ಕ್ರಿಸ್‌ಮಸ್ ರಜೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಗೆ ಪ್ರವಾಸಿಗರ ಆಗಮನ ಗಣನೀಯವಾಗಿ ಹೆಚ್ಚಾಗಿದ್ದು, ಪ್ರಮುಖ ಪ್ರವಾಸಿ ಮತ್ತು ಧಾರ್ಮಿಕ ತಾಣಗಳತ್ತ ಹರಿದುಬರುತ್ತಿರುವ ಜನಸಂದಣಿಯಿಂದ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗಿದೆ.

ಉಡುಪಿ ನಗರ ಸೇರಿದಂತೆ ಮಲ್ಪೆ, ಮಣಿಪಾಲ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಉಡುಪಿ ಶ್ರೀಕೃಷ್ಣ ಮಠ ಹಾಗೂ ಇತರ ದೇವಸ್ಥಾನಗಳಲ್ಲಿ ಭಕ್ತರ ದಂಡು ಕಂಡುಬಂದಿದ್ದು, ರಸ್ತೆಗಳಲ್ಲಿ ವಾಹನಗಳ ದೀರ್ಘ ಸಾಲುಗಳು ನಿರ್ಮಾಣಗೊಂಡಿವೆ.

Christmas Holidays Draw Tourist Rush to Udupi, Traffic Grinds to a Crawl

ಮಲ್ಪೆ ಕಡಲತೀರ, ಕಾಪು, ಪಡುಬಿದ್ರೆ, ಪಡುಕೆರೆ ಮತ್ತು ತರಾಸಿ ಬೀಚ್‌ಗಳು ಪ್ರವಾಸಿಗರಿಂದ ತುಂಬಿಹೋಗಿವೆ. ಬೀಚ್ ಪ್ರದೇಶಗಳಿಗೆ ಸಂಪರ್ಕಿಸುವ ರಸ್ತೆಗಳಲ್ಲಿಯೂ ವಾಹನ ಸಂಚಾರ ನಿಧಾನಗೊಂಡಿದೆ. ಸೇಂಟ್ ಮೆರೀಸ್ ದ್ವೀಪಕ್ಕೆ ತೆರಳುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದ್ದು, ಬೋಟು ಸೇವೆಗಳು ದಿನಕ್ಕೆ ಹಲವು ಸುತ್ತುಗಳನ್ನು ನಡೆಸುತ್ತಿವೆ. ಪ್ರವಾಸಿಗರ ಅನುಕೂಲಕ್ಕಾಗಿ ಮಲ್ಪೆ ಹಾಗೂ ಇತರ ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಜನಸಂಚಾರ ಸುಗಮವಾಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.