ಬಂಗಾರಪ್ಪ ಅವರ ಅಭಿಮಾನಿಗಳು ಇಂದಿಗೂ ಇಲ್ಲಿಗೆ ಭೇಟಿನೀಡಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿ ಸ್ವಲ್ಪ ಸಮಯ ಕಳೆದು ತೆರಳುತ್ತಾರೆ.

ಸೊರಬದ ಸೊಬಗಾಗಿ, ಜನಮಾನಸದಲ್ಲಿ ಜನನಾಯಕಾರಾಗಿ ಉಳಿದಿರುವ ಸಾರೆಕೊಪ್ಪ ಬಂಗಾರಪ್ಪ ಅವರ ನೆನಪಿಗಾಗಿ ನಗರದ ಬಸ್‌ ನಿಲ್ದಾಣದಲ್ಲಿ ಪ್ರತಿಮೆಯನ್ನು, ನಗರದ ಸರ್ಕಲ್‌ ಮತ್ತು ಕ್ರೀಡಾಂಗಣವೊದಕ್ಕೆ ಇವರ ಹೆಸರನ್ನು ಇಟ್ಟು ಗೌರವಿಸಲಾಗುತ್ತಿದೆ.

ಸಮಯ

ಬೆಳಗ್ಗೆ 5:10ರಿಂದ ರಾತ್ರಿ 10ರವರೆಗೂ ಬಂಗಾರಧಾಮಕ್ಕೆ ಭೇಟಿ ನೀಡಲು ಅವಕಾಶಗಳಿವೆ. ಬಂಗಾರಧಾಮದ ಸಂಪೂರ್ಣ ಆಡಳಿತವನ್ನು ಬಂಗಾರಪ್ಪ ಫೌಂಡೇಶನ್ ನಡೆಸುತ್ತಿದ್ದು, ಮುಂಬರುವ ದಿನಗಳಲ್ಲಿ ಬಂಗಾರಧಾಮದ ಅಯವ್ಯಯಗಳನ್ನು ಸ್ವಾಯತ್ತಗೊಳಿಸಲು, ಉದ್ಯಾನ ಪಕ್ಕದಲ್ಲೇ ಮಳಿಗೆಗಳನ್ನು ಬಾಡಿಗೆಗೆ ನೀಡಲು ಯೋಚಿಸಲಾಗಿದೆ.

ಅಭಿಮಾನಿಗಳಿಂದ ಅಭಿಮಾನಿಗಳಿಗಾಗಿ
ಬಂಗಾರಪ್ಪನವರ ಸ್ಮಾರಕ ನಿರ್ಮಾಣ ಅವರ ಅಭಿಮಾನಿಗಳ ಬಳಗದ ಬಹುದಿನಗಳ ಬೇಡಿಕೆಯಾಗಿತ್ತು. ಸೊರಬ ಜನಗಳು ಮತ್ತು ಅಭಿಮಾನಿಗಳ ಕೋರಿಕೆಗೆ ಮಣಿದು, ಸ್ಟಂದಿಸಿದ್ದೇವೆ. ಸಾರೆಕೊಪ್ಪ ಬಂಗಾರಪ್ಪ ಮತ್ತು ಶ್ರೀಮತಿ ಶಕುಂತಲಾ ಬಂಗಾರಪ್ಪ ಅವರ ಸ್ಮಾರಕವನ್ನು ಬಂಗಾರಧಾಮವಾಗಿ ನಿರ್ಮಿಸಿದ್ದೇವೆ. ಸಾರ್ವಜನಿಕರು ಈ ಧಾಮದಲ್ಲಿ ವಿಹರಿಸಲು, ಕಾಲಕಳೆಯಲು, ಉಪಯೋಗಿಸಲು ಅನುಕೂಲವಾಗುವಂತೆ ಗಮನದಲ್ಲಿಟ್ಟು ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ. ಸ್ಮಾರಕವನ್ನು ಪ್ರೇಕ್ಷಣೀಯ ಸ್ಥಳವಾಗಿ ರೂಪಿಸಿ ಸಾರ್ವಜನಿಕರಿಗೆ ಅರ್ಪಿಸಿದ್ದೇವೆ, ಜನತೆ ಮತ್ತು ಅಭಿಮಾನಿಗಳು ಹರಸಿ ಹಾರೈಸಿದರೆ ಅದೇ ನಮ್ಮ ಖುಷಿ.
ಮಧು ಬಂಗಾರಪ್ಪ , ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು

