ಮೆಟ್ರೋ ನಿಲ್ದಾಣದ ಹೆಸರಿನಲ್ಲಿ ತಿದ್ದುಪಡಿಗೆ ಸ್ಥಳೀಯರ ಆಗ್ರಹ
ಬೆಂಗಳೂರಿನ ನಮ್ಮ ಮೆಟ್ರೋದ ಪಿಂಕ್ ಲೈನ್ನಲ್ಲಿರುವ 'ಬಿಳೇಕಹಳ್ಳಿ-ಐಐಎಂಬಿ' ಮೆಟ್ರೋ ನಿಲ್ದಾಣದ ಹೆಸರನ್ನು ಮರುಪರಿಶೀಲಿಸಿ ತಿದ್ದುಪಡಿ ಮಾಡುವಂತೆ ಸ್ಥಳೀಯ ನಿವಾಸಿಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬಿಳೇಕಹಳ್ಳಿಯು ಐಐಎಂಬಿ (Indian Institute of Management Bangalore) ಸ್ಥಾಪನೆಯಾಗುವುದಕ್ಕೂ ಮೊದಲಿನಿಂದಲೂ ಅಸ್ತಿತ್ವದಲ್ಲಿರುವ ಪುರಾತನ ಗ್ರಾಮವಾಗಿದೆ.
ಬೆಂಗಳೂರಿನ ನಮ್ಮ ಮೆಟ್ರೋದ ಪಿಂಕ್ ಲೈನ್ನಲ್ಲಿರುವ 'ಬಿಳೇಕಹಳ್ಳಿ-ಐಐಎಂಬಿ' ಮೆಟ್ರೋ ನಿಲ್ದಾಣದ ಹೆಸರನ್ನು ಮರುಪರಿಶೀಲಿಸಿ ತಿದ್ದುಪಡಿ ಮಾಡುವಂತೆ ಸ್ಥಳೀಯ ನಿವಾಸಿಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಿಳೇಕಹಳ್ಳಿಯು ಐಐಎಂಬಿ (Indian Institute of Management Bangalore) ಸ್ಥಾಪನೆಯಾಗುವುದಕ್ಕೂ ಮೊದಲಿನಿಂದಲೂ ಅಸ್ತಿತ್ವದಲ್ಲಿರುವ ಪುರಾತನ ಗ್ರಾಮವಾಗಿದೆ. ಐಐಎಂಬಿ ಈ ಪ್ರದೇಶದಲ್ಲಿರುವ ಪ್ರಮುಖ ಸಂಸ್ಥೆಯಷ್ಟೇ ಹೊರತು, ಬಿಳೇಕಹಳ್ಳಿಯ ಭೌಗೋಳಿಕ ಗುರುತನ್ನು ಮರೆಮಾಚುವ ರೀತಿಯಲ್ಲಿ ನಿಲ್ದಾಣದ ಹೆಸರಿರಬಾರದು ಎಂಬುದು ನಿವಾಸಿಗಳ ಅಭಿಪ್ರಾಯ.
ಮೆಟ್ರೋ ನಿಲ್ದಾಣಗಳಿಗೆ ಅವು ಇರುವ ಪ್ರದೇಶದ ಹೆಸರನ್ನೇ ಪ್ರಮುಖವಾಗಿ ನೀಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಇನ್ಫೋಸಿಸ್ ಫೌಂಡೇಶನ್-ಕೋನಪ್ಪನ ಅಗ್ರಹಾರ, ಮಂತ್ರಿ ಸ್ಕ್ವೇರ್-ಸಂಪಿಗೆ ರಸ್ತೆ, ಪ್ರೆಸ್ಟೀಜ್-ಬೆಳ್ಳಂದೂರು ಮತ್ತು ಎಂಬಸಿ ಟೆಕ್ ವಿಲೇಜ್-ಕಾಡುಬೀಸನಹಳ್ಳಿ ನಿಲ್ದಾಣಗಳನ್ನು ಉಲ್ಲೇಖಿಸಿದ್ದಾರೆ.
ಸಹ-ಬ್ರ್ಯಾಂಡಿಂಗ್ ಇದ್ದರೂ ಸ್ಥಳೀಯ ಪ್ರದೇಶದ ಹೆಸರು ಉಳಿಯಬೇಕು ಎಂಬುದು ಅವರ ಒತ್ತಾಯ. ನಿಲ್ದಾಣದ ಶಾಶ್ವತ ನಾಮಫಲಕಗಳನ್ನು ಮುದ್ರಿಸುವ ಮೊದಲೇ ಸರಕಾರ ಸೂಕ್ತ ತಿದ್ದುಪಡಿ ಮಾಡಬೇಕು. ಇದರಿಂದ ಬಿಳೇಕಹಳ್ಳಿಯ ಸ್ಥಳೀಯ ಅಸ್ಮಿತೆ ಉಳಿಯುವುದರ ಜತೆಗೆ, ಮುಂದೆ ನಾಮಫಲಕ ಬದಲಾವಣೆಗೆ ತಗಲುವ ಅನಗತ್ಯ ವೆಚ್ಚವನ್ನೂ ತಪ್ಪಿಸಬಹುದು ಎಂದು ನಿವಾಸಿಗಳು ತಿಳಿಸಿದ್ದಾರೆ.