ಬೆಂಗಳೂರು ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಟ್ರಾಫಿಕ್‌ ಪೊಲೀಸರ ಕೆಲಸ ಮತ್ತು ಸವಾಲುಗಳನ್ನು ನೇರವಾಗಿ ಅರ್ಥಮಾಡಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸುವ ‘Cop for the Day’ ಕಾರ್ಯಕ್ರಮವನ್ನು ಬೆಂಗಳೂರು ಸಂಚಾರ ಪೊಲೀಸರು ಮತ್ತೆ ಆರಂಭಿಸಿದ್ದಾರೆ. ನಗರದ ನಿವಾಸಿಗಳು ಒಂದು ದಿನ ಟ್ರಾಫಿಕ್‌ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸಿ, ಪೀಕ್‌ ಅವರ್‌ಗಳಲ್ಲಿ ಸಂಚಾರ ನಿರ್ವಹಣೆಯ ಅನುಭವ ಪಡೆಯಬಹುದಾಗಿದೆ.

ಈ ಕಾರ್ಯಕ್ರಮದ ಮೂಲಕ ಸಂಚಾರ ಪೊಲೀಸರ ಎದುರಿಸುವ ಸಮಸ್ಯೆಗಳನ್ನು ನಾಗರಿಕರು ಹತ್ತಿರದಿಂದ ತಿಳಿದುಕೊಳ್ಳುವುದರ ಜತೆಗೆ, ತಮ್ಮ ಅನುಭವ ಮತ್ತು ಸಲಹೆಗಳನ್ನು ಪೊಲೀಸರೊಂದಿಗೆ ಹಂಚಿಕೊಳ್ಳಬಹುದು. ಇದರಿಂದ ಬೆಂಗಳೂರು ನಗರದ ರಸ್ತೆಗಳ ಸಂಚಾರವನ್ನು ಇನ್ನಷ್ಟು ಸುರಕ್ಷಿತ ಹಾಗೂ ಸುಗಮಗೊಳಿಸಲು ಸಹಕಾರಿಯಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಕ್ರಮವನ್ನು ಈ ಹಿಂದೆ ಯಶಸ್ವಿಯಾಗಿ ನಡೆಸಲಾಗಿದ್ದು, ಇದೀಗ ಮತ್ತೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರು BTP ASTraM ಆ್ಯಪ್‌ ಮೂಲಕ ನೋಂದಾಯಿಸಿಕೊಳ್ಳಬೇಕು. ಮೊದಲು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಮೊಬೈಲ್‌ ಸಂಖ್ಯೆಯೊಂದಿಗೆ ನೋಂದಣಿ ಮಾಡಿ ಲಾಗಿನ್‌ ಆಗಬೇಕು. ನಂತರ ಆ್ಯಪ್‌ನ ಹೋಮ್‌ಪೇಜ್‌ನಲ್ಲಿ ‘Traffic Cop for a Day’ ಆಯ್ಕೆಯನ್ನು ಆರಿಸಿ, ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು. ನೋಂದಣಿ ಪೂರ್ಣಗೊಂಡ ಬಳಿಕ ಆಯ್ಕೆಯಾದ ನಾಗರಿಕರು ಟ್ರಾಫಿಕ್‌ ಸಿಬ್ಬಂದಿಯೊಂದಿಗೆ ಒಂದು ದಿನ ಕಳೆಯುವ ಅವಕಾಶ ಪಡೆಯುತ್ತಾರೆ.

ಬೆಂಗಳೂರು ಸಂಚಾರ ಪೊಲೀಸರು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಅನುಭವಗಳನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ. ನಾಗರಿಕರು ಮತ್ತು ಪೊಲೀಸರ ನಡುವಿನ ಸಹಕಾರ ಹೆಚ್ಚಿಸುವುದರ ಜತೆಗೆ, ನಗರದ ಸಂಚಾರ ವ್ಯವಸ್ಥೆಯ ವಾಸ್ತವ ಸವಾಲುಗಳನ್ನು ಜನರಿಗೆ ಪರಿಚಯಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.