Tuesday, July 7, 2026
Tuesday, July 7, 2026

ಇಕೋ-ಟೂರಿಸಂ ಪಾರ್ಕ್‌ಗಳ ಅಭಿವೃದ್ಧಿಗೆ ಸಿಎಂ ರೇವಂತ್ ರೆಡ್ಡಿ ಸೂಚನೆ

ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ತೆಲಂಗಾಣದ ಹೊಸ ಹೆಜ್ಜೆ! ಇಕೋ-ಟೂರಿಸಂ ಪಾರ್ಕ್‌ಗಳ ಅಭಿವೃದ್ಧಿಗೆ ಸಿಎಂ ರೇವಂತ್ ರೆಡ್ಡಿ ಸೂಚನೆ

ತೆಲಂಗಾಣವನ್ನು ದೇಶದ ಪ್ರಮುಖ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದು, ಹೈದರಾಬಾದ್ ನಗರ ಹಾಗೂ ಭವಿಷ್ಯದ ಯೋಜನೆಯಾದ ‘ಫ್ಯೂಚರ್ ಸಿಟಿ’ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪರಿಸರ ಸ್ನೇಹಿ ಇಕೋ-ಟೂರಿಸಂ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಮೂಲಕ ಪ್ರವಾಸೋದ್ಯಮದ ಜತೆಗೆ ಪರಿಸರ ಸಂರಕ್ಷಣೆಗೂ ಆದ್ಯತೆ ನೀಡುವ ಹೊಸ ಮಾದರಿಯನ್ನು ರೂಪಿಸುವ ಗುರಿಯನ್ನು ಸರಕಾರ ಹೊಂದಿದೆ.

ಟೂರಿಸಂ ಇಲಾಖೆಯ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಹೈದರಾಬಾದ್ ನಗರದ ವಿವಿಧ ಪ್ರದೇಶಗಳಲ್ಲಿ ಈಗಾಗಲೇ ಜನಪ್ರಿಯವಾಗಿರುವ ಗುರ್ರಂಗುಡಾ ಇಕೋ ಪಾರ್ಕ್ ಮಾದರಿಯಲ್ಲಿ ಇನ್ನಷ್ಟು ಹಸಿರು ಪ್ರದೇಶಗಳನ್ನು ನಿರ್ಮಿಸಲು ಸೂಚಿಸಿದರು. ಈ ಪಾರ್ಕ್‌ಗಳಲ್ಲಿ ಪ್ರಕೃತಿ ಸೌಂದರ್ಯ, ವಾಕಿಂಗ್ ಟ್ರ್ಯಾಕ್, ಸೈಕ್ಲಿಂಗ್ ಮಾರ್ಗ, ಮಕ್ಕಳ ಆಟದ ವಲಯ, ಸರೋವರಗಳ ಅಭಿವೃದ್ಧಿ ಹಾಗೂ ಕುಟುಂಬ ಪ್ರವಾಸಕ್ಕೆ ಅನುಕೂಲವಾಗುವ ಸೌಲಭ್ಯಗಳನ್ನು ಕಲ್ಪಿಸಲು ಯೋಜಿಸಲಾಗಿದೆ.

Untitled design (1)

ಸಭೆಯಲ್ಲಿ ನಗರ ಪ್ರವಾಸೋದ್ಯಮದ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಲಾಯಿತು. ವಿಶೇಷವಾಗಿ ದುರ್ಗಂ ಚೆರವು ಸುತ್ತಮುತ್ತಲಿನ ಪ್ರದೇಶವನ್ನು ವಿಶ್ವಮಟ್ಟದ ಪ್ರವಾಸಿ ಕೇಂದ್ರವನ್ನಾಗಿ ರೂಪಿಸುವ ಕಾರ್ಯವನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಸರೋವರದ ಸುತ್ತಲಿನ ಮೂಲಸೌಕರ್ಯ, ಬೆಳಕು ವ್ಯವಸ್ಥೆ, ಮನೋರಂಜನಾ ಚಟುವಟಿಕೆಗಳು ಹಾಗೂ ಪ್ರವಾಸಿಗರಿಗೆ ಅಗತ್ಯವಾದ ಸೌಲಭ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಉದ್ದೇಶವನ್ನು ಸರಕಾರ ಹೊಂದಿದೆ.

ಇದರ ಜತೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಐತಿಹಾಸಿಕ, ಆಧ್ಯಾತ್ಮಿಕ ಹಾಗೂ ಪ್ರಕೃತಿ ತಾಣಗಳನ್ನು ಸಂಪರ್ಕಿಸುವ ಪ್ರವಾಸೋದ್ಯಮ ವಲಯಗಳನ್ನೂ (Tourism Circuits) ರೂಪಿಸುವ ಯೋಜನೆಗೆ ವೇಗ ನೀಡಲಾಗಿದೆ. ಪರಿಸರ ಪ್ರವಾಸೋದ್ಯಮ, ಪರಂಪರೆ ಪ್ರವಾಸೋದ್ಯಮ ಮತ್ತು ಸಾಹಸ ಪ್ರವಾಸೋದ್ಯಮಕ್ಕೆ ಸಮಾನ ಆದ್ಯತೆ ನೀಡುವ ಮೂಲಕ ದೇಶಿ ಹಾಗೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಗುರಿ ಹೊಂದಿದೆ.

