ಲಡಾಖ್‌ನ ಸುಸ್ಥಿರ ಪ್ರವಾಸೋದ್ಯಮ ಯೋಜನೆಗಳಿಗೆ ಕೇಂದ್ರ ಅನುಮೋದನೆ
ಈ ಮೂರು ಯೋಜನೆಗಳು ಲಡಾಖ್‌ನ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಉತ್ಸಾಹ ತುಂಬಲಿದ್ದು, ಸ್ಥಳೀಯ ಜನಾಂಗದ ಆರ್ಥಿಕತೆಯನ್ನು ಉತ್ತೇಜಿಸುತ್ತದೆ. ಕೇಂದ್ರ ಸರಕಾರದ ಈ ಹೆಜ್ಜೆ ಹಿಮಾಲಯದ ಪರಿಸರ ಸಂರಕ್ಷಣೆ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಮಹತ್ವದ ಪ್ರೋತ್ಸಾಹ ಎಂದು ಪರಿಣಿತರು ಅಭಿಪ್ರಾಯ ಪಟ್ಟಿದ್ದಾರೆ.
ಲಡಾಖ್ ಪ್ರದೇಶದಲ್ಲಿ ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇಂದ್ರ ಸರಕಾರ ಮೂರು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಿದೆ. ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಚಾಲೆಂಜ್ ಬೇಸ್ಡ್ ಡಿಸೈನ್ ಸ್ಪರ್ಧೆಯಲ್ಲಿ ಆಯ್ಕೆಯಾದ ಈ ಯೋಜನೆಗಳು, ಹಿಮಾಲಯದ ನಾಜೂಕಾದ ಪರಿಸರವನ್ನು ಸಂರಕ್ಷಿಸುವುದರ ಜತೆಗೆ ಪ್ರವಾಸೋದ್ಯಮದ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶ ಹೊಂದಿವೆ.
ಮೊದಲ ಯೋಜನೆ ಕಾರ್ಗಿಲ್‌ನ ಸುರೂ ಕಣಿವೆಯ ಅಭಿವೃದ್ಧಿ. ಈ ಪ್ರಾಜೆಕ್ಟ್‌ನಲ್ಲಿ ಪರಿಸರ ಸ್ನೇಹಿ ಮೂಲಸೌಕರ್ಯ, ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಒಳಗೊಂಡ ಪ್ರವಾಸೋದ್ಯಮ ಚಟುವಟಿಕೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಸ್ಥಳೀಯ ಸಮುದಾಯಕ್ಕೆ ಉದ್ಯೋಗಾವಕಾಶ ಹೆಚ್ಚಿಸಲು ಇದು ಸಹಾಯಕರವಾಗಲಿದೆ.

ಎರಡನೇ ಮಹತ್ವದ ಯೋಜನೆ ನಿಮೂ–ಪಾಡುಮ್–ಡರ್ಛಾ ಮಾರ್ಗದಲ್ಲಿ ಟ್ರಾನ್ಸ್-ಹಿಮಾಲಯನ್ ಆಕ್ಟಿವಿಟಿ ಟ್ರೈಲ್ ನಿರ್ಮಾಣ. ಈ ಮಾರ್ಗದಲ್ಲಿ ಸಾಹಸಪ್ರಿಯರಿಗೆ ಟ್ರೆಕ್ಕಿಂಗ್, ಸೈಕ್ಲಿಂಗ್ ಮತ್ತು ಹಿಮಾಲಯನ್ ಚಟುವಟಿಕೆಗಳನ್ನು ಕೈಗೊಳ್ಳಲು ಸುಗಮಗೊಳಿಸುವಂಥ ವ್ಯವಸ್ಥೆ ನಿರ್ಮಿಸಲು ಈ ಯೋಜನೆ ಸಹಕಾರಿಯಾಗಿದೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಹಸ ಪ್ರವಾಸೋದ್ಯಮದ ವಲಯದಲ್ಲಿ ಲಡಾಖ್‌ಗೆ ಪ್ರಮುಖ ಸ್ಥಾನ ಲಭಿಸಲು ಮಹತ್ವದ ಹೆಜ್ಜೆಯಾಗಿದೆ.
ಮೂರನೇ ಯೋಜನೆ ಹುಂಬೊಟ್ಟಿಂಗ್ ಪ್ರದೇಶದಲ್ಲಿ ಸುಸ್ಥಿರ ಪ್ರವಾಸೋದ್ಯಮದಲ್ಲಿನ ಹೊಸ ಮಾದರಿಯನ್ನು ಸ್ಥಾಪಿಸುವುದು. ನವೀಕರಿಸುವ ಶಕ್ತಿ, ನೀರಿನ ಸಂರಕ್ಷಣೆ, ಗ್ರೀನ್ ಬಿಲ್ಡಿಂಗ್‌ಗಳ ನಿರ್ಮಾಣ ಮತ್ತು ಪರಿಸರ ಸ್ನೇಹಿ ಸಾರಿಗೆ ಈ ಯೋಜನೆಯ ಮುಖ್ಯ ಭಾಗಗಳಾಗಿವೆ.