ಮುಂಗಾರಿನಲ್ಲಿ ಆಗುಂಬೆ ಮೂಲಕ ಪ್ರಯಾಣಿಸಬೇಕೆಂದುಕೊಂಡಿರಾ ?
ಮುಂಗಾರು ಮಳೆ ಆರಂಭವಾಗಿರುವುದರಿಂದ ದಕ್ಷಿಣದ ಚಿರಾಪುಂಜಿ ಎಂದೇ ಖ್ಯಾತಿ ಹೊಂದಿರುವ ಆಗುಂಬೆ ಹಾಗೂ ಸುತ್ತಮುತ್ತಲಿನ ಪರಿಸರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು ಅಂದುಕೊಂಡಿದ್ದೀರಾ ? ಆದರೆ ಆಗುಂಬೆಗೆ ತೆರಳುವ ಮುನ್ನ ಸ್ವಲ್ಪ ಯೋಚಿಸಿ.
ಹಚ್ಚ ಹಸಿರಿನ ಗುಡ್ಡ ಕಾಡು ಪ್ರದೇಶ, ಜಲಪಾತಗಳು, ತಣ್ಣನೆ ಹರಿಯುವ ನೀರು..ಆಗುಂಬೆ ಘಾಟಿ ಸಮೀಪ ಇಂತಹ ಅನೇಕ ಪ್ರವಾಸಿ ತಾಣಗಳನ್ನು ನೋಡಲು ಬಯಸದ ಪ್ರವಾಸಿಗರಿಲ್ಲ. ಮುಂಗಾರು ಮಳೆ ಪ್ರಾರಂಭವಾದಮೇಲಂತೂ ಆಗುಂಬೆ ಹಾಗೂ ಸುತ್ತಲಿನ ಪರಿಸರವನ್ನು ನೋಡುವುದೇ ಚಂದ. ಆದರೆ ಅಷ್ಟೇ ಅಪಾಯಕರವೂ ಹೌದು.
ಮುಂಗಾರು ಮಳೆ ಆರಂಭವಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಆಗುಂಬೆ ಘಾಟಿಯಲ್ಲಿ ಜೂನ್ 15ರಿಂದ ಸೆಪ್ಟೆಂಬರ್ 30ರವರೆಗೆ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. ಅಲ್ಲದೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಆದೇಶಿಸಲಾಗಿದೆ. ಮಳೆಯಿಂದಾಗಿ ಮತ್ತು ವಾಹನಗಳ ಓಡಾಟದಿಂದಾಗಿ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಭೂ ಕುಸಿತ ಸಂಭವಿಸುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ. ಉಡುಪಿಯಿಂದ ತೀರ್ಥಹಳ್ಳಿಗೆ ಸಂಚರಿಸುವ ಭಾರಿ ವಾಹನಗಳು ಬದಲಿ ಮಾರ್ಗವಾಗಿ ಉಡುಪಿ-ಕುಂದಾಪುರ-ಸಿದ್ದಾಪುರ-ಮಾಸ್ತಿಕಟ್ಟೆ-ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

ಆಗುಂಬೆ ಘಾಟಿ ಸಂಚಾರ ಬಲು ಕಷ್ಟ
ದಕ್ಷಿಣದ ಚಿರಾಪುಂಜಿ ಖ್ಯಾತಿಯ ಆಗುಂಬೆ ಘಾಟಿಯ 5 ಮತ್ತು 12ನೇ ಹೇರ್‌ಪಿನ್ ತಿರುವು ಮಳೆಗಾಲದಲ್ಲಿ ವಾಹನ ಸವಾರರ ನಿದ್ದೆಗೆಡಿಸಿದೆ. ಲಘು ಗುಡ್ಡ ಕುಸಿತ, ತಡೆಗೋಡೆ ಕುಸಿತ, ಕಡಿದಾದ ಮಾರ್ಗದ ಕಾರಣಕ್ಕೆ ತಿರುವಿನಲ್ಲಿ ಟ್ರಾಫಿಕ್ ಜಾಮ್ ಎಲ್ಲಾ ಸಮಯದಲ್ಲೂ ಸಂಭವಿಸುತ್ತಿದೆ. ಕೊಂಚ ಎಚ್ಚರ ತಪ್ಪಿದರೂ ಅನಾಹುತ ಆಗುವ ಸ್ಥಿತಿಯಿದೆ.
ಪ್ರಕೃತಿ ಪ್ರವಾಸಕ್ಕೂ ಮುನ್ನ ಎಚ್ಚರ
ಆಗುಂಬೆ ರಸ್ತೆ ತೀರಾ ಕಡಿದಾಗಿದ್ದು, ಅನೇಕ ತಿರುವುಗಳಿರುವ ಈ ಘಾಟಿಯಲ್ಲಿ ಘನವಾಹನಗಳ ಸಂಚಾರ ನಿಷೇಧಿಸಿದ್ದರೂ ಮಿನಿಬಸ್, ಕಾರುಗಳು ಸೇರಿದಂತೆ ಲಘು ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ಸಂಚರಿಸುತ್ತಿವೆ. ಮಳೆಯಿಂದಾಗಿ ಸುಂದರವಾಗಿ ಕಂಗೊಳಿಸುತ್ತಿರುವ ಆಗುಂಬೆ ನೋಡಲು ಪ್ರವಾಸಿಗರು ದಂಡೇ ಆಗಮಿಸುತ್ತಿದೆ. ಆದರೆ ಮೂಂಗಾರಿನ ನಡುವೆ ಅವ್ಯವಸ್ಥೆಯ ಆಗರವಾದ ಆಗುಂಬೆ ಸಂಚಾರ ವಾಹನ ಸವಾರರನ್ನು ಕಂಗೆಡುವಂತೆ ಮಾಡಿದೆ. ಚಾರ್ಮಾಡಿ ಹಾಗೂ ಶಿರಾಡಿಘಾಟ್‌ನಲ್ಲಿನ ಸಮಸ್ಯೆಯ ಕಾರಣಕ್ಕೆ ಅತಿ ಹೆಚ್ಚಿನ ವಾಹನಗಳು ಆಗುಂಬೆ ಮಾರ್ಗ ಬಳಕೆ ಮಾಡುತ್ತಿರುವುದರಿಂದ ಪ್ರವಾಸಿಗರಿಗೆ ಇದು ಪ್ರಯಾಸವನ್ನು ಉಂಟುಮಾಡುತ್ತಿರುವುದು ಸುಳ್ಳಲ್ಲ.