ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೇಂದ್ರ ಸರಕಾರ ಹಲವು ಪ್ರಮುಖ ಪ್ರವಾಸೋದ್ಯಮ ಮೂಲಸೌಕರ್ಯ ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗಳು ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಒದಗಿಸುವ ಜತೆಗೆ, ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿವೆ.

ಕೇಂದ್ರ ಪ್ರವಾಸೋದ್ಯಮ ಇಲಾಖೆ SWADESH DARSHAN, PRASHAD ಮತ್ತು ACATID ಯೋಜನೆಗಳ ಅಡಿಯಲ್ಲಿ ಈ ಅನುದಾನವನ್ನು ಮಂಜೂರು ಮಾಡಿದೆ. ಈ ಬಗ್ಗೆ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಲೋಕಸಭೆಗೆ ಮಾಹಿತಿ ನೀಡಿದರು.

ಸ್ವದೇಶ ದರ್ಶನ ಯೋಜನೆ ಅಡಿಯಲ್ಲಿ ಜಮ್ಮು-ಶ್ರೀನಗರ, ಪೆಹಲ್ಗಾಂ-ಅನಂತ್‌ನಾಗ್, ಉರಿ, ಕಾರ್ಗಿಲ್ ಮತ್ತು ಲೆಹ್ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಪ್ರವಾಸಿಗರ ಅನುಕೂಲಕ್ಕಾಗಿ ರಸ್ತೆ, ಪಾದಚಾರಿ ಮಾರ್ಗ, ವೀಕ್ಷಣಾ ಸ್ಥಳಗಳು ಹಾಗೂ ಅಗತ್ಯ ಸೌಲಭ್ಯಗಳ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಲಾಗಿದೆ.

J & K Tourism

ಇದಲ್ಲದೆ, ಜಮ್ಮು, ರಾಜೌರಿ, ಶೋಪಿಯನ್ ಮತ್ತು ಪುಲ್ವಾಮಾ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಸೌಲಭ್ಯಗಳ ಅಭಿವೃದ್ಧಿಗೆ 81.60 ಕೋಟಿ ರು. ವೆಚ್ಚದಲ್ಲಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. 2014ರ ಪ್ರವಾಹದಿಂದ ಹಾನಿಗೊಳಗಾದ ಪ್ರವಾಸೋದ್ಯಮ ಸ್ಥಳಗಳ ಪುನರ್ ನಿರ್ಮಾಣಕ್ಕೆ 90.43 ಕೋಟಿ ರು. ಅನುದಾನವನ್ನು ಕೇಂದ್ರ ಸರಕಾರ ಮಂಜೂರು ಮಾಡಿದೆ.

PRASHAD ಯೋಜನೆಯಡಿ, ಶ್ರೀನಗರದ ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರವಾದ ಹಜ್ರತ್‌ಬಾಲ್ ದರ್ಗಾ ಸೇರಿದಂತೆ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಯಾತ್ರಿಕರಿಗಾಗಿ ಮೂಲಭೂತ ಸೌಲಭ್ಯಗಳನ್ನು ಸುಧಾರಿಸಲು 40.46 ಕೋಟಿ ರು. ಅನುದಾನ ನೀಡಲಾಗಿದೆ.

ಇನ್ನು ACATID ಯೋಜನೆಯಡಿ, ದಾಲ್ ಸರೋವರದ ಬಳಿ ಸೌಂಡ್ ಅಂಡ್ ಲೈಟ್ ಶೋ ಗೆ ಅಗತ್ಯವಿರುವ ವ್ಯವಸ್ಥೆಯ ನಿರ್ಮಾಣ ಹಾಗೂ ಕ್ವಾಜಿಗುಂಡ್-ಬರಮುಲ್ಲಾ ರೈಲು ಮಾರ್ಗದಲ್ಲಿ ಪ್ರವಾಸಿಗರಿಗೆ ಅಮೋಘ ಅನುಭವ ನೀಡುವ ಗ್ಲಾಸ್-ಟಾಪ್ ರೈಲು ಕೋಚ್‌ಗಳ ಅಭಿವೃದ್ಧಿಗೆ ಸಹಾಯ ನೀಡಲಾಗಿದೆ.