ನಮ್ಮ ತಂದೆಯವರಾದ ಬಂಗಾರಪ್ಪನವರು ಜನರ ಮಧ್ಯೆ ಬದುಕಿದವರು. ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತ ಜನನಾಯಕ ಎನಿಸಿಕೊಂಡವರು. ಅವರನ್ನು ಈ ಸ್ಮಾರಕದ ಮೂಲಕ ಶಾಶ್ವತವಾಗಿ ಅವರನ್ನು ಪ್ರೀತಿಸೋ ಹಾಗೂ ಅವರು ಪ್ರೀತಿಸೋ ಜನರ ನಡುವೆಯೇ ನೆಲೆ ನಿಲ್ಲುವಂತೆ ಮಾಡಿದ್ದಾರೆ ಮಧು. ಇದು ರಾಜ್ಯ ಮೆಚ್ಚುವ ಕಾರ್ಯ.ಈ ಸತ್ಕಾರ್ಯಕ್ಕೆ ಬೆಂಬಲ ನೀಡಿದ ಸರಕಾರಕ್ಕೂ ನಾನು ಧನ್ಯವಾದ ತಿಳಿಸುತ್ತೇನೆ.
- ಶ್ರೀಮತಿ ಗೀತಾ ಶಿವರಾಜ್ ಕುಮಾರ್, ಚಲನಚಿತ್ರ ನಿರ್ಮಾಪಕಿ, ಬಂಗಾರಪ್ಪನವರ ಪುತ್ರಿ

ಬಂಗಾರಪ್ಪನವರು ಈ ರಾಜ್ಯ ಕಂಡ ಶ್ರೇಷ್ಠ ನಾಯಕ. ಮುಖ್ಯಮಂತ್ರಿಯಾಗಿ, ಜನಪ್ರತಿನಿಧಿಯಾಗಿ ಈ ರಾಜ್ಯಕ್ಕೆ ಮತ್ತು ಸೊರಬಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ನಿರ್ಮಾಣ ಆಗಿರೋ ಸ್ಮಾರಕ ರಾಜ್ಯ ಮೆಚ್ಚುವಂತಿದೆ. ನಾನು ಎರಡು ಬಾರಿ ಅಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಬಹಳ ಅದ್ಭುತವಾದ ಸ್ಮಾರಕ. ಮಧು ಬಂಗಾರಪ್ಪನವರಿಗೆ ಮತ್ತು ಸರಕಾರಕ್ಕೆ ನಾನು ಇಂಥ ಸ್ಮಾರಕ ನಿರ್ಮಿಸಿದ್ದಕ್ಕೆ ಥ್ಯಾಂಕ್ಸ್ ಹೇಳುತ್ತೇನೆ.
-ಶಿವರಾಜ್ ಕುಮಾರ್, ಹಿರಿಯ ನಟ

ಬಂಗಾರಪ್ಪನವರು ತಮ್ಮ ಸಾಮಾಜಿಕ ಕಳಕಳಿಯ ವಿಚಾರಗಳಿಗೆ ಯುವಜನರ ಮನಸ್ಸನ್ನು ಗೆದ್ದವರು. ಇವರು ಎಂದಿಗೂ ಮತಗಳಿಕೆ ಉದ್ದೇಶಕ್ಕಾಗಿ ಕೆಲಸಗಳನ್ನು ಮಾಡಿದವರಲ್ಲ. ಬದಲಿಗೆ ಕಡುಬಡವ, ಮತ್ತು ಕಡಿಮೆ ಜನ ಸಂಖ್ಯೆಯ ಜನರನ್ನೂ ಗುರುತಿಸಿ ಅವರನ್ನು ಮೇಲೆತ್ತಲು ಶ್ರಮವಹಿಸಿದ್ದವರು. ಇಂಥ ಕಾರ್ಯಗಳಿಂದ ಬಂಗಾರಪ್ಪನವರು ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದ್ದಾರೆ. ಇದೇ ಹಾದಿಯಲ್ಲಿ ಮಧು ಬಂಗಾರಪ್ಪ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬಂಗಾರಧಾಮದ ಕಲ್ಪನೆಗೆ ಜೀವ ನೀಡಿದ್ದಾರೆ. ಇಲ್ಲಿಗೆ ಪ್ರತಿದಿನ ಸರಿಸುಮಾರು 500 ಜನರು ಭೇಟಿ ನೀಡುತ್ತಾರೆ. ಸಾರ್ವಜನಿಕರು ಬಂದು ವಿಹರಿಸಬಹುದು. ಎಲ್ಲ ಮೂಲ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಮಾಧಿ ಸ್ಥಳವನ್ನು ಪ್ರೇಕ್ಷಣೀಯ ಸ್ಥಳವಾಗಿ ರೂಪಿಸುವಲ್ಲಿ ಮಧು ಬಂಗಾರಪ್ಪ ಅವರ ಶ್ರಮ ಜನ ಮೆಚ್ಚುವಂಥದ್ದು.
ಎಸ್‌. ಆರ್‌ ಕುಮಾರ ಸ್ವಾಮಿ , ಮಧು ಬಂಗಾರಪ್ಪನವರ ಆಪ್ತ ಸಹಾಯಕರು

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..