ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ವಾಹನ ಸಂಚಾರ ನಿರ್ಬಂಧ
ಶ್ರಾವಣ ಮಾಸದ ಪ್ರಯುಕ್ತ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಇಂದು ಅಥವಾ ನಾಳೆ ಹೋಗಬೇಕೆಂದುಕೊಂಡಿದ್ದೀರಾ..? ಹಾಗಾದರೆ ಈ ಸುದ್ದಿ ನಿಮಗಾಗಿ. ಎರಡು ದಿನಗಳ ಕಾಲ ಬೆಟ್ಟಕ್ಕೆ ವಾಹನ ಸಂಚಾರ ನಿರ್ಬಂಧ ಹೇಳರಲಾಗಿದ್ದು, ತೆರಳುವ ಮುನ್ನ ಮತ್ತೊಮ್ಮೆ ಯೋಚಿಸಿ.
ಚಾಮರಾಜನಗರ : ಮಳೆ ಮತ್ತು ಮಂಜಿನ ನಡುವೆ ಪ್ರವಾಸಿಗರನ್ನು ಸೆಳೆಯುವ ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟ. ನಿತ್ಯವೂ ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಾರೆ. ವಿಶೇಷವಾಗಿ ಶ್ರಾವಣ ಮಾಸದ ಪ್ರಯುಕ್ತ ಬೆಟ್ಟಕ್ಕೆ ಭೇಟಿ ಕೊಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೆ ಸದ್ಯ ಇಲ್ಲಿನ ತಡೆಗೋಡೆ ಕುಸಿತದ ಹಿನ್ನಲೆ ಇಂದು, ನಾಳೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಗೋಪಾಲಸ್ವಾಮಿ ಬೆಟ್ಟದ ರಸ್ತೆ ಬದಿ ಪ್ಯಾರಾಪಿಟ್ ವಾಲ್ ಕುಸಿದಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಎರಡು ದಿನ ದೇವಾಲಯವನ್ನ ಬಂದ್ ಮಾಡಲಾಗಿದೆ. ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನಲೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಅಲ್ಲದೆ ಬಿಳಿಗಿರಿರಂಗನ ಬೆಟ್ಟಕ್ಕೆ ಗುಡಿಗೆ ಹೋಗುವ ಹೊಂಡರಬಾಳು ಮಾರ್ಗವೂ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಬಂದ್ ಆಗಿದೆ. ಸೆಪ್ಟಂಬರ್ 27 ರವರೆಗೆ ಈ ಮಾರ್ಗವಾಗಿ ಬೆಟ್ಟಕ್ಕೆ ತೆರಳಲು ಸಾಧ್ಯವಿಲ್ಲವೆಂದು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶ ಹೊರಡಿಸಿದ್ದಾರೆ.