ಕಾರವಾರದಲ್ಲಿ ದೋಣಿ ವಿಹಾರ, ರಾಫ್ಟಿಂಗ್ ಪುನರಾರಂಭ
ಮಳೆಯ ಕಾರಣದಿಂದ ಕಾರವಾರದ ದಾಂಡೇಲಿ, ಗಣೇಶಗುಡಿ, ಗೋಕರ್ಣ ಮತ್ತು ಶರಾವತಿ ಹಿನ್ನೀರಿನಲ್ಲಿ ಜಲಸಾಹಸ ಕ್ರೀಡೆಗಳಿಗೆ ಹೇರಿದ್ದ ನಿಷೇಧವನ್ನು ಈಗ ತೆರವುಗೊಳಿಸಲಾಗಿದೆ. ಇದರಿಂದ ಕಾರವಾಗ ಭಾಗದ ಪ್ರವಾಸೋದ್ಯಮಕ್ಕೆ ಮತ್ತೆ ಉತ್ತೇಜನ ದೊರೆತಿದೆ.
ಕಾರವಾರದಲ್ಲಿ ಕಳೆದ ಮೂರು ತಿಂಗಳಿನಿಂದ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯು ಮಳೆಗಾಲದಲ್ಲಿ ಸುರಕ್ಷತಾ ಕ್ರಮವಾಗಿ ಕಾಳಿ ನದಿ ಮತ್ತು ಸಮುದ್ರದಲ್ಲಿ ಜಲ ಸಾಹಸ ಕ್ರೀಡೆಗಳನ್ನು ನಿಷೇಧಿಸಿತ್ತು. ಜಿಲ್ಲಾ ಪ್ರವಾಸೋದ್ಯಮ ಉಪನಿರ್ದೇಶಕರು ಜಾರಿಗೊಳಿಸಿದ ಈ ನಿಷೇಧವು ದಾಂಡೇಲಿ, ಗಣೇಶಗುಡಿ, ಗೋಕರ್ಣ ಮತ್ತು ಶರಾವತಿ ಹಿನ್ನೀರಿನಲ್ಲಿ ದೋಣಿ ವಿಹಾರ, ರಾಫ್ಟಿಂಗ್ ಮತ್ತು ಕಯಾಕಿಂಗ್‌ನಂಥ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತು.
ಸದ್ಯ ಮಳೆ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ, ಈಗ ಮತ್ತೆ ಜಲ ಸಾಹಸ ಚಟುವಟಿಕೆಗಳಿಗೆ ಅನುಮತಿ ನೀಡಿದೆ. ಕಾರವಾರ, ಮುರುಡೇಶ್ವರ, ಗೋಕರ್ಣ, ದಾಂಡೇಲಿ ಮತ್ತು ಗಣೇಶಗುಡಿಯಲ್ಲಿ ಪ್ರವಾಸೋದ್ಯಮಕ್ಕೆ ಮತ್ತೆ ಉತ್ತೇಜನ ದೊರೆತಿದೆ. ಆದರೆ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡುವ ಉದ್ದೇಶದಿಂದ ರಾಫ್ಟಿಂಗ್ ಮತ್ತು ದೋಣಿ ವಿಹಾರದಲ್ಲಿ ತೊಡಗಿರುವವರು ಇಲಾಖೆ ವಿಧಿಸಿರುವ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಇಲಾಖೆ ತಿಳಿಸಿದೆ.