Untitled design (2)

ರಾಜ್ಯದ ಹೊಸ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಫ್ಯೂಚರ್ ಸಿಟಿ’ಯಲ್ಲಿ ಶೇ.50ರಷ್ಟು ಹಸಿರು ಪ್ರದೇಶವನ್ನು ಕಾಯ್ದುಕೊಂಡು, ವಿಶ್ವದರ್ಜೆಯ ನಗರ ಅಭಿವೃದ್ಧಿಯೊಂದಿಗೆ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಹಸಿರು ಉದ್ಯಾನಗಳು, ಪರಿಸರ ಸ್ನೇಹಿ ಮನೋರಂಜನಾ ವಲಯಗಳು ಹಾಗೂ ಪ್ರಕೃತಿಯೊಂದಿಗೆ ಹೊಂದಿಕೊಂಡ ಸಾರ್ವಜನಿಕ ಸ್ಥಳಗಳನ್ನು ನಿರ್ಮಿಸುವುದಕ್ಕೆ ಒತ್ತು ನೀಡಲಾಗುತ್ತಿದೆ.

ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಲಿದ್ದು, ಸಣ್ಣ ಉದ್ಯಮಗಳು, ಆತಿಥ್ಯ ಸೇವೆಗಳು ಹಾಗೂ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ದೊರೆಯುವ ನಿರೀಕ್ಷೆಯಿದೆ. ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಸಮನ್ವಯಗೊಳಿಸುವ ಈ ಯೋಜನೆ ತೆಲಂಗಾಣವನ್ನು ಭಾರತದ ಪ್ರಮುಖ ಇಕೋ-ಟೂರಿಸಂ ತಾಣವನ್ನಾಗಿ ರೂಪಿಸುವತ್ತ ಮಹತ್ವದ ಹೆಜ್ಜೆಯಾಗಿದೆ.

ಇದನ್ನೂ ಓದಿ: ‘ಪ್ರಸಾದ್’ ಯೋಜನೆಯಡಿ ಆಂಧ್ರದ ದೇವಾಲಯಗಳ ಜೀರ್ಣೋದ್ದಾರಕ್ಕೆ ಕೇಂದ್ರ ಸಜ್ಜು

ವಿಕಾರಾಬಾದ್‌: ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ

ತೆಲಂಗಾಣದ ವಿಕಾರಾಬಾದ್‌ ಜಿಲ್ಲೆಯನ್ನು ರಾಜ್ಯದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸಲು ಸರಕಾರ ಬದ್ಧವಾಗಿದೆ. ಜಿಲ್ಲೆಯಲ್ಲಿರುವ ಪ್ರಕೃತಿ ಸೌಂದರ್ಯ, ಧಾರ್ಮಿಕ ಕ್ಷೇತ್ರಗಳು ಹಾಗೂ ಐತಿಹಾಸಿಕ ತಾಣಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಯೋಜನೆಗಳನ್ನು ಜಾರಿಗೊಳಿಸಲಾಗುವುದು.

ವಿಕಾರಾಬಾದ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಟೂರಿಸಂ ಹಬ್ ಡೆವಲಪ್‌ಮೆಂಟ್ ಸ್ಕೀಮ್ ಅಡಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು. ಅಲ್ಲದೆ, ಅನಂತಗಿರಿ ಬೆಟ್ಟಗಳು ಸೇರಿದಂತೆ ಜಿಲ್ಲೆಯ ನೈಸರ್ಗಿಕ ಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಂಡು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿರುವ ಶ್ರೀ ವೀರಭಧ್ರಸ್ವಾಮಿ ದೇವಾಲಯ ಸೇರಿದಂತೆ ಧಾರ್ಮಿಕ ತಾಣಗಳ ಅಭಿವೃದ್ಧಿಗೂ ಸರಕಾರ ವಿಶೇಷ ಗಮನ ಹರಿಸಲಿದೆ. ಮೂಲಸೌಕರ್ಯ, ರಸ್ತೆ, ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳು ಹಾಗೂ ಸಂಪರ್ಕ ವ್ಯವಸ್ಥೆಗಳನ್ನು ಉತ್ತಮಗೊಳಿಸುವ ಮೂಲಕ ವಿಕಾರಾಬಾದ್‌ ಅನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ.

Untitled design (4)

ಸರಕಾರದ ಈ ಕ್ರಮಗಳಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಹೆಚ್ಚುವುದರ ಜತೆಗೆ ಹೊಟೇಲ್‌, ಆತಿಥ್ಯ ಹಾಗೂ ಸಣ್ಣ ಉದ್ಯಮ ಕ್ಷೇತ್ರಗಳಿಗೂ ಉತ್ತೇಜನ ದೊರೆಯುವ ನಿರೀಕ್ಷೆಯಿದೆ. ಪ್ರವಾಸೋದ್ಯಮದ ಮೂಲಕ ಜಿಲ್ಲೆಯ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಹೊಸ ದಿಕ್ಕು ಸಿಗಲಿದೆ ಎಂದಿದ್ದಾರೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!